ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮ ಪಾಡಿಗೆ ನಮ್ಮನ್ನು ಬಿಡಿ’

Last Updated 16 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

* ವೀರಶೈವ ಲಿಂಗಾಯತರ ಹಾದಿರಂಪ, ಬೀದಿರಂಪ ಏಕೆ?

ವೀರಶೈವರು ಬಸವಣ್ಣನನ್ನು ಒಪ್ಪಿಕೊಂಡಿದ್ದರೆ ತಂಟೆಯೇ ಇರುತ್ತಿರಲಿಲ್ಲ. ವೀರಶೈವ ಒಂದು ಉಪಜಾತಿಯೇ ವಿನಾ ಅದು ಧರ್ಮವಲ್ಲ. ಒಂದು ಸಣ್ಣ ಪಂಗಡ. ಅವರು ಮೂಲತಃ ಶೈವ ಪರಂಪರೆಯವರು. ನೋಡಿ, ಅವರಿಗೆ ಇನ್ನೂ ಕಾಲ ಮಿಂಚಿಲ್ಲ. ಬಸವಣ್ಣ, ಬಸವಾದಿ ಶರಣರು, ವಚನ ಗ್ರಂಥಗಳನ್ನು ಒಪ್ಪಿಕೊಂಡು ಬಂದರೆ ನಾವು ಮನಸಾರೆ ಬರಮಾಡಿಕೊಳ್ಳುತ್ತೇವೆ. ಒಂದು ವೇಳೆ ಅವರದೇ ಸ್ವತಂತ್ರ ಧರ್ಮ ಎಂಬ ಬೇಡಿಕೆ ಮಂಡಿಸಿದರೂ ನಮ್ಮ ತಕರಾರಿಲ್ಲ. ಆದರೆ, ವೀರಶೈವರು ಲಿಂಗಾಯತರನ್ನು ಬಿಟ್ಟು ಪ್ರತ್ಯೇಕ ಧರ್ಮ ಕೇಳಲು ತಯಾರಿಲ್ಲ. ನಮ್ಮ ಜೊತೆಗೆ ಬರುವುದಿದ್ದರೆ ಬರಲಿ, ಇಲ್ಲದಿದ್ದರೆ ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ.

* ಚುನಾವಣಾ ವರ್ಷದಲ್ಲಿ ಪ್ರತ್ಯೇಕ ಧರ್ಮದ ಪ್ರಸ್ತಾಪ ಅಗತ್ಯವಿತ್ತೇ?

ಪ್ರತ್ಯೇಕ ಧರ್ಮ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲೀ ಅಥವಾ ನಾವಾಗಲೀ ಪ್ರಸ್ತಾಪ ಮಾಡಿಲ್ಲ. ಗುಂಡ್ಲುಪೇಟೆಯಲ್ಲಿ ಸಚಿವ ವಿನಯ ಕುಲಕರ್ಣಿ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಕಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಿದರು. ನಾನೂ ಅವರ ಜೊತೆ ದನಿಗೂಡಿಸಿದೆ. ನಮ್ಮ ಮನವಿಗೆ ಸ್ಪಂದಿಸಿದರು. ಅದೇ ರೀತಿ ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರಿಡುವ ಪ್ರಸ್ತಾಪ ಬಹು ಸಮಯದಿಂದ ಜಾರಿಯಾಗಿರಲಿಲ್ಲ.

ಮಾಜಿ ಸಚಿವೆ ಲೀಲಾದೇವಿ ಆರ್‌. ಪ್ರಸಾದ್ ಅವರು ಮಹಿಳಾ ಸಮಾವೇಶದಲ್ಲಿ ಈ ವಿಷಯವಾಗಿ ನನ್ನನ್ನು ಕೆಣಕಿದರು. ‘ಹಿಂದಿನ ಮುಖ್ಯಮಂತ್ರಿ ಮತ್ತು ಸಚಿವರು ಆಶ್ವಾಸನೆ ನೀಡಿದರೇ ವಿನಾ ಕೆಲಸ ಮಾಡಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಾವು ಮತ್ತು ನಮ್ಮ ಮುಖ್ಯಮಂತ್ರಿ ಉಳಿದವರಂತಲ್ಲ, ಕೆಲಸ ಮಾಡಿ ತೋರಿಸುತ್ತೇವೆ ಎಂದು ಮಾತು ಕೊಟ್ಟಿದ್ದೆ.  ಬಳಿಕ, ನಾನು ಈ ವಿಷಯದ ಬಗ್ಗೆ ಸಿದ್ಧಪಡಿಸಿದ್ದ ಟಿಪ್ಪಣಿಗೆ ಸಿದ್ದರಾಮಯ್ಯ ಸಹಿ ಹಾಕಿದರು. ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ಇಡಲಾಯಿತು.

ಇವೆರಡೂ ಕೆಲಸ ಮಾಡಿದ ಮುಖ್ಯಮಂತ್ರಿ ಅವರಿಗೆ ವೀರಶೈವ ಮಹಾಸಭಾ ವತಿಯಿಂದ ಸನ್ಮಾನಿಸಲಾಯಿತು. ಆ ಸಮಾರಂಭದಲ್ಲಿ ವೀರಶೈವ ಲಿಂಗಾಯತ ಸ್ವತಂತ್ರ ಧರ್ಮದ ಕೂಗು ಎದ್ದಿತು. ಕಿಡಿ ಹೊತ್ತಿಕೊಂಡಿದ್ದೇ ಅಲ್ಲಿಂದ.

* ಈ ಹೋರಾಟದಲ್ಲಿ ನಿಮಗ್ಯಾಕೆ ಇಷ್ಟೊಂದು ಕಾಳಜಿ?

ನೋಡಿ, ನಾನು ಬಸವಣ್ಣನ ಜನ್ಮಭೂಮಿ– ಕರ್ಮಭೂಮಿಯಿಂದ ಬಂದವನು. ಇಂತಹ ಗಳಿಗೆಯಲ್ಲಿ ಮೌನ ವಹಿಸಿದರೆ ಮುಂದಿನ ಪೀಳಿಗೆ ನನ್ನನ್ನು ಕ್ಷಮಿಸುವುದಿಲ್ಲ. ಐತಿಹಾಸಿಕ ಸತ್ಯ ಹಾಗೂ ದಾಖಲೆಗಳನ್ನು ಇಟ್ಟುಕೊಂಡು ಮಾತನಾಡುತ್ತಿದ್ದೇನೆ. ನಾವೇ ಬಸವಣ್ಣನಿಗೆ ನ್ಯಾಯ ದೊರಕಿಸದಿದ್ದರೆ ಮತ್ಯಾರು ಕೊಡಿಸಬೇಕು?

* ಈ ವಿಷಯದಲ್ಲಿ ನೀವು ಸರ್ಕಾರದ ಭಾಗವಾಗಿ ಸರ್ಕಾರದಿಂದ ಏನು ಬಯಸುತ್ತೀರಿ?

ನಾನು ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಪ್ರತ್ಯೇಕ ಧರ್ಮ ಕುರಿತು ತಜ್ಞರ ಸಮಿತಿ ರಚಿಸುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸಮಿತಿಯು ಈ ವಿಷಯಕ್ಕೆ ಸಂಬಂಧಪಟ್ಟ ಎಲ್ಲರಿಂದಲೂ ದಾಖಲೆಗಳನ್ನು ಪಡೆದು ನಿಷ್ಪಕ್ಷಪಾತ ವರದಿ ಸಲ್ಲಿಸಲಿ. ಬಳಿಕ ಸರ್ಕಾರ ನಿರ್ಣಯ ಕೈಗೊಳ್ಳಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ತಜ್ಞರ ಸಮಿತಿ ರಚಿಸಬಹುದು. ಇದೇ ಡಿಸೆಂಬರ್‌ ಅಥವಾ ಜನವರಿ 15ರ ಒಳಗೆ ಸರ್ಕಾರ ನಿರ್ಣಯ ಕೈಗೊಳ್ಳಬೇಕು ಎನ್ನುವುದು ನಮ್ಮ ಆಶಯ. ಮುಖ್ಯವಾಗಿ ನಮಗೆ ಫಲಿತಾಂಶ ಬೇಕಾಗಿದೆ.

* ಮಂತ್ರಿಯಾಗಿದ್ದುಕೊಂಡು ಒಂದು ಸಮುದಾಯದ ಪರ ಹೋರಾಡುವುದು ಸರಿಯೇ?

ಯಾಕೆ, ದೇವೇಗೌಡ ತಮ್ಮವರು ಮುಖ್ಯಮಂತ್ರಿ ಆಗಲಿ ಎಂದು ಹೇಳುವುದಿಲ್ಲವೇ. ಸಿದ್ದರಾಮಯ್ಯ ತಮ್ಮ ಸಮುದಾಯದ ಜನರ ಜೊತೆ ವೇದಿಕೆ ಹಂಚಿಕೊಂಡು ಅವರ ಉದ್ಧಾರದ ಮಾತನಾಡುವುದಿಲ್ಲವೇ. ನಾನು ಲಿಂಗಾಯತ ಎಂದು ಹೇಳಿಕೊಳ್ಳುವುದರಲ್ಲಿ ನನಗೆ ಹೆಮ್ಮೆಯಿದೆ, ಅಭಿಮಾನವಿದೆ. ಲಿಂಗಾಯತ ಎಲ್ಲರನ್ನೂ ಒಳಗೊಂಡ ಧರ್ಮ.

* ಈ ಗೊಂದಲ ಪರಿಹಾರವಾಗುವುದೇ?

ಈಗಾಗಲೇ ಎರಡೂ ಬಣಗಳ ಮುಖಂಡರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಸತ್ಯ ಎಲ್ಲರಿಗೂ ಮನವರಿಕೆ ಆಗುವ ವಿಶ್ವಾಸವಿದೆ. ಕೆಲವರಿಗೆ ಇದು ಅಂತ್ಯವಾಗುವುದು ಬೇಕಿಲ್ಲ. ಅವರಿಗೆ ರಾಜಕೀಯ ಕಾರ್ಯಸೂಚಿ ಇದೆ. ಅವರೆಲ್ಲಾ ಇದನ್ನು ಜೀವಂತವಾಗಿರಿಸುವ ಪಿತೂರಿ ನಡೆಸುತ್ತಿದ್ದಾರೆ.

* ಪ್ರತ್ಯೇಕ ಲಿಂಗಾಯತ ಧರ್ಮದಿಂದ ಹಿಂದೂ ಧರ್ಮದ ಮೇಲೆ ಉಂಟಾಗುವ ಪರಿಣಾಮ ಏನು?

ಹಿಂದೂಗಳು ಯಾವುದೇ ರೀತಿಯಲ್ಲಿ ಆತಂಕಪಡುವ ಅಗತ್ಯವಿಲ್ಲ. ಸಿಖ್‌, ಬೌದ್ಧ, ಜೈನರು ಪ್ರತ್ಯೇಕವಾಗಿಲ್ಲವೇ. ಈ ಧರ್ಮಗಳಿಂದ ಹಿಂದೂ ಧರ್ಮದ ಮೇಲೆ ಏನಾದರೂ ಪರಿಣಾಮ ಆಗಿದೆಯೇ.

* ಜಾತಿ ವಿನಾಶಕ್ಕೆ ಹೋರಾಟ ನಡೆಸಿ ಎಂದು ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರಲ್ಲಾ?

ಕಾಗೋಡು ಸರಿಯಾಗಿಯೇ ಹೇಳಿದ್ದಾರೆ. ಜಾತ್ಯತೀತ ಸಮಾಜ ಅಂದರೆ ಲಿಂಗಾಯತ ಮಾತ್ರ. ಲಿಂಗಾಯತ ಒಂದು ಜಾತಿ ಅಲ್ಲ. ಯಾರು ಬೇಕಾದರೂ ಲಿಂಗಾಯತರಾಗಬಹುದು. ಹಿಂದೂ ಧರ್ಮ ಅಲ್ಲ. ಅದೊಂದು ಜೀವನ ವಿಧಾನ.

* ವೀರಶೈವರನ್ನು ಬಿಜೆಪಿಯವರು, ಲಿಂಗಾಯತರನ್ನು ಕಾಂಗ್ರೆಸ್‌ನವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಯೇ?

ಹಾಗೇನಿಲ್ಲ. ಕಾಂಗ್ರೆಸ್‌ ಪಕ್ಷವಾಗಲೀ, ಸಿದ್ದರಾಮಯ್ಯ ಅವರಾಗಲೀ ಲಿಂಗಾಯತ ಧರ್ಮ ಪ್ರತ್ಯೇಕ ಆಗಬೇಕೆಂಬ ಬೇಡಿಕೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ‘ಎಲ್ಲರೂ ಒಟ್ಟಾಗಿ ಬಂದು ಮನವಿ ಕೊಡಿ, ಪರಿಶೀಲಿಸುತ್ತೇನೆ’ ಎಂದಿದ್ದಾರೆ. 2013ರಲ್ಲಿ ಸ್ವತಂತ್ರ ಧರ್ಮದ ಪರವಾಗಿದ್ದ ಯಡಿಯೂರಪ್ಪ, ಈಗ ಬೆನ್ನು ತಿರುಗಿಸಿದ್ದಾರೆ. ಈಗಿನ ನಮ್ಮ ಹೋರಾಟಕ್ಕೆ ಅನೇಕ ಬಿಜೆಪಿ ಶಾಸಕರು ಬೆಂಬಲ ನೀಡಿದ್ದಾರೆ, ನೀಡುತ್ತಿದ್ದಾರೆ. ಈವರೆಗೆ ನಡೆದಿರುವ ಎಲ್ಲ ಸಮಾವೇಶಗಳಲ್ಲಿ ಅವರು ನಮಗೆ ಸಾಥ್ ನೀಡಿದ್ದಾರೆ. ಆರ್‌.ಎಸ್‌.ಎಸ್ ಹೆದರಿಕೆಯಿಂದ ಮೌನ ವಹಿಸಿದ್ದಾರೆ. ಯಡಿಯೂರಪ್ಪ ಸಂಘ‍ಪರಿವಾರದ ಕೈಗೊಂಬೆ ಆಗಿದ್ದಾರೆ.

ಬಿಜೆಪಿ ನಾಯಕರು ನಮ್ಮ ಜೊತೆ ಕೈಜೋಡಿಸುವ ಇಂಗಿತ ವ್ಯಕ್ತಪಡಿಸಿದರೆ ನಾವು ಅವರ ಮನೆ ಬಾಗಿಲಿಗೆ ಹೋಗಿ ಅವರನ್ನು ಬರಮಾಡಿಕೊಳ್ಳುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT