ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಮೆಯ ಬಸಿರಿನಲ್ಲಿ...

Last Updated 16 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಹೊಟ್ಟೆ ಹಸಿದು ಒಳಗೆಲ್ಲ ತಕಧಿಮಿ ಶುರುವಾಗಿತ್ತು. ಆರ್ಡರ್ ಮಾಡಿ ಅರ್ಧ ಗಂಟೆಯಾದರೂ ಇನ್ನೂ ಅದರ ಸುಳಿವಿರಲಿಲ್ಲ. ಮನಸಿಗೆ ಅಷ್ಟು ಸಾಕಿತ್ತೇನೋ..ಸರ್‍ರನೇ ನಿನ್ನೆಗೆ ನೆಗೆಯೋಕೆ.

‘ಅದೇನು  ಸುಡುಗಾಡೋ, ಬರೀ ಭಾವನೆ, ಪದ, ಹಾಡು, ಸಾಹಿತ್ಯ ಅಂತ ಅದು ಹ್ಯಾಗೆ ಬದುಕ್ತಾರೋ?’ ಅನ್ನುತ್ತಲೇ ಸಂಚಿತಾ ಕಡ್ಡಿ ಮುರಿದಂತೆ ಮಾತಾಡಿದ್ದಳು... ‘ನೋಡು ಮಾನವ್, ಎರಡು ವರ್ಷದಿಂದ ನಿನ್ನನ್ನು ನಾನು, ನನ್ನನ್ನು ನೀನು ಖುಷಿಯಲ್ಲಿಡುವ ಭ್ರಮೆಯಲ್ಲೇ ದಿನಗಳೀತಾ ಬಂದ್ವಿ. ಅದು ಸಾಧ್ಯವಿದ್ದೀತು ಅನ್ನೋ hope ಆರಂಭದಲ್ಲಿ ನನಗಿದ್ದದ್ದೂ ನಿಜ. ಮದುವೆ ಸಂಭ್ರಮದಲ್ಲಿ ಅದು ಮರೆತಂತಾಗಿತ್ತು. ಕೆಲ ದಿನಗಳಾದ ಮೇಲೆ ನಿಧಾನವಾಗಿ ನಮ್ಮೊಳಗಿನ ವಾಸ್ತವ ತಾನಾಗೇ ಹೊರಗೆ ಬರೋಕೆ ಶುರು ಆಯ್ತು...’

ತನ್ನ ಮಾತುಗಳಿಗೆ ಪೂರ್ಣ ವಿರಾಮವಾಗಲೀ, ನನ್ನಿಂದ ಪ್ರತ್ಯುತ್ತರವಾಗಲೀ ಸದ್ಯಕ್ಕೀಗ ಬೇಕಿಲ್ಲ ಅನ್ನೋದು ಅವಳ ಧಾಟಿಯಿಂದಲೇ ತಿಳಿಯುತ್ತಿತ್ತು. ಅಲ್ಲದೇ ಮಾತಾಡುವಷ್ಟು ಶಕ್ತಿ ನನ್ನೊಳಗೂ ಉಳಿದಂತಿರಲಿಲ್ಲ. ಅವಳು ಮುಂದುವರೆದಿದ್ದಳು...

‘ಹಾಗಂತ ನಾವಿಬ್ಬರೂ immature fellows ಏನಾಗಿರಲಿಲ್ಲ. ಯಾಕೆಂದ್ರೆ ಮದುವೆಗೂ ಮೊದಲೇ ನಮಗೆ ನಮ್ಮ interests, life styleನ ಅರಿವಿತ್ತು. ಭಿನ್ನವಾಗಿದ್ದರೂ ಅದನ್ನು ಗೌರವಿಸಬೇಕು ಅನ್ನೋ ಪ್ರಜ್ಞೆಯಿಂದಲೇ ನಾವು ನಡೆದುಕೊಳ್ಳಲು ಪ್ರಯತ್ನಿಸಿದ್ಧೂ ಹೌದು. Trip ಹೋಗಿ ಬಂದ್ವಿ... ಫ್ರೆಂಡ್ಸ್ ಫಂಕ್ಷನ್ಸ್ ಅಟೆಂಡ್ ಮಾಡಿದ್ವಿ. ನೋಡಿದವರಿಗೆಲ್ಲ ಅಷ್ಟೇ ಅಲ್ಲ ನಮಗೆ ನಾವೇ ಕೂಡ ನಾವು ಖುಷಿಯಿಂದ ಅನ್ಯೋನ್ಯವಾಗಿಯೇ ಇದೀವಿ ಅನ್ನಿಸೋ ರೀತಿಲೇ ಬದುಕ್ತಾ ಬಂದ್ವಿ. ಆದರೆ ಮಾನವ್, ಹೊಂದಾಣಿಕೆ  ಅನ್ನೋದು ಖುಷಿಗಿಂತ ಜಾಸ್ತಿ ಆಯ್ತು ಅನ್ನಿಸಿದಾಗ ಅದು ಆ ಖುಷಿ ಯಾಂತ್ರಿಕ ಅನ್ನಿಸೋಕೆ ಶುರುವಾಯ್ತು...’

ಯಾಕೋ ಭಾವುಕಳಾಗ್ತಿದ್ದಾಳಾ ಅಂದುಕೊಂಡೆ. ಅಲ್ಲಿಯೇ ಡೈನಿಂಗ್ ಟೇಬಲ್ ಮೇಲಿದ್ದ ಜಗ್ ಎತ್ತಿ ಗಟಗಟ ನೀರು ಕುಡಿದಳು. ಸ್ವಲ್ಪ ನಿರಾಳ ಅನ್ನಿಸಿರಬೇಕು. ಪಕ್ಕದಲ್ಲಿ ಬಂದು ಕುಳಿತಳು. ಮುಖ ನೋಡಿದೆ..ಉದ್ವೇಗವೆಂಥದೂ ಇರಲಿಲ್ಲ‌.

‘ನಿನ್ನ ಹಾಡು, ಪುಸ್ತಕ, ಸಾಹಿತ್ಯ, ಭಾವುಕತೆ ಇವೆಲ್ಲವೂ ನನ್ನೊಳಕ್ಕೆ ಇಳಿಯಲೇ ಇಲ್ಲ... trip ಅಲ್ಲಿ ನಾನು ಹೊಸ ಹೊಸ food items enjoy ಮಾಡೋಣ ಅಂತ ಯೋಚಿಸ್ತಿದ್ರೆ, ನೀನು ವಾಸ್ ಅಲ್ಲಿಟ್ಟಿರೋ ಹೂಗಳ ಅಂದ ಸವಿಯುತ್ತಾ ಮನಸಲ್ಲೇ ಹಾಡು ಕಟ್ತಿದ್ದೆ. ವಾಟರ್ ಗೇಮ್ಸ್ ಅಲ್ಲಿ ನಾನು ಥ್ರಿಲ್ ಹುಡುಕ್ತಿದ್ರೆ ನೀನು ನೀರಿನ ಏರಿಳಿತ ದಿಟ್ಟಿಸ್ತಾ ಇದ್ದೆ. ಫೋಟೋಸ್ ನೋಡು, ನಿನಗೆ ಅರ್ಥ ಆಗತ್ತೆ... ನಾನು ನೀನು ಎಷ್ಟು ಅಂತರದಲ್ಲಿದ್ವೀ ಅಂತಾ. ತುಂಬ ಯೋಚನೆ ಮಾಡಿದೆ ಕಣೋ...’

ಯಾಕೋ ಎದೆಯೊಳಗೆ ಏನೋ ನಲುಗಿದಂತಾಯ್ತು. ಒಟ್ಟು ಮೂರೂವರೆ ವರ್ಷಗಳ ಒಡನಾಟದಲ್ಲಿ ಅವಳ ಸ್ವಭಾವ ತಿಳಿದಿದ್ದೆಯೆಂದುಕೊಂಡಿದ್ದೆ. ಆದರೆ...

‘ತುಂಬ ಯೋಚಿಸಿದ ಮೇಲೇನೇ ನಾನು ಈ ಮಾತು ಹೇಳ್ತಿದೀನಿ. ನಾವಿನ್ನು ಬೇರೆ ಬೇರೆ ಇರೋದು ಇಬ್ಬರಿಗೂ ಒಳ್ಳೆಯದು. Parentsಗೆ ಈಗಲೇ ಏನೂ ಹೇಳೋದು ಬೇಡ. Let's give them some time, ಕ್ರಮೇಣ ಅರ್ಥ ಮಾಡ್ಕೋಳ್ತಾರೆ. ನೀನೇ ಹೇಳೋ ಹಾಗೆ ಸಂಬಂಧಗಳನ್ನ ಗೌರವಿಸುತ್ತಲೇ ದೂರ ಆಗಬೇಕು. So, let's be separated. ನಮ್ಮ ಖುಷಿ ನಾವು ಹುಡುಕೋಣ...’

ನನ್ನ ಮಾತು ಮುಗಿದವು ಅನ್ನೋ ರೀತಿಯಲ್ಲಿ ಸುಮ್ಮನಾದಳು. ಕಳೆದೊಂದು ತಿಂಗಳಿನಿಂದ ನಾವು continuous ಆಗಿ ಒಬ್ಬರಿಗೊಬ್ಬರು ಹೇಗೆ ರಿಯಾಕ್ಟ್ ಮಾಡ್ತಾ ಬಂದಿದೀವಿ ಅನ್ನೋದನ್ನೇ ಯೋಚಿಸುತ್ತಾ ಕುಳಿತಿದ್ದೆ. ಅವಳ ಮಾತುಗಳಲ್ಲೂ ಸತ್ಯವಿದೆಯಲ್ಲವಾ? ಅನ್ನಿಸತೊಡಗಿತು... ನನ್ನೊಳಗೇ ಕುಸಿಯುತ್ತಿರುವಂತೆ ಭಾಸವಾಯಿತು. ಯಾಕೋ ಏನೋ ಮಾತನಾಡಬೇಕು ಅನ್ನಿಸಲೇ ಇಲ್ಲ.

‘ಸರಿ ಕಣೋ, ನಂಗೆ late ಆಗತ್ತೆ’ ಅಂದವಳೇ, ಬೆಡ್ ರೂಮಿಗೆ ಹೋಗಿ ತನ್ನ ಅಗತ್ಯದ ಸಾಮಾನುಗಳನ್ನು ಟ್ರಾವೆಲರ್ ಬ್ಯಾಗಿಗೆ ಹಾಕಿಕೊಂಡು ಬಂದಳು. ನಾನಿನ್ನು ಬರ್ತೇನೆ' ಅಂದವಳ ದನಿಯಲ್ಲೇನೂ ಬದಲಾವಣೆ ಹುಡುಕಬೇಕು ಅಂತ ನನಗೆ ಅನ್ನಿಸಿರಲೂ ಇಲ್ಲ. ಒಂದೆರಡು ನಿಮಿಷ ಕಾದಿರಲೂಬಹುದು. ಅವಳ ಕಾರ್ ಶಬ್ದ ಕಿವಿಯಲ್ಲುಳಿದಿತ್ತು.

‌‘ಬೆಂಗಳೂರೆಂಬ ದೈತ್ಯ ನಗರಿಯಲ್ಲಿ ತನ್ನ ಭಾವ, ಭ್ರಮೆಗಳನ್ನು ಇವಳಾದರೂ ಅರ್ಥ ಮಾಡಿಕೊಂಡಾಳೆಂಬ ನಿರೀಕ್ಷೆ ಇದ್ದದ್ದು ಸುಳ್ಳಲ್ಲ. ಅಥವಾ ಅದೇ ಭ್ರಮೆಯಾಗಿತ್ತಾ?’

ಮೊಬೈಲ್ ರಿಂಗ್ ನನ್ನನ್ನು ಇವತ್ತಿಗೆ ಕರೆತಂದಿತ್ತು.

***

‘ಸರ್, we apologize for the inconvenience. As of now, we can't serve the food item which you have ordered. Could you please revise your order sir...?’ ಆ ಕಡೆಯಿಂದ ಇನ್ನೂ ಧ್ವನಿ ಕೇಳುತ್ತಲೇ ಇತ್ತು. It's Ok. I’ll cancel my order ಅಂದು ಮೊಬೈಲ್ ಡಿಸ್ಕನೆಕ್ಟ್ ಮಾಡಿದ. ಬಾಲ್ಕನಿಯಿಂದ ಎದ್ದು ಬರುವದರಲ್ಲಿ ಮನಸ್ಸಿಗೇನೋ ಹೊಸಹೊಳವು ಸಿಕ್ಕಂತಾಗಿತ್ತು. ಅನ್ನದ ಋಣ ಹೇಗೋ ಹಾಗೇ ಹೆಣ್ಣಿನ ಋಣವೂ ಇರಲೇಬೇಕು... ಇಲ್ಲದಿದ್ದರೆ ಅದು ದಕ್ಕಲಿಕ್ಕಿಲ್ಲ ಎಂದುಕೊಂಡೆ. Food order ಜೊತೆಗೇ  personal  order ಕೂಡ cancel ಮಾಡಿದಂತಾಗಿತ್ತು.

ಅಷ್ಟರಲ್ಲಿ ಡೋರ್ ಬೆಲ್ ಆದ ಹಾಗಾಯ್ತು. ಭ್ರಮೆ ಅನ್ನಿಸ್ತು. ಕುಕ್ಕರ್ ಇಟ್ಟು, ಸ್ವಲ್ಪ rest ಮಾಡಿದರಾಯ್ತು ಅಂದುಕೊಂಡವಗೆ, ಮತ್ತೆ bell sound... ಅರೆ, ಇದ್ಯಾರಿದ್ದೀತು, ಈ ಹೊತ್ತಲ್ಲಿ ಅಂದುಕೊಂಡೇ ಬಾಗಿಲು ತೆಗೆದೆ. ಸಂಚಿತಾ ನಿಂತಿದ್ದಳು...

‘ಅಷ್ಟೊತ್ತಿಂದ ಬೆಲ್ ಮಾಡ್ತಿದೀನಿ..ಸುಧಾರಿಸ್ಬೇಡಾ ನೀನು...’ ನೂಕುತ್ತಲೇ ಒಳ ಬಂದಳು. ಬಾಗಿಲು ಹಾಕಿ ಹಿಂಬಾಲಿಸಿದೆ. ‘ಗೊತ್ತು, ಊಟ ಮಾಡಿರಲ್ಲ ಅಂತ. ಅಡುಗೆ ಎಲ್ಲ ಮಾಡಿ ಇನ್ನೇನು ಬಾಯಿಗೆ ಆರಾಮಾಗಿ ತುತ್ತು ಇಟ್ಕೋಬೇಕು ಅನ್ನೋವಷ್ಟರಲ್ಲಿ ನೆನಪಾಗಿ ಬಿಟ್ಟೆ ಕೋತಿ, ಅದನ್ನೇ ಡಬ್ಬಕ್ಕೆ ಹಾಕಿ ತಂದೆ...’ ಅನ್ನುತ್ತಲೇ ತಟ್ಟೆಗೆ ನನ್ನಿಷ್ಟದ ಮೆಂತ್ಯ ಪಾಲಕ್ ಪುಲಾವ್ ಹಾಕಿ ತಂದು, ಆಆ..ಮಾಡು ಅಂದಾಗಲೇ ಅವಳ ಕಣ್ಣು ನೋಡಿದ್ದೆ. ಅಲ್ಲಿ ಒಂದಿಡೀ ದಿನ ಭ್ರಮೆಯಲ್ಲಿ ಒದ್ದಾಡಿದ ನೋವಿತ್ತು. ಮೊದಲ ತುತ್ತು tasty ಅನ್ನಿಸಿದಾಗ, ನೆನಪಾದದ್ದೆಂದರೆ ಅವಳಿಗೆ ಯಾವತ್ತೂ ಮೆಂತ್ಯ ಪಾಲಕ್ ಪುಲಾವ್ ಇಷ್ಟಾನೇ ಆಗ್ತಾ ಇರಲಿಲ್ವಲ್ಲ ಅನ್ನೋದು...

ಅನ್ನದ ಋಣ ಹೇಗೋ ಹಾಗೆ ಹೆಣ್ಣಿನ ಋಣವೂ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT