ಬುಲೆಟ್‌ ರೈಲು ಮತ್ತು ‘ಹೋಮಿಯೊಪಥಿ’ ಚಿಂತನೆ

ದೈಹಿಕ ಕಾಯಿಲೆ ಗುಣಪಡಿಸದಿದ್ದರೂ, ರೋಗಿಗಳಲ್ಲಿ ಕಾಯಿಲೆ ವಾಸಿಯಾದ ಭಾವನೆ ಮೂಡಿಸುವಲ್ಲಿ ಸಫಲವಾಗುವ ಹೋಮಿಯೊಪಥಿ ಚಿಕಿತ್ಸಾ ಪದ್ಧತಿಯ ಚಿಂತನಾ ಕ್ರಮವನ್ನು ನಮ್ಮಲ್ಲಿ ಮೂಲ ಸೌಕರ್ಯ ಯೋಜನೆಗಳಿಗೂ ಅನ್ವಯಿಸಬಹುದು. ‘ಹೋಮಿಯೊಪಥಿ ಚಿಕಿತ್ಸಾ ವಿಧಾನ’ದ ಮನಸ್ಥಿತಿ ಹೊಂದಿರುವ ದೇಶದಲ್ಲಿ ಇಂತಹ ವಿಚಾರಧಾರೆಯು ಇತರ ಕ್ಷೇತ್ರಗಳ ಮೇಲೆಯೂ ತನ್ನ ಪ್ರಭಾವ ಬೀರಿದೆ.  

ಇತರ ಚಿಕಿತ್ಸಾ ಪದ್ಧತಿಗಳಿಗೆ ಹೋಲಿಸಿದರೆ ಹೋಮಿಯೊಪಥಿಯು ಆಧುನಿಕ ವೈದ್ಯ ಪದ್ಧತಿಯಾಗಿದೆ. 1796ರಲ್ಲಿ ಜರ್ಮನಿಯಲ್ಲಿ ಮೊದಲ ಬಾರಿಗೆ ಈ ಪದ್ಧತಿಯು ಬಳಕೆಗೆ ಬಂದಿತ್ತು. ಸ್ಯಾಮುಯೆಲ್‌ ಹಾನಿಮನ್ ಅವರು ಈ ವೈದ್ಯ ಪದ್ಧತಿಯ ಜನಕ. ಅಲ್ಲಿಂದಾಚೆಗೆ ಈ ಚಿಕಿತ್ಸಾ ವಿಧಾನವನ್ನು ಪ್ರಶ್ನಿಸಿದ, ಶ್ಲಾಘಿಸಿದ, ಇನ್ನಷ್ಟು ಸಂಶೋಧನೆ ನಡೆಸಿದ ಮತ್ತು ಈ ಚಿಕಿತ್ಸಾ ಸ್ವರೂಪವನ್ನೇ ತಿರಸ್ಕರಿಸಿದ ಹಲವಾರು ವಿದ್ಯಮಾನಗಳು ಅನೇಕ ಅಭಿವೃದ್ಧಿಶೀಲ ದೇಶಗಳಲ್ಲಿ ನಡೆದಿವೆ. ಯಾವುದೇ ವೈಜ್ಞಾನಿಕ ಆಧಾರ ಇಲ್ಲದಿದ್ದರೂ, ಇದನ್ನು ಖೊಟ್ಟಿ ವಿಜ್ಞಾನ ಎಂದೂ ತಿರಸ್ಕರಿಸಲಾಗಿದೆ. ಹಲವು ಕಾಯಿಲೆಗಳ ಸಂದರ್ಭಗಳಲ್ಲಿ ಇದು ಪರಿಣಾಮಕಾರಿಯಾದ ಚಿಕಿತ್ಸಾ ವಿಧಾನವಾಗಿರುವ ಬಗ್ಗೆ ಅನೇಕ ನಿದರ್ಶನಗಳು ಇದ್ದರೂ, ಅದರ ಕಾರಣಗಳು ಮಾತ್ರ ಬೇರೆಯೇ ಇವೆ. ಮಾತ್ರೆಗಳು ರೋಗಿಯ ದೇಹದ ಮೇಲೆ ಪ್ರಭಾವ ಬೀರುವ ಬದಲಿಗೆ, ಆತನ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದರಿಂದ ಕಾಯಿಲೆ ಗುಣವಾಯಿತು ಎನ್ನುವ ಭಾವನೆ ಮೂಡಿಸುತ್ತದೆ. ಇದರಿಂದ ರೋಗಿಯು ಮಾನಸಿಕವಾಗಿ ಚೇತರಿಸಿಕೊಳ್ಳುತ್ತಾನೆ ಅಥವಾ ಕಾಯಿಲೆಯ ತೀವ್ರತೆಯು ನೈಸರ್ಗಿಕವಾಗಿಯೇ ಕಡಿಮೆಯಾಗುತ್ತದೆ.

ಈ ಚಿಕಿತ್ಸಾ ವಿಧಾನವು ಗೊಂದಲಕಾರಿಯಾಗಿರುವುದು ಮತ್ತು ಅಸಂಬದ್ಧ ಎನ್ನುವುದು ಸಾಬೀತಾಗಿದ್ದರೂ, ಇದರಲ್ಲಿ ಅಪಾರ ನಂಬಿಕೆ ಇರಿಸಿರುವವರು ವಿಶ್ವದಾದ್ಯಂತ ಕಂಡು ಬರುತ್ತಾರೆ. ಇವರೆಲ್ಲ ಹೋಮಿಯೊಪಥಿ ಔಷಧಿಗಳನ್ನು ಸೇವಿಸಲು, ಖರೀದಿಸಲು ಪ್ರತಿ ವರ್ಷ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ.

ಭಾರತದಲ್ಲಿ ಈ ಚಿಕಿತ್ಸಾ ವಿಧಾನವು ಈಗಲೂ ಸಾಕಷ್ಟು ಜನಪ್ರಿಯವಾಗಿದೆ. ನಮ್ಮಲ್ಲಿ ಸಣ್ಣ ಪಟ್ಟಣಗಳಿಂದ ಹಿಡಿದು ದೊಡ್ಡ ನಗರಗಳಲ್ಲಿ ಹೋಮಿಯೊಪಥಿ ವೈದ್ಯರಿದ್ದಾರೆ. ತವರು ನಾಡಿನಲ್ಲಿಯೇ (ಜರ್ಮನಿ) ಈ ವೈದ್ಯ ಪದ್ಧತಿ ಅವಸಾನ ಕಂಡಿದ್ದರೂ, ದೂರದ ಭಾರತದಲ್ಲಿ ಮಾತ್ರ ಈಗಲೂ ಜನರ ಮನ್ನಣೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ, ಕೇಂದ್ರ ಸರ್ಕಾರದಿಂದ ಹಣಕಾಸು ನೆರವನ್ನೂ ಪಡೆಯುತ್ತಿರುವುದು ಇದರ ಇನ್ನೊಂದು ಹೆಗ್ಗಳಿಕೆಯಾಗಿದೆ.

ಆಯುಷ್‌ ಸಚಿವಾಲಯದ ‘ಎಚ್‌’ ಅಕ್ಷರ ಹೋಮಿಯೊಪಥಿಯನ್ನು ಪ್ರತಿನಿಧಿಸುತ್ತದೆ. AYUSH ಎಂದರೆ ಆಯುರ್ವೇದ, ಯೋಗ ಮತ್ತು ನ್ಯಾಚುರೊಪಥಿ, ಯುನಾನಿ, ಸಿದ್ಧ ಮತ್ತು ಹೋಮಿಯೊಪಥಿ ಎಂದರ್ಥ.

ನಿಮ್ಮ ಪರಿಚಯದ ಪ್ರತಿಯೊಬ್ಬ ಮಧ್ಯವಯಸ್ಕ ವ್ಯಕ್ತಿಯೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಮತ್ತು ಆತ ಹೋಮಿಯೊಪಥಿ ಚಿಕಿತ್ಸೆ ಪಡೆಯುತ್ತಿರುತ್ತಾನೆ. ಇದೊಂದು ಅಂಗೀಕೃತ ಚಿಕಿತ್ಸಾ ವಿಧಾನ ಎಂದೂ ಅಧಿಕೃತವಾಗಿ ಘೋಷಿಸಲಾಗಿದೆ. ದೇಶದಲ್ಲಿ ಈ ವೈದ್ಯ ಪದ್ಧತಿಯನ್ನು ಟೀಕಿಸುವುದೂ ಅಪಾಯಕಾರಿಯಾಗಿದೆ. ನನ್ನ ಲೇಖನ ಓದುತ್ತಲೇ ಅನೇಕರು ನನ್ನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೂ ಮುಂದಾಗಬಹುದು.

ಭಾರತೀಯರು ಹೋಮಿಯೊಪಥಿಯನ್ನು ಗೌರವಿಸುವುದಲ್ಲದೇ ಅದರ ಬಗ್ಗೆ ಅಪಾರವಾದ ವಿಶ್ವಾಸವನ್ನೂ ಹೊಂದಿರುವುದಕ್ಕೆ ಕಾರಣಗಳಿವೆ, ವೈಯಕ್ತಿಕ ಆರೋಗ್ಯದ ಬಗ್ಗೆ ಅನುಮಾನ ಬರುತ್ತಿದ್ದಂತೆ ಅನೇಕರು ಹೋಮಿಯೊಪಥಿಯಲ್ಲಿ ನೀಡಲಾಗುವ ಸಿಹಿಯಾದ ಗುಳಿಗೆಗಳನ್ನು ಬಾಯಲ್ಲಿ ಹಾಕಿಕೊಂಡು ಚೀಪಲು ಆರಂಭಿಸುತ್ತಾರೆ. ದೀರ್ಘ ಸಮಯದವರೆಗೆ ಇಂತಹ ಮಾತ್ರೆಗಳನ್ನು ಸೇವನೆ ಮಾಡಬೇಕಾಗುತ್ತದೆ. ಕೆಲ ತಿಂಗಳವರೆಗೂ ಚಿಕಿತ್ಸೆ ಮುಂದುವರೆಸಬೇಕಾಗುತ್ತದೆ. ಒಂದು ಹಂತದಲ್ಲಿ, ಔಷಧಿಯು ಯಾವುದೇ ಪರಿಣಾಮ ಬೀರುತ್ತಿಲ್ಲ ಎಂಬ ಭಾವನೆಯೂ ರೋಗಿಯಲ್ಲಿ ಮೂಡುತ್ತದೆ. ಆದರೆ, ಕಾಲ ಗತಿಸಿದಂತೆ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ಅನಿಸಲಾರಂಭಿಸುತ್ತದೆ. ಕೆಲ ದಿನಗಳ ನಂತರ ತಮ್ಮ ಕಾಯಿಲೆ ಗುಣಮವಾಯಿತು ಎಂದೂ ಅವರು ನಿರ್ಣಯಕ್ಕೆ ಬರುತ್ತಾರೆ. ಈ ಚಿಕಿತ್ಸೆಯಲ್ಲಿ ಅಡ್ಡ ಪರಿಣಾಮಗಳು ಇಲ್ಲದಿರುವುದು ಎಲ್ಲಕ್ಕಿಂತ ಹೆಚ್ಚಿನ ಮಹತ್ವದ ಸಂಗತಿಯಾಗಿದೆ.

ಹೋಮಿಯೊಪಥಿಯಲ್ಲಿ ನಂಬಿಕೆ ಇರಿಸಿರುವ ನಮ್ಮ ಸಂಬಂಧಿಗಳು ತಮ್ಮ ಅಚ್ಚುಮೆಚ್ಚಿನ ಗುಳಿಗೆ ಬಗ್ಗೆ ನಂಬಿಕೆ ಉಳಿಸಿಕೊಂಡೇ ಅವುಗಳನ್ನು ಸೇವಿಸುವುದನ್ನು ಬಿಟ್ಟುಕೊಟ್ಟಿರುತ್ತಾರೆ. ಅದೆಲ್ಲ ಏನೇ ಇರಲಿ, ಆಧುನಿಕ ವೈದ್ಯ ಪದ್ಧತಿ ಮತ್ತು ಚಿಕಿತ್ಸಾ ವಿಧಾನಗಳ ಅಡ್ಡ ಪರಿಣಾಮಗಳು ಮತ್ತು ಅದು ನಮ್ಮ ದೇಹಕ್ಕೆ ಮಾಡುವ ಹಾನಿ ಬಗ್ಗೆ ನಮಗೆಲ್ಲ ಹೆದರಿಕೆ ಇದೆ. ವೈದ್ಯರು ಶಸ್ತ್ರಚಿಕಿತ್ಸೆ ಬಗ್ಗೆ ಮಾತನಾಡಿದರೆ ಪ್ರತಿಯೊಬ್ಬರೂ ದಿಗಿಲುಪಡುತ್ತೇವೆ.

‘ಹೋಮಿಯೊಪಥಿ ಚಿಕಿತ್ಸಾ ವಿಧಾನ’ದ ಮನಸ್ಥಿತಿ ಹೊಂದಿರುವ ದೇಶದಲ್ಲಿ ಇಂತಹ ವಿಚಾರಧಾರೆಯು ಇತರ ಕ್ಷೇತ್ರಗಳ ಮೇಲೆಯೂ ತನ್ನ ಪ್ರಭಾವ ಬೀರಿದೆ. ವಿಶೇಷವಾಗಿ ಆಡಳಿತಾತ್ಮಕ ವಿಷಯ ಮತ್ತು ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಮೂಲಸೌಕರ್ಯಗಳ ನಿರ್ಮಾಣ ವಿಷಯದಲ್ಲಿಯೂ ಇದರ ದಟ್ಟ ಪ್ರಭಾವ ಕಂಡು ಬರುತ್ತಿದೆ.

ನೀವು ಯಾವುದೇ ಒಂದು ಯೋಜನೆ ಬಗ್ಗೆ ಪ್ರಕಟಿಸುತ್ತಿದ್ದಂತೆ ಆ ಕುರಿತು ಅಸಂಖ್ಯ ಜನರು ವಿಭಿನ್ನ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾರೆ. ಮುಂಬೈ ಮತ್ತು ಅಹಮದಾಬಾದ್ ಮಧ್ಯೆ ಕಾರ್ಯಗತಗೊಳ್ಳಲಿರುವ ಬುಲೆಟ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಶಂಕುಸ್ಥಾಪನೆ ನೆರವೇರಿಸಿದ್ದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ‘ಇದೊಂದು ಷಹಜಹಾನ್ ಕಟ್ಟಿಸಿದ ತಾಜ್ ಮಹಲ್ ಇದ್ದಂತೆ’ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಪ್ರತಿಕ್ರಿಯಿಸಿದ್ದಾರೆ. ‘ಭಾರತದ ಆರ್ಥಿಕತೆ ಪತನದ ಹಾದಿಯಲ್ಲಿ ಸಾಗಿದರೂ, ಬರಗಾಲ ಮತ್ತು ಹಸಿವಿನ ಸಮಸ್ಯೆಗಳ ಹೊರತಾಗಿಯೂ ಬುಲೆಟ್ ರೈಲು ಓಡಲಿದೆ’ ಎಂದು ಅವರು ಟೀಕಿಸಿದ್ದಾರೆ.

ಇದೇ ಅರ್ಥದ ಟೀಕೆಗಳು ಎಲ್ಲೆಡೆಯಿಂದ ಕೇಳಿ ಬರುತ್ತವೆ. ಇಂತಹ ಭಾರಿ ವೆಚ್ಚದ ಯೋಜನೆಯ ಹೊರೆಯನ್ನು ದೇಶವು ಸಮರ್ಥವಾಗಿ ನಿಭಾಯಿಸಬಲ್ಲದೇ, ಯೋಜನೆ ಸುಸ್ಥಿರವಾಗಿ ಇರಲಿದೆಯೇ ಮತ್ತು ಆರ್ಥಿಕವಾಗಿ ಲಾಭದಾಯಕವಾಗಿ ಇರಲಿದೆಯೇ ಎನ್ನುವುದರ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಲಾಗುತ್ತಿದೆ. ದೇಶದಲ್ಲಿ ಈಗಲೂ 17 ಸಾವಿರದಷ್ಟು ಕಾವಲುಗಾರರಹಿತ ಲೆವೆಲ್ ಕ್ರಾಸಿಂಗ್‌ಗಳು ಇರುವಾಗ ಮತ್ತು ನಿಯಮಿತವಾಗಿ ರೈಲುಗಳು ಹಳಿ ತಪ್ಪುತ್ತಿರುವಾಗ ಬುಲೆಟ್ ರೈಲಿನಂತಹ ಆಟಿಕೆಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುವುದೇ ಎಂದು ಸಂದೇಹ ವ್ಯಕ್ತಪಡಿಸಲಾಗುತ್ತಿದೆ.

ದೇಶದಲ್ಲಿ 1971ರಿಂದ ಗರಿಷ್ಠ ವೇಗದಲ್ಲಿ ಸಂಚರಿಸುತ್ತಿರುವ ಕೆಲ ರೈಲುಗಳ ವೇಗ ಈಗಲೂ ಕಿಂಚಿತ್ತೂ ಹೆಚ್ಚಳಗೊಂಡಿಲ್ಲ ಎಂದೂ ಇದೇ ಜನರು ಟೀಕಿಸುತ್ತಾರೆ ಎನ್ನುವುದನ್ನು ನೀವು ಗಂಭೀರವಾಗಿ ಪರಿಗಣಿಸಬೇಡಿ. ಹೀಗೆ ಟೀಕಿಸುವವರೆಲ್ಲ ಯಾವತ್ತೂ ರೈಲುಗಳಲ್ಲಿ ಪ್ರಯಾಣಿಸಿದವರಲ್ಲ. ಇವರೆಲ್ಲ ತಮ್ಮೆಲ್ಲ ಸುತ್ತಾಟಕ್ಕೆ ವಿಮಾನಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುತ್ತಾರೆ ಎನ್ನುವುದರ ಬಗ್ಗೆಯೂ ನೀವು ತಲೆಕೆಡಿಸಿಕೊಳ್ಳಲು ಹೋಗಬೇಡಿ.

ಬುಲೆಟ್ ರೈಲು ಕಾರ್ಯಾರಂಭ ಮಾಡಿದಾಗ ಅದರ ಪ್ರಯಾಣ ದರ ಕಡಿಮೆ ಮಟ್ಟದಲ್ಲಿ ಇರುವುದಿಲ್ಲ. ವಿಮಾನ ಪ್ರಯಾಣ ದರ ಈಗಿರುವ ಮಟ್ಟದಲ್ಲಿಯೇ ಇರಲಿದೆ ಎಂದೂ ಟೀಕಾಕಾರರು ಭಾವಿಸಿರುತ್ತಾರೆ. ಆದರೆ, ಬುಲೆಟ್‌ ರೈಲು ಹಾದು ಹೋಗುವ ಮಾರ್ಗದ ಉದ್ದಕ್ಕೂ ನಗರೀಕರಣ ಪ್ರಕ್ರಿಯೆ ತೀವ್ರಗೊಳ್ಳಲಿದೆ. ಜತೆಗೆ, ಭೂಮಿ ದರ ದುಬಾರಿಗೊಳ್ಳಲಿದೆ.

ಒಂದು ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲವು ಹೆಚ್ಚು ಕಡಿಮೆ ಬಡ್ಡಿ ದರ ಮುಕ್ತ ರೀತಿಯಲ್ಲಿ ದೊರೆಯುತ್ತಿರುವುದು ಮತ್ತು 50 ವರ್ಷಗಳ ಕಾಲ ಈ ಯೋಜನೆ ನಿರ್ವಹಣೆಯ ಕಾರಣಕ್ಕೆ ನಮ್ಮ ಭವಿಷ್ಯ ಅಂಧಕಾರಗೊಳ್ಳಲಿದೆ. ನಮ್ಮ ಕೋಟ್ಯಂತರ ಬಡಪಾಯಿ ಪ್ರಯಾಣಿಕರು ಇದರ ಹೊರೆ ಹೊರಬೇಕಾಗಿ ಬರುವುದರಿಂದ ಇದೊಂದು ನೈತಿಕವಾಗಿಯೂ ಅಪಾಯಕಾರಿಯಾಗಿ ಪರಿಣಮಿಸಲಿದೆ. ದೊಡ್ಡ ಅಣೆಕಟ್ಟೆಗಳ ನಿರ್ಮಾಣ ಮತ್ತು ನದಿಗಳ ಜೋಡಣೆ ಯೋಜನೆಗಳು ಪರಿಸರದ ಸಮತೋಲನ ಕದಡುತ್ತವೆ ಎನ್ನುವ ಟೀಕೆಗಳು ಕೇಳಿ ಬರುತ್ತವೆ. ನಿತೀನ್‌ ಗಡ್ಕರಿ ಅವರು ತಮ್ಮ 38 ವಯಸ್ಸಿನಲ್ಲಿ ಮಹಾರಾಷ್ಟ್ರ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದಾಗ (1995–99ರಲ್ಲಿ) ಮುಂಬೈ – ಪುಣೆ ಎಕ್ಸ್‌ಪ್ರೆಸ್‌ ಮಾರ್ಗದ ನಿರ್ಮಾಣದ ಯೋಜನೆಯ ಕನಸು ಕಂಡಿದ್ದರು. ಅದರಿಂದ ಪರಿಸರಕ್ಕೆ ತೀವ್ರ ಹಾನಿ ಒದಗಲಿದೆ, ಅದೊಂದು ಆರ್ಥಿಕವಾಗಿ ಲಾಭದಾಯಕವಲ್ಲದ ಮತ್ತು ತಾಂತ್ರಿಕವಾಗಿ ಅಸಾಧ್ಯವಾದ ಯೋಜನೆ ಎಂದು ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಯೋಜನೆಯು ಈಗ ಭಾರಿ ಬದಲಾವಣೆಗೆ ಕಾರಣವಾಗಿರುವುದನ್ನು ಯಾರೊಬ್ಬರೂ ಅಲ್ಲಗಳೆಯುವಂತಿಲ್ಲ. ಇದೊಂದು ‘ನಿರ್ಮಿಸಿ, ನಿರ್ವಹಿಸಿ ಮತ್ತು ವರ್ಗಾಯಿಸಿ’ ತತ್ವದಡಿ ನಿರ್ಮಿಸಿದ ದೇಶದ ಮೊದಲ ಹೆದ್ದಾರಿ ಯೋಜನೆಯಾಗಿದೆ. ದೇಶದಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಹೆದ್ದಾರಿಗಳನ್ನು ನಿರ್ಮಾಣ ಮಾಡಲು ಇದು ಬಹುದೊಡ್ಡ ಪ್ರೇರಣೆ ನೀಡಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಈ ಯೋಜನೆಯ ಗುತ್ತಿಗೆದಾರರು ಭಾರಿ ಪ್ರಯೋಜನ ಪಡೆದುಕೊಂಡಿದ್ದಾರೆ ಎನ್ನುವ ಟೀಕೆಗಳು ವ್ಯಾಪಕವಾಗಿ ಕೇಳಿ ಬಂದಿವೆ. ಆದರೆ, ಅದರ ನಿಜವಾದ ಪ್ರಯೋಜನಗಳು ಎಲ್ಲೆಡೆ ಕಂಡು ಬಂದಿವೆ. ಇದರಿಂದ ಪುಣೆ ನಗರದ ಚಿತ್ರಣವು ಆಮೂಲಾಗ್ರವಾಗಿ ಬದಲಾಯಿತು. ಐ.ಟಿ, ಸಂಶೋಧನೆ, ಹೊಸ ಸಂಶೋಧನೆಗಳ ವಹಿವಾಟುಗಳ ನಗರವಾಗಿ ಗಮನ ಸೆಳೆದು ಅಗಾಧವಾಗಿ ಬೆಳೆಯಿತು. ದೇಶದ ಐ.ಟಿ ರಾಜಧಾನಿ ಖ್ಯಾತಿಯ ಬೆಂಗಳೂರಿಗೆ ಪರ್ಯಾಯವಾಗಿಯೂ ಬೆಳೆದು ನಿಂತಿತು. ಕೋಟ್ಯಂತರ ರೂಪಾಯಿಗಳ ಸಂಪತ್ತು ಸೃಷ್ಟಿಯಾಗಲೂ ಕಾರಣವಾಯಿತು.

ಭಾರತೀಯರು ವರ್ಷದಲ್ಲಿ 50 ಸಾವಿರಕ್ಕಿಂತ ಹೆಚ್ಚು ಕಾರುಗಳನ್ನು ಖರೀದಿಸುವುದಿಲ್ಲ, ಹಿಂದೂಸ್ತಾನ್‌ ಮೋಟಾರ್ಸ್‌ ಮತ್ತು ಪ್ರೀಮಿಯರ್‌ ಸಂಸ್ಥೆಗಳು ಇವನ್ನು ಒದಗಿಸುತ್ತಿವೆ ಎಂಬ ತೀರ್ಮಾನಕ್ಕೆ ಬಂದಿದ್ದ ಯೋಜನಾ ಆಯೋಗವು, ಮಾರುತಿ ಕಾರು ತಯಾರಿಕೆಯ ಯೋಜನೆಯನ್ನು ಹಲವು ವರ್ಷಗಳ ಕಾಲ ತಳ್ಳಿಹಾಕಿತ್ತು. ಇದು ಕಪೋಲಕಲ್ಪಿತ ವಿಚಾರವಲ್ಲ, ವಾಸ್ತವ ಘಟನೆ.  ಆದರೆ, ಅಂತಿಮವಾಗಿ ಮಾರುತಿ ಯೋಜನೆಗೆ ಸಮ್ಮತಿ ದೊರೆತಿತ್ತು. ಭಾರತವು ಈಗ ವಾಹನ ತಯಾರಿಕೆಯಲ್ಲಿ ಜಾಗತಿಕ ಶಕ್ತಿಯಾಗಿ ಬೆಳೆದುನಿಂತಿದೆ. 2016–17ನೆ ಹಣಕಾಸು ವರ್ಷದಲ್ಲಿ ದೇಶದಲ್ಲಿ 30 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟವಾಗಿವೆ. 7.5 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ರಫ್ತು ಮಾಡಲಾಗಿದೆ.

ಮಹಾನಗರಗಳಲ್ಲಿನ ವಿಮಾನ ನಿಲ್ದಾಣಗಳ ಖಾಸಗೀಕರಣ ಕುರಿತು ನಡೆಯುತ್ತಿರುವ ಚರ್ಚೆಯತ್ತ ನೀವೂ ಒಮ್ಮೆ ಗಮನ ಹರಿಸಿ. ಸರ್ಕಾರಿ ಆಸ್ತಿಗಳನ್ನು ಖಾಸಗೀಕರಣಗೊಳಿಸುವ, ಕಾರ್ಮಿಕ ಸಂಘಟನೆಗಳನ್ನು ಒಡೆಯುವ ಕುಮ್ಮಕ್ಕು ನಡೆಯುತ್ತಿದೆ ಎನ್ನುವ ಟೀಕೆಗಳ ಹೊರತಾಗಿಯೂ, ಈ ವಿಮಾನ ನಿಲ್ದಾಣಗಳನ್ನು ಮರು ನಿರ್ಮಾಣ ಮಾಡುವ ಮತ್ತು ಅವುಗಳ ಕಾರ್ಯಸಾಧ್ಯತೆ ಕುರಿತೂ ಚರ್ಚೆಗಳು ನಡೆಯುತ್ತಿವೆ.

ಸದ್ಯಕ್ಕೆ ಮುಂಬೈ, ದೆಹಲಿ ಮತ್ತು ಬೆಂಗಳೂರು ಮಹಾನಗರಗಳು ಜನಸಂಖ್ಯೆ ಹೆಚ್ಚಳದಿಂದ ಬಸವಳಿದಿವೆ. ಇನ್ನಷ್ಟು ವಿಸ್ತಾರವಾಗಿ ಬೆಳೆಯಲು ಹೆಣಗಾಡುತ್ತಿವೆ. ನಮ್ಮ ವಿಮಾನ ಯಾನ ರಂಗವು ಈ ಮಹಾನಗರಗಳ ನೆರವಿಲ್ಲದೇ ಉತ್ಕರ್ಷ ಕಾಣುವುದಿಲ್ಲ. ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಅಭಿವೃದ್ಧಿಪಡಿಸಿರುವ ಪಂಚತಾರಾ ಹೋಟೆಲ್‌ಗಳ ಏರೊಸಿಟಿ ಬಿಳಿಯಾನೆಯಾಗಿದೆ ಎಂದೇ ಆರಂಭದಲ್ಲಿ ನಿರ್ಲಕ್ಷಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಇಲ್ಲಿ ಗಮನಾರ್ಹ ಪ್ರಮಾಣದಲ್ಲಿ ವಾಣಿಜ್ಯ ಚಟುವಟಿಕೆಗಳು ಕಂಡು ಬರುತ್ತಿವೆ.

ಮುಂಬೈನಲ್ಲಿ ಸಮುದ್ರದ ಮೂಲಕ ಬಾಂದ್ರಾ– ವರ್ಲಿ ನಡುವೆ ಸಂಪರ್ಕ ಕಲ್ಪಿಸುವ ಯೋಜನೆಯ ಮೂರನೇ ಒಂದರಷ್ಟು ಕಾಮಗಾರಿ ಪೂರ್ಣಗೊಂಡಾಗ ಅನೇಕ ಕಾರಣಗಳಿಗೆ ಅರ್ಧದಲ್ಲಿಯೇ ನಿಲ್ಲಿಸಲಾಗಿತ್ತು. ದೆಹಲಿಯಲ್ಲಿ ಪೂರ್ವ – ಪಶ್ಚಿಮ ಬಾರಾಪುಲ್ಲಾ ಕಾರಿಡಾರ್‌ ಯೋಜನೆಯನ್ನೂ ಹಠಾತ್ತಾಗಿ ಸ್ಥಗಿತಗೊಳಿಸಲಾಗಿತ್ತು. ಏಳು ವರ್ಷಗಳ ನಂತರ ಈಗ ಪುನಃ ಕಾಮಗಾರಿಗೆ ಚಾಲನೆ ನೀಡಲಾಗಿದೆ. ದೆಹಲಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎಂಟು ಮಾರ್ಗಗಳ ಹೆದ್ದಾರಿ ಯೋಜನೆಯು ವಾಹನ ಸವಾರರಿಗೆ ಭಾರಿ ಕಂಟಕವಾಗಿ ಪರಿಣಮಿಸಿತ್ತು. ಕೆಲ ವರ್ಷಗಳ ನಂತರ ಅದನ್ನು ಪುನರ್‌ ನಿರ್ಮಾಣ ಮಾಡಿ ವಿಸ್ತರಿಸಲಾಗಿತ್ತು.

ದೆಹಲಿ– ರಾಜಸ್ಥಾನ ಮತ್ತು ದೆಹಲಿ– ಅಮೃತಸರ ವಲಯದಲ್ಲಿನ ನಾಲ್ಕು ಪಥ ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳ್ಳುವ ಹಂತದಲ್ಲಿ ಅದನ್ನು ಆರು ಪಥದ ಹೆದ್ದಾರಿಯನ್ನಾಗಿ ಬದಲಿಸಲಾಗಿತ್ತು. ದೆಹಲಿ– ಗುರುಗ್ರಾಮ ಮಧ್ಯೆ ಸಂಪರ್ಕ ಕಲ್ಪಿಸುವ ಎಂಟು ಪಥದ ಎಕ್ಸ್‌ಪ್ರೆಸ್‌ ಮಾರ್ಗ ಪೂರ್ಣಗೊಳ್ಳುವ ಮೊದಲೇ ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿತ್ತು. 12 ಪಥಗಳ ಎಕ್ಸ್‌ಪ್ರೆಸ್‌ ಮಾರ್ಗವಾಗಿ ಇದನ್ನು ವಿಸ್ತರಿಸುವ ಪ್ರಸ್ತಾವವನ್ನು ಸರ್ಕಾರಿ ಯೋಜನಾಕರ್ತರು ತಿರಸ್ಕರಿಸಿದ್ದರು. ಇವುಗಳ ಒಟ್ಟಾರೆ ಪರಿಣಾಮ ಏನೆಂದರೆ, ನಮ್ಮೆಲ್ಲ ಮೂಲ ಸೌಕರ್ಯ ಯೋಜನೆಗಳು ನಿರಂತರವಾಗಿ ನಿರ್ಮಾಣ ಹಂತದಲ್ಲಿಯೇ ಇರುತ್ತವೆ.

ಆರಂಭದಲ್ಲಿ ಕಡಿಮೆ ಗಾತ್ರದಲ್ಲಿ ಯೋಜನೆ ರೂಪಿಸುವುದು, ಅದರಿಂದ ಸಮಸ್ಯೆಗಳು ಉದ್ಭವವಾಗುತ್ತಿದ್ದಂತೆ ಅವುಗಳನ್ನು ವಿಸ್ತರಿಸುವುದರ ಜೊತೆಗೆ ಯೋಜನಾ ವೆಚ್ಚ ಹೆಚ್ಚಿಸುವುದು ನಮ್ಮ ಸರ್ಕಾರಿ ಯಂತ್ರ ಕಾರ್ಯನಿರ್ವಹಿಸುವ ವೈಖರಿಯ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ.

‘ಹೋಮಿಯೊಪಥಿ’ ಚಿಕಿತ್ಸಾ ವಿಧಾನದ ಚಿಂತನೆ ಹೋಲುವ ರೂಪದಲ್ಲಿ ಯೋಜನೆ ರೂಪಿಸುವುದು ಹಾನಿಕರವಾಗಿರುವುದಿಲ್ಲ. ಈ ಔಷಧಿಯು ಖಂಡಿತವಾಗಿಯೂ ಕಾಯಿಲೆಯನ್ನು ಉಲ್ಬಣಿಸುತ್ತದೆ ಎನ್ನುವುದು ಮಾತ್ರ ನಿಜ.

ಬುಲೆಟ್‌ ರೈಲು ಯೋಜನೆಗೆ ಸಂಬಂಧಿಸಿ ಹೇಳುವುದಾದರೆ, ಯೋಜನೆಯ ನಿಯಂತ್ರಣ ಮತ್ತು ಹಣದ ವಿಷಯವನ್ನು ಜಪಾನಿಗೆ ಬಿಟ್ಟುಕೊಡುವುದೇ ಉತ್ತಮ ನಿರ್ಧಾರವಾಗಿರಲಿದೆ. ಮೋದಿ ಸರ್ಕಾರವು ಅಸಾಮಾನ್ಯ ಸಂಗತಿಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಗೀಳಿಗೆ ಒಳಗಾಗಿದೆ ಎಂದು ಯಾರಾದರು ಕೊಂಕು ನುಡಿಯುತ್ತಿದ್ದರೂ, ಹೋಮಿಯೊಪಥಿಯೂ ಸೇರಿದಂತೆ ಪರ್ಯಾಯ ಔಷಧೋಪಚಾರ ಒದಗಿಸುವುದಕ್ಕೆ ಕೇಂದ್ರ ಸರ್ಕಾರವು ತನ್ನ ಬದ್ಧತೆಯನ್ನಂತೂ ಹೆಚ್ಚಿಸಿದೆ ಎನ್ನುವುದು ಮಾತ್ರ ನಿಜ.

(ಲೇಖಕ ‘ದಿ ಪ್ರಿಂಟ್’ ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

Comments
ಈ ವಿಭಾಗದಿಂದ ಇನ್ನಷ್ಟು
ಕವಲು ಹಾದಿಯಲ್ಲಿ ‘ಎಎಪಿ’

ರಾಷ್ಟ್ರಕಾರಣ
ಕವಲು ಹಾದಿಯಲ್ಲಿ ‘ಎಎಪಿ’

18 Mar, 2018
ಬದಲಾವಣೆಗೆ ಒಗ್ಗದ ಎಡಪಕ್ಷಗಳು

ರಾಷ್ಟ್ರಕಾರಣ
ಬದಲಾವಣೆಗೆ ಒಗ್ಗದ ಎಡಪಕ್ಷಗಳು

11 Mar, 2018
ಬಿಜೆಪಿಯ ದಂಗುಬಡಿಸುವ ಚಾಣಾಕ್ಷತೆ

ರಾಷ್ಟ್ರಕಾರಣ
ಬಿಜೆಪಿಯ ದಂಗುಬಡಿಸುವ ಚಾಣಾಕ್ಷತೆ

4 Mar, 2018
ಸಂಯಮ ರೂಢಿಸಿಕೊಳ್ಳದ ಕೇಜ್ರಿವಾಲ್‌

ರಾಷ್ಟ್ರಕಾರಣ
ಸಂಯಮ ರೂಢಿಸಿಕೊಳ್ಳದ ಕೇಜ್ರಿವಾಲ್‌

25 Feb, 2018
ಬ್ಯಾಂಕ್‌ ರಾಷ್ಟ್ರೀಕರಣದ ಉದ್ದೇಶ ವಿಫಲ

ರಾಷ್ಟ್ರಕಾರಣ
ಬ್ಯಾಂಕ್‌ ರಾಷ್ಟ್ರೀಕರಣದ ಉದ್ದೇಶ ವಿಫಲ

18 Feb, 2018