ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ, ಸಚಿವರ ಮಧ್ಯೆ ಮುಸುಕಿನ ಗುದ್ದಾಟ

Last Updated 16 ಸೆಪ್ಟೆಂಬರ್ 2017, 7:25 IST
ಅಕ್ಷರ ಗಾತ್ರ

ನಂಜನಗೂಡು/ಮೈಸೂರು: ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಕಳಲೆ ಕೇಶವಮೂರ್ತಿ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಧ್ಯೆ ಮುಸುಕಿನ ಗುದ್ದಾಟ ಆರಂಭವಾಗಿದೆ. ಈಚೆಗೆ ನಡೆದ ಸಭೆಯೊಂದರಲ್ಲಿ ಮಹದೇವಪ್ಪ, ‘ಪಕ್ಷಪಾತ ಮಾಡ ಬಾರದು. ಮಾಡಿದರೆ ಮುಂದಿನ ವಿಧಾನಸಭಾ ಚುನಾವಣೆಗೆ ತೊಂದರೆ ಆದೀತು’ ಎಂದು ಕೇಶವಮೂರ್ತಿ ಅವರಿಗೆ ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದರು.

ಇದರ ಬೆನ್ನಲ್ಲೇ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಯತ್ನಿಸಿರುವ ಕೇಶವಮೂರ್ತಿ ತಮ್ಮ ಜತೆ ಕಾಂಗ್ರೆಸ್‌ ಗೆ ಬಂದ ಮೂಗಶೆಟ್ಟಿ ಅವರನ್ನು ನಂಜನಗೂಡು ಬ್ಲಾಕ್ ಅಧ್ಯಕ್ಷರನ್ನಾಗಿ, ನಗರ ಘಟಕದ ಅಧ್ಯಕ್ಷರಾಗಿ ನಾಗರಾಜು ಹಾಗೂ ಹುಲ್ಲಹಳ್ಳಿ ಬ್ಲಾಕ್ ಅಧ್ಯಕ್ಷರಾಗಿ ಗುರುಸ್ವಾಮಿ ಅವರನ್ನು ಆಯ್ಕೆ ಮಾಡುವಂತೆ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಅವರಿಗೆ ಶಿಫಾರಸು ಮಾಡಿದ್ದಾರೆ.‌

ಇದರಿಂದ ಕೆರಳಿರುವ ಮೂಲ ಕಾಂಗ್ರೆಸ್ಸಿಗರು ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಆಕ್ರೋಶ ಹೊರ ಹಾಕಿದರು. ಸಭೆಯ ನೇತೃತ್ವ ವಹಿಸಿದ ಪುರಸಭೆ ಮಾಜಿ ಅಧ್ಯಕ್ಷ ಪಿ.ಶ್ರೀನಿವಾಸ್, ‘35 ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಮೂಲ ಕಾಂಗ್ರೆಸ್ಸಿಗರನ್ನು ಕೇಶವಮೂರ್ತಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೊರಗಿ ನಿಂದ ಬಂದವರಿಗೆ ಮಣೆಹಾಕಿ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯ ಕರ್ತರನ್ನು ಕಡೆಗಣಿಸುತ್ತ ಹೋದರೆ ಮುಂದಿನ ಚುನಾವಣೆಯಲ್ಲಿ ಪಕ್ಷ ಸರ್ವನಾಶ ಆಗುತ್ತದೆ’ ಎಂದು ಕಿಡಿಕಾರಿದರು.

ಮಾಜಿ ಪುರಸಭಾ ಉಪಾಧ್ಯಕ್ಷ ಎನ್.ಇಂದ್ರ ಮಾತನಾಡಿ, ‘ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತರಾಗಿ ದುಡಿದಿರುವ ನಮ್ಮಂತವರನ್ನು ಗುರುತಿಸಿ ಸ್ಥಾನಮಾನ ನೀಡಲು ಕೆಲವು ನಾಯಕರು ಹಿಂದೇಟು ಹಾಕುತ್ತಿದ್ದಾರೆ. ಹೊರಗಿನಿಂದ ಬಂದ ಹಾಗೂ ಜನಸಂಪರ್ಕವಿಲ್ಲದ ವ್ಯಕ್ತಿಗಳಿಗೆ ಸ್ಥಾನಮಾನ ನೀಡುತ್ತಿರುವುದು ಸರಿಯಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ಸಭೆ ನಂತರ ಮುಖಂಡರು ಮಹದೇವಪ್ಪ ಅವರ ಆಪ್ತ ಇಂಧನ್ ಬಾಬು ಅವರ ನಿವಾಸಕ್ಕೆ ತೆರಳಿ ಅಸಮಾಧಾನ ವ್ಯಕ್ತಪಡಿಸಿದರು.

‘ಮಹದೇವಪ್ಪ ಅವರ ನೇತೃತ್ವ ಒಪ್ಪಿಕೊಂಡು ನಾವು ಕಾಂಗ್ರೆಸ್ಸಿನಲ್ಲಿ ಉಳಿ ದಿದ್ದೇವೆ. ಈಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಯಲ್ಲಿ ಉಂಟಾಗಿರುವ ಪಕ್ಷಪಾತವನ್ನು ವರಿಷ್ಠರ ಗಮನಕ್ಕೆ ತಂದು ಸರಿಪಡಿಸದಿದ್ದರೆ ನಮ್ಮ ದಾರಿ ನಾವು ನೋಡಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು. ಮುಖಂಡರನ್ನು ಸಮಾಧಾನ ಪಡಿಸಿದ ಇಂಧನ್ ಬಾಬು, ‘ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ಸಚಿವರಿಗೆ ಎಲ್ಲ ವಿಚಾರ ತಿಳಿಸಿ, ಅನ್ಯಾಯ ಸರಿಪಡಿಸಲು ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಸದಸ್ಯರಾದ ನಿಂಗಪ್ಪ, ಸುಂದರ್ ರಾಜು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಭಾಗ್ಯ, ಮುಖಂಡರಾದ ದೊರೆಸ್ವಾಮಿ, ಗಣೇಶ್, ಪ್ರಕಾಶ್ ರಾಜೇ ಅರಸ್, ದಿನೇಶ್ ಹಿರೀಕಾಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಈ.ಚಂದ್ರ, ಸಯ್ಯದ್ ನಾಸಿರ್, ವಿದ್ಯಾಸಾಗರ್, ದೇವರಾಜು, ಬೀರೇಗೌಡ, ಸ್ವಾಮಿ, ಬಾಬು, ಮಹದೇವನಾಯಕ, ಎಸ್.ಕೆಂಪರಾಜ್, ಕುರಿಹುಂಡಿ ಮಹೇಶ್, ಶಿವಕುಮಾರ್.ಎನ್. ಆರ್.ವಿ.ಪ್ರಭಾಕರ್. ಕುಶಾಲಪ್ಪ, ಮಹೇಶ್, ಶ್ರೀಕಂಠ, ಗ್ರಾ.ಪಂ ಸದಸ್ಯ ವಿಶ್ವಾಸ್, ವಾಸು, ಮನೋಹರ್, ರಿಹಾನ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT