ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಕ್ಷ ಗೆಲ್ಲಿಸಿದರೆ ಸೂಕ್ತ ಸ್ಥಾನಮಾನ’

Last Updated 16 ಸೆಪ್ಟೆಂಬರ್ 2017, 4:59 IST
ಅಕ್ಷರ ಗಾತ್ರ

ರಾಮದುರ್ಗ: ‘ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಗೆಲ್ಲಿಸುವ ಕಾರ್ಯಕರ್ತರಿಗೆ ಸಾಮಾಜಿಕ, ಆರ್ಥಿಕ ಇಲ್ಲವೆ, ರಾಜಕೀಯವಾಗಿ ಉನ್ನತ ಸ್ಥಾನಗಳನ್ನು ಪಕ್ಷ ನೀಡಲಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಾಣಿಕ್ಯಂ ಠಾಕೂರ ವಿಶ್ವಾಸ ವ್ಯಕ್ತ ಪಡಿಸಿದರು.

ತಾಲ್ಲೂಕಿನ ಗೊಡಚಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೂತ್‌ಮಟ್ಟದ ಅಧ್ಯಕ್ಷರುಗಳ ಮತ್ತು ಕಾರ್ಯಕರ್ತರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು,
‘ಮುಂಬರುವ ವಿಧಾನಸಭೆಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಲಿರುವ ಶಾಸಕ ಅಶೋಕ ಪಟ್ಟಣ ಅವರು 75,000 ಮತಗಳ ಅಂತರದಿಂದ ಜಯಗಳಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬೆಳಗಾವಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸಂಚರಿಸಿದ್ದರೂ ಇಷ್ಟೊಂದು ಪ್ರಮಾಣದ ಕಾರ್ಯಕರ್ತರು ಇರಲಿಲ್ಲ. ಇಲ್ಲಿನ ಕಾರ್ಯಕರ್ತರ ಉತ್ಸಾಹ ಗಮನಿಸಿದರೆ ಅಶೋಕ ಪಟ್ಟಣ ಅವರು ಮುಂದಿನ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸಲಿದ್ದಾರೆ’ ಎಂದು ಭವಿಷ್ಯ ನುಡಿದರು.

‘ಕರ್ನಾಟಕದ ಇತಿಹಾಸದಲ್ಲಿ ಎಸ್. ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ, ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಹುದ್ದೆಯ ಗೌರವ ಹೆಚ್ಚಿಸಿದ್ದರು. ಆದರೆ ಹಗರಣದಲ್ಲಿ ಸಿಲುಕಿಕೊಂಡು ಜೈಲುಪಾಲಾದ ಬಿ.ಎಸ್. ಯಡಿಯೂರಪ್ಪ ಅವರಿಂದ ಕರ್ನಾಟಕ ನಾಚಿಕೆ ಪಟ್ಟುಕೊಳ್ಳಬೇಕಾಗಿದೆ’ ಎಂದು ಲೇವಡಿ ಮಾಡಿದರು.

‘ಕರ್ನಾಟಕದಲ್ಲಿ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರುವಾಸಿಯಾಗಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭ್ರಷ್ಟಾಚಾರಕ್ಕೆ ಖ್ಯಾತಿ ಹೊಂದಿರುವ ಕುರಿತು ಮತದಾರರು ಯೋಚಿಸಬೇಕಿದೆ’ ಎಂದು ಅವರು ಹೇಳಿದರು.

‘ರೈತಪರ, ಜನಪರ, ಬಡವರ ಪರ ಯೋಜನೆಗಳನ್ನು ಅನುಷ್ಠಾನಗೊಳಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಬೆನ್ನೆಲುಬಾಗಿ ನಿಂತಿದ್ದಾರೆ’ ಎಂದರು. ಪ್ರದೇಶ ಕಾಂಗ್ರೆಸ್ ಕಮಿಟಿ ಕಾರ್ಯದರ್ಶಿ ಪಿ.ವಿ. ಮೋಹನ ಮಾತನಾಡಿ, ‘ಕಾರ್ಯಕರ್ತರೇ ಪಕ್ಷದ ಉಸಿರು. ಕಾರ್ಯಕರ್ತರಿಂದ ಮಾತ್ರ ದೇಶ ಕಟ್ಟುವ, ಸಮಾಜ ಕಟ್ಟುವ ಕೆಲಸಗಳು ಸಾಧ್ಯ’ ಎಂದರು.

‘ಶಾಸಕ, ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆ ಪ್ರಣಾಳಿಕೆಯಲ್ಲಿನ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಬೂತ್‌ಮಟ್ಟದಲ್ಲಿ ಪಕ್ಷ ಗಟ್ಟಿಯಾದರೆ ಮಾತ್ರ ಪಕ್ಷದ ಗೆಲುವು ನಿಶ್ಚಿತ’ ಎಂದು ಹೇಳಿದರು. ಕೆಪಿಸಿಸಿ ಉಪಾಧ್ಯಕ್ಷ ವೀರಣ್ಣ ಮತ್ತಿಕಟ್ಟಿ, ಸದಸ್ಯ ದಯಾನಂದ ಪಾಟೀಲ, ಎಸ್.ಆರ್. ಪಾಟೀಲ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ಪರಪ್ಪ ಜಂಗವಾಡ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಹೂರ ಹಾಜಿ, ಕೃಷ್ಣಪ್ಪ ಲಮಾಣಿ, ಪುರಸಭೆ ಅಧ್ಯಕ್ಷ ರಾಜು ಮಾನೆ, ಎಪಿಎಂಸಿ ಅಧ್ಯಕ್ಷ ಬಿ.ಎಂ. ಪಾಟೀಲ, ಸಿದ್ದನಗೌಡ ಪಾಟೀಲ ವೇದಿಕೆ ಮೇಲೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT