ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು 10 ದಿನವಷ್ಟೇ ಹೇಮಾವತಿ ನದಿ ನೀರು

Last Updated 16 ಸೆಪ್ಟೆಂಬರ್ 2017, 9:00 IST
ಅಕ್ಷರ ಗಾತ್ರ

ತುಮಕೂರು: ‘ಇನ್ನು ಕೇವಲ 10 ದಿನಗಳು ಮಾತ್ರ ಹೇಮಾವತಿ ನದಿ ನೀರು ಜಿಲ್ಲೆಗೆ ಹರಿದು ಬರಲಿದ್ದು, ಜಿಲ್ಲಾಧಿಕಾರಿಯೇ ಏನಾದರೂ ಮಾಡಬೇಕು’ ಎಂದು ಶುಕ್ರವಾರ ನಡೆದ ಸಭೆಯಲ್ಲಿ ಉುಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಕೈಚೆಲ್ಲಿ ಕುಳಿತರು.

’ನೀರಿನ ಬಳಕೆಯನ್ನು ಸರಿಯಾಗಿ ನಿರ್ವಹಿಸಿಲ್ಲ. ಕೊನೆ ಅಂಚಿನ (ಟೈಲ್ಯಾಂಡ್‌) ಪ್ರದೇಶಗಳಿಗೆ ಮೊದಲು ನೀರು ಹರಿಸಬೇಕೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶವನ್ನು ಹೇಮಾವತಿ ನಾಲಾ ವಲಯದ ಕೆಲವು ಅಧಿಕಾರಿಗಳು ಕಾಲ ಕಸ ಮಾಡಿಕೊಂಡಿದ್ದಾರೆ. ಸಮಸ್ಯೆಗೆ ಹೇಮಾವತಿ ಎಂಜಿನಿಯರ್‌ಗಳು, ಬೆಸ್ಕಾಂ ಅಧಿಕಾರಿಗಳು, ಪೊಲೀಸರೇ ಕಾರಣ’ ಎಂದು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ ಗೌಡ ಅವರು ಸಭೆ ಆರಂಭವಾಗುತ್ತಿದ್ದಂತೆ ಅಧಿಕಾರಿಗಳ ಮೇಲೆ ಮುಗಿಬಿದ್ದರು.

’ಗ್ರಾಮಾಂತರ ಕ್ಷೇತ್ರದ ಏತ ನೀರಾವರಿ ಯೋಜನೆಯ ಕೆರೆಗಳಿಗೆ ಒಂದು ಹನಿ ನೀರನ್ನೂ ಹರಿಸಿಲ್ಲ. ತಿಪಟೂರು, ತುರುವೇಕೆರೆ, ಗುಬ್ಬಿ ತಾಲ್ಲೂಕಿನ ಹಲವು ಕೆರೆಗಳಿಗೆ ಅಧಿಕಾರಿಗಳು ನೀರು ಹರಿಸಿದ್ದಾರೆ. ಮುಖ್ಯಮಂತ್ರಿ ಆದೇಶ ಉಲ್ಲಂಘಿಸಿರುವ  ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನೀರಿನ ಅಪವ್ಯಯದ ಬಗ್ಗೆ ತನಿಖೆ ನಡೆಸಿ ತಪ್ಪೆಸಗಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

’ತುರುವೇಕೆರೆ ತಾಲ್ಲೂಕಿನಲ್ಲಿ ಅಚ್ಚುಕಟ್ಟು ಪ್ರದೇಶದ ಹಲವು ಕೆರೆಗಳನ್ನು ಶೇ 100ರಷ್ಟು ತುಂಬಿಸಲಾಗಿದೆ. ಇದಕ್ಕೆ ಅಧಿಕಾರಿಗಳನ್ನು ಹೊಣೆ ಮಾಡಬೇಕು. ಕೆಲವು ಅಧಿಕಾರಿಗಳು ನಯವಂಚಕರಿದ್ದಾರೆ’ ಎಂದು ರೇಗಿದರು. ಈ ಮಾತಿಗೆ ತಿರುಗೇಟು ನೀಡಿದ ಶಾಸಕ ಎಂ.ಟಿ.ಕೃಷ್ಣಪ್ಪ, ‘ಅಧಿಕಾರಿಗಳನ್ನು ಏಕೆ ಬೈಯ್ಯುತ್ತೀರಿ. ಅವರೇನು ಮಾಡುತ್ತಾರೆ. ಶಾಸಕರು ಹೇಳಿದಂತೆ ಕೇಳುತ್ತಾರೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡರೆ ನಾನು ಸುಮ್ಮನಿರುವುದಿಲ್ಲ’ ಎಂದರು.

ಇದರಿಂದ ಕೆರಳಿದ ಸುರೇಶ್‌ಗೌಡ, ‘ಉಸ್ತುವಾರಿ ಸಚಿವರು ಅಸಮರ್ಥರು. ಈ ಸರ್ಕಾರ ಸತ್ತು ಹೋಗಿದೆ. ಇಲ್ಲಿ ಕಾನೂನಿಗೆ ಮರ್ಯಾದೆ, ಗೌರವ ಇಲ್ಲ. ಕಾನೂನು ಎಲ್ಲರಿಗೂ ಒಂದೇ. ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದಾದರೆ ಈ ಸಭೆಯನ್ನು ಏಕೆ ನಡೆಸಬೇಕು. ಉಸ್ತುವಾರಿ ಸಚಿವರು ರಾಜೀನಾಮೆ ನೀಡಿ ಆ ಸ್ಥಾನವನ್ನು ಎಂ.ಟಿ.ಕೃಷ್ಣಪ್ಪ ಅವರಿಗೆ ನೀಡಲಿ’ ಎಂದು ಹೇಳಿದರು.

ಆಗ ಉಸ್ತುವಾರಿ ಸಚಿವರನ್ನು ಸಮರ್ಥನೆ ಮಾಡಿಕೊಂಡ ಕೆ.ಷಡಕ್ಷರಿ, ‘ನೀವು (ಸುರೇಶ್‌ಗೌಡ) ಈ ರೀತಿ ಮಾತನಾಡಬಾರದು. ನಮಗೂ ಮಾತನಾಡಲು ಬರುತ್ತದೆ. ಅಧಿಕಾರಿಗಳ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬೇಕು. ನಮ್ಮ ತಾಲ್ಲೂಕಿನಲ್ಲೂ ಕೆರೆಗಳನ್ನು ತುಂಬಿಸಿಲ್ಲ. ಮಳೆ ಬಂದಿದ್ದರಿಂದ ಕೆಲವು ಕೆರೆಗಳಿಗೆ ಸ್ವಲ್ಪ ನೀರು ಬಂದಿದೆ. ತಿಪಟೂರು ಅಮಾನಿಕೆರೆಗೆ ಒಂದು ಹನಿ ನೀರು ಬಿಟ್ಟಿಲ್ಲ’ ಎಂದು ಹೇಳಿದರು.

ಶಾಸಕರುಗಳ ನಡುವೆಯೇ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ವಾದ–ವಾಗ್ವಾದಗಳು ನಡೆದವು. ಈ ಮಧ್ಯೆ, ಮಾತನಾಡಿದ ಶಾಸಕ ರಫೀಕ್‌ ಅಹಮ್ಮದ್‌ ‘ಯಾರೂ ಏನಾದರೂ ಮಾಡಿಕೊಳ್ಳಿ. ತುಮಕೂರು ಬುಗುಡನಹಳ್ಳಿ ಕೆರೆಗೆ ನೀರು ಬೇಕು. ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ’ ಎಂದು ಕೇಳಿದರು.

ತುರುವೇಕೆರೆ, ತಿಪಟೂರು ತಾಲ್ಲೂಕಿಗೆ ಅತಿ ಹೆಚ್ಚು ನೀರು ಬಿಟ್ಟಿರುವ ಕಾರಣ ಈ  ತಾಲ್ಲೂಕುಗಳಿಗೆ ನೀರು ಹರಿಸುವುದನ್ನು ನಿಲ್ಲಿಸಿ ಶಿರಾ, ತುಮಕೂರು, ತುಮಕೂರು ಗ್ರಾಮಾಂತರ, ಗುಬ್ಬಿ ತಾಲ್ಲೂಕುಗಳಿಗೆ ನೀರು ಹರಿಸುವ ಸಲಹೆಗೆ ಕೃಷ್ಣಪ್ಪ, ಷಡಕ್ಷರಿ ಒಪ್ಪಲಿಲ್ಲ. ‘ನಮ್ಮ ಪಾಲಿನ ನೀರನ್ನು ನಮಗೆ ಕೊಡಿ. ನಾವು ಯಾವ ಕೆರೆಯನ್ನಾದರೂ ತುಂಬಿಸಿಕೊಳ್ಳುತ್ತೇವೆ’ ಎಂದು ಪಟ್ಟು ಹಿಡಿದರು.

ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ ರಾಜ್‌ ಮಾತನಾಡಿ, ‘ಹೇಮಾವತಿ ಎಂಜಿನಿಯರುಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ. ದಾರಿ ತಪ್ಪಿಸುತ್ತಿದ್ದಾರೆ. ಕುಡಿಯುವ ನೀರಿನ ಕೆರೆಗಳಿಗೆ ಮಾತ್ರ ನೀರು ಬಿಡಬೇಕೆಂದು ಹೇಳಿದರೂ ಅಚ್ಚುಕಟ್ಟು ಪ್ರದೇಶದ ಕೆರೆಗಳಿಗೂ ನೀರು ಹರಿಸಿದ್ದಾರೆ’ ಎಂದು ಸಿಡಿಮಿಡಿಗೊಂಡರು.

ಅಚ್ಚುಕಟ್ಟು ಪ್ರದೇಶದ ಕೆರೆಗಳಿಗೆ ನೀರು ಹರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. 144 ಸೆಕ್ಷನ್‌ ಜಾರಿಯಲ್ಲಿದ್ದರೂ ನೀರನ್ನು ಅಕ್ರಮವಾಗಿ ಪಡೆದಿದ್ದಾರೆ ಎಂದರೆ ನಿಷೇಧಾಜ್ಞೆ ಏಕೆ ಜಾರಿ ಮಾಡಬೇಕಾಗಿತ್ತು. ಪೊಲೀಸರು ಏನು ಮಾಡುತ್ತಿದ್ದಾರೆ. ಎಷ್ಟು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಸುರೇಶ್‌ಗೌಡ ಪ್ರಶ್ನಿಸಿದರು.
ನೀರು ಹರಿಯುವ ಹತ್ತು ದಿನದಲ್ಲಿ 5 ದಿನ ಅಂಚಿನ ಪ್ರದೇಶದ ಕೆರೆಗಳಿಗೆ, ಉಳಿಕೆ ಐದು ದಿನ ತಿಪಟೂರು, ತುರುವೇಕೆರೆ, ಗುಬ್ಬಿ ಕೆರೆಗಳಿಗೆ ನೀರು ಹರಿಸಬೇಕೆಂಬ ಸಲಹೆಯ ಬಗ್ಗೆ ಚರ್ಚೆ ನಡೆಯುತ್ತಾದರೂ ಗೊಂದಲ ಉಂಟಾಯಿತು.

ಇದರಿಂದ ಬೇಸತ್ತ ಟಿ.ಬಿ.ಜಯಚಂದ್ರ, ‘ಎಲ್ಲ ಅಧಿಕಾರವನ್ನು ಜಿಲ್ಲಾಧಿಕಾರಿ ಅವರಿಗೆ ನೀಡೋಣ. ಅವರೇ ತೀರ್ಮಾನ ಮಾಡಲಿ’ ಎಂದರು. ಇದಕ್ಕೂ ಶಾಸಕರು ಒಪ್ಪಲಿಲ್ಲ.
ಕಡೆಗೆ, ಇರುವ ನೀರಿನಲ್ಲೇ ಎಲ್ಲರೂ ಹಂಚಿಕೊಳ್ಳುವ ತೀರ್ಮಾನಕ್ಕೆ ಬಂದರು. ಆ ಸಂದರ್ಭದಲ್ಲಿ ನೀರಿನ ಹರಿಯುವಿಕೆಯ ಪ್ರಮಾಣದ ಬಗ್ಗೆ ಹೇಮಾವತಿ  ನಾಲಾ ವಲಯದ ಮುಖ್ಯ ಎಂಜಿನಿಯರ್‌ ಶಿವಕುಮಾರ್‌ ವಿವರಣೆ ನೀಡಲು ಮುಂದಾದರು. ಇದರಿಂದ ಮತ್ತಷ್ಟು ತಾಳ್ಮೆ ಕಳೆದುಕೊಂಡ ಸಚಿವರು ಅಧಿಕಾರಿಗೆ ಕೈಮುಗಿದು ‘ವಿವರಣೆ ಬೇಡಪ್ಪ, ಅಂತಿಮವಾಗಿ ಏನಾದರೂ ಒಂದು ಹೇಳಿಬಿಡು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT