ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ನಾಲ್ಕು ದಿಕ್ಕಿಗೂ ಬುಲೆಟ್ ರೈಲು ಸಂಪರ್ಕ

Last Updated 16 ಸೆಪ್ಟೆಂಬರ್ 2017, 4:51 IST
ಅಕ್ಷರ ಗಾತ್ರ

ಮುಂಬೈ–ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ ಗುರುವಾರವಷ್ಟೇ ಜಂಟಿಯಾಗಿ ನೆರವೇರಿಸಿದ್ದಾರೆ.

ಜಪಾನ್‌ನ ತಾಂತ್ರಿಕ ನೆರವು ಮತ್ತು ಯೋಜನೆಯ ಮೊತ್ತದ ಶೇ 81ರಷ್ಟು ಸಾಲದ ಸಹಾಯದೊಂದಿಗೆ ಈ ಯೋಜನೆಯ ಕಾಮಗಾರಿ ಆರಂಭವಾಗಿದೆ. 2022ರ ಆಗಸ್ಟ್ 15ರಂದು ಈ ಯೋಜನೆಯನ್ನು ಲೋಕಾರ್ಪಣೆ ಮಾಡುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ. ಬುಲೆಟ್ ರೈಲಿನಿಂದಾಗಿ ಈ ಎರಡೂ ವಾಣಿಜ್ಯ ನಗರಗಳ ನಡುವಣ ರೈಲು ಪ್ರಯಾಣದ ಅವಧಿ ಏಳು ಗಂಟೆಯಿಂದ ಎರಡು ಗಂಟೆ ಏಳು ನಿಮಿಷಕ್ಕೆ ಇಳಿಯಲಿದೆ. ಸಾರಿಗೆ ಮತ್ತು ವೇಗದ ವಿಚಾರದಲ್ಲಿ ಭಾರತದ ಮಟ್ಟಿಗೆ ಇದೊಂದು ಕ್ರಾಂತಿಯೇ ಸರಿ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ.

‘ಎರಡೂ ನಗರಗಳ ವಾಣಿಜ್ಯ ಸಂಬಂಧವನ್ನು ಈ ರೈಲು ಮತ್ತಷ್ಟು ಗಟ್ಟಿಗೊಳಿಸಲಿದೆ. ರೈಲು ಮಾರ್ಗದ ಪ್ರದೇಶಗಳಲ್ಲಿ ಅಭಿವೃದ್ಧಿಗೆ ವೇಗ ದೊರಕಲಿದೆ’ ಎಂದು ಪ್ರಧಾನಿ ಮೋದಿ ಭವಿಷ್ಯ ನುಡಿದಿದ್ದಾರೆ.

‘ಈ ಮಾರ್ಗದಲ್ಲಿ ಪ್ರತಿದಿನ ಬುಲೆಟ್‌ ರೈಲುಗಳು 70 ಬಾರಿ ಓಡಾಡಲಿವೆ. ರೈಲು ಸೇವೆ ಆರಂಭವಾದ ನಂತರ ಪ್ರತಿದಿನ 36,000 ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ. 2050ರ ವೇಳೆಗೆ ಪ್ರತಿದಿನದ ಪ್ರಯಾಣಿಕರ ಸಂಖ್ಯೆ 1 ಲಕ್ಷದ ಗಡಿಯನ್ನು ದಾಟಲಿದೆ’ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.

ಬುಲೆಟ್ ಅರ್ಥಾತ್ ಹೈಸ್ಪೀಡ್‌: ಮೂಲತಃ ಇದು ಭಾರಿ ವೇಗದ ಅಥವಾ ಹೈಸ್ಪೀಡ್‌ ರೈಲು. ಮೊದಲ ಹೈಸ್ಪೀಡ್‌ ರೈಲಿನ ಸಂಚಾರ ಆರಂಭಿಸಿದ ಶ್ರೇಯ ಜಪಾನ್‌ಗೆ ಸಲ್ಲುತ್ತದೆ. ಜಪಾನ್‌ನ ಮೊದಲ ಹೈಸ್ಪೀಡ್‌ ರೈಲಿನ ದೇಹ ಬಂದೂಕಿನ ಗುಂಡಿನಂತೆ (ಬುಲೆಟ್‌) ಇದ್ದುದ್ದರಿಂದ ಅದನ್ನು ಬುಲೆಟ್ ರೈಲು ಎಂದು ಕರೆಯಲಾಯಿತು. ಹೀಗಾಗಿ ಜಗತ್ತಿನಲ್ಲಿ ಇಂದು ಸಂಚರಿಸುತ್ತಿರುವ ಎಲ್ಲಾ ಹೈಸ್ಪೀಡ್‌ ರೈಲುಗಳನ್ನೂ ಬುಲೆಟ್ ರೈಲುಗಳೆಂದೇ ಕರೆಯಲಾಗುತ್ತಿದೆ. ಭಾರತದ ಬುಲೆಟ್ ರೈಲು ಯೋಜನೆಯ ಪ್ರಸ್ತಾವ, ಯೋಜನಾ ವರದಿ ಯಾವುದರಲ್ಲೂ ‘ಬುಲೆಟ್’ ಎಂಬ ಪದದ ಉಲ್ಲೇಖವೇ ಇಲ್ಲ. ಭಾರತದಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿರುವ ಸಂಸ್ಥೆಯ ಹೆಸರೂ ‘ಭಾರತೀಯ ಹೈಸ್ಪೀಡ್‌ ರೈಲು ನಿಗಮ’ ಎಂದಷ್ಟೇ ಇದೆ. ಆದರೂ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಮಾಧ್ಯಮಗಳು ಈ ವಿಷಯವನ್ನು ಪ್ರಸ್ತಾಪಿಸುವಾಗ ಬುಲೆಟ್ ಎಂಬ ಹೆಸರನ್ನೇ ಬಳಸುತ್ತವೆ.

ಯಾವುದೇ ರೈಲನ್ನು ಹೈಸ್ಪೀಡ್‌ ರೈಲು ಎಂದು ಪರಿಗಣಿಸಲು ಅದು ಕನಿಷ್ಠ ವೇಗವನ್ನು ಮುಟ್ಟಲೇಬೇಕು ಎಂಬ ಅಘೋಷಿತ ನಿಯಮ ಜಾರಿಯಲ್ಲಿದೆ. ಹೊಸದಾಗಿ ನಿರ್ಮಿಸಿದ ಹಳಿಗಳ ಮೇಲೆ ಸಂಚರಿಸುವ ಹೈಸ್ಪೀಡ್‌ ರೈಲು ‍ಪ್ರತಿ ಗಂಟೆಗೆ ಕನಿಷ್ಠ 250 ಕಿ.ಮೀ. ವೇಗದಲ್ಲಿ ಸಂಚರಿಸಬೇಕು. ಸಾಂಪ್ರದಾಯಿಕ ಹಳಿಗಳನ್ನೇ ಪರಿವರ್ತಿಸಿ ರೂಪಿಸಿದ ಮಾರ್ಗದಲ್ಲಿ ಚಲಿಸುವ ರೈಲುಗಳು ಪ್ರತಿಗಂಟೆಗೆ ಕನಿಷ್ಠ 200 ಕಿ.ಮೀ. ವೇಗದಲ್ಲಿ ಸಂಚರಿಸಿದರೆ ಅದನ್ನು ಹೈಸ್ಪೀಡ್‌ ರೈಲು ಎಂದು ಕರೆಯಲಾಗುತ್ತದೆ.

ಶಿಂಖಾನ್ಸೆನ್: ಇದು ಜಪಾನಿನ ಹೈಸ್ಪೀಡ್‌ ರೈಲು ನಿಗಮದ ಹೆಸರು. ಇದು ಜಪಾನಿನ ಮೊದಲ ಬುಲೆಟ್ ರೈಲಿನ ಹೆಸರೂ ಹೌದು. ದೇಶದೊಳಗಿನ ರಸ್ತೆ ಮತ್ತು ರೈಲು ಮಾರ್ಗಗಳ ಸರಾಸರಿ ವೇಗ ತನ್ನ ಅಭಿವೃದ್ಧಿಯ ವೇಗಕ್ಕೆ ಸರಿಸಾಟಿಯಾಗಿಲ್ಲ ಎಂದು ಜಪಾನ್ 1940ರಲ್ಲೇ ಶಿಂಖಾನ್ಸೆನ್ ಯೋಜನೆಯನ್ನು ಆರಂಭಿಸಿತ್ತು. ಯೋಜನೆಯ ಅಧ್ಯಯನದ ವರದಿ ಸಿದ್ಧವಾಗುವಷ್ಟರಲ್ಲೇ ಎರಡನೇ ವಿಶ್ವಯುದ್ಧದಲ್ಲಿ ಅಮೆರಿಕಕ್ಕೆ ಜಪಾನ್ ಶರಣಾಗಿತ್ತು. ದೇಶಕ್ಕಾಗಿದ್ದ ನಷ್ಟವನ್ನು ಸರಿದೂಗಿಸಿಕೊಳ್ಳುವ ಭರದಲ್ಲಿ ಶಿಂಖಾನ್ಸೆನ್ ಯೋಜನೆ ನೆಲಕಚ್ಚಿತ್ತು. ಆದರೆ 1955ರ ನಂತರ ಯೋಜನೆಗೆ ಮರುಜೀವ ಕೊಡಲಾಯಿತು.

ಅಂತೂ 1964ರ ಅಕ್ಟೋಬರ್ 1ರಂದು ಜಪಾನ್‌ ರಾಜಧಾನಿ ಟೋಕಿಯೊದಿಂದ ಒಸಾಕಾ ನಗರದ ಮಧ್ಯೆ ಶಿಂಖಾನ್ಸೆನ್ ಸಂಚಾರ ಆರಂಭಿಸಿತ್ತು. ಗುಡ್ಡಗಾಡುಗಳ ಮೂಲಕ ಹಾದುಹೋಗುವ 504 ಕಿ.ಮೀ. ಅಂತರವನ್ನು ಕ್ರಮಿಸಲು ಸಾಂಪ್ರದಾಯಿಕ ರೈಲು 6 ಗಂಟೆ 40 ನಿಮಿಷ ತೆಗೆದುಕೊಳ್ಳುತ್ತಿತ್ತು. ಶಿಂಖಾನ್ಸೆನ್ ರೈಲು ಈ ಅವಧಿಯನ್ನು 4 ಗಂಟೆಗೆ ಇಳಿಸಿತ್ತು. 1965ರಲ್ಲಿ ಪ್ರಯಾಣದ ಅವಧಿ 3 ಗಂಟೆ 10 ನಿಮಿಷಕ್ಕೆ ಇಳಿಯಿತು.

2015ರಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಿದ ಶಿಂಖಾನ್ಸೆನ್ ಮಾಗ್ಲೆವ್ (ಮ್ಯಾಗ್ನೆಟಿಕ್‌ ಲೆವಿಟೇಷನ್‌ ತಂತ್ರಜ್ಞಾನ) ರೈಲು ಪ್ರತಿ ಗಂಟೆಗೆ ಗರಿಷ್ಠ 603 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಇದು ಜಗತ್ತಿನ ಅತಿ ವೇಗದ ಹೈಸ್ಪೀಡ್‌ ರೈಲು ಎನಿಸಿದೆ. ಜಪಾನ್‌ನ ಎಲ್ಲಾ ಪ್ರಮುಖ ನಗರಗಳಿಗೂ ಶಿಂಖಾನ್ಸೆನ್ ರೈಲುಗಳು ಸಂಪರ್ಕ ಕಲ್ಪಿಸಲಾಗಿದೆ.

ಭಾರತದ ಉದ್ದೇಶಿತ ಬುಲೆಟ್ ರೈಲು ಮಾರ್ಗಗಳು

ಭಾರತದ ನಾಲ್ಕೂ ಮಹಾನಗರಗಳ ನಡುವೆ ಬುಲೆಟ್ ಅಥವಾ ಹೈಸ್ಪೀಡ್ ರೈಲು ಜಾಲದ ಮೂಲಕ ಸಂಪರ್ಕ ಸಾಧಿಸುವ ಪ್ರಸ್ತಾವ ಐದು ವರ್ಷ ಹಳೆಯದು. ಈ ಪ್ರಸ್ತಾವಗಳನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಇಲಾಖೆಯ ಅಧೀನದಲ್ಲಿ ಭಾರತೀಯ ಹೈಸ್ಪೀಡ್ ರೈಲು ನಿಗಮವನ್ನು (ಎಚ್‌ಎಸ್‌ಆರ್‌ಸಿ) ಸ್ಥಾಪಿಸಲಾಗಿದೆ. ಎಚ್‌ಎಸ್‌ಆರ್‌ಸಿ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿದೆ. ಮುಂಬೈ–ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಮೇಲ್ವಿಚಾರಣೆಯನ್ನು ಎನ್‌ಎಚ್‌ಆರ್‌ಸಿಯೇ ನೋಡಿಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT