ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿನ ಬಾವಿಗಳಲ್ಲಿ ತುಂಬಿದೆ ಕೊಳಕು ಕಸ

Last Updated 16 ಸೆಪ್ಟೆಂಬರ್ 2017, 5:16 IST
ಅಕ್ಷರ ಗಾತ್ರ

ದೇವರ ಹಿಪ್ಪರಗಿ: ಬಾವಿ ಬಳಸದೇ ಕೆಟ್ಟಿತು, ನೆಂಟಸ್ತಿಕೆ ಹೋಗದೆ ಕೆಟ್ಟಿತು ಎಂಬ ಗಾದೆ ಮಾತಿನಂತೆ ಹಲವಾರು ವರ್ಷಗಳಿಂದ ನೀರಿಗಾಗಿ ಬಳಕೆಯಾಗುತ್ತಿದ್ದ ಬಾವಿಗಳು ಆಧುನಿಕ ಸೌಕರ್ಯಗಳ ಭರದಲ್ಲಿ ನಿರ್ಲಕ್ಷಕ್ಕೆ ಒಳಗಾಗಿ ತ್ಯಾಜ್ಯ ವಿಲೇವಾರಿಯ ಗುಂಡಿಗಳಾಗಿವೆ.

ನೂರಾರು ವರ್ಷಗಳಿಂದ ಜನತೆಯ  ಜೀವನದ ಅವಿಭಾಜ್ಯ ಭಾಗವಾಗಿ ನೀರಿನ ದಾಹ ತಣಿಸಿದ ಪಟ್ಟಣದ ಪ್ರಮುಖ ಬಾವಿಗಳಾದ ಕುನ್ನಿಬಾವಿ ಎಂದೇ ಕರೆಯಲಾಗುವ ಸದಯ್ಯನಮಠದ ಹತ್ತಿರದ ಬಾವಿ, ಗದ್ದಿಗೆಮಠ ಬಾವಿ, ಕಲ್ಮೇಶ್ವರ ದೇವಸ್ಥಾನ ಬಾವಿ, ಶಾಸನ ದೊರೆತಿರುವ ಕುಂಬಾರ ಬಾವಿ, ಪರದೇಶಿಮಠ ಬಾವಿ, ವಿಠ್ಠಲ ಮಂದಿರ ಬಾವಿ, ಭಾವಿಕಟ್ಟಿಯವರ ಬಾವಿ, ಕೃಷ್ಣಮೂರ್ತಿ ನಾಯಕರ ಮನೆ ಬಾವಿ, ಗೌಡ್ರ ಮನೆಯ ಬಾವಿ, ಮಮದಾಪೂರ ಮನೆ ಬಾವಿ,ಹಳ್ಳದ ಗುಂಡ ಎಂದು ಹೆಸರಾದ ಬಾವಿ, ಜಡಿಮಠ ಬಾವಿ, ಲಂಡಕೇನಹಳ್ಳ ಗಿರಕಿ ಬಾವಿ, ಮಲ್ಲಯ್ಯನ ಗುಡಿ ಬಾವಿ, ಶಾಂತಮಠ ಬಾವಿ, ಹಣಮಂತ್ರಾಯ ಕೊಟೀನ ಮನೆ ಬಾವಿ, ಅಂಗಡಿಯವರ ಬಾವಿ, ಅಪ್ಪುಗೌಡ್ರ ಮನೆ ಬಾವಿ ಸೇರಿದಂತೆ 20 ಬಾವಿಗಳು  ಪಟ್ಟಣದಲ್ಲಿವೆ.

ಹೊರವಲಯದಲ್ಲಿ ಪಾತ್ರಗಿತ್ತಿ ಬಾವಿ ಎಂದೇ ಜನಜನಿತವಾಗಿರುವ, ಎರಡು ಅಂತಸ್ತುಗಳ ಸುಂದರ ಕಮಾನು ಹೊಂದಿರುವ ವಿಜಯಪುರ ಆದಿಲ್ ಷಾಹಿ ಕಾಲದ ಬಾವುಡಿಗಳ ವಿನ್ಯಾಸ ಹೊಂದಿದ, ವರ್ಷಪೂರ್ತಿ ನೀರು ಇರುವ ಬಾವಿ, ಕಾಳಿದಾಸ, ರಾಮಾಜರ, ಜ್ಯೋತೆನರ ಎಂಬ ಹೆಸರಿನ  ಐತಿಹಾಸಿಕ ಹಿನ್ನೆಲೆಯಿರುವ, ವಿಶೇಷ ವಿನ್ಯಾಸದ ಬಾವಿಗಳಿವೆ.

ಈ ಎಲ್ಲ 25ಕ್ಕೂ ಹೆಚ್ಚಿನ ಬಾವಿಗಳು ಇಂದು ಯಾರಿಗೂ ಬೇಡವಾಗಿ ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿವೆ. ಕೆಲವು ಕಸ ತ್ಯಾಜ್ಯದಿಂದ ಕೂಡಿದ ತಿಪ್ಪೆಗುಂಡಿಗಳಾಗಿವೆ. ನೀರಿಲ್ಲದೇ ಭಣಗುಟ್ಟುವ ಬಾವಿಗಳ ಸ್ಥಿತಿಯನ್ನು ಕಂಡು ಹಿರಿಯ ಮಹಿಳೆ ಲಕ್ಷ್ಮೀಬಾಯಿ ಅಗಸರ ಮಾತನಾಡಿ ‘ಮೊದಲೆಲ್ಲಾ ಗಣೇಶ ಚತುರ್ಥಿ ಸಮಯದಲ್ಲಿ ಬಾವಿಗಳು ತುಂಬಿರುತ್ತಿದ್ದವು. ಆದರೆ ಇಂದು ವಿಸರ್ಜನೆ ಮಾಡಲು ಯಾವ ಬಾವಿಯಲ್ಲಿಯೂ ಹನಿ ನೀರಿಲ್ಲ. ನಾವೇ ಅವುಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೇ  ಅವುಗಳನ್ನು ಈ ಸ್ಥಿತಿಗೆ ತರಲು ಕಾರಣರಾಗಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಳೆಗಾಲ ಆರಂಭವಾಗುತ್ತಿದಂತೆ ಪಟ್ಟಣದ ಬಹುತೇಕ ಎಲ್ಲ ಬಾವಿಗಳ ನೀರಿನ ಪ್ರಮಾಣ ಏರಿಕೆಯಾಗಿ ತುಂಬಿ ಕಂಗೋಳಿಸುತ್ತಿದ್ದವು. ಆದರೆ ಇಂದು ಮಳೆ ಇಲ್ಲದೇ ಬಾವಿಗಳು ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತ ತಲುಪಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸರ್ಕಾರ ಜಾರಿಗೊಳಿಸಿರುವ ಹಲವಾರು ಯೋಜನೆಗಳ ಮೂಲಕ ಮನೆಮನೆಗೆ ನೀರು ಪೂರೈಕೆಯಾಗು ತ್ತಿರುವಾಗ ಈ ಬಾವಿಗಳು ಯಾರಿಗೆ ಬೇಕಾಗುತ್ತವೆ’ ಎಂದು ಮಂಡಲ ಪಂಚಾ ಯಿತಿ ಮಾಜಿ ಅಧ್ಯಕ್ಷ ಶಿವಾನಂದಗೌಡ ಜಿಡ್ಡಿಮನಿ ಅಭಿಪ್ರಾಯಪಟ್ಟರು.

‘ಜನರಿಗೆ ಈ ಬಾವಿಗಳು ನೆನಪಾಗುವುದು ಬೇಸಿಗೆಯಲ್ಲಿ ಮಾತ್ರ’ ಎನ್ನುವ ಅವರು, ‘ಬಾವಿಗಳ ಹೂಳನ್ನು ಸ್ಥಳೀಯ ಆಡಳಿತ ತೆಗೆಸಿ, ನೀರು ತುಂಬು ವಂತೆ ಮಾಡಬೇಕು’ ಎಂದೂ ಹೇಳಿದರು.

* *

ನಮ್ಮ ನಮ್ಮ ಓಣಿಯ ಬಾವಿಗಳ ಹೂಳು ತೆಗೆದು ಸ್ವಚ್ಛವಾಗಿ ಇಟ್ಟುಕೊಂಡು ಪುನಃ ನೀರು ಬರುವಂತೆ ಮಾಡಬೇಕು. ಉಳಿದವುಗಳ ಹೂಳನ್ನು ಸ್ಥಳೀಯ ಆಡಳಿತ ಎತ್ತಬೇಕು
ಶಿವಾನಂದಗೌಡ ಜಿಡ್ಡಿಮನಿ
ಮಾಜಿ ಅಧ್ಯಕ್ಷ, ಮಂಡಲ ಪಂಚಾಯಿತಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT