ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಮಸ್ಯೆ ಬಿಗಡಾಯಿಸುವ ಸಾಧ್ಯತೆ–ಹೆಚ್ಚಿದ ಆತಂಕ

Last Updated 16 ಸೆಪ್ಟೆಂಬರ್ 2017, 9:43 IST
ಅಕ್ಷರ ಗಾತ್ರ

ಜಗಳೂರು: ಮುಂಗಾರು ಆರಂಭದಲ್ಲಿನ ಎರಡು ತಿಂಗಳ ವೈಫಲ್ಯದ ನಂತರ ಕಳೆದ ಒಂದು ತಿಂಗಳಿಂದ ತಾಲ್ಲೂಕಿನಲ್ಲಿ ಹದವಾದ ಮಳೆಯಾಗಿದ್ದು, ಸತತ ಬರದಿಂದ ಕಂಗೆಟ್ಟ ರೈತರಿಗೆ ಸ್ವಲ್ಪ ಸಮಾಧಾನ ತಂದಿದೆ. ಆದರೆ ಕೆರೆಕಟ್ಟೆಗಳು ಒಣಗಿದ್ದು, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮುಂದುವರಿದಿದೆ.
ಸೊಕ್ಕೆ ಹೋಬಳಿಯಲ್ಲಿ ಮಾತ್ರ ಕಳೆದ ಎರಡು ವಾರಗಳ ಹಿಂದೆ ಭಾರಿ ಪ್ರಮಾಣದ ಮಳೆಯಾಗಿದ್ದು, ಕೆರೆಕಟ್ಟೆಗಳಿಗೆ ನೀರು ಹರಿದು ಬಂದಿತ್ತು. ಕಸಬಾ ಮತ್ತು ಬಿಳಿಚೋಡು ಹೋಬಳಿ ವ್ಯಾಪ್ತಿಯಲ್ಲಿ ಆಗಾಗ್ಗೆ ತೇವಾಂಶದಿಂದ ಕೂಡಿದ ಮಳೆಯಾಗಿದ್ದು, ಪ್ರಸ್ತುತ ಎಲ್ಲಾ ಬೆಳೆಗಳು ಹಸಿರಿನಿಂದ ನಳನಳಿಸುತ್ತಿವೆ.

ಆದರೆ ಈವರೆಗೂ ದೊಡ್ಡ ಪ್ರಮಾಣದ ಮಳೆ ಆಗದ ಕಾರಣ ಶೇ 90ರಷ್ಟು ಪ್ರದೇಶದಲ್ಲಿ ಕೆರೆಕಟ್ಟೆಗಳು, ಚೆಕ್‌ಡ್ಯಾಂಗಳು ಒಣಗಿ ಬಿರುಕು ಬಿಟ್ಟಿವೆ. ಮೂರು ವರ್ಷಗಳ ಬರದ ಪರಿಣಾಮ ಅಂತರ್ಜಲ ಕುಸಿತವಾಗಿ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇಂದಿಗೂ ತಾಲ್ಲೂಕಿನ 30ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಟ್ಯಾಂಕರ್‌ಗಳು ಹಾಗೂ ಖಾಸಗಿ ಪಂಪ್‌ಸೆಟ್‌ಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

ಸ್ವಲ್ಪ ಮಳೆಯಾಗಿರುವ ಕಾರಣ ಸಮಸ್ಯೆಯ ತೀವ್ರ ಕೊಂಚ ತಗ್ಗಿದೆ. ಮುಂಗಾರು ಕೊನೆಯ ಹಂತದಲ್ಲಿದೆ. ಈ ವರ್ಷವಾದರೂ ಉತ್ತಮ ಮಳೆಯಾಗಿ ಗ್ರಾಮೀಣ ಪ್ರದೇಶದ ಜೀವನಾಡಿಯಾಗಿರುವ ಕೆರೆಗಳಿಗೆ ಸಮೃದ್ಧ ನೀರು ಹರಿದು ಬರಬಹುದು ಎಂಬ ಜನರ ನಿರೀಕ್ಷೆ ಈಡೇರಿಲ್ಲ.

ಈಚೆಗೆ ಸೊಕ್ಕೆ ಹೋಬಳಿ ಹಾಗೂ ತೊರೆಸಾಲು ಪ್ರದೇಶದಲ್ಲಿ ಉತ್ತಮ ಮಳೆ ಬಿದ್ದಿದೆ. 13 ವರ್ಷಗಳಿಂದ ಬತ್ತಿದ್ದ ಗಡಿಮಾಕುಂಟೆ ಕೆರೆ ಹಾಗೂ ಕ್ಯಾಸೇನಹಳ್ಳಿ ಕೆರೆ ಅಣಬೂರು ಕೆರೆ, ತಮಲೇಹಳ್ಳಿ ಮತ್ತು ಹೊಸಹಟ್ಟಿ ಸಮೀಪ ನೂತನವಾಗಿ ನಿರ್ಮಿಸಿದ ಇಂಗುಕೆರೆಗಳಲ್ಲಿ ಸ್ವಲ್ಪ ಪ್ರಮಾಣದ ನೀರು ಸಂಗ್ರಹವಾಗಿದೆ.


ತಾಲ್ಲೂಕಿನ ದೊಡ್ಡ ಕೆರೆಗಳಾದ ಜಗಳೂರು ಕೆರೆ, ಸಂಗೇನಹಳ್ಳಿ ಕೆರೆ, ಭರಮಸಮುದ್ರ ಕೆರೆ ಸೇರಿದಂತೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 12 ಹಾಗೂ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ 26 ಕೆರೆಗಳು ಸೇರಿದಂತೆ 40ಕ್ಕೂ ಹೆಚ್ಚು ಕೆರೆಗಳು, ಬಿಳಿಚೋಡು, ಬಸವನಕೋಟೆ ಮತ್ತು ದೊಣೆಹಳ್ಳಿ ಸಮೀಪ ಹಳ್ಳಗಳಿಗೆ ನಿರ್ಮಿಸಲಾಗಿರುವ ಬೃಹತ್‌ ಚೆಕ್ ಡ್ಯಾಂಗಳು ಮತ್ತು ಗೋಕಟ್ಟೆಗಳು ಹನಿ ನೀರಿಲ್ಲದಂತೆ ಬತ್ತಿಹೋಗಿವೆ. ಕಳೆದ ವರ್ಷ ಬರದಿಂದಾಗಿ ಸಾವಿರಾರು ಕೊಳವೆಬಾವಿಗಳು ವಿಫಲವಾಗಿದ್ದವು. ನೂರಾರು ಎಕರೆ ಪ್ರದೇಶಗಳಲ್ಲಿ ಅಡಿಕೆ ತೋಟ ಮತ್ತು ತೆಂಗಿನ ತೋಟಗಳು ನಾಶವಾಗಿ ತಾಲ್ಲೂಕಿನ ರೈತ ಸಮೂಹ ತೀವ್ರ ಸಂಕಷ್ಟ ಎದುರಿಸಿತ್ತು.

‘ ಮಳೆಗಾಲ ಬಹುತೇಕ ಮುಗಿಯುವ ಹಂತದಲ್ಲಿದೆ. ಈ ವರ್ಷವಾದರೂ ಕೆರೆಗೆ ನೀರು ಬಂದು ಕೊಳೆಬಾವಿಗಳಲ್ಲಿ ನೀರು ಹೆಚ್ಚಳವಾಗಬಹುದು ಎಂಬ ನಿರೀಕ್ಷೆ ಇತ್ತು. ಇದುವರೆಗೂ ಒಂದೂ ದೊಡ್ಡ ಮಳೆ ಬಿದ್ದಿಲ್ಲ. ಬೇರೆಡೆ ಉತ್ತಮ ಮಳೆ ಆಗುತ್ತಿದೆ. ಇಲ್ಲಿ ಕೇವಲ ತುಂತುರು ಮಳೆ ಬೀಳುತ್ತಿದೆ. ಹೀಗಾಗಿ ದೊಡ್ಡ ಮಳೆಯ ನಿರೀಕ್ಷೆಯಲ್ಲಿದ್ದೇವೆ’ ಎಂದು ತಾಲ್ಲೂಕಿನ ಬುಳ್ಳನಹಳ್ಳಿ ಗ್ರಾಮದ ಇ. ನಾಗಪ್ಪ ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಕಳೆದ ಜನವರಿ ತಿಂಗಳಿಂದ ಸೆಪ್ಟೆಂಬರ್‌ 15ರವರೆಗೆ 330 ಮಿಮೀ ಪ್ರಮಾಣದ ವಾಡಿಕೆ ಮಳೆಗೆ 359 ಮಿಮೀ ಮಳೆ ಬಿದ್ದಿದೆ. ಬೆಳೆಗಳು ಉತ್ತಮವಾಗಿವೆ. ಆದರೆ ಕೆರೆಕಟ್ಟೆಗಳಿಗೆ ನೀರು ಹರಿದು ಬರುವಂತಹ ದೊಡ್ಡ ಮಳೆಗಳು ಬಂದಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಟಿ. ಬಸಣ್ಣ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT