ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಖಾತೆಗೆ ಆಧಾರ್ ಜೋಡಣೆ; ಎರಡು ದಿನ ಗಡುವು

Last Updated 16 ಸೆಪ್ಟೆಂಬರ್ 2017, 6:54 IST
ಅಕ್ಷರ ಗಾತ್ರ

ಯಾದಗಿರಿ: ‘ಜಿಲ್ಲೆಯ ವಿವಿಧ ಬ್ಯಾಂಕುಗಳಲ್ಲಿನ ರೈತರ ಒಟ್ಟು 6,700 ಬ್ಯಾಂಕ್‌ ಉಳಿತಾಯ ಖಾತೆಗಳಿಗೆ ಆಧಾರ್ ಲಿಂಕ್ ಜೋಡಣೆ ಆಗಿಲ್ಲ. ಇದರಿಂದ ಬೆಳೆಹಾನಿ ಪರಿಹಾರ ರೈತರಿಗೆ ಸಿಕ್ಕಿಲ್ಲ. ಹೊಣೆ ಇದ್ದರೂ ಬ್ಯಾಂಕ್‌ ಅಧಿಕಾರಿಗಳು ಆಧಾರ್ ಜೋಡಣೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ.

ಎರಡು ದಿನಗಳಲ್ಲಿ ಆಧಾರ್ ಜೋಡಣೆ ಕಾರ್ಯ ಪೂರ್ಣಗಳಿಸಬೇಕು. ಇಲ್ಲದಿದ್ದರೆ ಶಿಸ್ತುಕ್ರಮ ಎದುರಿಸಬೇಕಾಗುವುದು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಬ್ಯಾಂಕ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಬ್ಯಾಂಕರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನೇರ ನಗದು ವರ್ಗಾವಣೆ ವ್ಯವಸ್ಥೆ ಜಾರಿ ಇರುವುದರಿಂದ ಬೆಳೆ ಹಾನಿ ಪರಿಹಾರ ರೈತರ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಬೇಕಿದೆ. ಆದರೆ, ಖಾತೆಗಳಿಗೆ ಆಧಾರ್‌ ಜೋಡಣೆ ಮಾಡಿಸುವ ಜವಾಬ್ದಾರಿಯನ್ನು ಆಯಾ ಬ್ಯಾಂಕುಗಳ ಅಧಿಕಾರಿಗಳು ನಿಭಾಯಿಸಬೇಕು. ಜವಾಬ್ದಾರಿಯನ್ನು ಖಾತೆದಾರರ ಮೇಲೆ ಹಾಕಿ ಕೂರುವುದು ಸರಿಯಲ್ಲ. ರೈತರನ್ನು ಸಂಪರ್ಕಿಸಿ ಆಧಾರ್ ಸಂಖ್ಯೆ ಪಡೆದು ಇರುವ ತಾಂತ್ರಿಕ ದೋಷ ಸರಿಪಡಿಸಬೇಕು’ ಎಂದು ಸೂಚಿಸಿದರು.

ಶೂನ್ಯ ಠೇವಣಿ ಖಾತೆಗೆ ತಕರಾರು ಏಕೆ?: ಬೆಳೆಹಾನಿ ಪರಿಹಾರ ಪಡೆಯುವ ಸಲುವಾಗಿಯೇ ರೈತರು ಶೂನ್ಯ ಠೇವಣಿ ಖಾತೆ ತೆರೆಯುವಂತೆ ಸರ್ಕಾರದ ಆದೇಶವಿದ್ದರೂ ವಿವಿಧ ಬ್ಯಾಂಕುಗಳು ರೈತರಿಗೆ ಅಸಹಕಾರ ತೋರುತ್ತಿರುವ ಕುರಿತು ಜಿಲ್ಲಾಡಳಿತಕ್ಕೆ ದೂರು ಕೇಳಿ ಬರುತ್ತಿವೆ. ಶೂನ್ಯ ಠೇವಣಿ ಖಾತೆಗೆ ತೆರೆಯಲು ಏಕೆ ತಕರಾರು ಮಾಡುತ್ತೀರಿ ಎಂದು ಪ್ರಶ್ನಿಸಿದರು. ಈ ಕುರಿತು ರೈತರಿಂದ ದೂರು ಬಂದಾಗ ಖುದ್ದಾಗಿ ಪರಿಶೀಲಿಸಲು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಖಾದ್ರಿ ಅವರಿಗೆ ಸೂಚಿಸಿದರು.

ಸಾಲಕ್ಕೆ ಸರ್ಕಾರದ ಸೌಲಭ್ಯ ಹಣ ವಸೂಲು ಮಾಡುವಂತಿಲ್ಲ: ರೈತರಿಗೆ ಬ್ಯಾಂಕುಗಳು ನೀಡಿರುವ ಸಾಲವನ್ನು ಸರ್ಕಾರದ ಸೌಲಭ್ಯ ಹಣ ಜಮಾ ಆದ ಕೂಡಲೇ ಬ್ಯಾಂಕುಗಳು ವಸೂಲಿ ಮಾಡಿಕೊಳ್ಳುತ್ತಿವೆ ಎಂಬ ಆರೋಪ, ದೂರು ವ್ಯಾಪಕವಾಗಿದೆ. ಸರ್ಕಾರ ಸ್ವಚ್ಛ ಭಾರತ ಅಭಿಯಾನ, ವಸತಿ ಯೋಜನೆ, ಉದ್ಯೋಗ ಖಾತ್ರಿ ಯೋಜನೆಯಂತಹ ಪ್ರಮುಖ ಯೋಜನೆಗಳಡಿಸೌಲಭ್ಯ ಪಡೆದುಕೊಂಡಾಗ ಅಂತಹ ಹಣವನ್ನು ಸಾಲ ವಸೂಲಿ ಅಂತ ಸಾಲ ಬಾಕಿ ಮುರಿಯುವಂತಿಲ್ಲ. ಹೀಗೆ ಮಾಡಿದರೆ ಸರ್ಕಾರ ಯೋಜನೆಗಳಿಗೆ ಹಿನ್ನಡೆಯಾಗುತ್ತದೆ. ಸಾಲಮರುಪಾವತಿಯನ್ನು ರೈತರ ಗಮನಕ್ಕೆ ತಂದು ಬಾಕಿ ವಸೂಲಿ ಮಾಡಬೇಕು ಎಂದು ಹೇಳಿದರು.

ರೈತರು ಥಳಿಸುವ ಮುಂಚೆ ಜಾಗ್ರತೆ ವಹಿಸಿ: ಜಿಲ್ಲೆಯಲ್ಲಿನ ಬಹುತೇಕ ಡಿಸಿಸಿ ಬ್ಯಾಂಕುಗಳಲ್ಲಿ ಶೇ 80ರಷ್ಟು ರೈತರ ಖಾತೆಗಳಿಗೆ ಆಧಾರ್ ಜೋಡಣೆ ಮಾಡಿಲ್ಲ. ಇದರಿಂದ ರೈತರು ಬೆಳೆಹಾನಿ ಪರಿಹಾರದಿಂದ ವಂಚಿತಗೊಂಡಿವೆ. ಈಗಾಗಲೇ ರೈತರು ಜಿಲ್ಲಾಡಳಿತ ಕಚೇರಿ ಎದುರು ನಿತ್ಯ ಪ್ರತಿಭಟನೆ ಕುಳಿತುಕೊಳ್ಳುತ್ತಿದ್ದಾರೆ. ಕೃಷಿ ಇಲಾಖೆ– ಜಿಲ್ಲಾಡಳಿತ ತನ್ನ ಭಾಗದ ಕರ್ತುವ್ಯ ಮುಗಿಸಿವೆ. ಬ್ಯಾಂಕುಗಳ ಅಧಿಕಾರಿಗಳಿಂದ ಪರಿಹಾರ ಸಿಗುತ್ತಿಲ್ಲ ಎಂಬುದು ರೈತರಿಗೆ ಗೊತ್ತಾದರೆ ಥಳಿಸುತ್ತಾರೆ. ರೈತರಿಂದ ಅಂತಹ ಸ್ಥಿತಿ ಬರುವ ಮೊದಲು ಜಾಗ್ರತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಡಿಸಿಸಿ ಬ್ಯಾಂಕ್‌ ಸಿಬ್ಬಂದಿಗೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ರಿಸರ್ವ್‌ ಬ್ಯಾಂಕ್ ಪ್ರಾದೇಶಿಕ ವಿಭಾಗ ಅಧಿಕಾರಿ ವಿದ್ಯಾಸಾಗರ್ ಮಾತನಾಡಿ,‘ರೈತರ ಖಾತೆಗಳಿಗೆ ಮೊದಲು ಆಧಾರ್ ಜೋಡಣೆ ಮಾಡಬೇಕು. ಸರ್ಕಾರ ರೈತರ ಖಾತೆಗೆ ಹಣ ನೀಡುತ್ತದೆ. ಬ್ಯಾಂಕುಗಳಿಂದ ರೈತರ ಪರಿಹಾರ ಬೇಡುತ್ತಿಲ್ಲ. ನಮ್ಮಿಂದ ಸರ್ಕಾರದ ಸೌಲಭ್ಯ ರೈತರಿಗೆ ಸಿಗದಂತಾಗಿರುವುದು ಸರಿಯಲ್ಲ. ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿಕೊಂಡು ರೈತರ ಬ್ಯಾಂಕ್‌ ಖಾತೆಗಳಿಗೆ ಯಾವುದೇ ತಾಂತ್ರಿಕ ದೋಷಗಳು ಇಲ್ಲದಂತೆ ಸರಿಪಡಿಸಬೇಕು’ ಎಂದರು.

ಗ್ರಾಮೀಣ ಭಾಗದಲ್ಲಿ ಸಂತೆ ನಡೆಯುವ ಸ್ಥಳ ಅಭಿವೃದ್ಧಿಗೆ ನಬಾರ್ಡ್ ₹10 ಲಕ್ಷ ಅನುದಾನ ನೀಡುತ್ತಿದ್ದು. ಜಿಲ್ಲೆಯ ಮೂರು ಗ್ರಾಮೀಣ ಪ್ರದೇಶಗಳಿಗೆ ಅನುದಾನ ಬಿಡುಗಡೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ನಬಾರ್ಡ್ ಅಧಿಕಾರಿ ರಮೇಶ್‌ ಭಟ್ ಅವರಿಗೆ ಮನವಿ ಮಾಡಿದರು. ಐಸಿಐಸಿಐ ಬ್ಯಾಂಕ್‌ ಸಿಬ್ಬಂದಿಗೆ ನೊಟೀಸ್: ಸಭೆಗೆ ಗೈರು ಹಾಜರಾಗಿದ್ದ ಐಸಿಐಸಿಐ ಬ್ಯಾಂಕ್‌ ಸಿಬ್ಬಂದಿಗೆ ಕೂಡಲೇ ನೋಟಿಸ್‌ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲೆಯ ವಿವಿಧ ಬ್ಯಾಂಕುಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT