ಉಪದೇಶ

ಗುರುವಿನ ಅಗತ್ಯವನ್ನು ಇಲ್ಲವಾಗಿಸುವವನೇ ಗುರು!

ಶೃಂಗೇರಿಯ ಶಾರದಾಪೀಠದಲ್ಲಿದ್ದ ಚಂದ್ರಶೇಖರಭಾರತೀ ಸ್ವಾಮಿಗಳು (1892–1954) ಜೀವನ್ಮುಕ್ತರು; ಅವಧೂತರು ಎಂದೇ ಹೆಸರಾಗಿದ್ದವರು. ಅವರ ಜೀವನದಲ್ಲಿ ನಡೆದ ಹಲವು ಪ್ರಸಂಗಗಳು ವೇದಾಂತತತ್ತ್ವಕ್ಕೆ ಜೀವಂತ ಉದಾಹರಣೆಗಳಂತಿವೆ.

ಗುರುವಿನ ಅಗತ್ಯವನ್ನು ಇಲ್ಲವಾಗಿಸುವವನೇ ಗುರು!

ಶೃಂಗೇರಿಯ ಶಾರದಾಪೀಠದಲ್ಲಿದ್ದ ಚಂದ್ರಶೇಖರಭಾರತೀ ಸ್ವಾಮಿಗಳು (1892–1954) ಜೀವನ್ಮುಕ್ತರು; ಅವಧೂತರು ಎಂದೇ ಹೆಸರಾಗಿದ್ದವರು. ಅವರ ಜೀವನದಲ್ಲಿ ನಡೆದ ಹಲವು ಪ್ರಸಂಗಗಳು ವೇದಾಂತತತ್ತ್ವಕ್ಕೆ ಜೀವಂತ ಉದಾಹರಣೆಗಳಂತಿವೆ.

ಸ್ವಾಮಿಗಳು ಬೆಂಗಳೂರಿನಲ್ಲಿದ್ದಾಗ ನಡೆದ ಪ್ರಸಂಗವಿದು. ಸ್ವಾಮಿಗಳು ಬೆಂಗಳೂರಿನಲ್ಲಿ ಹಲವು ತಿಂಗಳು ತಂಗಿದ್ದರು. ಅವರು ಶೃಂಗೇರಿಗೆ ಹೊರಡುವ ದಿನ. ಭಕ್ತರೊಬ್ಬರು ಅಂದು ಬೆಳಗ್ಗೆ ಅವರ ದರ್ಶನಕ್ಕೆಂದು ಬಂದಿದ್ದರು. ಸ್ವಾಮಿಗಳನ್ನು ಕಾಣುತ್ತಲೇ ಬಿಕ್ಕಿ ಬಿಕ್ಕಿ ಅಳತೊಡಗಿದರು. ಸ್ವಾಮಿಗಳು ಏನಾಯಿತು – ಎಂದು ಆ ವ್ಯಕ್ತಿಯನ್ನು ಕೇಳಿದರು. ಆಗ ಆ ಭಕ್ತ ‘ಗುರುಗಳ ದರ್ಶನವನ್ನು ಆರೇಳು ತಿಂಗಳುಗಳಿಂದ ಪಡೆದು ಆನಂದಿಸುತ್ತಿದ್ದೆ. ಇನ್ನು ಮುಂದೆ ಆ ದರ್ಶನವೆಲ್ಲಿ?’ ಎಂದರು.

ಆಗ ಸ್ವಾಮಿಗಳು ನಸುನಕ್ಕು ‘ನಿಮಗೆ ಅಷ್ಟು ಆನಂದವನ್ನು ಕೊಟ್ಟ ಅಂಥ ಗುರುಗಳು ಯಾರು?’ ಎಂದು ಕೇಳಿದರು. ‘ತಾವೇ’ ಎಂದು ಆ ವ್ಯಕ್ತಿ ಉತ್ತರಿಸಿದರು. ಕೂಡಲೇ ಸ್ವಾಮಿಗಳು ‘ನಾನು ನಿಮಗೆ ಗುರುವಾಗಲು ಯೋಗ್ಯನಲ್ಲ ಎಂದಾಯಿತು. ಆರೇಳು ತಿಂಗಳಿಂದ ನಾನು ನಿಮಗೆ ಕಲಿಸಿದ್ದು ಇಷ್ಟೇ ಆದರೆ ನನ್ನಂಥವನಿಂದ ಏನು ಉಪಯೋಗ? ನೀವು ನನ್ನನ್ನು ಕಾಣದಿರುವುದೇ ಉತ್ತಮವಲ್ಲವೆ?’ ಎಂದರು.

ಆ ಭಕ್ತರಿಗೆ ಸ್ವಾಮಿಗಳ ಮಾತಿನ ಮರ್ಮ ಏನೆಂದು ಅರ್ಥವಾಗದೆ ಅವಾಕ್ಕಾದರು.

ಆಗ ಸ್ವಾಮಿಗಳೇ ಮುಂದುವರೆದು ಹೇಳಿದರು: ‘ನನ್ನ ದೇಹವನ್ನೇ ಗುರು ಎಂದು ಭಾವಿಸಿದಿರಾ? ನಿಜವಾದ ಗುರು ಎಂದರೆ ಆತ್ಮವೇ ಹೌದು. ಅದಕ್ಕೆ ದೇಶ–ಕಾಲಗಳು, ಹೋಗುವುದು–ಬರುವುದು – ಇವುಗಳ ಯಾವ ಸಂಬಂಧವೂ ಇಲ್ಲವಷ್ಟೆ? ನಾನು ನಿಮಗೆ ‘ಈ ದೇಹವೇ ಗುರು’ – ಎಂದು ಕಲಿಸಿದ್ದರೆ ನಾನು ಸರಿಯಾದ ಗುರು ಅಲ್ಲ, ಅಲ್ಲವೆ? ಗುರುವಿನ ಕೆಲಸ ‘ಇನ್ನು ಗುರುವಿನ ಅಗತ್ಯ ಶಿಷ್ಯನಿಗೆ ಇಲ್ಲದಿರುವಂತೆ ಮಾಡುವುದು. ತನ್ನನ್ನೇ ಎಂದೆಂದಿಗೂ ಶಿಷ್ಯ ಅವಲಂಬಿಸಿರಲಿ ಎಂದರೆ ಅವನು ದಿಟವಾದ ಗುರು ಅಲ್ಲ’.

ಇನ್ನೊಮ್ಮೆ ಹಿರಿಯ ವ್ಯಕ್ತಿಯೊಬ್ಬರು ಲೋಕೋದ್ಧಾರವನ್ನು ಮಾಡುವ ಬಯಕೆಯಿಂದ ಸ್ವಾಮಿಗಳಲ್ಲಿಗೆ ಬಂದರು; ಅವರ ಈ ಕಾರ್ಯ ಯಶಸ್ವಿಯಾಗು
ವಂತೆ ಆಶೀರ್ವದಿಸಬೇಕೆಂದು ಬೇಡಿದರು. ಆಗ ಸ್ವಾಮಿಗಳು ಹೇಳಿದ ಮಾತುಗಳು: ‘ಬೇರೆಯವರನ್ನು ಉದ್ಧಾರ ಮಾಡುವುದಕ್ಕಿಂತ ಹೆಚ್ಚು ಅಗತ್ಯವಾದುದು ನಿಮ್ಮನ್ನು ನೀವು ಉದ್ಧಾರ ಮಾಡಿಕೊಳ್ಳುವುದಲ್ಲವೆ? ನೀವು ಬೇರೆಯವರಿಗೆ ಉದ್ಧಾರದ ಮಾರ್ಗವನ್ನು ಹೇಳಲು ಹೊರಟರೆ ಅವರು ‘ನೀವು ಎಷ್ಟರ ಮಟ್ಟಿಗೆ ಉದ್ಧಾರವಾಗಿದ್ದೀರಿ’ ಎಂದು ಕೇಳಲಾರರೆ? ತನಗೇ ಈಜಲು ಬರದವನು ನೀರಿನಲ್ಲಿ ಮುಳುಗುತ್ತಿರುವ ಬೇರೆಯವರನ್ನು ದಡ ಕಾಣಿಸುವುದು ಹೇಗೆ? ಅಷ್ಟಲ್ಲದೆ ನೀವು ಹೇಳಿದರೆ ಬೇರೆಯವರು ಕೇಳುತ್ತಾರೆ ಎನ್ನುವ ನಂಬಿಕೆ ಏನು? ಅವರವರಿಗೆ ಅವರವರ ವಾಸನಾಬಲವಿರುತ್ತದೆ! ಜನರನ್ನೆಲ್ಲ ಕೂಡಿಸಿ ಒಂದು ಕೆಲಸವನ್ನು ಮಾಡುವಂತೆ ಪ್ರೇರಿಸುವುದು ರಾಜಕಾರಣದಲ್ಲೋ ವ್ಯವಹಾರದಲ್ಲೋ ಸಾಧ್ಯವಿರಬಹುದು; ಆದರೆ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಇದು ಸಾಧ್ಯವಿಲ್ಲ. ಒಂದು ತೇರನ್ನು ಎಳೆಯಲು ಸಾವಿರಾರು ಮಂದಿಯನ್ನು ಸೇರಿಸಬಹುದು. ಆದರೆ ನೀವೂ ಹಸಿದಿರುವಾಗ ಹತ್ತಾರು ಮಂದಿಯನ್ನು ಸೇರಿಸಿಕೊಂಡು ಏನು ಮಾಡಬಲ್ಲಿರಿ? ಆಧ್ಯಾತ್ಮಿಕತೆಯ ಹಸಿವಿದ್ದಾಗ ನೀವು ನಿಮ್ಮ ಹಸಿವನ್ನು ಹೋಗಲಾಡಿಸಿಕೊಳ್ಳುವ ಉಪಾಯವನ್ನು ಹುಡುಕಬೇಕು.’

Comments
ಈ ವಿಭಾಗದಿಂದ ಇನ್ನಷ್ಟು

ವೈಶಾಖದ ಹುಣ್ಣಿಮೆ
ಬಾಲರು ಯಾರು?

ಶಿವರಾತ್ರಿಯಂದು ನಾವು ಜಾಗರಣೆ ಮಾಡುತ್ತೇವೆ, ಅಲ್ಲವೆ? ರಾತ್ರಿ ಮುಂದುವರೆದಂತೆ ನಮಗೆ ನಿದ್ರೆಯ ಸೆಳೆತ ಹೆಚ್ಚುತ್ತಹೋಗುವುದು ಸಹಜ. ಆಗ ‘ಈ ರಾತ್ರಿ ಇನ್ನೂ ಮುಗಿಯುತ್ತಲೇ ಇಲ್ಲ!...

20 Jan, 2018
ಗಾಯನಕ್ಕೆ ಸಿದ್ಧವಾದ ರಾಮಕಥೆ

ರಾಮಾಯಣ ರಸಯಾನ
ಗಾಯನಕ್ಕೆ ಸಿದ್ಧವಾದ ರಾಮಕಥೆ

20 Jan, 2018
’ನಮಗೆ ಕಾವೇರಿ ನೀರೇ ಬೇಡ! ’

ವಿಡಂಬನೆ
’ನಮಗೆ ಕಾವೇರಿ ನೀರೇ ಬೇಡ! ’

13 Jan, 2018

ಅಧ್ಯಯನ
ಸೂರ್ಯ: ಜಗತ್ತಿನ ಕಣ್ಣು

ಸೂರ್ಯನು ಹುಟ್ಟಿದ ಕೂಡಲೇ ಕತ್ತಲು ಸರಿಯುತ್ತದೆ; ಎಲ್ಲರ ಕಣ್ಣಿಗೂ ಕಾಣುವಂಥವನು ಅವನು; ಅವನ ಹುಟ್ಟಿಗೂ ಜಗತ್ತಿನ ಆಗುಹೋಗುಗಳಿಗೂ ನೇರ ಸಂಬಂಧವಿದೆ. ಇವೆಲ್ಲವೂ ಸೂರ್ಯನ ಭೌತಿಕ ವಿವರಗಳು. ...

13 Jan, 2018
ಕಲೆಗಾಗಿ ಕಲೆ ಅಲ್ಲ!

ರಾಮಾಯಣ ರಸಾಯನ 22
ಕಲೆಗಾಗಿ ಕಲೆ ಅಲ್ಲ!

13 Jan, 2018