ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರೂ ಒಂದಾಗಿ ಜೆಡಿಎಸ್‌ ಬೆಳೆಸಿ, ಉಳಿಸಿ

Last Updated 16 ಸೆಪ್ಟೆಂಬರ್ 2017, 6:49 IST
ಅಕ್ಷರ ಗಾತ್ರ

ಶಹಾಪುರ:‘ಬರಗಾಲದಿಂದ ಸಂಕಷ್ಟ ಎದುರಿಸುತ್ತಿರುವ ರೈತರ ಬಾಳಲ್ಲಿ ಹಸಿರು ಮೂಡಿಸುವ ಹೆಬ್ಬಯಕೆಯಿಂದ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಯೋಜನೆಯನ್ನು ಅವಿರತ ಶ್ರಮದಿಂದ ಜಾರಿಗೊಳಿಸಿದ್ದೇನೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್‌.ಡಿ.ದೇವೇಗೌಡ ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ‘57 ವರ್ಷದ ಸುದೀರ್ಘ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದೇನೆ. ಆದರೆ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸದಾ ಆದ್ಯತೆ ನೀಡಿದ್ದೇನೆ’ ಎಂದರು.

‘ರೈತರ ಹಿತಕ್ಕಾಗಿ ಪ್ರಾಶಸ್ತ್ಯ ನೀಡುತ್ತಲೇ ಇದ್ದೇನೆ. ಆರ್ಥಿಕ ನೆರವು ನೀಡಲು ಸರ್ಕಾರ ಹಿಂಜರಿದಾಗ, ರಾಜೀನಾಮೆ ಸಹ ನೀಡಿರುವೆ. ಆದರೂ ನನ್ನನ್ನು ಬ್ರಾಹ್ಮಣ, ಲಿಂಗಾಯತ ವಿರೋಧಿಯೆಂದು ಬಿಂಬಿಸಲಾಗುತ್ತದೆ’ ಎಂದರು.

‘ಜೆಡಿಎಸ್ ಯಾವತ್ತೂ ನಂಬಿದರನ್ನು ಕೈ ಬಿಡುವುದಿಲ್ಲ. ಎಲ್ಲರೂ ಹೊಂದಾಣಿಕೆಯಿಂದ ಪಕ್ಷ ಸಂಘಟಿಸಬೇಕು. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕೆಂಭಾವಿಯನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಲಾಗುವುದು’ ಎಂದು ಅವರು ತಿಳಿಸಿದರು.

‘ರಾಷ್ಟ್ರೀಯ ಪಕ್ಷಗಳ ಕೆಸರಾಟದಿಂದ ಜನತೆ ಬೇಸರಗೊಂಡಿದ್ದಾರೆ. ಆಂಧ್ರಪ್ರದೇಶ, ತಮಿಳುನಾಡಿನಂತೆ ನಮ್ಮಲ್ಲಿಯೂ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಬೇರುಗಳನ್ನು ಗಟ್ಟಿಗೊಳಿಸಬೇಕು. ಇದಕ್ಕೆ ಎಲ್ಲರೂ ಸಹಕರಿಸಬೇಕು’ ಎಂದರು.

ಮುಖಂಡ ಅಮೀನರಡ್ಡಿ ಪಾಟೀಲ ಯಾಳಗಿ ಮಾತನಾಡಿ, ‘ತಾಲ್ಲೂಕಿನ 100 ಹಳ್ಳಿಗಳು ಹಾಗೂ 40 ತಾಂಡಾಗಳಿಗೆ ಭೇಟಿ ನೀಡಿರುವೆ. 40 ವರ್ಷದಿಂದ ಶಿರವಾಳ ಹಾಗೂ ದರ್ಶನಾಪುರ ಕುಟುಂಬ ಹೊಂದಾಣಿಕೆ ರಾಜಕೀಯ ಮಾಡುತ್ತಾ ಜನರ ಆಶೋತ್ತರಗಳನ್ನು ಈಡೇರಿಸಿಲ್ಲ. ಅವರು ಜನರ ಪಾಲಿಗೆ ಅಮವಾಸ್ಯೆ– ಹುಣ್ಣಿಮೆಯಂತೆ ಆಗಿದ್ದಾರೆ’ ಎಂದರು.

‘ನಾಲ್ಕು ಬಾರಿ ಶಾಸಕ ಹಾಗೂ ಎರಡು ಬಾರಿ ಸಚಿವರು ಆಗಿದ್ದ ಶರಣಬಸಪ್ಪ ದರ್ಶನಾಪುರ ಕೆಂಭಾವಿ ತಾಲ್ಲೂಕು ಕೇಂದ್ರವಾಗಿ ಮಾಡುವಲ್ಲಿ ವಿಫಲರಾಗಿದ್ದಾರೆ. ತಾಲ್ಲೂಕಿನಲ್ಲಿ ಸಾಕಷ್ಟು ಕೆರೆಗಳಿದ್ದರೂ ನೀರು ತುಂಬಿಸಲು ಸಾಧ್ಯವಾಗಿಲ್ಲ. ಕಾರ್ಖಾನೆ, ಎಂಜಿನಿರಿಂಗ್ ಕಾಲೇಜು,ಕುಡಿಯುವ ನೀರು, ರಸ್ತೆ ಯಾವುದನ್ನು ಅಭಿವೃದ್ಧಿ ಮಾಡದೆ ಮತದಾರರಿಗೆ ಮಂಕುಬೂದಿ ಎರಚಿದ್ದಾರೆ. ಬರುವ ದಿನದಲ್ಲಿ ಮತದಾರರು ಇದರ ಬಗ್ಗೆ ಜಾಗೃತರಾಗಬೇಕು’ ಎಂದರು.

ನವಲಗುಂದ ಶಾಸಕ ಎನ್‌.ಎಚ್‌.ಕೊನೆರಡ್ಡಿ ಹಾಗೂ ಪಕ್ಷದ ಮುಖಂಡರಾದ ಬಂಡೆಪ್ಪ ಕಾಶಂಪೂರ, ವೆಂಕಟರಡ್ಡಿ ನಾಡಗೌಡ, ನಾಗಣ್ಣ ಕಂದಕೂರ,ಕೇದಾರಲಿಂಗಯ್ಯ ಹಿರೇಮಠ, ಎಚ್‌.ಎಸ್.ಫಾರಕ್, ಸಯ್ಯದ್ ಜಫುರುಲ್‌ಖಾನ್ ಮಾತನಾಡಿದರು.

ಪಕ್ಷದ ಮುಖಂಡರಾದ ಶರಣಪ್ಪ ಸಲಾದಪೂರ, ಎ.ಸಿ ಕಾಡ್ಲೂರ, ಹನುಮೇಗೌಡ ಬಿರಣಕಲ್, ಅಯ್ಯಣ್ಣ ಕನ್ಯಾಕೊಳ್ಳೂರ, ಬಸವರಾಜ ಅರುಣಿ, ವಿಠಲ ವಗ್ಗಿ, ಉಸ್ತಾದ ವಜಾಹತ ಹುಸೇನಿ, ವೆಂಕೋಬ ದೊರೆ,ವೆಂಕಟೇಶ ಭಕ್ರಿ, ಅಶೋಕ ಕರೆಗಾರ, ರಾಮಣ್ಣಗೌಡ ವಂದಗನೂರ, ಸಾಯಿಬಣ್ಣ ದೊಡ್ಮನಿ, ಹಣಮಂತರಾಯ ಮಾನಸೂಣಗಿ, ರಮೇಶ ಕೊಡಗನೂರ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT