ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮಗಳು, ಐಡಿಯಾಲಜಿ ಮತ್ತು ವಾಸ್ತವದ ಬಿಕ್ಕಟ್ಟು

Last Updated 16 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

1991ರಲ್ಲಿ ಅಮೆರಿಕ ಮತ್ತು ಇರಾಕ್ ನಡುವೆ ಕೊಲ್ಲಿ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಜಾನ್ ಬೌದ್ರಿಯಾ ಎನ್ನುವ ಫ್ರೆಂಚ್ ಚಿಂತಕ ‘ಕೊಲ್ಲಿ ಯುದ್ಧ ನಡೆದೇ ಇಲ್ಲ’ ಎಂದು ಘೋಷಿಸಿ ಒಂದು ಲೇಖನ ಬರೆದ. ಸತ್ಯವೆನ್ನುವುದು ಏನೂ ಇಲ್ಲ, ಇರುವುದೆಲ್ಲಾ ಸಾಪೇಕ್ಷವಾದ ಅಭಿಪ್ರಾಯಗಳು ಎಂದು ತಿರುಗಾಡಿಕೊಂಡಿದ್ದ ಆ ಕಾಲದ ಫ್ರೆಂಚ್ ಚಿಂತಕರ ಕಾಯಿಲೆಯೇ ಬೌದ್ರಿಯಾನಿಗೂ ಎಲ್ಲೋ ಸ್ವಲ್ಪ ಜಾಸ್ತಿ ತಗುಲಿದೆ ಎಂದು ಟೀಕಾಕಾರರು ಅವನನ್ನು ಜರೆದರು.

ಆ ಕಾಲದ ಅಕಡೆಮಿಕ್ ಫ್ಯಾಶನ್ನುಗಳ ಅಮಲು ಏರಿದವನಂತೆ ಬರೆದ ಬೌದ್ರಿಯಾನ ಮಾತು ಪೋಸ್ಟ್- ಮಾಡರ್ನ್ ಎಂದು ಕರೆದುಕೊಳ್ಳುವ ಚಿಂತಕರ ಪೊಳ್ಳುತನಕ್ಕೆ ಸಾಕ್ಷಿ ಎಂದು ಇಡೀ ಯೂರೋಪಿನಲ್ಲಿ ಗುಲ್ಲಾಯಿತು. ಆ ಟೀಕೆಯಲ್ಲಿ ಬಹಳಷ್ಟು ಸತ್ಯವೂ ಇತ್ತು. ಆದರೆ ಇಂದು ಬೌದ್ರಿಯಾನ ಮಾತು ಇಪ್ಪತ್ತೈದು ವರ್ಷ ಕಳೆದಾದ ಮೇಲೆ ಮತ್ತೆ ನಮ್ಮನ್ನು ಕಾಡಲು ಬಂದಿದೆ. ಒಂದೇ ವ್ಯತ್ಯಾಸವೆಂದರೆ, ಈಗ ಅದಕ್ಕೆ ಒಂದು ಗೌರವದ ದಿರಿಸು ಹಾಕಲಾಗಿದೆ. ಇಂದಿನ ಅಕಡೆಮಿಕ್ ಪರಿಭಾಷೆಯಲ್ಲಿ ‘ಮೀಡಿಯಾಟೈಸೇಶನ್’ ಎಂದು ಇದಕ್ಕೆ ಹೆಸರು.

ಏನಿದು ಮೀಡಿಯಾಟೈಸೇಶನ್? ತೀರ ಇತ್ತೀಚಿನವರೆಗೂ ಕಾವೇರಿ ಗಲಾಟೆ ನಡೆಯುವಾಗ ಮನೆಯಲ್ಲಿ ಕುಳಿತು ಟಿ.ವಿ. ನೋಡುತ್ತಾ, ‘ಇವೆಲ್ಲಾ ಈ ಟಿ.ವಿ.ಯವರು ಹಚ್ಚಿಕೊಡುವ ಜಗಳ. ಜನ ಸುಮ್ಮನೆ ಇರುತ್ತಾರೆ. ಈ ಟಿ.ವಿ. ಚಾನೆಲ್ಲುಗಳೇ ತಮ್ಮ ಟಿ.ಆರ್‌.ಪಿ.ಗಾಗಿ ಹಸಿಹಸಿ ಸುದ್ಧಿಗಳು, ಅರೆಸತ್ಯಗಳು, ರೋಚಕವಾದ ದೃಶ್ಯಗಳನ್ನು ತೋರಿಸಿ ಜನರ ತಲೆ ಕೆಡಿಸುತ್ತಾರೆ’ ಎಂದು ನಿಮಗೆ ಅನ್ನಿಸಿತ್ತು ತಾನೆ? ಬರೀ ಇದೊಂದೇ ವಿಷಯದಲ್ಲಿ ಅಲ್ಲ.

ನಿತ್ಯಜೀವನದ ಯಾವ ವಿಷಯವನ್ನು ತೆಗೆದುಕೊಂಡರೂ, ಅದರಲ್ಲಿ ಹೇಗೆ ಸಮೂಹ ಮಾಧ್ಯಮಗಳು ನಮ್ಮ ಬದುಕನ್ನು ನಿಯಂತ್ರಿಸುತ್ತಿವೆ ಎಂದು ನಮಗೆ ಕಾಣಿಸದೇ ಇರದು. ಇದರರ್ಥ ಮಾಧ್ಯಮಗಳು ಯಾವಾಗಲೂ ಸುಳ್ಳು ಹೇಳುತ್ತಿವೆ ಎಂದಲ್ಲ. ಬರೀ ಸುಳ್ಳು ಹೇಳಿದ್ದರೆ ಅಂಥ ಸಮಸ್ಯೆ ಇರುತ್ತಿರಲಿಲ್ಲ.

ಯಾಕೆಂದರೆ ಇಂದಲ್ಲದಿದ್ದರೆ ನಾಳೆ, ಹೀಗಲ್ಲದಿದ್ದರೆ ಹಾಗೆ ಸುಳ್ಳನ್ನು ಸುಳ್ಳು ಎಂದು ಸಾಬೀತು ಮಾಡುವುದು ಸಾಧ್ಯ. ಆದರೆ, ಇದರ ನಿಜವಾದ ಅರ್ಥ ಇತ್ತೀಚಿನ ದಿನಗಳಲ್ಲಿ ನಮಗೆ ನಮ್ಮ ಸುತ್ತಣದ ವಾಸ್ತವವು ಮಾಧ್ಯಮಗಳ ಮೂಲಕವಲ್ಲದೇ ಬೇರೆ ಯಾವ ರೀತಿಯಿಂದಲೂ ನೇರವಾಗಿ ಅನುಭವಕ್ಕೆ ಬರುತ್ತಿಲ್ಲ ಎಂಬುದು. ಹಾಗಾಗಿ ನಮ್ಮ ಪ್ರಪಂಚದ ಬಗೆಗಿನ ಎಲ್ಲಾ ಚರ್ಚೆಗಳೂ ಮಾಧ್ಯಮ- ನಿಯಂತ್ರಿತವಾಗುತ್ತಿವೆಯೇ ಹೊರತು ಬೇರೆ ರೀತಿಯ ಸರಿ– ತಪ್ಪುಗಳ ಪರೀಕ್ಷೆಗೆ ಅವು ಲಭ್ಯವೇ ಇಲ್ಲವೆಂಬುದು.

ಇದು ಇನ್ನೂ ನಮ್ಮ ದೇಶದಲ್ಲಿ ಅಂತಹ ದೊಡ್ಡ ಪಿಡುಗಲ್ಲ ಎಂದು ನಿಮಗೆ ಅನ್ನಿಸಬಹುದು. ಆದರೆ, ನೀವು ನಿಮ್ಮ ಸುತ್ತಲ ಪ್ರಪಂಚದ ಬಗ್ಗೆ ಹೊಂದಿರುವ ಯಾವುದಾದರೂ ಐದು ಮುಖ್ಯ ಅಭಿಪ್ರಾಯಗಳನ್ನು ತೆಗೆದುಕೊಂಡು ಅದರ ಇಹಪರವನ್ನು ಒಮ್ಮೆ ಪರಿಶೀಲಿಸಿ. ನಿಮಗೆ ಅದು ನಿಮ್ಮ ನೇರವಾದ ಅನುಭವದಿಂದ ತಿಳಿದದ್ದೇ? ಅಥವಾ ನಿಮಗೆ ಗೊತ್ತಿರುವ ವ್ಯಕ್ತಿಗಳ ನೇರವಾದ ಅನುಭವದಿಂದ ತಿಳಿದದ್ದೇ? ಬಹುಶಃ ಇಲ್ಲ. ಅದು ನಿಮಗೆ ತಿಳಿದದ್ದು ಸಮೂಹ ಮಾಧ್ಯಮಗಳಿಂದ. ಹೋಗಲಿ.

ನಿಮ್ಮ ಅಭಿಪ್ರಾಯದ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಬೇಕಾದ ಯಾವುದಾದರೂ ಕ್ಷಮತೆ, ತಾಂತ್ರಿಕ ಹತಾರ ನಿಮ್ಮಲ್ಲಿದೆಯೇ? ಉದಾಹರಣೆಗೆ, ಪಾಕಿಸ್ತಾನ ಸೈನ್ಯದ ತಾಕತ್ತು ಭಾರತ ಸೈನ್ಯದ ತಾಕತ್ತಿಗಿಂತ ಕಳಪೆ ಎಂದು ಕಳೆದ ವಾರ ಎಲ್ಲೋ ಓದಿದಿರಲ್ಲ? ಆ ಮಾಹಿತಿಯನ್ನು ಪರೀಕ್ಷಿಸುವ ಕ್ಷಮತೆ ಅಥವಾ ತಾಂತ್ರಿಕ ಪರಿಣತಿ ನಿಮ್ಮಲ್ಲಿತ್ತೇ? ಅಥವಾ ಅಂತಹ ಪರೀಕ್ಷೆಗೆ ಒಡ್ಡಿಕೊಳ್ಳುವ ರೀತಿಯಲ್ಲಿ ಆ ಲೇಖನ ತನ್ನ ಮಾಹಿತಿಯ ಮೂಲಗಳನ್ನು ತೋರಿಸಿತ್ತೇ?

ಹಾಗೆಯೇ, ಗುಡ್ ಕೊಲೆಸ್ಟರಾಲ್ ಮತ್ತು ಬ್ಯಾಡ್ ಕೊಲೆಸ್ಟರಾಲ್ ಎಂದೇನೋ ಹೇಳಿದಿರಲ್ಲ, ಅದು? ಅದರ ಕತೆಯೂ ಇಷ್ಟೇ ತಾನೆ? ನಿಮ್ಮ ಮಕ್ಕಳು ಬೆಂಗಳೂರಿನಲ್ಲಿ ಬೆಳೆಯುತ್ತಿರಲಿ, ಧಾರವಾಡದಲ್ಲಿ ಬೆಳೆಯುತ್ತಿರಲಿ ಅಥವಾ ಶಿಡ್ಲಘಟ್ಟದಲ್ಲಿರಲಿ, ಸುಳ್ಯದಲ್ಲಿರಲಿ, ಅವರೆಲ್ಲರಿಗೂ ಪೋಕೆಮಾನ್ ಮತ್ತು ಛೋಟಾ ಭೀಮ್ ಎಂದರೆ ಯಾರು ಎಂದು ಗೊತ್ತಲ್ಲವೇ? ಅಷ್ಟೇ ಏಕೆ, ನಿಮಗೂ ಅದು ಗೊತ್ತಲ್ಲ?! ಅಂದಮೇಲೆ, ನಾವೆಲ್ಲರೂ ಈ ಮೀಡಿಯಾಟೈಸೇಶನ್‌ನ ಪ್ರಭಾವಕ್ಕೆ ಸಿಕ್ಕಿದ್ದೇವೆಂದೇ ಅರ್ಥ.

ಆದರೆ, ಮಾರುಕಟ್ಟೆ ಆಧಾರಿತ ಸಮಾಜಗಳಲ್ಲಿ ಇದೇನೂ ಹೊಸದಲ್ಲ. ಒಂದು ಹೊಸ ಸೋಪು ಕಾಶ್ಮೀರಕ್ಕೂ ಬರುತ್ತದೆ. ಕೇರಳಕ್ಕೂ ಬರುತ್ತದೆ. ಎಲ್ಲರೂ ಅದನ್ನೇ ಉಪಯೋಗಿಸುತ್ತಾರೆ. ಇದು ಒಂದೆರಡು ನೂರು ವರ್ಷದಿಂದಲಂತೂ ಹೀಗೇ ಆಗುತ್ತಿದೆ. ಮೀಡಿಯಾಟೈಸೇಶನ್ ಕೂಡಾ ಇಂಥದ್ದೇ ಒಂದು ಸಂಗತಿ ಎಂದು ಅನ್ನಿಸಬಹುದು. ಆದರೆ ಇದರಲ್ಲಿ ಒಂದು ಮುಖ್ಯ ವ್ಯತ್ಯಾಸ ಗಮನಿಸಬೇಕು.

ಒಂದೇ ಹೆಸರಿನ ಸೋಪನ್ನು ಎಲ್ಲರೂ ಉಪಯೋಗಿಸುವುರಿಂದ, ಒಂದೇ ಹೆಸರಿನ ಸಿದ್ಧ ಉಡುಪುಗಳನ್ನು ಧರಿಸುವುದರಿಂದ ನಮ್ಮ ವಾಸ್ತವದ ಕುರಿತ ಅನುಭವವೆಲ್ಲಾ ಏಕರೂಪವಾಗಿಬಿಡುವುದಿಲ್ಲ. ಬಹುಶಃ ಪ್ರಾಚೀನ ಗ್ರೀಕರು ಬಳಸುತ್ತಿದ್ದ ಅವೇ ಹಲವು ಪದಾರ್ಥಗಳನ್ನು ಅರಬೀ ಸಮುದ್ರದ ಗುಂಟ ಕೇರಳದಲ್ಲೂ ಬಳಸುತ್ತಿದ್ದರು. ಆದರೆ, ಆ ಎರಡೂ ಪ್ರಪಂಚಗಳು ವಿಭಿನ್ನವಾಗಿದ್ದವು.

ಮೀಡಿಯಾಟೈಸೇಶನ್ ಎನ್ನುವುದು ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ವಾಸ್ತವದ ನಮ್ಮ ಅನುಭವವನ್ನೇ ತನ್ನ ಅಧೀನವಾಗಿಸಿಕೊಂಡುಬಿಡುತ್ತದೆ. ಮಾಧ್ಯಮಗಳ ಚಿತ್ರಣದ ಮೂಲಕ ದಕ್ಕುವ ವಾಸ್ತವದ ಹೊರತಾಗಿ ನಮಗೆ ಇನ್ನು ಯಾವ ರೀತಿಯಲ್ಲೂ ನಮ್ಮ ಪ್ರಪಂಚದ ಸಂಗತಿಗಳು ಅನುಭವಕ್ಕೆ ಬರುವುದೇ ಇಲ್ಲವೇನೋ ಎನ್ನುವಂತೆ.

ಬೌದ್ರಿಯಾ ಕೂಡಾ ಹೇಳಿದ್ದು ಅದನ್ನೇ. ಒಂದು ಸಾಂಪ್ರದಾಯಿಕ ಯುದ್ಧದಲ್ಲಿ ಆಗುವಂತೆ ಅಮೆರಿಕ ಸೈನ್ಯ ಇರಾಕಿ ಸೈನ್ಯವನ್ನು ಎಲ್ಲಿಯೂ ಎದುರಿಸಲೇ ಇಲ್ಲ. ಅಷ್ಟೇ ಅಲ್ಲ, ಆ ಇಡೀ ಯುದ್ಧದ ಬಗೆಗಿನ ಎಲ್ಲಾ ವಾದವಿವಾದಗಳು ನಡೆದಿದ್ದು ಅಮೆರಿಕದ ಜನರಿಗೆ ತಮ್ಮ ತಮ್ಮ ಟಿ.ವಿ. ಪರದೆಯ ಮೇಲೆ ತೋರಿಸಿದ ದೃಶ್ಯಗಳ ಆಧಾರದ ಮೇಲೆಯೇ.

ಆ ದೃಶ್ಯಗಳೆಲ್ಲಾ ಸರಕಾರೀ ಪ್ರಚಾರಯಂತ್ರದಲ್ಲಿ ತಿಕ್ಕಿತೊಳೆದ ಮೇಲೆಯೇ ಪ್ರಸಾರವಾಗಿದ್ದು. ಒಟ್ಟಾರೆಯಾಗಿ, ಅಮೆರಿಕದ ಜನರ ಮಟ್ಟಿಗೆ ಹೇಳುವುದಾದರೆ, ಕೊಲ್ಲಿ ಯುದ್ಧ ಎನ್ನುವುದು ಒಂದು ಆಮೂಲಾಗ್ರವಾಗಿ ಮಾಧ್ಯಮ-ನಿರ್ಮಿತ ಘಟನೆಯೇ ಹೊರತು ವಾಸ್ತವ ಘಟನೆಯಲ್ಲ. ಒಂದು ವಾಸ್ತವ ಘಟನೆಗೆ ಇರಬೇಕಾದ ಯಾವ ಪರಿಣಾಮವೂ ಕೊಲ್ಲಿ ಯುದ್ಧದಿಂದ ಅಮೆರಿಕದ ಜನರ ಮೇಲಾಗಲಿಲ್ಲ. ಬೌದ್ರಿಯಾನ ಮಾತುಗಳಲ್ಲಿ ಸ್ವಲ್ಪ ಅತಿಶಯೋಕ್ತಿಯೂ ಇದೆ. ಆದರೂ ಅದರಲ್ಲಿ ಸ್ವಲ್ಪವಾದರೂ ಸತ್ಯವಿದೆ ಎಂದು ಒಪ್ಪಿಕೊಳ್ಳದೇ ನಿರ್ವಾಹವಿಲ್ಲ.

ಮೀಡಿಯಾಟೈಸೇಶನ್‌ನ ಪ್ರಭಾವ ನನಗೆ ನೇರವಾಗಿ ಕಾಣಿಸಿದ್ದು ಈಗ ಕೆಲವು ವರ್ಷಗಳ ಹಿಂದೆ. ನಾನು ಕೆಲಸ ಮಾಡುತ್ತಿದ್ದ ಸಂಶೋಧನಾ ಸಂಸ್ಥೆಗೆ ಪ್ರತಿ ವರ್ಷ ಒಂದಿಪ್ಪತ್ತು ವಿದ್ಯಾರ್ಥಿಗಳು ಅಮೆರಿಕದ ಬೇರೆ ಬೇರೆ ವಿಶ್ವವಿದ್ಯಾನಿಲಯಗಳಿಂದ ಒಂದು ತಿಂಗಳ ಭಾರತ-ಅಧ್ಯಯನಕ್ಕೆಂದು ಬರುತ್ತಿದ್ದರು. ನಮ್ಮ ಸಂಸ್ಥೆಯ ಸಹೋದ್ಯೋಗಿಗಳು ಅವರಿಗೆ ಶೈಕ್ಷಣಿಕ ಪ್ರವಾಸ, ಉಪನ್ಯಾಸ, ತರಗತಿಗಳು ಇವನ್ನೆಲ್ಲಾ ಆಯೋಜಿಸುತ್ತಿದ್ದರು.

ಇಂಥದ್ದೇ ಒಂದು ಉಪನ್ಯಾಸದಲ್ಲಿ ಒಬ್ಬ ಭಾಷಣಕಾರರು ಅಮೆರಿಕ ಸೈನ್ಯ ಇರಾಕಿನಲ್ಲಿ, ಅಫ್ಘಾನಿಸ್ತಾನದಲ್ಲಿ ನಡೆಸುತ್ತಿರುವ ಮತಿಗೆಟ್ಟ ಯುದ್ಧದ ಬಗ್ಗೆ, ಅಬುಗ್ರೈಬ್ ಮತ್ತು ಗ್ವಾಂತನಾಮೋ ಬೇ ಮುಂತಾದ ಅಮಾನುಷ ಯುದ್ಧಸಂಬಂಧೀ ಕಾರಾಗೃಹಗಳನ್ನು ಅಮೆರಿಕ ಪೋಷಿಸುತ್ತಿರುವುದರ ಬಗ್ಗೆ, ಈ ಯುದ್ಧದಲ್ಲಿ ಮಡಿಯುತ್ತಿರುವ ಅಮೆರಿಕನ್ನರು ಯಾವ ವರ್ಗ, ವರ್ಣಗಳಿಗೆ ಸೇರಿದವರು ಎಂಬುವುದರ ಬಗ್ಗೆ ಸ್ವಲ್ಪ ವಿಮರ್ಶಾತ್ಮಕವಾಗಿ ಮಾತನಾಡಿದರು.

ಅವರು ಹೇಳಿದ್ದರಲ್ಲಿ ಹೊಸತೇನೂ ಇರಲಿಲ್ಲ ಅಥವಾ ಯಾರಿಗೂ ಗೊತ್ತಿಲ್ಲದ ವಿಷಯವೂ ಇರಲಿಲ್ಲ. ಜೊತೆಗೆ, ಅಮೆರಿಕದ ಬಗ್ಗೆ ವಿದ್ಯಾವಂತರು ಸಾಮಾನ್ಯವಾಗಿ ವ್ಯಕ್ತಪಡಿಸುವ ಅವೇ ಮೂರುನಾಲ್ಕು ಟೀಕೆಗಳನ್ನು ಇವರೂ ಮಾಡಿದ್ದರು. ಆದರೆ ಆಶ್ಚರ‍್ಯವೆಂಬಂತೆ, ಅಲ್ಲಿದ್ದ ಒಂದಿಬ್ಬರು ವಿದ್ಯಾರ್ಥಿಗಳು ಬಿಕ್ಕಿಬಿಕ್ಕಿ ಅಳಲು ಶುರುಮಾಡಿದರು.

ಸಂಘಟಕರಿಗೆ ಏನು ಪ್ರಮಾದವಾಯಿತೋ ಏನೋ ಎಂಬ ಮುಜುಗರ. ಕೊನೆಗೆ ಒಬ್ಬಳು ವಿದ್ಯಾರ್ಥಿನಿ, ‘ನಮಗೆ ನಮ್ಮ ದೇಶ ಇಂತಹ ನೀಚ ಕೃತ್ಯಗಳನ್ನು ಮಾಡುತ್ತಿದೆ ಎಂದು ತಿಳಿದೇ ಇರಲಿಲ್ಲ; ನಮ್ಮ ದೇಶದ ಕಾರಣದಿಂದಾಗಿ ಇಷ್ಟೊಂದು ಜನ ಕಷ್ಟಪಡುತ್ತಿದ್ದಾರೆಯೆ?’ ಎಂದೆಲ್ಲಾ ಗೋಳಿಡಲು ಶುರು ಮಾಡಿದಳು. ಈಗ ನಮಗೊಳ್ಳೆ ಉಭಯಸಂಕಟ. ಕೊನೆಗೆ, ಅಮೆರಿಕ ಅಷ್ಟು ಕೆಟ್ಟ ದೇಶವಲ್ಲ. ಯುದ್ಧ ಎಂದಮೇಲೆ ಹೀಗೆಲ್ಲಾ ಆಗುತ್ತದೆ. ನಾವು ಅದರ ಬಗ್ಗೆ ಸ್ವಲ್ಪ ಜಾಗ್ರತೆಯಿಂದಿರಬೇಕು ಎಂದೆಲ್ಲಾ ನಾವೇ ಅಮೆರಿಕದ ಪರ ವಹಿಸಿಕೊಂಡು ಆ ಹುಡುಗಿಯನನ್ನು ಸಂತೈಸಬೇಕಾಯಿತು.

ವಿಚಿತ್ರವೆಂದರೆ ಅಮೆರಿಕದಂತಹ ದೇಶದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದವರು ಕೂಡಾ ಹೇಗೆ ಅಲ್ಲಿನ ಮಾಧ್ಯಮಗಳು ಬಿತ್ತರಿಸುವ ಚಿತ್ರಣಗಳಿಗೆ ಬಂಧಿಯಾಗಿದ್ದಾರೆ ಎನ್ನುವುದು. ಭಾರತದಲ್ಲಿ ತೀರಾ ಈ ಮಟ್ಟಿನ ಮಾಧ್ಯಮ ವಾಸ್ತವ ಬೆಳೆದಿಲ್ಲ ಎಂದು ನಿಟ್ಟುಸಿರು ಬಿಡಬಹುದು. ಕಾಶ್ಮೀರದ ಬಗ್ಗೆ ಮಾತನಾಡುವ ಎಡಪಂಥೀಯರು ಮತ್ತು ಬಲಪಂಥೀಯರು ಇಬ್ಬರೂ ತಮ್ಮ ತಮ್ಮ ಅಭಿಪ್ರಾಯಗಳ ಬಗ್ಗೆ ಎಷ್ಟೇ ಕಚ್ಚಾಡಿದರೂ ಕನಿಷ್ಠ ಪಕ್ಷ ವಾಸ್ತವದ ಕೆಲವು ಅಂಶಗಳ ಬಗ್ಗೆ ಸಹಮತ ವ್ಯಕ್ತ ಪಡಿಸುತ್ತಾರೆ.

ಇತ್ತೀಚಿನ ಅಧ್ಯಕ್ಷೀಯ ಚುನಾವಣೆಯಂತೂ ಒಂದು ಬೃಹತ್ತಾದ ಮಾಧ್ಯಮ ನಿರ್ಮಿತ ಘಟನೆಯೇ ಸರಿ. ಅದರಲ್ಲಿ ಇಂದು ಅಮೆರಿಕ ಅನುಭವಿಸುತ್ತಿರುವ ನಿಜವಾದ ಸಮಸ್ಯೆ ಯಾವುದು ಮತ್ತು ಮಾಧ್ಯಮಗಳು ತೋರಿಸುವ ಸತ್ಯ ಯಾವುದು ಎಂದು ಹೇಳುವುದೇ ಕಷ್ಟ. ಟ್ರಂಪ್ ಹೇಳುವ ವಲಸಿಗರ ಸಮಸ್ಯೆ ನಿಜವೇ ಅಥವಾ ಅದು ಕೇವಲ ಬಲಪಂಥೀಯರ ಹುಯಿಲೇ? ಕ್ಲಿಂಟನ್ ನಿಜಕ್ಕೂ ಕಪ್ಪುಜನಗಳ ಬಗ್ಗೆ ಆಸಕ್ತಿ ಹೊಂದಿದವರೇ ಅಥವಾ ಅದು ಲಿಬಲರ್‌ಗಳು ಹೇಳದೇ ನಿರ್ವಾಹವಿಲ್ಲದ ಪೊಲಿಟಿಕಲಿ ಕರೆಕ್ಟ್ ಮಾತುಗಳೇ?

ಇದನ್ನು ತಿಳಿಯಲು ಮಾಧ್ಯಮಗಳ ಮೊರೆ ಹೊಕ್ಕರೆ ಅವೂ ಇದೇ ರಾಜಕೀಯ ವಾದವನ್ನೇ ಇನ್ನೊಂದು ರೀತಿಯಲ್ಲಿ ಮಾಡುತ್ತಿವೆಯೇ ವಿನಃ ಆ ರಾಜಕೀಯ ವಾದಗಳ ಸತ್ಯಾಸತ್ಯತೆಯನ್ನು ನಿಕಷಕ್ಕೆ ಒಡ್ಡುವಂತಹ ವಿಮರ್ಶೆ ಮಾಡುತ್ತಿವೆ ಎಂದೇನೂ ಅನ್ನಿಸುವುದಿಲ್ಲ. ನಮ್ಮ ಸಮಾನ ಬಳುವಳಿಯಾದ ನಿತ್ಯ ವಾಸ್ತವ ಎನ್ನುವುದೇ ಹೀಗೆ ಮರೀಚಿಕೆಯ ರೀತಿ ಕಾಣತೊಡಗುತ್ತದೆ. ಮಾಧ್ಯಮದ ನಿರ್ಮಿತಿಯಾದ ಚಿತ್ರಣವೇ ಘನಸತ್ಯದಂತೆ ಕಾಣುತ್ತದೆ.

ಭಾರತದಲ್ಲೂ 2014ರ ಲೋಕಸಭಾ ಚುನಾವಣೆಯ ಕಾಲದಲ್ಲಿ ಮತ್ತು ರಾಜಕೀಯ ಪಕ್ಷಗಳು ಇತ್ತೀಚೆಗೆ ಅನುಸರಿಸುವ ನಿರ್ದಿಷ್ಟ ಮತದಾರರನ್ನು ಗುರಿಯಾಗಿಸಿಕೊಂಡ ವಾರ್ಡ್ ಮಟ್ಟದ ಕಸ್ಟಮೈಸ್ಡ್ ಚುನಾವಣಾ ಪ್ರಚಾರಗಳಲ್ಲಿ ಭಾರತೀಯರಿಗೂ ಇದರ ಅನುಭವ ಸಾಕಷ್ಟು ಆಗಿದೆ. ಇನ್ನು ಟಿ.ವಿ ವಾರ್ತೆಗಳ ಚಾನೆಲ್ಲುಗಳನ್ನು ನೋಡಿದರಂತೂ ನಮ್ಮ ಇಡೀ ರಾಜಕೀಯ ಸಾಮಾಜಿಕ ಚರ್ಚೆಗಳೆಲ್ಲಾ ಒಂದು ವಿಚಿತ್ರ ರೀತಿಯ ಮೀಡಿಯಾಟೈಸೇಶನ್‌ನ ಫಲ ಎಂದು ಅನ್ನಿಸದಿರದು.

ಇದಕ್ಕೆ ಪರಿಹಾರವೇನು? ಮಾಧ್ಯಮಗಳಿಗೆಲ್ಲಾ ನೀವು ಹಾಗೆ ಮಾಡಬೇಡಿ ಎಂದು ಹೇಳುವುದು ಹೇಗೆ? ಹಾಗಾದರೆ ಮಾಧ್ಯಮಗಳು ಬೇರೆ ಏನು ಮಾಡಬೇಕು? ಇದನ್ನು ಸರಿಪಡಿಸಿಕೊಳ್ಳಿ ಎಂದು ಹೇಳುವವರು ಯಾವುದನ್ನು ಹೇಗೆ ಸರಿಪಡಿಸಿಕೊಳ್ಳಬೇಕೆಂದೂ ಹೇಳಬೇಕಷ್ಟೇ. ಅಷ್ಟಕ್ಕೂ ಮಾಧ್ಯಮಗಳು ಮಾಡುತ್ತಿರುವ ಅಪರಾಧವಾದರೂ ಏನು?

ತಮಗೆ ಸಿಗುವ ವಿವರಗಳನ್ನು ಆದಷ್ಟೂ ಆಸಕ್ತಿದಾಯಕವಾಗಿ ಹೇಳುತ್ತಿವೆ ಅಷ್ಟೆ ಅಲ್ಲವೇ. ಸುಳ್ಳು ಹೇಳುತ್ತಿಲ್ಲ. ಮೋಸ ಮಾಡುತ್ತಿಲ್ಲ. ಅಂದಮೇಲೆ ಮೀಡಿಯಾಟೈಸೇಶನ್ ಎನ್ನುವ ವಿದ್ಯಮಾನ ಅಷ್ಟು ಸುಲಭಕ್ಕೆ ಕೈಗೆ ದಕ್ಕುವಂಥದಲ್ಲ. ಮನೆಯಲ್ಲಿ ಕುಳಿತುಕೊಂಡು ಟಿ.ವಿ ನಿರೂಪಕರನ್ನು ಅವರ ಕೆಟ್ಟ ಭಾಷಾಶೈಲಿಗೆ, ಅರಚಾಟಕ್ಕೆ, ಅಜ್ಞಾನಕ್ಕೆ ಬೈದಷ್ಟು ಸುಲಭವಲ್ಲ ಇದು. ಇಂತಹ ವಿದ್ಯಮಾನ ಆಳದಲ್ಲಿ ಏನನ್ನು ಸೂಚಿಸುತ್ತಿದೆ? ಯಾವ ಕಾರಣದಿಂದ ಇಂತಹ ರೋಗಲಕ್ಷಣಗಳು ಕಾಣುತ್ತಿವೆ ಎನ್ನುವುದನ್ನು ಪತ್ತೆ ಮಾಡದೇ ಇದಕ್ಕೆ ಪರಿಹಾರವಿಲ್ಲ.

ಮೀಡಿಯಾಟೈಸೇಶನ್ ಎನ್ನುವುದೇ ನಿಜವಾದ ಸಮಸ್ಯೆಯಲ್ಲ. ಅದು ಸಮಸ್ಯೆಯ ಹೊರಮೈ ಲಕ್ಷಣವಷ್ಟೆ. ನಿಜವಾದ ಸಮಸ್ಯೆ ನಮ್ಮ ಬೌದ್ಧಿಕ ಚರ್ಚೆಗಳು ಐಡಿಯಾಲಾಜಿಕಲ್ ಆಗಿರುವುದು.

ಐಡಿಯಾಲಜಿ(ಸಿದ್ಧಾಂತಗಳಿ)ಗೂ ಮೀಡಿಯಾಟೈಸೇಶನ್ ಎಂದು ನಾನು ಕರೆದ ಸಂಗತಿಗೂ ಇರಬಹುದಾದ ಸಂಬಂಧ ಏನು. ಐಡಿಯಾಲಜಿಗಳ ಒಂದು ಹೆಗ್ಗುರುತು ಏನೆಂದರೆ ನಮ್ಮ ಅನುಭವವನ್ನು ತನ್ನ ವ್ಯಾಖ್ಯಾನಕ್ಕೆ ಅಧೀನ ಮಾಡುವುದು. ಹಾಗೆ ಅಧೀನ ಮಾಡಬೇಕೆಂದರೆ, ಆ ವ್ಯಾಖ್ಯಾನಕ್ಕೆ ಅನುರೂಪವಾದ ಪ್ರಪಂಚದ ಚಿತ್ರಣವನ್ನು ರೂಪಿಸಲೇಬೇಕು.

ನಮ್ಮ ಪ್ರಪಂಚದ ಚಿತ್ರಣ ಬದಲಾಗುತ್ತಿದ್ದರೆ ಒಂದು ನಿರ್ದಿಷ್ಟ ಐಡಿಯಾಲಜಿ ಕೊಡಮಾಡುವ ವ್ಯಾಖ್ಯಾನಕ್ಕೆ ಸ್ಥಿಮಿತ ಬರುವುದು ಹೇಗೆ? ಅಂದಮೇಲೆ, ನಮ್ಮ ಅನುಭವವನ್ನು ಪರೀಕ್ಷೆಗೆ ಒಡ್ಡಿಕೊಳ್ಳುವ ಬದಲು, ನಮ್ಮ ಅನುಭವದಿಂದ ಲೋಕಜ್ಞಾನವನ್ನು ಸಂಪಾದಿಸಿಕೊಳ್ಳುವ ಬದಲು, ನಮ್ಮ ಅನುಭವವನ್ನು ಒಂದು ನಿರ್ದಿಷ್ಟ ವ್ಯಾಖ್ಯಾನಕ್ಕೆ ಉದಾಹರಣೆ ಎನ್ನುವಂತೆ ನೋಡುವುದು ಐಡಿಯಾಲಜಿಗಳು ಹೂಡುವ ಹುನ್ನಾರದ ಭಾಗ. ಅದಕ್ಕೆ ಮೀಡಿಯಾಟೈಸೇಶನ್ ಒಂದು ಒಳ್ಳೆಯ ನಿಮಿತ್ತವೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT