ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

31 ಪ್ರಶಸ್ತಿ ಬಾಚಿದ ಕಿರಗಸೂರು ಸರ್ಕಾರಿ ಶಾಲೆ

Last Updated 16 ಸೆಪ್ಟೆಂಬರ್ 2017, 7:22 IST
ಅಕ್ಷರ ಗಾತ್ರ

ಬೆಳಕವಾಡಿ(ಮಳವಳ್ಳಿ): ಗ್ರಾಮಸ್ಥರು ಸಹಕಾರ ನೀಡಿದರೆ ಸರ್ಕಾರಿ ಶಾಲೆಗಳು ಉತ್ತಮ ಶಾಲೆಗಳಾಗಿ ರೂಪುಗೊಳ್ಳುತ್ತವೆ ಎಂಬುದಕ್ಕೆ ತಾಲ್ಲೂಕಿನ ಕಿರಗಸೂರು ಗ್ರಾಮದ ಶಾಲೆ ಉತ್ತಮ ಉದಾಹರಣೆಯಾಗಿದೆ.

ಎಲ್‌.ಕೆ.ಜಿ. ಮತ್ತು ಯು.ಕೆ.ಜಿ, ಖಾಸಗಿ ಶಿಕ್ಷಕರ ನೇಮಕ, ಬೆಲ್ಟ್, ಟೈ, ಗ್ರಂಥಾಲಯ, ಉತ್ತಮ ಪರಿಸರ, ಊಟದ ಟೇಬಲ್ ವ್ಯವಸ್ಥೆ, ಕಂಪ್ಯೂಟರ್ ಶಿಕ್ಷಣ ಮುಂತಾದ ಸೌಲಭ್ಯಗಳು ಈ ಶಾಲಾ ವಿದ್ಯಾರ್ಥಿಗಳಿಗೆ ಸಿಗುತ್ತಿವೆ. ಗ್ರಾಮದ ಹಳೇ ವಿದ್ಯಾರ್ಥಿಗಳು ಸೇರಿ ‘ಶಾಲಾ ಹಿತೈಷಿಗಳ ಸಮಿತಿ’ ಸ್ಥಾಪನೆ ಮಾಡಿ ಅವರ ಬಾಂಕ್ಯ್ ಖಾತೆಯಲ್ಲಿ ₹ 76.906 ಹಣ ಕೂಡಿಟ್ಟಿದ್ದಾರೆ.

ಆ ಮೂಲಕ ದಾನಿಗಳಿಂದ ದಾನದ ರೂಪದಲ್ಲಿ ಶಿಕ್ಷಣಕ್ಕೆ ಪೂರಕವಾದ ಪರಿಕರ ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಮಕ್ಕಳಲ್ಲಿ ಇರುವ ಪ್ರತಿಭೆ ಅನಾವರಣಗೊಳಿಸಲು ಪ್ರತಿ ಶುಕ್ರವಾರ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮಗಳು ತಪ್ಪದೇ ನಡೆಯುತ್ತಾ ಬರುತ್ತಿವೆ. ಇದಕ್ಕೆ ಪೂರಕವಾಗಿ ಈಚೆಗೆ ನಡೆದ ಬೆಳಕವಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ 31 ಪ್ರಶಸ್ತಿ ತಮ್ಮದಾಗಿಸಿಕೊಂಡು, ಪಠ್ಯೇತರ ಚಟುವಟಿಕೆಗಳಲ್ಲೂ ಗಮನ ಸೆಳೆದಿವೆ.

ಶೈಕ್ಷಣಿಕ ವರ್ಷದಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳ ಪರಿಚಯ ಮಾಡುವ ನಿಟ್ಟಿನಲ್ಲಿ ವರ್ಷದ ಸಂಚಿಕೆಯನ್ನು ಸಹ ಸಿದ್ಧಪಡಿಸಿ ವಿದ್ಯಾರ್ಥಿಗಳ ಪೋಷಕರು ಹಾಗೂ ಗ್ರಾಮಸ್ಥರಿಗೆ ನೀಡಲು ಶಿಕ್ಷಕ ವರ್ಗ ಮುಂದಾಗಿದೆ. ಈ ಎಲ್ಲಾ ಹಂತಗಳನ್ನು ಮನಗಂಡ ಕೆಲವು ಪೋಷಕರು ಖಾಸಗಿ ಶಾಲೆಯಲ್ಲಿದ್ದ ತಮ್ಮ ಮಕ್ಕಳನ್ನು ಈ ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ.

ತಾಲ್ಲೂಕು ಶಿಕ್ಷಣಾಧಿಕಾರಿಗಳು ಈ ಶಾಲೆಯ ಸಹ ಶಿಕ್ಷಕ ಶಿವಾನಂದ ಕುಮಾರ್ ಎಂಬುವರಿಗೆ ಪ್ರಸ್ತುತ ವರ್ಷದ ಶಿಕ್ಷಕರ ದಿನಾಚರಣೆಯಲ್ಲಿ ತಾಲ್ಲೂಕು ಮಟ್ಟದ ಅತ್ಯುತ್ತಮ ಶಿಕ್ಷಕ ಎಂದು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ‘ಹಳೆಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಯ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಇದಕ್ಕೆ ಗ್ರಾಮಸ್ಥರು ಸಹಕಾರ ನೀಡುತ್ತಿದ್ದಾರೆ’ ಎಂದು ಶಿಕ್ಷಕ ಶಿವಾನಂದಕುಮಾರ್ ಹೇಳಿದರು.

‘ಕಳೆದ ಸಾಲಿನಲ್ಲಿ ಹೆಚ್ಚು ವಿದ್ಯಾರ್ಥಿಗಳಿದ್ದ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದಿಢೀರನೇ ಕುಸಿಯಿತು. ನಾವು ಓದಿದ ಶಾಲೆಗೆ ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಪರಿಸ್ಥಿತಿ ಬರುವುದು ಬೇಡ ಎಂದು ಗ್ರಾಮಸ್ಥರು, ನಮ್ಮ ಗ್ರಾಮದ ಮಹೇಶ್ ಹಾಗೂ ಶಿಕ್ಷಕ ಕಾಂತರಾಜು ಸಲಹೆಯಿಂದ ಹಳೇ ವಿದ್ಯಾರ್ಥಿಗಳು ಒಂದು ಮಟ್ಟಕ್ಕೆ ಬರಲು ಕಾರಣರಾಗಿದ್ದಾರೆ.

ನಮ್ಮ ಗ್ರಾಮದಿಂದ ಖಾಸಗಿ ಶಾಲೆಗಳಿಗೆ ಪ್ರತಿವರ್ಷ ಲಕ್ಷಾಂತರ ರೂಪಾಯಿ ಹೋಗುತ್ತಿತ್ತು. ಆದರೆ ಈಗ ನಮ್ಮ ಗ್ರಾಮದಲ್ಲೇ ಎಲ್.ಕೆ.ಜಿ. ಮತ್ತು ಯು .ಕೆ.ಜಿ ಪ್ರಾರಂಭಿಸಿರುವುದರಿಂದ ಹಣ ಹಾಗೂ ಸಮಯ ಉಳಿತಾಯವಾಗಿದೆ’ ಎಂದು ಶಾಲಾ ಹಿತೈಷಿಗಳ ಸಮಿತಿ ಸಂಸ್ಥಾಪಕ ಕೆ.ಎಂ.ಮಹದೇವಸ್ವಾಮಿ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT