ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣಿ ನವೀಕರಣ ಸ್ಥಗಿತ

Last Updated 16 ಸೆಪ್ಟೆಂಬರ್ 2017, 6:56 IST
ಅಕ್ಷರ ಗಾತ್ರ

ಹನೂರು: ಸಮೀಪದ ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತ ಗುರುವಾರ ಸುರಿದ ಭಾರಿ ಮಳೆಯ ಕಾರಣ ಪ್ರಗತಿ ಹಂತದಲ್ಲಿದ್ದ ಅಂತರಗಂಗೆ ಕಲ್ಯಾಣಿ ನವೀಕರಣ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಬೆಟ್ಟಕ್ಕೆ ಬರುವ ಭಕ್ತರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಅಂತರಗಂಗೆಯನ್ನು ಸ್ವಚ್ಛಗೊಳಿಸಿ ಕಲ್ಯಾಣಿ ನಿರ್ಮಿಸುವ ಕಾಮಗಾರಿ ನಡೆಯುತ್ತಿದೆ. ಮಳೆಯ ರಭಸಕ್ಕೆ ಕಾಮಗಾರಿ ನಿರ್ಮಾಣಕ್ಕೆ ಹಾಕಿದ್ದ ಮರದ ಹಲಗೆ ಹಾಗೂ ಕಬ್ಬಿಣದ ಸರಳುಗಳು ಕಿತ್ತು ಬಂದಿವೆ. ಭಾರಿ ನೀರು ಹರಿದ ಪರಿಣಾಮ ಇನ್ನೂ ಕೆಲವು ದಿನ ಕಾಮಗಾರಿ ಸ್ಥಗಿತಗೊಳಿಸುವ ಸಾಧ್ಯತೆಯಿದೆ.

ಜಾತ್ರೆ ಹಾಗೂ ವಿಶೇಷ ಸಂದರ್ಭ ಗಳಲ್ಲಿ ಬರುವ ಭಕ್ತರಿಗೆ ಅಗತ್ಯ ಸೌಕರ್ಯ ಗಳನ್ನು ಒದಗಿಸಲು ಅಂತರಗಂಗೆಯನ್ನು ನವೀಕರಣಗೊಳಿಸಿ ನೂತನ ಕಲ್ಯಾಣಿ ನಿರ್ಮಿಸಲು ₹ 4.27 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು.

ಕಾಮಗಾರಿ ಸಂದರ್ಭದಲ್ಲಿ ಭಕ್ತರಿಗೆ ಅನುಕೂಲವಾಗಲು ಪ್ರಾಧಿಕಾರದಿಂದ ಅಂತರಗಂಗೆ ಸಮೀಪದಲ್ಲಿಯೇ ಸ್ನಾನದ ಕೋಣೆಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಭಕ್ತರಿಗೆ ತೊಂದರೆಯುಂಟಾಗಿದೆ.

‘ಸೆ.18ರಿಂದ ನ.13ರವರೆಗೆ ಬೆಟ್ಟದಲ್ಲಿ ನಿರಂತರವಾಗಿ ಜಾತ್ರಾ ಮಹೋತ್ಸವಗಳು ನಡೆಯಲಿವೆ. ದೀಪಾವಳಿ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಬರುವುದರಿಂದ ಸ್ನಾನಕ್ಕೆ ಸ್ಥಳಾವಕಾಶದ ಕೊರತೆ ಕಾಡುತ್ತದೆ. ಹೀಗಾಗಿ ಅಧಿಕಾರಿಗಳು ತ್ವರಿತವಾಗಿ ಕಾಮಗಾರಿ ಮುಗಿಸಬೇಕು' ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕೊಚ್ಚಿ ಹೋದ ಕರು: ಮಲೆಮಹದೇಶ್ವರ ಬೆಟ್ಟ ತಪ್ಪಲಿನಲ್ಲಿ ಸುರಿದ ಭಾರಿ ಮಳೆಗೆ ಗುರುವಾರ ಸಂಜೆ ಹಳೇಯೂರು ಗ್ರಾಮದ ಬಳಿ ಕರುವೊಂದು ನೀರಿನಲ್ಲಿ ಕೊಚ್ಚಿ ಹೋಗಿದೆ.
ಜಾನುವಾರುಗಳನ್ನು ಮೇಯಿಸಲು ಕಾಡಿಗೆ ತೆರಳಿದ್ದ ಹಳೇಯೂರು ಗ್ರಾಮದ ರೈತ ಪುಟ್ಟಪ್ಪ ಸಂಜೆ ಮನೆಗೆ ಮರಳುವಾಗ ಚಿಕ್ಕ ಹಳ್ಳವೊಂದರಲ್ಲಿ ಏಕಾಏಕಿ ಭಾರಿ ಪ್ರಮಾಣದ ನೀರು ನುಗ್ಗಿದೆ. ನಾಲ್ಕು ಎಮ್ಮೆ ಮತ್ತು ಎರಡು ಹಸುಗಳು ಈಜಿ ದಡ ಸೇರಿವೆ. ಆದರೆ, ನೀರಿನ ರಭಸಕ್ಕೆ ಕರು ಕೊಚ್ಚಿಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT