ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿ: ಶಕ್ತಿಯ ಆರಾಧನೆ

Last Updated 15 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವರಾತ್ರಿ. ಇದು ನಮ್ಮ ನಾಡಿನಲ್ಲಿ ಸಂಭ್ರಮದ ಹಬ್ಬಗಳಲ್ಲಿ ಒಂದು. ಹೆಚ್ಚು ದಿನಗಳ ಕಾಲ ಆಚರಿಸುವ ಹಬ್ಬವೂ ಹೌದು. ಹೆಸರೇ ಸೂಚಿಸುವಂತೆ ಒಂಬತ್ತು ದಿನ–ರಾತ್ರಿಗಳು ನಡೆಯುವ ಹಬ್ಬ. ಆದರೆ ವಾಸ್ತವವಾಗಿ ಇದು ಹತ್ತು ದಿನಗಳು ನಡೆಯುವ ಹಬ್ಬ. ನಮ್ಮಲ್ಲಿ ಇದನ್ನು ‘ದಸರಾ’ ಎಂದೇ ಹೆಚ್ಚಾಗಿ ವ್ಯವಹರಿಸುವುದುಂಟು. ಇದು ನಮ್ಮ ನಾಡಹಬ್ಬವೂ ಹೌದು. ‘ದಶಾಹ’ ಎನ್ನುವುದೇ ‘ದಸರಾ’ ಆಗಿದೆ. ಹತ್ತು ದಿನ–ರಾತ್ರಿಗಳು ನಡೆಯುವ ಹಬ್ಬ ಎಂದರ್ಥ. ಈ ಪರ್ವಕಾಲದ ಹತ್ತನೆಯ ದಿನ ಆಚರಿಸುವ ‘ವಿಜಯದಶಮಿ’ಯನ್ನು ಸೇರಿಸಿ ಇದು ಹತ್ತು ದಿನಗಳ ಹಬ್ಬವೇ ಆಗುತ್ತದೆ.

‘ನವರಾತ್ರಿ’. ಇದರ ಸರಿಯಾದ ರೂಪ ‘ನವರಾತ್ರ’. ‘ದುರ್ಗೋತ್ಸವ’ ಎಂದೂ ಈ ಹಬ್ಬದ ಸಾಲನ್ನು ಕರೆಯುವುದುಂಟು. ದೇವಿ, ಎಂದರೆ ಶಕ್ತಿಯ ಆರಾಧನೆಗೆ ಮೀಸಲಾದುದು. ಶಕ್ತಿಯ ಬೇರೆ ಬೇರೆ ಸ್ವರೂಪಗಳನ್ನು ಆರಾಧಿಸುವ ಕ್ರಮ ಬಹಳ ಹಿಂದಿನ ಕಾಲದಿಂದಲೂ ನಮ್ಮಲ್ಲಿ ನಡೆದಿದೆ. ಎರಡು ನವರಾತ್ರಗಳು ನಮ್ಮಲ್ಲಿ ಆಚರಣೆಯಲ್ಲಿವೆ. ಒಂದು: ‘ವಸಂತನವರಾತ್ರ’; ಇದು ಚೈತ್ರಮಾಸದ ಶುಕ್ಲಪಕ್ಷದಿಂದ ಆರಂಭಗೊಂಡು ಒಂಬತ್ತು ದಿನಗಳ ಆಚರಣೆ. ಇನ್ನೊಂದು: ‘ಶರನ್ನವರಾತ್ರ’; ಇದು ಶರತ್ಕಾಲದ ಪ್ರಥಮೆಯಿಂದ ಒಂಬತ್ತು ದಿನಗಳ ವರೆಗೆ ನಡೆಯುವ ಸಡಗರ. ಈಗ ನಾವು ‘ನವರಾತ್ರಿ’ ಅಥವಾ ‘ದಸರಾ’ ಎಂದು ವ್ಯವಹರಿಸುತ್ತಿರುವುದು ಶರನ್ನವರಾತ್ರಿಯನ್ನೇ.

ಪ್ರಕೃತಿಯನ್ನು ತಾಯಿಯಾಗಿ ಸ್ವೀಕರಿಸಿ, ಅವಳ ಶಕ್ತಿಯನ್ನು ಹಲವು ನೆಲೆಗಳಲ್ಲಿ ಕಂಡು, ಅವಕ್ಕೆ ಮಣಿದು ಆರಾಧಿಸುವಂಥದ್ದು ನಮ್ಮ ದೇಶದಲ್ಲಿ ಪ್ರಾಚೀನಕಾಲದಿಂದಲೂ ನಡೆದಿದೆ. ಹೀಗೆ ನವರಾತ್ರಿಯ ಮೊದಲ ಮೂರು ದಿನಗಳಲ್ಲಿ ಪ್ರಕೃತಿಮಾತೆಯನ್ನು ‘ಲಕ್ಷ್ಮೀ’ ಸ್ವರೂಪದಲ್ಲಿಯೂ, ಆ ಬಳಿಕದ ಮೂರು ದಿನಗಳಲ್ಲಿ ‘ಸರಸ್ವತೀ’ ಸ್ವರೂಪದಲ್ಲೂಕೊನೆಯ ಮೂರು ದಿನಗಳಲ್ಲಿ ‘ದುರ್ಗಾ’ (ಅಥವಾ ಗೌರೀ) ಸ್ವರೂಪದಲ್ಲಿಯೂ ಆರಾಧಿಸಲಾಗುವುದು. ಲಕ್ಷ್ಮೀತತ್ತ್ವ ನಮ್ಮ ಸಂಪತ್ತು–ಸೌಂದರ್ಯಗಳಿಗೆ ಸಂಕೇತ. ಸರಸ್ವತೀತತ್ತ್ವ ನಮ್ಮ ಭಾವ–ಬುದ್ಧಿಗಳಿಗೆ ಸಂಕೇತ. ದುರ್ಗೆ ನಮ್ಮ ಶಕ್ತಿ–ಯುಕ್ತಿಗಳಿಗೆ ಸಂಕೇತ. ನಮ್ಮ ಜೀವನಕ್ಕೆ ಬೇಕಾದ ಎಲ್ಲ ವಿಧದ ಅಂತರಂಗ–ಬಹಿರಂಗದ ಭಾವ–ಬುದ್ಧಿ–ಬಲಗಳ ವಿವರಗಳನ್ನು ಈ ಮೂರು ತತ್ತ್ವಗಳು ಧ್ವನಿಸುತ್ತವೆ. ಜೀವನದಲ್ಲಿ ಎದುರಾಗುವ ಎಲ್ಲ ಕಷ್ಟಗಳಿಂದ ಪಾರು ಮಾಡುವವಳೇ ದುರ್ಗಾ (ದುರ್ಗಾಂ ದುರ್ಗತಿ ನಾಶಿನೀಂ). ನವರಾತ್ರಿಯ ಹತ್ತನೆಯ ದಿನ ಆಚರಿಸುವ ‘ವಿಜಯದಶಮಿ’ ಹೀಗೆ ನಾವು ಜೀವನದಲ್ಲಿ ಎಲ್ಲ ತೊಂದರೆಗಳಿಂದ ಪಾರಾದುದರ ಸಂಕೇತವೇ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT