ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವಾಧ್ವಜಕ್ಕೆ ಬೆಂಕಿ ಪ್ರಕರಣ: ಮೂವರು ಯುವಕರ ಬಂಧನ; ಸ್ಥಳೀಯರ ಆಕ್ರೋಶ

Last Updated 16 ಸೆಪ್ಟೆಂಬರ್ 2017, 9:14 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿನ ಗಾಳಿಪುರ ಬಡಾವಣೆಯ ವಿನಾಯಕ ದೇವಸ್ಥಾನದ ಭಗವಾಧ್ವಜಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಯುವಕರನ್ನು ಬಂಧಿಸಿದ್ದು, ಸ್ಥಳೀಯರು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಡಾವಣೆಯ ನಾಯಕರ ಬೀದಿಯಲ್ಲಿನ ವಿನಾಯಕ ದೇವಸ್ಥಾನದಲ್ಲಿರುವ ಭಗವಾಧ್ವಜಕ್ಕೆ ಗುರುವಾರ ಮಧ್ಯರಾತ್ರಿ ಬೆಂಕಿ ಹಚ್ಚಲಾಗಿತ್ತು. ಪ್ರಕರಣ ಸಂಬಂಧ ಬಡಾವಣೆಯ ಪ್ರಕಾಶ, ಬಂಗಾರು ಮತ್ತು ಮಂಜುನಾಥ ಎಂಬ ಯುವಕರನ್ನು ಪೊಲೀಸರು ಶುಕ್ರವಾರ ಮಧ್ಯರಾತ್ರಿ ಬಂಧಿಸಿದ್ದಾರೆ. ಈ ವೇಳೆ ಮನೆಗೆ ನುಗ್ಗಿದ ಪೊಲೀಸರು ಅಮಾಯಕರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಪಟ್ಟಣ ಪೊಲೀಸ್ ಠಾಣೆಯ ಮುಂಭಾಗ ಜಮಾಯಿಸಿದ ನಿವಾಸಿಗಳು ಮತ್ತು ಆಜಾದ್‌ ಹಿಂದೂ ಸೇನೆಯ ಕಾರ್ಯಕರ್ತರು ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಮಕ್ಕಳು ಅಮಾಯಕರು. ಪೂಜಿಸುವ ದೇವರಿಗೆ ಅವರೇ ಅವಮಾನ ಮಾಡುವುದಿಲ್ಲ. ಠಾಣೆಗೆ ಕರೆದುಕೊಂಡು ಬಂದಾಗಿನಿಂದ ಅವರನ್ನು ಭೇಟಿ ಮಾಡಲೂ ಅವಕಾಶ ನೀಡುತ್ತಿಲ್ಲ ಎಂದು ನಿವಾಸಿಗಳು ಅಲವತ್ತುಕೊಂಡರು.

ತಳ್ಳಾಡಿದರು: ‘ಮಧ್ಯರಾತ್ರಿ ಮನೆ ಬಾಗಿಲು ತಟ್ಟಿದ ಸದ್ದು ಕೇಳಿಸಿತು. ಬಾಗಿಲು ತೆರೆದಾಗ ಒಳನುಗ್ಗಿದ ಪೊಲೀಸರು ಮಗನ ತಲೆಕೂದಲಿಗೆ ಕೈಹಾಕಿ ಎಳೆದುಕೊಂಡು ಹೋದರು. ಎಷ್ಟು ಗೋಗೆರೆದರೂ ಬಿಡಲಿಲ್ಲ. ನನ್ನನ್ನೂ ತಳ್ಳಿದರು’ ಎಂದು ಬಂಧಿತ ಆರೋಪಿ ಪ್ರಕಾಶನ ತಾಯಿ ಬೆಳ್ಳಮ್ಮ ದೂರಿದರು.

‘ಹೋಗುವಾಗ ಮನೆಯ ಚಿಲಕವನ್ನು ಹೊರಗಿನಿಂದ ಹಾಕಿ ಹೋಗಿದ್ದಾರೆ. ಅಕ್ಕಪಕ್ಕದ ಮನೆಯವರ ಬಾಗಿಲಿನ ಚಿಲಕವನ್ನೂ ಹಾಕಲಾಗಿತ್ತು. ಕೊನೆಗೆ ಪಕ್ಕದ ಬೀದಿಯ ಜನರಿಗೆ ಫೋನ್ ಮಾಡಿ ಬಾಗಿಲು ತೆರೆಸಿಕೊಂಡೆವು’ ಎಂದು ತಿಳಿಸಿದರು.

ಈ ವೇಳೆ ಪ್ರತಿಭಟನೆಗೆ ಮುಂದಾದ ನಿವಾಸಿಗಳು ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಅವರ ನಡುವೆ ಮಾತಿನ ಚಕಮಕಿ ನಡೆಯಿತು.

ಸುದ್ದಿಗಾರರೊಂದಿಗೆ ಮಾತನಾಡಿದ ಆಜಾದ್‌ ಹಿಂದೂ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್‌. ಪೃಥ್ವಿರಾಜ್‌, ‘ಅಮಾಯಕ ಯುವಕರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಘಟನೆ ಸಂಬಂಧ ಮುಸ್ಲಿಂ ಸಮುದಾಯದ ಯಾರನ್ನೂ ವಿಚಾರಣೆಗೆ ಒಳಪಡಿಸಿಲ್ಲ. ಕಾಂಗ್ರೆಸ್‌ ಸರ್ಕಾರದ ಹಿಂದೂ ವಿರೋಧಿ ನೀತಿಗೆ ತಕ್ಕಂತೆ ಪೊಲೀಸರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

‘ಹಿಂದೂ ಯುವಕರೇ ತಪ್ಪಿತಸ್ಥರು ಎಂದು ಹಣೆಪಟ್ಟಿ ಕಟ್ಟಲು ಪ್ರಯತ್ನಿಸಲಾಗುತ್ತಿದೆ. ಕೃತ್ಯ ಎಸಗಿದ್ದು ತಾವೇ ಎಂದು ಒಪ್ಪಿಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ. ಇದನ್ನು ಪ್ರಶ್ನಿಸಲು ಹೋದ ನನಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ನೀನ್ಯಾರು ಕೇಳಲು? ನೀನು ಬಡಾವಣೆಯ ನಿವಾಸಿಯೇ? ಎಂದು ಏಕವಚನದಿಂದ ಧಮ್ಕಿ ಹಾಕಿದ್ದಾರೆ. ಇಲ್ಲಿರುವುದು ಹಿಟ್ಲರ್ ಆಡಳಿತ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಾಳಿಪುರ ಬಡಾವಣೆ, ಪಟ್ಟಣ ಪೊಲೀಸ್‌ ಠಾಣೆಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT