ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನೂಯಿ' ಎಂಬ ಗುಬ್ಬಿಯೂ 'ಯೂರೊ' ಬ್ರಹ್ಮಾಸ್ತ್ರವೂ

Last Updated 16 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

–ದಾವೋದ್ ಹರಿ

**

ನಮ್ಮ ಕುಟುಂಬದ ಪಾಲಿಗೆ ಇದೊಂದು ದುರಂತ. ಆದರೆ ಆಕೆಯ ಕೊಲೆಗಾರ ಪ್ರತಿನಿಧಿಸುವ ನಾಗರಿಕ ಸೇನೆಗೆ ಹಣಕಾಸು ನೆರವು ಒದಗಿಸುವ ಐರೋಪ್ಯ ಒಕ್ಕೂಟದ ದೃಷ್ಟಿಯಲ್ಲಿ ಇದೊಂದು ಹಗರಣ.

ದಾರ್‌ಫರ್‌ ಗ್ರಾಮವೊಂದರ ಹೊರವಲಯದ ನಿರ್ಜನ ಪ್ರದೇಶದಲ್ಲಿ ದಾಳಿ ನಡೆಸಿ ಮತ್ತೊಬ್ಬ ಮಹಿಳೆಯನ್ನು ಕೊಂದು ಹಾಕಲಾಗಿದೆ. 2003ರಲ್ಲಿ ಸೂಡಾನ್‍ನಲ್ಲಿ ನರಮೇಧ ಆರಂಭವಾದಾಗಿನಿಂದಲೂ ಇಂತಹ ಭಯಾನಕ ಘಟನೆಗಳು ನಡೆಯುತ್ತಲೇ ಇವೆ. ಆ ಊರಿನಿಂದಾಚೆಗಿನ ಹೊರಪ್ರಪಂಚದವರು ಯಾರು ತಾನೇ ಇದನ್ನೆಲ್ಲ ಗಮನಿಸುತ್ತಾರೆ? ಇವೆಲ್ಲಾ ಸುದ್ದಿಯಾಗಿ ಎಲ್ಲಿ ವರದಿಯಾಗುತ್ತವೆ? ಯಾರೊಬ್ಬರೂ ಕಾಳಜಿ ವಹಿಸದಿದ್ದರೆ ಮತ್ತು ಅವು ಎಲ್ಲಿಯೂ ವರದಿಯಾಗದಿದ್ದರೆ ನ್ಯಾಯ ಸಿಗುವುದಾದರೂ ಹೇಗೆ?

ನನಗೆ ಈ ಬಗ್ಗೆ ಕಾಳಜಿಯಿದೆ. 2017ರ ಆಗಸ್ಟ್ 21ರಂದು ಮಾರಣಾಂತಿಕ ದಾಳಿಗೆ ತುತ್ತಾದ ಮಹಿಳೆ ನನ್ನ ಸಹೋದರಿಯಾದ ನೋಯಿ. ನನ್ನಲ್ಲಿ ಈ ಬಗ್ಗೆ ಆಕ್ರೋಶ ಮಡುಗಟ್ಟಿದೆ. ನೋಯಿಗೆ ನ್ಯಾಯ ಒದಗಿಸುವ ಸಲುವಾಗಿ ನಾನು ಧ್ವನಿ ಎತ್ತುತ್ತೇನೆ.

ನಮ್ಮ ಕುಟುಂಬದ 7 ಜನ ಮಕ್ಕಳಲ್ಲಿ ನಾನೇ ಕಿರಿಯವನು. ಅವರಲ್ಲಿ ಈವರೆಗೆ ಬದುಕುಳಿದಿದ್ದವರು ಐದು ಮಂದಿ ಮಾತ್ರ. ಉತ್ತರ ದಾರ್‌ಫರ್‌ನಲ್ಲಿರುವ ಮುಜಬತ್ ಎಂಬ ನಮ್ಮ ಹಳ್ಳಿಯಿಂದ ಇಬ್ಬರು ಅಣ್ಣಂದಿರು ಮತ್ತು ಒಬ್ಬ ಅಕ್ಕ ಬೇರೆಡೆ ಸ್ಥಳಾಂತರಗೊಂಡರು. ಆದರೆ ನೂಯಿ ಮಾತ್ರ ಅಲ್ಲಿಯೇ ಉಳಿದುಕೊಂಡಳು. ಅವಳು ನಮ್ಮಲ್ಲಿ ಕೊನೆಯಿಂದ ಎರಡನೆಯವಳಾಗಿದ್ದರೂ ನನ್ನ ಪಾಲಿಗೆ ಮಾತ್ರ ಆಕೆ ದೊಡ್ಡಕ್ಕನೇ ಆಗಿದ್ದಳು. ನಾನು ಮಗುವಾಗಿದ್ದಾಗ ನನ್ನನ್ನು ಸಲಹಲು ನೆರವಾಗಿದ್ದಳು. ಸಹೃದಯಿಯಾಗಿದ್ದ ಅವಳು, ಗಟ್ಟಿಗಿತ್ತಿಯೂ ಸಮರ್ಥಳೂ ಸ್ವತಂತ್ರ ಮನೋಭಾವದವಳೂ ಆಗಿದ್ದಳು.

2003ರಲ್ಲಿ ದಾರ್‌ಫರ್‌ನಲ್ಲಿ ಸೂಡಾನ್‍ನ ಸರ್ಕಾರಿ ಪಡೆಗಳು ಮೊದಲ ಬಾರಿಗೆ ಸರಣಿ ದಾಳಿಗಳನ್ನು ನಡೆಸಿದ ನಂತರ, ನೆರವು ಸಂಘಟನೆಗಳು ಮತ್ತು ಪಾಶ್ಚಿಮಾತ್ಯ ಪತ್ರಕರ್ತರಿಗೆ ನಾನು ದುಭಾಷಿಯಾಗಿ ಮತ್ತು ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸಿದೆ. 2006ರಲ್ಲಿ ನನ್ನನ್ನು ಸೆರೆ ಹಿಡಿದ ಸೂಡಾನ್ ಸರ್ಕಾರ, ಬಂಧನದಲ್ಲಿರಿಸಿ ಚಿತ್ರಹಿಂಸೆ ಕೊಟ್ಟಿತು. ಅಮೆರಿಕದ ನೆರವಿನಿಂದಾಗಿ ಜೈಲಿನಿಂದ ಹೊರಬಂದ ನಾನು 2007ರ ಮಾರ್ಚ್‍ನಲ್ಲಿ ಒಬ್ಬ ನಿರಾಶ್ರಿತನಾಗಿ ಅಮೆರಿಕಕ್ಕೆ ಬಂದೆ.

ಸೂಡಾನ್‍ನ ಭದ್ರತಾ ಪಡೆಗಳು ಮತ್ತು ನಾಗರಿಕ ಸೇನೆಯು ದಾರ್‌ಫರ್‌ ನರಮೇಧದ ಭಾಗವಾಗಿ ನಾಶಪಡಿಸಿದ ಸಾವಿರಾರು ಹಳ್ಳಿಗಳಲ್ಲಿ ಮುಜಬತ್ ಸಹ ಒಂದು. ಸರ್ಕಾರ ಗುರಿ ಇಟ್ಟಿರುವ ಮೂರು ಆದಿವಾಸಿ ಪಂಗಡಗಳಲ್ಲಿ ಒಂದಾದ ಜಘಾವ ಸಮುದಾಯಕ್ಕೆ ಸೇರಿದವರು ನಾವು. ಮುಜಬತ್ ಮೇಲೆ ನಿರಂತರವಾಗಿ ದಾಳಿಗಳು ನಡೆದಿವೆ. ಅಲ್ಲಿನ ಜನ ಪಲಾಯನ ಮಾಡಿದ್ದಾರೆ, ಮರಳಿ ಬಂದಿದ್ದಾರೆ ಮತ್ತು ಹೊಸದಾಗಿ ಬದುಕನ್ನು ಕಟ್ಟಿಕೊಂಡಿದ್ದಾರೆ.

ಇದೇ ಮುಜಬತ್‍ನಲ್ಲಿ ನೆಲೆಸಿದ್ದ ನೋಯಿ ಮದುವೆಯಾಗಿ ತನ್ನ ಮಕ್ಕಳನ್ನು ಸಲಹಿದಳು. ಕುಟುಂಬದ ನಿರ್ವಹಣೆ ಮಾಡಿದಳು. 2006ರಲ್ಲಿ ನಮ್ಮ ತಂದೆ ತೀರಿಕೊಂಡ ನಂತರ, ಕಣ್ಣು ಮಂಜಾಗಿರುವ, ಕಿವಿ ಕೇಳಿಸದ ನಮ್ಮ ವೃದ್ಧ ತಾಯಿಯನ್ನೂ ನೋಡಿಕೊಂಡಳು. ನೋಯಿಯ ಐವರು ಮಕ್ಕಳಲ್ಲಿ ಇಬ್ಬರು ಹಿರಿಯ ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಅಲಿಯಾ ಮತ್ತು ಹೆನ್ನೆನಿ ಎಂಬ ಇಬ್ಬರು ಕಿರಿಯ ಹೆಣ್ಣು ಮಕ್ಕಳು 14 ವರ್ಷದ ತಮ್ಮ ಅಲಿಯೊಂದಿಗೆ ನೋಯಿಯ ಜೊತೆಗಿದ್ದರು.

ಹಲವಾರು ಸಂಕಷ್ಟಗಳ ನಡುವೆಯೇ ನೋಯಿ ಜೀವನದಲ್ಲಿ ಮುಂದೆ ಬಂದಳು. 7 ಹಸುಗಳು, 15 ಕುರಿಗಳು, 25ಕ್ಕೂ ಹೆಚ್ಚು ಆಡುಗಳು ಮತ್ತು ಒಂದು ಕತ್ತೆ ಅವಳ ಬಳಿ ಇದ್ದವು. 2014ರ ಆಗಸ್ಟ್‌ನಲ್ಲಿ ಮುಜಬತ್‍ನಲ್ಲಿನ ನನ್ನ ಅಕ್ಕನ ಮನೆಯಲ್ಲೇ ನನ್ನ ಮದುವೆಯಾಗಿತ್ತು. ಕೆಲ ವರ್ಷಗಳ ಹಿಂದೆ ನಾನೊಮ್ಮೆ ಕದ್ದುಮುಚ್ಚಿ ದಾರ್‌ಫರ್‌ಗೆ ಹೋಗಿ ಬಂದಿದ್ದೆ. ಕಳೆದ ವರ್ಷದ ಜೂನ್‍ನಲ್ಲಿ ಕಡೆಯದಾಗಿ ನೋಯಿಯನ್ನು ಭೇಟಿ ಮಾಡಿದ್ದೆ.

ತೀರಾ ಇತ್ತೀಚಿನವರೆಗೂ ನೋಯಿ ಮತ್ತು ನಾನು ದೂರವಾಣಿಯ ಮೂಲಕ ಸಂಪರ್ಕದಲ್ಲಿದ್ದೆವು. ಆದರೆ ಇದಕ್ಕಾಗಿ, ಉತ್ತರ ದಾರ್‌ಫರ್‌ನ ರಾಜಧಾನಿಯಾದ ಎಲ್ ಫಶರ್‌ನಲ್ಲಿರುವ ಕುಟುಂಬ ಸದಸ್ಯರ ಮೂಲಕ ಸಂಕೀರ್ಣವಾದ ಪೂರ್ವಸಿದ್ಧತೆಗಳನ್ನೇ ಮಾಡಿಕೊಳ್ಳಬೇಕಾಗಿತ್ತು. ಮುಜಬತ್ ಮಾರುಕಟ್ಟೆಯಲ್ಲಿನ ದೂರವಾಣಿಯೊಂದರಿಂದ ನನ್ನ ಪ್ರೀಪೇಯ್ಡ್ ಫೋನ್ ಕಾರ್ಡ್ ಬಳಸಿ ಮಾತನಾಡಲು ನೂಯಿಗೆ ಅವರು ಸಮಯ ನಿಗದಿಪಡಿಸಿದ್ದರು. ಅಂತೆಯೇ, ಆಗಸ್ಟ್ 22ರಂದು ನಾವಿಬ್ಬರೂ ಫೋನ್‍ನಲ್ಲಿ ಮಾತನಾಡಲು ಸಮಯ ನಿಗದಿಯಾಗಿತ್ತು. ಆದರೆ ಅದಕ್ಕೆ ಒಂದು ದಿನ ಮೊದಲೇ ಅವಳ ಕೊಲೆಯಾಯಿತು.

ಸೂಡಾನ್ ಸರ್ಕಾರದ ಕುಖ್ಯಾತ, ಭಯಾನಕ ಹಾಗೂ 2003ರಿಂದಲೂ ದಾರ್‌ಫರ್‌ನ ಜನರನ್ನು ಬೇಟೆಯಾಡುತ್ತಿರುವ ಜಂಜವೀದ್ ಎಂಬ ನಾಗರಿಕ ಸೇನೆಯು ರಾಷ್ಟ್ರೀಯ ಗುಪ್ತದಳ ಮತ್ತು ಭದ್ರತಾ ಸೇವೆಯ ಅಧಿಕೃತ ಭಾಗವಾಯಿತು. ಕ್ಷಿಪ್ರ ಬೆಂಬಲ ಪಡೆ (ರ‍್ಯಾಪಿಡ್ ಸಪೋರ್ಟ್ ಫೋರ್ಸ್- ಆರ್‍ಎಸ್‍ಎಫ್) ಎಂದು ಅದನ್ನು ಹೆಸರಿಸಲಾಯಿತು. ಸುಮಾರು 150 ವಾಹನಗಳನ್ನು ಹೊಂದಿರುವ ಆರ್‍ಎಸ್‍ಎಫ್ ಶಿಬಿರವನ್ನು ಈಚೆಗೆ ಮುಜಬತ್ ಬಳಿ ಸ್ಥಾಪಿಸಲಾಗಿದೆ.

ಮುಜಬತ್‍ನಲ್ಲಿ ಆಗ ಮಳೆಗಾಲ. ಜಾನುವಾರುಗಳನ್ನು ಮೇಯಿಸಲು ದಂಡಿಯಾಗಿ ಹುಲ್ಲು ಬೆಳೆದಿತ್ತು. ಆದರೆ ಆ ಸ್ಥಳ ಮುಜಬತ್‍ನಿಂದ ಸಾಕಷ್ಟು ದೂರವಿತ್ತು. ಆಗಸ್ಟ್ 21ರ ಸೋಮವಾರ ಬೆಳಿಗ್ಗೆ ಕತ್ತೆಯನ್ನೇರಿದ ನೋಯಿ ತನ್ನ ದನಕರುಗಳನ್ನು ಹುಲ್ಲುಗಾವಲಿಗೆ ಹೊಡೆದುಕೊಂಡು ಹೋದಳು. ಆದರೆ ಸಂಜೆ ಕತ್ತೆಯೊಂದೇ ಮುಜಬತ್‍ಗೆ ವಾಪಸಾಗಿದ್ದನ್ನು ಕಂಡು ಗ್ರಾಮಸ್ಥರು ಗಾಬರಿಯಾದರು. ಮರುದಿನ ಮಹಿಳೆಯರು ಮತ್ತು ಪುರುಷರ ಗುಂಪೊಂದು ಕತ್ತೆ ಹೋದ ದಾರಿಯನ್ನೇ ಅನುಸರಿಸಿಕೊಂಡು ಹೋಯಿತು.

ನಾಲ್ಕು ಗಂಟೆಗಳ ತರುವಾಯ ಅವರಿಗೆ ನೋಯಿಯ ಮೃತದೇಹ ಸಿಕ್ಕಿತು. ಅವಳ ಹಣೆಗೆ ಗುಂಡೇಟು ಬಿದ್ದಿತ್ತು. ಅಲ್ಲಿ ರಕ್ತ ಚೆಲ್ಲಾಡಿತ್ತು ಮತ್ತು ಆಕೆಯ ದಾಳಿಕೋರನ ಹೆಜ್ಜೆ ಗುರುತಿತ್ತು. ಮಹಿಳೆಯರು ನೋಯಿಯ ದೇಹವನ್ನು ಹಳ್ಳಿಗೆ ಹೊತ್ತೊಯ್ದರೆ, ಪುರುಷರು ದಾಳಿಕೋರನ ಜಾಡನ್ನು ಹಿಂಬಾಲಿಸಿದರು. ಅದು ಅವರನ್ನು ಆರ್‍ಎಸ್‍ಎಫ್ ಶಿಬಿರಕ್ಕೆ ಕರೆದೊಯ್ದಿತು. ಅಲ್ಲಿದ್ದ ಕಮಾಂಡರ್ ಅವರನ್ನೆಲ್ಲ ಭೇಟಿಯಾಗಲು ಹೊರಬಂದನಾದರೂ, ಶಿಬಿರ ಪ್ರವೇಶಿಸಲು ಮಾತ್ರ ಅವರಿಗೆ ಅನುಮತಿ ನೀಡಲಿಲ್ಲ. ನೋಯಿಯನ್ನು ಕೊಂದಿರುವುದಾಗಿ ಹೇಳಿರುವ ನಾಗರಿಕ ಸೇನೆಯ ವ್ಯಕ್ತಿಯನ್ನು ತಮ್ಮ ಬಳಿಯೇ ಇರಿಸಿಕೊಂಡಿರುವುದಾಗಿ ತಿಳಿಸಿದ ಆತ ಗ್ರಾಮಸ್ಥರನ್ನು ವಾಪಸ್ ಕಳುಹಿಸಿದ.

ಹಣೆಯಲ್ಲಿ ಗಾಯವಾಗಿದ್ದ ಆರ್‍ಎಸ್‍ಎಫ್ ಸೈನಿಕನೇ ಶಂಕಿತ ಕೊಲೆಗಾರ ಎಂಬುದನ್ನು ಗ್ರಾಮಸ್ಥರು ಕಂಡುಕೊಂಡರು. ತನ್ನ ಬಂದೂಕು ಮತ್ತು ಬಟ್ಟೆಯ ಮೇಲಿನ ರಕ್ತವನ್ನು ತೊಳೆದುಕೊಂಡಿದ್ದ ಆತ, ನೋಯಿಯ ಶೂಗಳನ್ನು ಕೊಂಡೊಯ್ದಿದ್ದ. ಘಟನೆಗೆ ಮುನ್ನ ಬಂದೂಕಿನೊಂದಿಗೆ ಆರ್‍ಎಸ್‍ಎಫ್ ಶಿಬಿರದಿಂದ ಹೊರಬಂದಿದ್ದ ಅವನು ನೋಯಿಯನ್ನು ಕಂಡು ಹಿಂಬಾಲಿಸಿದ್ದ. ಆಕೆ ನಿರ್ಜನ ಪ್ರದೇಶಕ್ಕೆ ಹೋಗುವವರೆಗೂ ಹಿಂದೆಯೇ ಹೋಗಿ ಅಲ್ಲಿ ಅವಳ ಮೇಲೆ ಎರಗಿದ್ದ. ಅತ್ಯಾಚಾರಕ್ಕೆ ಯತ್ನಿಸಿದಾಗ ತಿರುಗಿಬಿದ್ದ ನೋಯಿ ಅವನ ತಲೆಗೆ ಹೊಡೆದಿದ್ದಳು. ಆಗ ಅವನು ಅವಳನ್ನು ಗುಂಡಿಟ್ಟು ಕೊಂದು ಹಾಕಿದ್ದ.

ಮುಜಬತ್‍ಗೆ ಹಿಂದಿರುಗಿದ ಗ್ರಾಮಸ್ಥರು ಸುತ್ತಮುತ್ತಲಿನ ಊರಿನವರನ್ನೆಲ್ಲ ಜಾಗೃತಗೊಳಿಸಿ ಅವರೆಲ್ಲರ ನೆರವು ಕೋರಿದರು. ಮರುದಿನ ನೂರಾರು ಹಳ್ಳಿಗರು ಆರ್‍ಎಸ್‍ಎಫ್ ಶಿಬಿರಕ್ಕೆ ತೆರಳಿ ನೋಯಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.

ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆಯೇ ಆರ್‍ಎಸ್‍ಎಫ್ ತನ್ನ ಶಂಕಿತ ಸೈನಿಕನನ್ನು ಬಂಧಿಸಿ ಎಲ್ ಫಶರ್‌ಗೆ ಕಳುಹಿಸಿತು. ಇಂತಹ ಪ್ರಕರಣಗಳಲ್ಲಿ ಹೀಗೆ ಕೊಲೆಗಾರ ಪತ್ತೆಯಾಗುವುದು ಅಪರೂಪ. ಅದರಲ್ಲೂ ಬಂಧನಕ್ಕೆ ಒಳಗಾಗುವುದಂತೂ ವಿರಳಾತಿವಿರಳ. ಬಹುಶಃ ಗ್ರಾಮಸ್ಥರ ಆಕ್ರೋಶ ಮತ್ತು ಬಲವಾದ ಸಾಕ್ಷ್ಯಗಳನ್ನು ಕಂಡು ಕಮಾಂಡರ್ ಇಂತಹ ಕ್ರಮಕ್ಕೆ ಮುಂದಾಗಿರಬಹುದು. ಅಷ್ಟಾದರೂ ನೋಯಿಯ ಮೇಲಿನ ದಾಳಿ ಮತ್ತು ಕೊಲೆಯ ಬಗ್ಗೆಯಾಗಲೀ ಶಂಕಿತ ಕೊಲೆಗಾರನ ಬಂಧನದ ಬಗ್ಗೆಯಾಗಲೀ ಪತ್ರಿಕಾ ವರದಿಗಳಂತೂ ಬರಲೇ ಇಲ್ಲ. ವಾಸ್ತವವೇನೆಂದರೆ, ಆ ಬಳಿಕ ಗ್ರಾಮಕ್ಕೆ ಭೇಟಿ ನೀಡಿದ್ದ ಇಬ್ಬರು ಸರ್ಕಾರಿ ಅಧಿಕಾರಿಗಳು ಹಳ್ಳಿಗರ ಸೆಲ್‍ಫೋನ್‍ಗಳಲ್ಲಿನ ನೋಯಿಯ ಮೃತದೇಹದ ಚಿತ್ರಗಳನ್ನು ಪತ್ತೆ ಹಚ್ಚಿ ಡಿಲೀಟ್ ಮಾಡಿದ್ದರು ಮತ್ತು ಮಾಧ್ಯಮಗಳ ಜೊತೆ ಮಾತನಾಡದಂತೆ ಅವರಿಗೆಲ್ಲ ಎಚ್ಚರಿಕೆ ನೀಡಿ ಹೋಗಿದ್ದರು.

ಹೀಗೆ ಸರ್ಕಾರವು ತನ್ನ ಅಪರಾಧಗಳನ್ನು ಮುಚ್ಚಿಹಾಕಲು ಪ್ರಯತ್ನಿಸುವುದು ನಮ್ಮ ಕುಟುಂಬದವರಿಗೆ ಅಚ್ಚರಿಯ ಸಂಗತಿಯೇನೂ ಅಲ್ಲ. ಆದರೆ ಇಂತಹ ಸ್ಥಿತಿಯಲ್ಲಿ ನೋಯಿಯ ಕೊಲೆಗಡುಕನಿಗೆ ಶಿಕ್ಷಕೆಯಾಗದಿದ್ದರೆ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ.

ದಾರ್‌ಫರ್‌ನ ಗ್ರಾಮಗಳ ಮೇಲೆ ದಾಳಿ ನಡೆಸುವ, ಅತ್ಯಾಚಾರಗಳು ಮತ್ತು ಕೊಲೆಗಳಿಗೆ ಕಾರಣವಾಗಿರುವ ಈ ಆರ್‍ಎಸ್‍ಎಫ್‍ಗೆ, ಯುರೋಪ್‍ನತ್ತ ನಿರಾಶ್ರಿತರ ವಲಸೆ ಸಾಧ್ಯತೆ ತಡೆಯಲು ಐರೋಪ್ಯ ಒಕ್ಕೂಟವೇ ಹಣಕಾಸು ನೆರವು ಒದಗಿಸುತ್ತಿರುವುದು ಮಾತ್ರ ಅನೂಹ್ಯವಾದ ಸಂಗತಿ. ವಲಸೆ ತಡೆಯುವ ಸೂಡಾನ್ ಪ್ರಯತ್ನಕ್ಕೆ ಐರೋಪ್ಯ ಒಕ್ಕೂಟವು ಈಗಾಗಲೇ ಸುಮಾರು 215 ದಶಲಕ್ಷ ಯೂರೊಗಳನ್ನು (ಸುಮಾರು ₹ 1,650 ಕೋಟಿ) ವ್ಯಯಿಸಿರುವ ಸಂಗತಿ, ಈ ವರ್ಷದ ಆರಂಭದಲ್ಲಿ ಒಕ್ಕೂಟದ ವೀಕ್ಷಕರು ನಡೆಸಿದ ಪರಿಶೀಲನೆಯಿಂದ ತಿಳಿದುಬಂದಿದೆ. ಆರ್‍ಎಸ್‍ಎಫ್‍ಗೆ ಯುರೋಪ್ ನೀಡುತ್ತಿರುವ ಈ ಬೆಂಬಲವನ್ನು ‘ನರಕದಿಂದ ಗಡಿ ನಿಯಂತ್ರಣ’ ಎಂದು ಮತ್ತೊಂದು ವರದಿ ಬಣ್ಣಿಸಿದೆ.

ಪುನಶ್ಚೇತನಗೊಂಡಿರುವ ಜಂಜವೀದ್ ನಾಗರಿಕ ಸೇನೆಯು ಸ್ಥಿರತೆ ಸಾಧಿಸುವುದಿಲ್ಲ; ಬದಲಾಗಿ ಅದು ಸಾವು ಮತ್ತು ವಿಧ್ವಂಸಕತೆಯ ದಲ್ಲಾಳಿ ಎಂದು ನಾನು ಪ್ರಮಾಣೀಕರಿಸಿ ಹೇಳುತ್ತೇನೆ. ಐರೋಪ್ಯ ಒಕ್ಕೂಟದಿಂದ ಆರ್‍ಎಸ್‍ಎಫ್ ಹಣಕಾಸು ನೆರವು ಪಡೆಯುತ್ತಿರುವುದೇ ಒಂದು ಪಾಪಕೃತ್ಯ.

ನೋಯಿಯ ಕೊಲೆಯ ವಿಷಯ ಹೆಚ್ಚು ಪ್ರಚಾರ ಪಡೆದಷ್ಟೂ ಆಕೆಯ ಕೊಲೆಗಾರ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ನಾನೀಗ ಆಕೆಯ ಕಥೆ ಹೇಳುತ್ತಿದ್ದೇನೆ. ಸೂಡಾನ್ ಮೇಲಿನ ನಿರ್ಬಂಧಗಳನ್ನು ಸಡಿಲಿಸಬೇಕೇ ಬೇಡವೇ ಎಂಬುದನ್ನು ಐರೋಪ್ಯ ಒಕ್ಕೂಟ ಮತ್ತು ಅಮೆರಿಕವು ಮುಂದಿನ ತಿಂಗಳು ನಿರ್ಧರಿಸುವ ನಿರೀಕ್ಷೆ ಇದೆ. ಹೀಗಾಗಿ, ಈ ಸಂದರ್ಭದಲ್ಲಾದರೂ ಆರ್‍ಎಸ್‍ಎಫ್ ಮತ್ತು ಸರ್ಕಾರದ ನಿಜಬಣ್ಣವನ್ನು ಅವು ಅರಿಯಬಹುದೆಂದು ನಂಬಿದ್ದೇನೆ. ನೋಯಿಗಾಗಿ ಮತ್ತು ದಾರ್‌ಫರ್‌ನಲ್ಲಿನ ಎಲ್ಲರ ಸಲುವಾಗಿ ಆ ಪ್ರದೇಶದಲ್ಲಿ ಶಾಂತಿ ನೆಲೆಸುವ ಮತ್ತು ನ್ಯಾಯ ಸಿಗುವ ದಿನದ ಬಗ್ಗೆ ನಾನು ಕನಸು ಕಾಣುತ್ತೇನೆ.

(ಲೇಖಕ ಸೂಡಾನ್ ಮೂಲದ ಅನುವಾದಕ ಹಾಗೂ ‘ದಿ ಟ್ರಾನ್ಸ್‍ಲೇಟರ್: ಎ ಟ್ರೈಬ್ಸ್‍ಮನ್ಸ್ ಮೆಮೋಯರ್ ಆಫ್ ದಾರ್‌ಫರ್‌’ ಕೃತಿಕರ್ತ)

-ದಿ ನ್ಯೂಯಾರ್ಕ್ ಟೈಮ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT