ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನೊಳಗಿನ ನಾನು

Last Updated 16 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಯಾವ ಗುರುವರ್ಯ, ಯಾವ ಕುರುಶ್ರೇಷ್ಠ,
ನನಗೆ ನಾನೇ ಸಮ, ಹಾಗೆಲ್ಲ
ತಲೆಬಾಗಿಸಿದವನಲ್ಲ ನಾನು.
ದ್ರೌಪದಿಯ ಸೆರಗೆಳೆಸಿ ತೊಡೆತಟ್ಟಿ
ಅಬ್ಬರಿಸಿದವನು ನಾನೆ.
ಗದೆಗಳು ಘಟ್ಟಣಿಸುತ್ತಿರುವಾಗ
ಭೀಮನೆದೆಗೆ ಆ ತೊಡೆಯೊಂದೆ
ಅಭೇದ್ಯವಾಗಿರಲಿಲ್ಲ.
ತೊಡೆಯಿದೆಯೆಂದು ಹಾಗೆಲ್ಲ
ತಟ್ಟಿಕೊಳ್ಳಬಾರದು.

ಎಷ್ಟು ಬಾರಿ ಕತ್ತರಿಸಿದರೂ
ಉತ್ತರವೆಂಬಂತೆ ಮತ್ತೆ ಮತ್ತೆ
ಬಂದು ಕೂರುವುದು ದಶಕಂಠನ
ತಲೆ..

ನಾಭಿಗೆ ಗುರಿಯಿಟ್ಟು
ಹೊಡೆಯಬೇಕು,
ಅವನ್ಯಾರೋ ನರಹರಿಯ
ಅವತಾರದವನು ಹೊಡೆದಂತೆ.
ನಾನು ನನ್ನನ್ನಾಳುತ್ತಿರುವವರೆಗೂ
ನಾನು ನಾನಲ್ಲ.

ಬೆಂಕಿಗೆ ಸುಡುವುದೆಂದರೇ ಸಡಗರ,ಚಿತಾಗಾರದಲ್ಲಿ ಎಲ್ಲಾ ಶವಕ್ಕೂ
ಒಂದೇ ದರ.
ನಾನು ನನ್ನೊಳಗಿರುವವರೆಗೂ
ನಾನು ನಾನಲ್ಲ.
ನಾನು ನಾನಾಗಿ ಬದುಕಲು
ನನ್ನೊಳಗಿನ ನಾನು
ಸಾಯಲೇಬೇಕು.
–ಶರತ್ ಪಿ.ಕೆ. ಹಾಸನ

****

ನಾನಾಡುವ ಮಾತು
ನನ್ನೊಡನೆ ನಾನಾಡುವ ಮಾತು
ಹಲವು ಅರ್ಥಗಳ ದಾಟಿ
ಹುಟ್ಟುವ ನೂರೊಂದನೇ ಕನಸು..
ಆದಿಯೆಂಬುದೆಲ್ಲೋ ಕಳೆದುಹೋದಂತೆ
ಅಂತ್ಯದ ಹುಡುಕಾಟದಲ್ಲಿ
ನಾನೇ ಸವೆದು ಹೋದಂತೆ...

ನನ್ನೊಡನೆ ನಾನಾಡುವ ಮಾತು
ನನ್ನೊಳಗನ್ನೇ ಚಿತ್ರಿಸಿದಂತೆ
ಕೊಳದಾಳದ ಮೀನು
ಸರಕ್ಕನೇ ಮೇಲೇರಿ
ತಿರು-ತಿರುಗಿ
ಕೊಳದಿರವ ಎಚ್ಚರಿಸಿದಂತೆ..

ನನ್ನೊಡನೆ ನಾನಾಡುವ ಮಾತು
ಸತ್ಯ-ಸುಳ್ಳುಗಳ ಗಲಗಲಿಸಿ
ಜರಡಿ ತೆಗೆದ ಸಾಲುಗಳಂತೆ..
ಪೊರೆಗಟ್ಟಿದ ಅಹಮಿಕೆಗೆ
ಪೆಟ್ಟು ನೀಡಿ
ಪೊಳ್ಳುತನವ ಗಟ್ಟಿಗೊಳಿಸಿದಂತೆ..

ನನ್ನೊಡನೆ ನನ್ನ ಮಾತು
ಕಸಿದ ನಿನ್ನೆಗಳು
ಹಸಿದ ನಾಳೆಗಳ ಮಧ್ಯೆ
ಬಸಿಯಬೇಕಿರುವ
ಹೊಟ್ಟೆ ತುಂಬಲು ಹವಣಿಸುವ ಸ್ವಗತದಂತೆ...
ನಾನು ನಾನಾಗಿಯೇ ಉಳಿವ ಅಪರಿಚಿತ ತಪನೆಯಂತೆ...
–ಅನನ್ಯ ತುಷಿರಾ ಕಿರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT