ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ವಾಸ್‍ ಮರೆಯ ಅಪೂರ್ವ ಪೇಂಟಿಂಗ್ ಎಂ.ಬಿ. ಪಾಟೀಲ

Last Updated 16 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಮಲ್ಲೇಶ್ವರದ ಹದಿನೇಳನೇ ತಿರುವಿನಲ್ಲೊಂದು ಪುಟ್ಟ ಮನೆ. ಅಟ್ಟವನ್ನು ಹೋಲುತ್ತಿದ್ದ ಕೋಣೆಯ ತುಂಬಾ ರಂಗುರಂಗಿನ ಕಲಾಕೃತಿಗಳು. ಜೀವತಳೆಯಲು ಹಾತೊರೆಯುವಂತೆ ಕಾಣಿಸುತ್ತಿದ್ದ ಆ ಕಲಾಕೃತಿಗಳ ನಡುವೆ ಜೀವಂತ ಪೇಂಟಿಂಗ್‍ನಂತೆ ಕುಳಿತಿರುತ್ತಿದ್ದ ಬೆಳ್ಳಿಕೂದಲಿನ ಹಿರಿಯ ಜೀವ. ಬಣ‍್ಣದ ಕಲೆಗಳು, ಚಹಾದ ಕಪ್ಪು, ಸಿಗರೇಟ್‍ನ ಬೂದಿ...

ಎಂ.ಬಿ. ಪಾಟೀಲ ಎನ್ನುವ ಹಿರಿಯ ಕಲಾವಿದ ಹಲವರ ನೆನಪುಗಳಲ್ಲಿರುವುದು ಹೀಗೆ. ಅವರು ವಾಸಿಸುತ್ತಿದ್ದ ಪುಟ್ಟ ಬಾಡಿಗೆ ಮನೆ ಅನೇಕರ ಪಾಲಿಗೆ ಧಾರವಾಡದ ‘ಮನೋಹರ ಗ್ರಂಥಮಾಲೆ’ಯ ಅಟ್ಟದ ಪ್ರತಿರೂಪ. ಲವಲವಿಕೆಯಿಂದ ಓಡಾಡಿಕೊಂಡು ಇರುವವರೆಗೂ ಪಾಟೀಲರು ವಾಸಿಸುತ್ತಿದ್ದುದು ಇದೇ ಮನೆಯಲ್ಲಿ. ನಾಡಿನ ವಿವಿಧ ಮೂಲೆಗಳಿಂದ ತಮ್ಮನ್ನು ಹುಡುಕಿಕೊಂಡು ಬರುತ್ತಿದ್ದ ಕಲಾವಿದರು, ವಿದ್ಯಾರ್ಥಿಗಳೊಂದಿಗೆ ಅವರು ಇದೇ ಕೋಣೆಯಲ್ಲಿ ಚರ್ಚೆ ನಡೆಸುತ್ತಿದ್ದರು. ದೊಡ್ಡ ಕಲಾವಿದನೊಬ್ಬ ತನ್ನ ಹಮ್ಮುಬಿಮ್ಮು ಬಿಟ್ಟು ಪುಟ್ಟ ಬಾಡಿಗೆ ಮನೆಯಲ್ಲಿ ಸರಳವಾಗಿ ಬದುಕುತ್ತಿದ್ದುದು ಕೂಡ ವಿದ್ಯಾರ್ಥಿಗಳ ಪಾಲಿಗೊಂದು ಪಾಠದಂತಿತ್ತು. ಇಂಥ ಪಾಟೀಲರು ಇತ್ತೀಚೆಗಷ್ಟೇ ದೇಹ ಹಣ್ಣಾಗಿ ಧಾರವಾಡ ಸೇರಿಕೊಂಡಿದ್ದರು. ಸಾವಿನ ಸುದ್ದಿ ಪ್ರಕಟವಾಗುವವರೆಗೂ (ನಿಧನ: ಸೆ. 12) ಅನೇಕರಿಗೆ ಅವರ ಸ್ಥಳಾಂತರದ ವಿಷಯವೇ ತಿಳಿದಿರಲಿಲ್ಲ.

ನಡೆ-ನುಡಿಯಲ್ಲಿ ಅವರು ಶುದ್ಧ ಹಳ್ಳಿಗರಾಗಿದ್ದರು. ನಗರದಲ್ಲಿದ್ದೂ ಅಲ್ಲಿನ ಪ್ರಭಾವಳಿಯಿಂದ ಅಂತರ ಕಾಪಾಡಿಕೊಂಡಿದ್ದರು. ಆ ಕಾರಣದಿಂದಲೇ ಅವರ ಕುಂಚದಿಂದ ಚಿತ್ತಾಪಹಾರಿ ತರುಣಿಯರ ಬದಲು, ‘ಒಡಲಾಳ’ದ ಸಾಕವ್ವನಂಥ ಹೆಣ್ಣುಗಳು ಜೀವತಳೆದರು. ಅಪಾರ ಜೀವನಪ್ರೀತಿಯುಳ್ಳ ಗ್ರಾಮೀಣ ಹೆಣ್ಣುಮಕ್ಕಳ ವ್ಯಕ್ತಿತ್ವದ ಗಟ್ಟಿತನ ಹಾಗೂ ಚೆಲುವಿಗೆ ಅವರು ಮಾರುಹೋಗಿದ್ದರು. ಅವರ ಕಲಾಕೃತಿಗಳಲ್ಲಿ ಬೌದ್ಧಿಕ ಬಳಸು ಕಾಣಿಸುವುದಿಲ್ಲ. ಆಡು ಕೋಳಿಗಳಿಗೂ ಕಾಡು ಹೂಗಳಿಗೂ ಅವರ ಕ್ಯಾನ್ವಾಸ್‍ನಲ್ಲಿ ಜಾಗವಿತ್ತು. ಹಳ್ಳಿಯ ಉತ್ಸವಗಳು, ಜನಪದ ನೃತ್ಯಗಳು, ಪ್ರಕೃತಿ - ಇವೆಲ್ಲವೂ ಅವರ ಕುಂಚಕ್ಕೆ ಕಸುವು ತುಂಬುವ ಸ್ಫೂರ್ತಿಸೆಲೆಗಳಾಗಿದ್ದವು.

ಪಾಟೀಲರು ಹುಟ್ಟದ್ದು ವಿಜಯಪುರ ಜಿಲ್ಲೆಯ ತಿಕೋಟಾ ಎನ್ನುವ ಗ್ರಾಮದಲ್ಲಿ (ಜ: ಡಿ. 10, 1939). ಅಪ್ಪನದು ಬಟ್ಟೆ ವ್ಯಾಪಾರ. ಅಜ್ಜ ಶಿಕ್ಷಕರಾಗಿದ್ದವರು. ಆದರೆ, ಪಾಟೀಲರ ತಂದೆಗೆ ಮಗ ಶಾಲೆಗೆ ಹೋಗುವುದು ಇಷ್ಟವಿರಲಿಲ್ಲ. ದೊಡ್ಡ ಮಕ್ಕಳಿಬ್ಬರೂ ಅಂಗಡಿ ನೋಡಿಕೊಳ್ಳಲಿ, ಚಿಕ್ಕವನು ಹೊಲದಲ್ಲಿ ದುಡಿಯಲಿ ಎನ್ನುವ ಲೆಕ್ಕಾಚಾರ ಅವರದು. ಎಮ್ಮೆ ಕಾಯುವವನಿಗೆ ಕೊಡುವ ದುಡ್ಡನ್ನು ಉಳಿಸಲಿಕ್ಕಾಗಿ, ಮಗನನ್ನು ಎಮ್ಮೆ ಕಾಯಲಿಕ್ಕೆ ಹಚ್ಚಿದ್ದರು. ಖರ್ಚಿಗೆ ಸಿಗುತ್ತಿದ್ದ ಎರಡಾಣೆ ಹುಡುಗನ ಬೀಡಿಗೆ, ತಿಂಡಿಗೆ ಸಾಕಾಗುತ್ತಿತ್ತು. ಕೊನೆಗೆ ಯಾರದೋ‌ ಮಧ್ಯಸ್ಥಿಕೆಯಿಂದ ಶಾಲೆ‌ಯ ಮೆಟ್ಟಿಲು ಹತ್ತುವ ವೇಳೆಗೆ ಅವರಿಗೆ ಒಂಬತ್ತು ವರ್ಷ.

ಶಾಲೆಗೆ ಹೋಗುವ ಮೊದಲೇ ಗೆಳೆಯನೊಬ್ಬನ ನೆರವಿನಿಂದ ಪಾಟೀಲರು ಅಕ್ಷರ ತಿದ್ದಿದ್ದರು. ನೆನಪಿನ ಶಕ್ತಿ ಚುರುಕಾಗಿತ್ತು. ಚಿತ್ರಕಲೆಯ ಹವ್ಯಾಸ ಹೊಂದಿದ್ದ ಶಿಕ್ಷಕರೊಬ್ಬರು ಗಮನಸೆಳೆದರು. ಹೈಸ್ಕೂಲ್‍ ವೇಳೆಗಾಗಲೇ ಚಿತ್ರಕಲೆಯ ಒಲವು ಗಾಢವಾಗಿತ್ತು. ಲೈಬ್ರರಿಯ ಪುಸ್ತಕಗಳಲ್ಲಿನ ಚಿತ್ರಗಳೊಂದಿಗೆ ಮಾತನಾಡಲಿಕ್ಕೆ ಶುರುಮಾಡಿದರು. ಈ ಸಖ್ಯವೇ ಅವರನ್ನು ಕುಂಚ ಹಿಡಿಯುವಂತೆ ಮಾಡಿತು. ಬಯಲಿನ ಪಾಠಶಾಲೆಯಲ್ಲಿ ಕಂಡ ಅಗಣಿತ ಚಿತ್ರಗಳು ಚಿತ್ತದಲ್ಲೂ ಚಿತ್ರದಲ್ಲೂ ಮೂಡತೊಡಗಿದವು.

ಪಾಟೀಲರ ಹಿರಿಯಣ್ಣನಿಗೆ ತಮ್ಮನ ಚಿತ್ರಗಾರಿಕೆಯ ಬಗ್ಗೆ ವಿಶೇಷ ಒಲವಿತ್ತು. ತಮ್ಮ ಬಿಡಿಸಿದ ಚಿತ್ರಗಳನ್ನು ನೋಡಿ ಅಣ್ಣ ಬೆನ್ನುತಟ್ಟುತ್ತಿದ್ದ. ಈ ಪ್ರಶಂಸೆಯೇ ಚಿತ್ರಕಲೆಯ ಉನ್ನತ ವ್ಯಾಸಂಗಕ್ಕಾಗಿ ಅವರನ್ನು ಬಾಂಬೆಗೆ ಹೋಗುವಂತೆ ಪ್ರೇರೇಪಿಸಿತು. ಪಾಟೀಲರ ಅಣ್ಣನ ಗೆಳೆಯರ ಬಳಗವೇನೂ ಸಾಮಾನ್ಯದ್ದಲ್ಲ. ತಿ.ತಾ. ಶರ್ಮ, ರಂ.ಶ್ರೀ. ಮುಗಳಿ, ಸಿಂಪಿ ಲಿಂಗಣ್ಣರಂಥ ಘಟಾನುಘಟಿಗಳ ಬಳಗವದು. ವಸಂತ ಕಾಲದಲ್ಲಿ ಈ ಗೆಳೆಯರ ಗುಂಪು ತರುತ್ತಿದ್ದ ಕೈಬರಹದ ಮ್ಯಾಗಜಿನ್‍ಗೆ ಪಾಟೀಲರು ಮುಖಪುಟ ಬಿಡಿಸುತ್ತಿದ್ದರು. ಈ ಗೆಳೆಯರೇ ಚಿತ್ರಕಲೆಯ ಉನ್ನತ ವ್ಯಾಸಂಗಕ್ಕಾಗಿ ಪಾಟೀಲರನ್ನು ಮೆಟ್ರಿಕ್‍ ನಂತರ ಬಾಂಬೆಗೆ ಕಳುಹಿಸುವಂತೆ ಒತ್ತಾಯಿಸಿದರು. ‘ಜೆ.ಜೆ. ಸ್ಕೂಲ್’ ಸೇರುವ ಆಸೆಯಿಂದ ಬಾಂಬೆಗೆ ಬಂದ ಪಾಟೀಲರಿಗೆ ನಿರಾಸೆ ಎದುರಾಯಿತು. ಅಲ್ಲಿನ ಪ್ರವೇಶದ ಸಮಯ ಮುಗಿದಿತ್ತು. ಕೊನೆಗೆ, ಜಿ.ಎಸ್‍. ದಂಡಾವತಿ ಮಠ್‍ ಎನ್ನುವ ಕಲಾವಿದರು ಪ್ರಾಂಶುಪಾಲರಾಗಿದ್ದ ‘ನೂತನ್‍ ಕಲಾಶಾಲೆ’ಗೆ ಸೇರಿಕೊಂಡರು. ಎಸ್.ಎನ್. ಪಂಡಿತ್ ಹಾಗೂ ಕೆ.ಕೆ. ಹೆಬ್ಬಾರರು ಇದೇ ಶಾಲೆಯಲ್ಲಿ ಕಲಿತಿದ್ದರಂತೆ. ಹಾಗಾಗಿ ಕನ್ನಡ ಚಿತ್ರಕಲೆಯ ಪರಂಪರೆಯೊಂದು ಪಾಟೀಲರಿಗೆ ತಂತಾನೇ ತಳಕು ಹಾಕಿಕೊಂಡಿತು.

ಕಲಾಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಪಾಟೀಲರು ಅವಿಶ್ರಾಂತರಾಗಿ ಚಿತ್ರಗಳನ್ನು ಬಿಡಿಸುತ್ತಿದ್ದರಂತೆ. ಎಷ್ಟೋ ವೇಳೆ ಅವರಿಗೆ ಕಾಗದದ ಕೊರತೆ ಎದುರಾಗುತ್ತಿತ್ತು. ಕಲೆಯ ಹಸಿವಿನ ಜೊತೆಗೆ ಹೊಟ್ಟೆಯ ಹಸಿವನ್ನೂ ಅನುಭವಿಸಬೇಕಾಯಿತು. ಚಿತ್ರಕಲೆಯಲ್ಲಿ ಡಿಪ್ಲೊಮ ಪಡೆದ ನಂತರ ತವರಿಗೆ ಬಂದವರು ಹುಬ್ಬಳ್ಳಿಯಲ್ಲಿ ನೆಲೆಸಿದರು; ಅಲ್ಲೊಂದು ಸ್ಟುಡಿಯೊದಲ್ಲಿ ಕೆಲಸಕ್ಕೆ ಸೇರಿಕೊಂಡರು. ಅಂತಿಮವಾಗಿ ಅವರು ನೆಲೆನಿಂತದ್ದು ವಾರ್ತಾ ಇಲಾಖೆಯಲ್ಲಿ.

ಮೊದಲ ತಿಂಗಳ ಸಂಬಳ ಕೈಸೇರುವ ಮೊದಲೇ ಅಂಚೆಯಲ್ಲಿ ಲಗ್ನಪತ್ರಿಕೆ ಅವರ ಕೈಸೇರಿತು. ಅದರಲ್ಲಿ ಗಂಡಿನ ಹೆಸರಿನ ಜಾಗದಲ್ಲಿ ಇವರ ಹೆಸರೇ ಇತ್ತು. ಮಗನ ಪರವಾಗಿ ಅಪ್ಪನೇ ಮದುವೆ ಗೊತ್ತುಪಡಿಸಿದ್ದರು! ಕುಟುಂಬದ ಮರ್ಯಾದೆಗೆ ಕಟ್ಟುಬಿದ್ದರು. ಬಟ್ಟೆ ಹೊಲಿಸಿಕೊಳ್ಳಲು ಊರಿನಿಂದ ಐನೂರು ರೂಪಾಯಿ ಬಂದಿತ್ತು. ಉಡುಗೊರೆ ರೂಪದಲ್ಲಿ ದರ್ಜಿ ಉಚಿತವಾಗಿ ಬಟ್ಟೆ ಹೊಲಿದುಕೊಟ್ಟನಂತೆ.

ಗಣರಾಜ್ಯೋತ್ಸವ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆಯುವ ಪಥಸಂಚಲನದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸ್ತಬ್ಧಚಿತ್ರಗಳನ್ನು ಒಂಬತ್ತು ಸಲ ವಿನ್ಯಾಸ ಮಾಡಿದ ಹೆಮ್ಮೆ ಪಾಟೀಲರದು. ಅವರ ವಿನ್ಯಾಸದ ಸ್ತಬ್ಧಚಿತ್ರಗಳು ಎರಡು ಸಲ ಪ್ರಥಮ ಹಾಗೂ ಮೂರು ಬಾರಿ ದ್ವಿತೀಯ ಬಹುಮಾನ ಪಡೆದಿರುವುದು ವಿಶೇಷ. ರಾಜ್ಯೋತ್ಸವ ಪ್ರಶಸ್ತಿ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಅವರ ಕಲಾಸಾಧನೆಗೆ ಸಂದಿವೆ.

ಮಕ್ಕಳಿಗೆಲ್ಲ ಅವರದೇ ಆದ ಬದುಕು ಕಟ್ಟಿಕೊಟ್ಟಿದ್ದ ಪಾಟೀಲರು, ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ಒಂಟಿಯಾಗಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಹೆಸರಿಗಷ್ಟೇ ವಿಶ್ರಾಂತಿ. ಓಡಾಟ, ಪಾಠ, ಚರ್ಚೆ, ಚಿತ್ರರಚನೆ ನಿರಂತರವಾಗಿ ನಡೆದಿದ್ದವು. ಸಾಹಿತ್ಯ ಪರಿಚಾರಿಕೆ ನಮ್ಮಲ್ಲಿನ ಜನಪ್ರಿಯ ಪರಿಕಲ್ಪನೆ. ಪಾಟೀಲರದು ಚಿತ್ರಕಲೆಯ ಪರಿಚಾರಿಕೆ. ಅವರ ಶಿಷ್ಯಂದಿರ ಬಳಗ ನಾಡಿನುದ್ದಕ್ಕೂ ರಸಬಳ್ಳಿಯಂತೆ, ಪಾಟೀಲರ ವಿಜಿಟಿಂಗ್‍ ಕಾರ್ಡ್‍ಗಳಂತೆ ಹಬ್ಬಿಕೊಂಡಿದೆ. ‘ನಾನು ಹಣ ಸಂಪಾದಿಸಲಿಲ್ಲ. ಗೆಳೆಯರು ಮತ್ತು ಶಿಷ್ಯವೃಂದವನ್ನು ಗಳಿಸಿದೆ. ನನ್ನನ್ನು ಹುಡುಕಿಕೊಂಡು ಬರುವ ಶಿಷ್ಯರು ನನ್ನ ಅಗತ್ಯಗಳ ಬಗ್ಗೆ ವಿಚಾರಿಸಿದಾಗ ನಾನು ಒಂಟಿ ಅಲ್ಲ ಎನ್ನಿಸುತ್ತದೆ’ ಎಂದೊಮ್ಮೆ ಅವರು ಹೇಳಿದ್ದರು.

ಪಾಟೀಲರಿಗೂ ಕಂಪ್ಯೂಟರ್‍ಗೂ ಅಷ್ಟೇನೂ ಆಗಿಬರುತ್ತಿರಲಿಲ್ಲ. ಕುಂಚ-ಕಾಗದದ ಸಖ್ಯವೇ ಅವರಿಗೆ ಪ್ರಿಯವಾಗಿತ್ತು. ಕುಂಚದಲ್ಲಿ ಅಪ್ರಜ್ಞಾಪೂರ್ವಕವಾಗಿ ಮೂಡುತ್ತಿದ್ದ ರೇಖೆಗಳ ಬಾಗು-ಬಳುಕಿನ ಜಾದೂ ಅವರಿಗೆ ಖುಷಿಕೊಡುತ್ತಿತ್ತು. ಇತ್ತೀಚಿನ ಕಲಾವಿದರ ಕೈಯಲ್ಲಿ ಸ್ಕೆಚ್‍ಬುಕ್‍ ಬದಲಿಗೆ ಮೊಬೈಲ್‍ ಫೋನ್‍ ಇರುವುದನ್ನು ಕಂಡಾಗ ಅವರಿಗೆ ಇರುಸುಮುರುಸಾಗುತ್ತಿತ್ತು.

ಹಿರಿಯ ಕಲಾವಿದರನ್ನು ಭೇಟಿಯಾಗಿ, ಅವರೊಂದಿಗೆ ಚರ್ಚಿಸಿ. ಅವರ ಕಲಾಕೃತಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ - ಇದು ಪಾಟೀಲರು ತಮ್ಮ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದ ಕಿವಿಮಾತು. ಊರು ಸುತ್ತುವುದು, ಜನರೊಂದಿಗೆ ಬೆರೆಯುವುದು ಅವರ ಬದುಕಿನಿಂದ ಕಲಿಯಬೇಕಾದ ಪಾಠ. ಪಾಟೀಲರ ಬದುಕು ಮತ್ತು ಕಲಾಕೃತಿಗಳ ಒಟ್ಟಾರೆ ಸಾರ ಇಷ್ಟೇ - ಕಲಾವಿದನಾಗುವುದೆಂದರೆ ಹೆಚ್ಚು ಹೆಚ್ಚು‌ ಮಾನವೀಯವಾಗುವುದು. ಇದು ಎಲ್ಲ ಕಲೆಗಳ ಆಶಯವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT