ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾ ಮೇಧಾವಿಗೆ ಎಲ್ಲೆಡೆ ನಮನ

Last Updated 16 ಸೆಪ್ಟೆಂಬರ್ 2017, 8:38 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ಹೆಮ್ಮೆಯ ಸುಪುತ್ರ, ದೇಶ ಕಂಡ ಮೇಧಾವಿ, ದಕ್ಷ ಆಡಳಿತಗಾರ ಸರ್‌.ಎಂ.ವಿಶ್ವೇಶ್ವರಯ್ಯ ಅವರ 157ನೇ ಜನ್ಮ ದಿನಾಚರಣೆಯನ್ನು ಜಿಲ್ಲೆಯಾದ್ಯಂತ ಶುಕ್ರವಾರ ಸಡಗರದಿಂದ ಆಚರಿಸಲಾಯಿತು. ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿರುವ ವಿಶ್ವೇಶ್ವರಯ್ಯ ಸಮಾಧಿಗೆ ಅನೇಕ ಗಣ್ಯರು, ಮುಖಂಡರು, ವಿದ್ಯಾರ್ಥಿಗಳು ಗೌರವ ಸಲ್ಲಿಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಸ್ಮಾರಕ ವಿದ್ಯಾ ಸಂಸ್ಥೆ ವತಿಯಿಂದ ನಗರದಲ್ಲಿ ವಿಶ್ವೇಶ್ವರಯ್ಯ ಅವರ ಭಾವಚಿತ್ರ ಮೆರವಣಿಗೆ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ಭಾವಚಿತ್ರವುಳ್ಳ ಮೆರವಣಿಗೆ ವಾಹನದೊಂದಿಗೆ ಬಿ.ಬಿ.ರಸ್ತೆ ಮೂಲಕ ಡಿಡಿಪಿಐ ಕಚೇರಿ ವರೆಗೆ ಪಾದಯಾತ್ರೆ ನಡೆಸಿದರು. ಬಳಿಕ ವಿದ್ಯಾರ್ಥಿಗಳು ವಾಹನಗಳಲ್ಲಿ ಮುದ್ದೇನಹಳ್ಳಿಗೆ ತೆರಳಿ, ಅಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಮತ್ತು ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಡಾ.ಎಸ್.ಕೆ.ಶಿವಕುಮಾರ್‌, ‘ಮುದ್ದೇನಹಳ್ಳಿಯಂತಹ ಪುಟ್ಟ ಗ್ರಾಮದಲ್ಲಿ ಬಡ ಕುಟುಂಬದಲ್ಲಿ ಹುಟ್ಟಿ, ಬೀದಿದೀಪದ ಕೆಳಗೆ ಓದಿದ ವಿಶ್ವೇಶ್ವರಯ್ಯ ಅವರು ಭಾರತರತ್ನ ಪಡೆಯುವಷ್ಟರ ಮಟ್ಟಿಗೆ ಬೆಳೆದದ್ದು ಸಾಮಾನ್ಯ ಸಂಗತಿಯಲ್ಲ. ಇಂದಿನ ವಿದ್ಯಾರ್ಥಿಗಳಿಗೆ ವಿಶ್ವೇಶ್ವರಯ್ಯ ಅವರು ಮಾದರಿಯಾಗಬೇಕು. ಅವರು ಕೇವಲ ಆಣೆಕಟ್ಟೆಗಳನ್ನು ನಿರ್ಮಿಸಿದ್ದು ಮಾತ್ರವಲ್ಲ, ಕೈಗಾರಿಕೆ, ತಂತ್ರಜ್ಞಾನ, ವಿಜ್ಞಾನ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ’ ಎಂದು ತಿಳಿಸಿದರು.

ಕಸಾಪ ಗೌರವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ ಮಾತನಾಡಿ, ‘ವಿಶ್ವೇಶ್ವರಯ್ಯನವರು ಮೈಸೂರು ದಿವಾನರಾಗಿ ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರ ಚಿಂತನೆ, ಜಾತ್ಯತೀತ ತತ್ವ, ಪ್ರಾಮಾಣಿಕ ಬದುಕು ಯುವ ಪೀಳಿಗೆ ರೂಢಿಸಿಕೊಳ್ಳಬೇಕು’ ಎಂದರು.

ವಿಶ್ವೇಶ್ವರಯ್ಯನವರಮೊಮ್ಮಗ ಎಂ.ಕೆ. ಸತೀಶ್ ಮೋಕ್ಷಗೊಂಡಂ ಮಾತನಾಡಿ, ‘ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ ರೂಢಿಸಿಕೊಳ್ಳಬೇಕು. ಚೆನ್ನಾಗಿ ಓದಿ ಮುಂದೆ ಬರಬೇಕು. ಜನ್ಮಕೊಟ್ಟ ಊರನ್ನು ಎಂದಿಗೂ ಮರೆಯಬಾರದು’ ಎಂದು ಕಿವಿಮಾತು ಹೇಳಿದರು.

ಇಸ್ರೊ ವಿಜ್ಞಾನಿ ಕೆ.ವಿ. ಮಧುಕುಮಾರ್‌, ವಿಮರ್ಶಕ ಎಚ್‌.ಎಸ್.ಸತ್ಯನಾರಾಯಣ್‌ ಉಪನ್ಯಾಸ ನೀಡಿದರು. ಇಸ್ರೋ ವಿಜ್ಞಾನಿ ಜೆ.ಸಿ.ಗುರಪ್ಪ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್‌, ಕಸಾಪ ಸಾಂಸ್ಕೃತಿಕ ಮತ್ತು ಮಾಧ್ಯಮ ಸಲಹಾ ಮಂಡಳಿ ರಾಜ್ಯ ಘಟಕದ ಸದಸ್ಯ ಗುಡಿಬಂಡೆ ಎನ್‌. ನಾರಾಯಣಸ್ವಾಮಿ, ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಿ.ಎನ್.ಲಲಿತಾ ನರಸಿಂಹಮೂರ್ತಿ, ಕಸಾಪ ತಾಲ್ಲೂಕು ಘಟಕದಅಧ್ಯಕ್ಷ ಮಂಚನ ಬಲೆ ಶ್ರೀನಿವಾಸ್, ಯಲುವಹಳ್ಳಿ ಸತೀಶ್‌, ಮುಖ್ಯಶಿಕ್ಷಕಿ ಶ್ರೀನಿವಾಸ್‌ ಇದ್ದರು.

ಆದರ್ಶ ಮೈಗೂಡಿಸಿಕೊಳ್ಳಿ: ನಗರದ ಹೊರವಲಯದ ಕೆ.ವಿ.ಟಿ ಪಾಲಿಟೆಕ್ನಿಕ್ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ, ಪ್ರಸಕ್ತ ಸಾಲಿನ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ತಾಂತ್ರಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಜಿ.ರಶ್ಮಿ, ‘ವಿಶ್ವೇಶ್ವರಯ್ಯ ಅವರ ಜೀವನ ಆದರ್ಶಗಳನ್ನು ಇಂದಿನ ಯುವಪೀಳಿಗೆ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸಬೇಕು’ ಎಂದು ಅಭಿಪ್ರಾಯಪಟ್ಟರು.

‘ವಿದ್ಯಾರ್ಥಿಗಳು ಪಠ್ಯವನ್ನು ಕಷ್ಟ ಪಟ್ಟು ಓದುವುದಕ್ಕಿಂತ ಇಷ್ಟ ಪಟ್ಟು ಓದಿದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಪ್ರತಿಯೊಬ್ಬರಲ್ಲೂ ಯಶಸ್ಸು ಹೊಂದುವ ಶಕ್ತಿ ಇದೆ. ಅಂತಹ ಶಕ್ತಿಯನ್ನು ಶಿಕ್ಷಕರು ಹೊರ ತರುವ ದೃಢ ನಿರ್ಧಾರ ಮಾಡಬೇಕು. ತಮ್ಮ ಗುರಿಯನ್ನು ಮುಟ್ಟುವವರೆಗೆ ವಿದ್ಯಾರ್ಥಿಗಳು ಛಲ ಬಿಡಬಾರದು’ ಎಂದು ತಿಳಿಸಿದರು.

ಸಾಮಾಜಿಕ ಹೋರಾಟಗಾರ ನಿಕೇತ್ ರಾಜ್ ಮಾತನಾಡಿ, ‘ವಿಶ್ವೇಶ್ವರಯ್ಯ ಅವರು ತಮ್ಮ ವೃತ್ತಿ ಜೀವನದಲ್ಲಿ ತೆಗೆದುಕೊಂಡ ನಿರ್ಧಾರಗಳು ಇಂದು ಲಕ್ಷಾಂತರ ಮಂದಿ ಜನರಿಗೆ ಜೀವನ ರೂಪಿಸಿದೆ. ದೇಶದ ಮಹಾನ್‌ ವ್ಯಕ್ತಿಗಳಾದ ಅವರಂತಹ ಮಹನೀಯರ ಅನುಕರಣೀಯ ಬದುಕನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು’ ಎಂದರು.

‘ತಾಂತ್ರಿಕ ಜ್ಯೋತಿ’ ಸ್ಮರಣ ಸಂಚಿಕೆಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಸಂಸ್ಥೆಯ ವಿದ್ಯಾರ್ಥಿ, ಯೋಗಪಟು ನವನೀತ್ ಅವರ ಯೋಗ ಪ್ರದರ್ಶನ ಆಯೋಜಿಸಲಾಗಿತ್ತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಕೆ.ವಿ ಮತ್ತು ಪಂಚಗಿರಿ ದತ್ತಿ ಸದಸ್ಯರಾದ ಬಿ.ಮುನಿಯಪ್ಪ, ಎ.ಕೊಂಡಪ್ಪ, ನಿರ್ಮಲಾಪ್ರಭು ನಿವೃತ್ತ ಪ್ರಾಂಶುಪಾಲ ಎ.ಟಿ.ರಂಗನಾಥ್, ವಿಭಾಗೀಯ ಮುಖ್ಯಸ್ಥ ಎಚ್.ರಾಜಾರೆಡ್ಡಿ, ಬಿ.ವಿ.ಮಂಜುಳಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT