ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೂಡಲಗಿ ತಾಲ್ಲೂಕು ರಚನೆ ರದ್ದು ಖಂಡನೀಯ’

Last Updated 16 ಸೆಪ್ಟೆಂಬರ್ 2017, 5:09 IST
ಅಕ್ಷರ ಗಾತ್ರ

ಮೂಡಲಗಿ: ‘ನಾಲ್ಕು ದಶಕಗಳ ಹೋರಾಟದ ಫಲದಿಂದ ಘೋಷಣೆಯಾಗಿದ್ದ ಮೂಡಲಗಿ ತಾಲ್ಲೂಕು ರಚನೆಯ ನಿರ್ಧಾರವನ್ನು ಆಡಳಿತಾತ್ಮಕ ಅನುಮೋದನೆಯಲ್ಲಿ ಕೈಬಿಟ್ಟಿರುವುದು ಖಂಡನೀಯ. ಜನರ ಹೋರಾಟ ಉಗ್ರ ರೂಪಕ್ಕೆ ತಾಳುವ ಮೊದಲು ಸರ್ಕಾರವು ಎಚ್ಚೆತ್ತುಕೊಳ್ಳಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

ಮೂಡಲಗಿ ತಾಲ್ಲೂಕು ರಚನೆಗಾಗಿ ಕಲ್ಮೇಶ್ವರ ವೃತ್ತದಲ್ಲಿ ಶುಕ್ರವಾರ ನಡೆದ ಧರಣಿಯಲ್ಲಿ ಮಾತನಾಡಿದ ಅವರು, ‘ನೂತನ 49 ತಾಲ್ಲೂಕುಗಳಲ್ಲಿ ಮೂಡಲಗಿ ಒಂದನ್ನೇ ಬಿಟ್ಟಿರುವುದು ಅತ್ಯಂತ ವಿಷಾದಿಸುವ ಸಂಗತಿಯಾಗಿದೆ’ ಎಂದರು.

‘ಮೂಡಲಗಿ ವಿಷಯದಲ್ಲಿ ಆಗಿರುವ ತಪ್ಪನ್ನು ಕೂಡಲೇ ಸರಿಪಡಿಸಿಕೊಂಡು ತಾಲ್ಲೂಕಿಗೆ ಅನುಮತಿ ನೀಡಬೇಕು’ ಎಂದು ಒತ್ತಾಯಿಸಿದರು. ಬಿಜೆಪಿ ಮುಖಂಡ ಈರಣ್ಣ ಕಡಾಡಿ ಮಾತನಾಡಿ, ‘ಜನಪ್ರತಿನಿಧಿಗಳನ್ನು ನಂಬಿರುವ ಮತದಾರರನ್ನು ದಾರಿತಪ್ಪಿಸುವ ಕೆಲಸವಾಗಬಾರದು. ಜನರ ತಾಳ್ಮೆಯನ್ನು ಪರೀಕ್ಷಿಸಬಾರದು’ ಎಂದರು.

ಕಾಂಗ್ರೆಸ್‌ ಮುಖಂಡರಾದ ರಮೇಶ ಉಟಗಿ, ಲಕ್ಕಣ್ಣ ಸವಸುದ್ದಿ ಮಾತನಾಡಿ, ಬುಧವಾರ ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮೂಡಲಗಿ ತಾಲ್ಲೂಕಿನ ರಚನೆ ಬಗ್ಗೆ ಮಾತನಾಡಿ ಮನವರಿಕೆ ಮಾಡಿದ್ದೇವೆ. ಸಂಸದ ಸುರೇಶ ಅಂಗಡಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೇರಿ ಚರ್ಚಿಸಿ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಸೂಚಿಸಿದ್ದಾರೆ’ ಎಂದು ಹೇಳಿದರು.

ಜೆಡಿಎಸ್‌ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಸೋನವಾಲಕರ ಮಾತನಾಡಿ, ‘ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಹ ಧರಣಿಯಲ್ಲಿ ಭಾಗವಹಿಸಲಿ’ ಎಂದು ಒತ್ತಾಯಿಸಿದರು.
ಧರಣಿ ಸ್ಥಳಕ್ಕೆ ಆಗಮಿಸಿದ ಗೋಕಾಕ ತಹಶೀಲ್ದಾರ್‌ ಜಿ.ಎಸ್‌. ಮಳಗಿ ಅವರು ಮನವಿ ಸ್ವೀಕರಿಸಿ ಸರ್ಕಾರಕ್ಕೆ ಕಳಿಸುವುದಾಗಿ ತಿಳಿಸಿದರು.

ಬಿ.ಬಿ. ಹಂದಿಗುಂದ, ಎಸ್.ಎಂ. ಕಮದಾಳ, ಜೆಡಿಎಸ್‌ ಮುಖಂಡ ಸುಭಾಷ ಪೂಜೇರಿ, ನಾಯ್ಕಪ್ಪ ನಾಯ್ಕ, ಬಸವರಾಜ ಸಾಲಾಪುರ, ಖಾನಟ್ಟಿಯ ರವಿ ತುಪ್ಪದ, ಸುಭಾಷ ಸೋನವಾಲಕರ, ಲಾಲಸಾಬ ಸಿದ್ದಾಪುರ, ಶಿವರಡ್ಡಿ ಹುಚ್ಚರಡ್ಡಿ, ಶ್ರೀಶೈಲ್‌ ಅಂಗಡಿ, ಶ್ರೀಮಂತ ಲಠ್ಠೆ, ವಿಜಯಕುಮಾರ ಸೋನವಾಲಕರ, ವೆಂಕಟೇಶ ಸೋನವಾಲಕರ, ವಕೀಲರಾದ ಯು.ಕೆ. ಜೋಕಿ ಮತ್ತಿತರರು ಬೆಂಬಲ ನೀಡಿ ಮಾತನಾಡಿದರು. ಹಳ್ಳೂರ, ಶಿವಾಪುರ, ಹುಣಶ್ಯಾಳ ಪಿ.ವೈ, ಕಲ್ಲೋಳಿ, ನಾಗನೂರ,ಖಾನಟ್ಟಿ, ಕಮಲದಿನ್ನಿ, ರಂಗಾಪುರ, ಮುನ್ಯಾಳ, ಗುರ್ಲಾಪುರ, ಇಟ್ನಾಳ ಸೇರಿದಂತೆ ಹಲವಾರು ಗ್ರಾಮಗಳ ಮುಖಂಡರು ಧರಣಿಯಲ್ಲಿ ಭಾಗವಹಿಸಿದ್ದರು.

ಬೈಕ್‌ ರ್‍್ಯಾಲಿ: ಹಾರಾಡಿದ ಹೋರಾಟದ ಧ್ವಜಗಳು
ಮೂಡಲಗಿ: ಮೂಡಲಗಿ ತಾಲ್ಲೂಕು ರಚನೆಯಲ್ಲಿ ಆಗಿರುವ ಅನ್ಯಾಯವನ್ನು ಖಂಡಿಸಿ ಸರ್ಕಾರವು ಕೂಡಲೇ ತಾಲ್ಲೂ ಕಿಗೆ ಅನುಮತಿ ನೀಡಬೇಕು ಎಂದು ಶುಕ್ರವಾರ ಒಂದು ಸಾವಿರಕ್ಕೂ ಅಧಿಕ ಸಂಖ್ಯೆಯ ಬೃಹತ್‌ ಬೈಕ್‌ ರ್‍ಯಾಲಿ ಮೂಲಕ ಪ್ರತಿಭಟನೆಯನ್ನು ಮಾಡಿದರು.

ಬೆಳಿಗ್ಗೆ ಕಲ್ಮೇಶ್ವರ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಎಂಟು ತಂಡಗಳಲ್ಲಿ ಬೈಕ್‌ಗೆ ಹೋರಾಟದ ಧ್ವಜವನ್ನು ಕಟ್ಟಿಕೊಂಡು ‘ಮೂಡಲಗಿ ತಾಲ್ಲೂಕು ಘೋಷಣೆ ಆಗುವವರೆಗೆ ಹೋರಾಟ ನಿಲ್ಲುವುದಿಲ್ಲ’ ಎಂದು ಘೋಷಣೆ ಕೂಗುತ್ತಾ ಮೂಡಲಗಿ ತಾಲ್ಲೂಕು ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳಿಗೆ ಸಾಗಿದರು.

ಅರಭಾವಿ ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಮೂಡಲಗಿ ತಾಲ್ಲೂಕಿನ ಹೋರಾಟದ ಧ್ವಜವು ಹಾರಾಡಿತು. ಭಾನುವಾರ ನಡೆಯುವ ಮೂಡಲಗಿ ಬಂದ್‌ದಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಲು ಗ್ರಾಮಗಳ ಜನರಿಗೆ ಸಲಹೆ ನೀಡಿದರು. ಬೆಳಿಗ್ಗೆ ಬೃಹತ್‌ ಬೈಕ್‌ ರ್‍ಯಾಲಿಗೆ ಹೋರಾಟ ಸಮಿತಿ ಸಂಚಾಲಕ ಭೀಮಪ್ಪ ಗಡಾದ, ಮುಖಂಡರಾದ ಬಿ.ಬಿ. ಹಂದಿಗುಂದ, ಶಂಕರಯ್ಯ ಹಿರೇಮಠ ಅವರು ಚಾಲನೆ ನೀಡಿದರು.

ಏತನ್ಮಧ್ಯೆ ಕಲ್ಮೇಶ್ವರ ವೃತ್ತದಲ್ಲಿ ತಾಲ್ಲೂಕು ರಚನೆಯ ಹೋರಾಟಕ್ಕಾಗಿ ಸ್ಥಾಪಿಸಿರುವ ವೇದಿಕಯಲ್ಲಿ 8ನೇ ದಿನ ಧರಣಿಯು ನಡೆದು ವಿವಿಧೆಡೆಯಿಂದ ಸಹಸ್ರ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಬೆಂಬಲ ನೀಡಿದರು.

ವಕೀಲರಿಂದ ಬೈಕ್‌ ರ್‍ಯಾಲಿ
ಮೂಡಲಗಿ:  ಮೂಡಲಗಿ ತಾಲ್ಲೂಕು ರಚನೆಗೆ ಆಗ್ರಹಿಸಿ ಶುಕ್ರವಾರ ಆಯೋಜಿಸಿದ್ದ ಬೈಕ್‌ ರ್‍ಯಾಲಿಯಲ್ಲಿ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದ ವಕೀಲರು ಕೋರ್ಟ್‌ ಕಲಾಪಗಳನ್ನು ಬಹಿಷ್ಕರಿಸಿ ರ್‍ಯಾಲಿಯಲ್ಲಿ ಭಾಗವಹಿಸಿ ಪ್ರತಿಭಟನೆ ನಡೆಸಿದರು.

ವಕೀಲರ ಸಂಘದ ಅಧ್ಯಕ್ಷ ಕೆ.ಎಲ್. ಹುಣಶ್ಯಾಳ, ಎ.ಕೆ. ಮದಗನ್ನವರ, ಯು.ಆರ್. ಜೋಕಿ, ಎಸ್.ಎಸ್. ಗೋಡಿ ಗೌಡರ, ಎಲ್.ವೈ. ಅಡಿಹುಡಿ, ಐ.ಎಂ. ಹಿರೇಮಠ, ಎ.ಎಸ್. ಕೌಜಲಗಿ, ಎನ್.ಬಿ. ನೇಮ ಗೌಡರ, ಎಲ್.ಬಿ. ವಡೆಯರ್‌, ವಿ.ಸಿ. ಗಾಡವಿ, ಆರ್.ಬಿ. ಪತ್ತಾರ, ವಿ.ಕೆ. ಪಾಟೀಲ, ಡಿ.ಎಸ್. ರೊಡ್ಡನವರ, ಪಿ.ಎಸ್. ಮಲ್ಲಾಪುರ, ಎಸ್.ಎಲ್. ಪಾಟೀಲ, ಡಿ.ಎಸ್. ಕಂಡಾಪಟ್ಟಿ, ಎಸ್.ಎಸ್. ತುಪ್ಪದ, ವೈ.ಎಸ್. ಖಾನಟ್ಟಿ ಭಾಗವಹಿಸಿದ್ದರು.

* * 

ಧರಣಿಯಲ್ಲಿ ಕುಳಿತು 8 ದಿನವಾದರೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಇದು ಹೋರಾಟಗಾರರು ರೊಚ್ಚಿಗೇಳಲು ದಾರಿ ಮಾಡಿಕೊಡುತ್ತದೆ.
ಭೀಮಪ್ಪ ಗಡಾದ
ಮಾಹಿತಿ ಹಕ್ಕು ಕಾರ್ಯಕರ್ತ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT