ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಗ್ರೀವಾಜ್ಞೆಗೆ ಅನುಮೋದನೆ ಸಿಗಲಿ’

Last Updated 16 ಸೆಪ್ಟೆಂಬರ್ 2017, 5:42 IST
ಅಕ್ಷರ ಗಾತ್ರ

ಕಾರವಾರ: ‘ಪರಿಶಿಷ್ಟ ಜಾತಿ ಹಾಗೂ ಪಂಗಡದ ನೌಕರರ ಮುಂಬಡ್ತಿ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ರಾಜ್ಯಪಾಲರು ಕೂಡಲೇ ಅನುಮೋದನೆ ನೀಡಬೇಕು’ ಎಂದು ಒತ್ತಾಯಿಸಿ ಕರ್ನಾ ಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನಾ ರ್‍್ಯಾಲಿ ನಡೆಸಿದರು.

ನಗರದ ಅಂಬೇಡ್ಕರ್ ವೃತ್ತದಿಂದ 20ಕ್ಕೂ ಅಧಿಕ ಮಂದಿ ಕಾರ್ಯಕರ್ತರು ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡರು. ‘ಮೀಸಲಾತಿ ಒದಗಿಸುವ ಸಲುವಾಗಿ 2002ರ ಕಾಯ್ದೆಯನ್ನು ರಾಜ್ಯ ಸರ್ಕಾರ ತಂದಾಗ ಅದನ್ನು ಪ್ರಶ್ನಿಸಿ ಕೆಲವರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ನ್ಯಾಯಾಲಯವು ಕೆಲವು ಅಂಶಗಳನ್ನು ಗಮನಿಸದೇ ಮುಂಬಡ್ತಿ ಮೀಸಲಾತಿ ಪಡೆದ ಅಭ್ಯರ್ಥಿಗಳ ಸೇವಾ ಜೇಷ್ಠತೆ ಪಟ್ಟಿಯನ್ನು ಪುನರ್‌ರಚಿಸಿ, ಮೀಸಲಾತಿ ಒದಗಿಸುವಂತೆ ತಿಳಿಸಿತ್ತು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸವಂತೆ ರಾಜ್ಯ ಸರ್ಕಾರಕ್ಕೆ ಒತ್ತಡ ಹೇರಲು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿತ್ತು.

ಆದರೆ ಅಷ್ಟರಲ್ಲಿ ನೌಕರರ ಹಿತಕ್ಕಾಗಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದು, ಅನುಮೋದನೆಗೆ ರಾಜ್ಯಪಾಲರಿಗೆ ಕಳಿಸಿತ್ತು. ಆದರೆ ಅವರು ಕೆಲವು ವಿವರಣೆಗಳನ್ನು ಕೇಳಿ ಅದನ್ನು ವಾಪಸ್‌ ಮಾಡಿರುವುದು ದುರದೃಷ್ಟಕರ’ ಎಂದು ದೂರಿದರು.

‘ಬಿಜೆಪಿ ಹಿನ್ನೆಲೆಯಿಂದ ಬಂದ ರಾಜ್ಯಪಾಲರು ದಲಿತ ವಿರೋಧಿ ನಿಲುವುಗಳನ್ನು ತಾಳಿದ್ದಾರೆ. ದಲಿತರ ಮನೆಗಳಿಗೆ ತೆರಳಿ ಉಂಡು ಬರುವ ಬಿಜೆಪಿಗರಿಗೆ ನಮ್ಮ ಮೇಲೆ ಅಷ್ಟೊಂದು ಕಾಳಜಿ ಇದ್ದರೆ ರಾಜ್ಯಪಾಲರನ್ನು ಒಪ್ಪಿಸಲಿ’ ಎಂದು ಒತ್ತಾಯಿಸಿದರು.

‘ಸರ್ಕಾರದ ವತಿಯಿಂದ ಕಾನೂನು ಸಚಿವರು ರಾಜ್ಯಪಾಲರಿಗೆ ವಿವರಣೆ ನೀಡಿದ್ದಾರೆ. ಈಗಲಾದರೂ ಅವರು ಪೂರ್ವಗ್ರಹವಾಗಿ ಯೋಚಿಸದೇ ಕೂಡಲೇ ಸುಗ್ರೀವಾಜ್ಞೆಗೆ ಅನುಮೋದನೆ ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕು’ ಎಂದರು.

ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಶಿವಾಜಿ ಬನವಾಸಿ, ಕಾರವಾರ ತಾಲ್ಲೂಕು ಸಂಚಾಲಕ ಶ್ಯಾಮಸುಂದರ್ ಗೋಕರ್ಣ, ಕುಮಾರ ಕೋಡ್ಸರ್ ಸಿದ್ದಾಪುರ, ಬಸವರಾಜ ಅಜ್ಜರಣಿ, ಲಕ್ಷ್ಮಣ ಮಾಳಕ್ಕನವರ್ ಶಿರಸಿ, ಬಸವರಾಜ್ ತವರೇರ್, ನಾಗರಾಜ ಸಿದ್ದಿ, ನಾರಾಯಣ ಸಿದ್ದಿ, ಗಣಪತಿ ಬೆಳ್ಳಟ್ಟಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT