ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತರನ್ನ ಬಸವಣ್ಣ ಮಾಡಿದ್ನಾ?

Last Updated 16 ಸೆಪ್ಟೆಂಬರ್ 2017, 20:25 IST
ಅಕ್ಷರ ಗಾತ್ರ

* ಏಕೀ ಲಿಂಗಾಯತ–ವೀರಶೈವರ ಕಚ್ಚಾಟ?

ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೊ ಹಾಕುವ ಆದೇಶ, ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರಿಟ್ಟಿದ್ದು ಮತ್ತು ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ ನಿರ್ಧಾರಗಳನ್ನು ಕೈಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅರಮನೆ ಮೈದಾನದಲ್ಲಿ ಮಹಾಸಭಾ ಸನ್ಮಾನಿಸಿತು. ಆವತ್ತು ದೊಡ್ಡ ದೊಡ್ಡೋರು ಅಂತಾ ಏನಿದ್ದಾರಲ್ಲಾ ಅವರೆಲ್ಲರೂ ಬಂದಿದ್ದರು. ಆ ವೇದಿಕೆಯಲ್ಲಿ ನಾವು ವೀರಶೈವ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಶಿಫಾರಸು ಮಾಡಿ ಅಂದೆವು. ಅಂದು ಸಿದ್ದರಾಮಯ್ಯ, ಬಸವಣ್ಣನವರ ವಿಚಾರಗಳನ್ನು ಚೆನ್ನಾಗಿಯೇ ವಿವರಿಸಿದರು. ‘ನಾನು ಬಸವಣ್ಣನ ಹಿಂಬಾಲಕ. ಅವರ ತತ್ವಗಳಲ್ಲಿ ನಂಬಿಕೆ ಇರುವವನು’ ಎಂದು ಅರ್ಧ ಮುಕ್ಕಾಲು ತಾಸು ಮಾತನಾಡಿದರು. ಲಿಂಗಾಯತ ಧರ್ಮ ಆಗಬೇಕು ಅನ್ನುವವರೂ ಅಲ್ಲಿದ್ದರು.

ಇದಾದ ಎರಡು ದಿನಗಳಲ್ಲಿ ಕಚ್ಚಾಟ ಹೇಗೆ ಹುಟ್ತೊ ಏನೊ ಗೊತ್ತಿಲ್ಲ. ‘ನಾವೆಲ್ಲಾ 40 ವರ್ಷಗಳಿಂದ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಿ ಅಂತಾ ಕೇಳುತ್ತಿದ್ದೇವೆ. ಇನ್ನೂ ಆಗಿಲ್ಲ. ಕೇಂದ್ರಕ್ಕೆ ಲಿಂಗಾಯತ ಅಂತಲೇ ಶಿಫಾರಸು ಮಾಡಿ’ ಎಂದು ಕೆಲವರು ಪ್ರತಿಪಾದಿಸತೊಡಗಿದರು. ಅಲ್ಲಿಂದ ಶುರುವಾಯ್ತು ನೋಡಿ ಇದೆಲ್ಲಾ...

* ಹಲವು ಸ್ವಾಮೀಜಿಗಳು, ಹಿರಿಯರೂ ಲಿಂಗಾಯತ ಧರ್ಮ ಪ್ರತ್ಯೇಕ ಆಗಬೇಕು ಎನ್ನುತ್ತಿದ್ದಾರಲ್ಲಾ?

ಹೌದು. ಈ ಮಾತೆ ಮಹಾದೇವಿ, ಗದಗಿನ ಸ್ವಾಮೀಜಿ, ಆ ಜಯಮೃತ್ಯುಂಜಯ ಸ್ವಾಮೀಜಿ ಎಲ್ಲಾ ಇವರೊಟ್ಟಿಗೆ ಒಬ್ಬೊಬ್ಬರಾಗಿ ಸೇರ್ತಾ ಇದ್ದಾರೆ. ಆ ಎಂ.ಬಿ.ಪಾಟೀಲನಂತೂ ಹುಚ್ಚಾಪಟ್ಟೆ ಮಾತಾಡೋಕೆ ಶುರುಮಾಡಿದ. ನಂತರ ಶರಣ ಪ್ರಕಾಶ ಪಾಟೀಲ ಮನೆಯಲ್ಲಿ ಎರಡೂ ಬಣಗಳ ಮುಖಂಡರು ಸಭೆ ನಡೆಸಿದರು. ಒಟ್ಟಿಗೇ ಹೋಗೋಣ ಅಂತಾ ತೀರ್ಮಾನಿಸಿದರು. 7 ರಿಂದ 9 ಜನ ತಜ್ಞರ ಸಮಿತಿ ಮಾಡೋಣ ಎಂದೂ ನಿರ್ಧರಿಸಿದರು. ಈ ಸಮಿತಿಯ ಮುಂದೆ ಎರಡೂ ಬಣಗಳು ತಮ್ಮ ತಮ್ಮ ವಾದ ಮಂಡಿಸಲಿ. ಆಮೇಲೆ ತಜ್ಞರು ಏನು ತೀರ್ಪು ಕೊಡುತ್ತಾರೊ ಅದಕ್ಕೆ ಬದ್ಧವಾಗಿರುವ ನಿರ್ಣಯಕ್ಕೆ ಬಂದರು. ಈ ನಡುವೆ ಯಾರೂ ಮಾಧ್ಯಮಗಳ ಮುಂದೆ ಹೋಗಬಾರದು ಎಂದೂ ಸೂಚಿಸಲಾಗಿದೆ. ಒಂದು– ಒಂದೂವರೆ ತಿಂಗಳಲ್ಲಿ ಈ ಸಮಿತಿ ವರದಿ ನೀಡಲಿದೆ.

* ಪ್ರತ್ಯೇಕ ಲಿಂಗಾಯತ ಧರ್ಮ ಆಗೋದು ತಪ್ಪಾ?

ಪ್ರತ್ಯೇಕ ಆದರೆ ವೀರಶೈವರು ಎಲ್ಲಿಗೆ ಹೋಗಬೇಕು? ಈ ಲಿಂಗಾಯತರನ್ನೇನು ಬಸವಣ್ಣ ಮಾಡಿದ್ನಾ? ಇದು ಮೊದಲೇ ಇತ್ತು. ಹಂಗಂತ ಬಸವಣ್ಣನೇ ಹೇಳಿದ್ದಾನೆ.

* ಪ್ರತ್ಯೇಕ ಧರ್ಮ ಆಗಲಿ ಅಂತಾ ತರಳಬಾಳು ಶ್ರೀಗಳೂ ಹೇಳಿದ್ದಾರಲ್ಲಾ?

ಅವರೆಲ್ಲಿ ಹೇಳಿದ್ದಾರೆ. ಪೇಪರ್‌ನಲ್ಲಿ ಲೇಖನ ಬರೆದಿದ್ದಾರೆ. ಭಾಷಣ ಮಾಡಿದ್ದಾರಾ?

* ಈಗಾಗಲೇ ಕೇಂದ್ರ ಸರ್ಕಾರ ವೀರಶೈವ–ಲಿಂಗಾಯತ ಮನವಿಯನ್ನು ತಿರಸ್ಕರಿಸಿದೆಯಲ್ಲಾ?

ಇಲ್ಲ, ಮನವಿ ಪೆಂಡಿಂಗ್‌ ಇದೆ. ಅವರಿಗೆ ಮಾಡೋಕೆ ಇಷ್ಟ ಇಲ್ಲ. ಬಿಜೆಪಿಯವರಲ್ವಾ. ಈ ಲಿಂಗಾಯತ ಬಣದವರು ವಾಪಸ್‌ ಬಂದಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಅವರಿಗೇನು ಗೊತ್ತು?

* ಲಿಂಗಾಯತ ವೀರಶೈವರ ತಳ ಸಮುದಾಯಗಳ ಅಭಿಪ್ರಾಯ ಏನಾದರೂ ಆಲಿಸಿದ್ದೀರಾ?

ನಾನು ಯಾವುದಕ್ಕೂ ಹೋಗಿಲ್ಲಪ್ಪಾ. ನಾನು ಬಂದಿರೋದು 23ನೇ ಅಧ್ಯಕ್ಷನಾಗಿ. ನನಗೆ ಇದೆಲ್ಲಾ ಗೊತ್ತಿಲ್ಲ. ಈಗ ಶುರುವಾಗಿದೆ. ನಾನು ಏನು ಮಾಡಲಿ ಇದನ್ನೆಲ್ಲಾ ತಗೊಂಡು?

* ನೀವು ಮಹಾಸಭಾಕ್ಕೆ ಅಧ್ಯಕ್ಷರಾಗಿದ್ದೇ ಸಿ.ಎಂ ಗಾದಿ ಮೇಲೆ ಕಣ್ಣಿಟ್ಟು ಅಲ್ವಾ?

ಅಯ್ಯೊ ಅದೆಲ್ಲಿ ಸಾಧ್ಯ? ಅದು ತಾನಾಗಿಯೇ ಬಂತು. ನಾನು ಹುಡುಕಿಕೊಂಡು ಹೋಗಿದ್ದಲ್ಲ. ನನಗೆ ಭೀಮಣ್ಣ ಖಂಡ್ರೆ, ತಿಪ್ಪಣ್ಣ ಈ ವಿಷಯದಲ್ಲಿ ಬಹಳ ದಿನದಿಂದ ಗಂಟು ಬಿದ್ದಿದ್ದರು. ನಾನೇ ಒಪ್ಪಿರಲಿಲ್ಲ. ಕಡೆಗೆ ನನಗೆ ಬೇಕಾದವರನ್ನು ಸಂಪರ್ಕಿಸಿದೆ. ಅವರೆಲ್ಲಾ ಒಳ್ಳೇದು ಆಗಿ ಎಂದರು. ಸಾದರು, ಪಂಚಾಚಾರ್ಯದವರು, ಗಾಣಿಗರು, ರಡ್ಡಿ ಲಿಂಗಾಯತರು...ಹೀಗೆ 108 ಜಾತಿಗಳಿಗೆ ಅಧ್ಯಕ್ಷ ಆದಂಗೆ ಅಗುತ್ತೆ ಅಂದರು. ಆದೆ...(ನಗು)

* ವೀರಶೈವ ಮಹಾಸಭಾ ಸಮುದಾಯದವರನ್ನು ಗುತ್ತಿಗೆ ತೆಗೆದುಕೊಂಡಿದೆಯಾ?

ಇದು ಗುತ್ತಿಗೆಗಿಂತಲೂ ಹೆಚ್ಚಿಗೆ..!

* ನೀವು ಲಿಂಗಾಯತ ಎಂದರೆ ಕಳೆದುಕೊಳ್ಳುವುದು ಏನಿದೆ?

ವೀರಶೈವ ಎಂದರೆ ಕಳೆದುಕೊಳ್ಳುವುದು ಏನಿದೆ? ಇಷ್ಟು ವರ್ಷ ಇಲ್ಲದ ದುರ್ಬುದ್ಧಿ ಇವರಿಗೆ ಇವತ್ತು ಯಾಕೆ ಬಂತು? ಹಿಂದೆ ಎಲ್ಲಿದ್ರು ಇವರೆಲ್ಲಾ?

* ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕು ಎಂಬ ಕೂಗಿನ ಹಿಂದೆ ಕ್ಯಾಪಿಟೇಶನ್‌ ಹಿತಾಸಕ್ತಿ ಅಡಗಿದೆಯೇ?

ನಾವೇನು ಕ್ಯಾಪಿಟೇಶನ್ ಮೇಲೆಯೇ ಜೀವನ ಮಾಡಬೇಕಾಗಿದೆಯಾ? ನಮಗೆ ಬೇರೆ ವ್ಯವಹಾರ ದಂಧೆಗಳೇನೂ ಇಲ್ವಾ?

* ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಒಪ್ಪುತ್ತೀರಾ?

ಮೊದಲಿಂದಲೂ ಮಾಡಿಕೊಂಡು ಬಂದಿದ್ದಾರೆ. ಆದರೆ, ಈಗಿನವರು ಎಲ್ಲವನ್ನೂ ವಿರೋಧ ಮಾಡ್ತಾರೆ.

* ಇದು ಮಾನವ ಹಕ್ಕುಗಳ ಉಲ್ಲಂಘನೆ ಅಲ್ವಾ?

ಹಿಂಗೆ ಕೇಳೋರು ಇಷ್ಟು ದಿನ ಮಲಕ್ಕೊಂಡಿದ್ರಾ?

* ಈಗ ಜಾಗೃತರಾಗಿದ್ದಾರಲ್ಲಾ?

ಹ್ಞಾಂ. ಪಂಚಾಚಾರ್ಯರೂ ಹುಷಾರಾಗಿದ್ದಾರೆ. ಮುರಗಿ ಸ್ವಾಮಿ ಬರ್ತಾರೆ ಅಂದ್ರೆ, ನಮ್ಮ ಕುರ್ಚಿಯೇ ಮೇಲಿರಬೇಕು ಅಂತಿದ್ರು. ಈಗ ಜೊತೆಗೆ ಕುಳಿತುಕೊಳ್ತಾರೆ. ನೀವು ಪ್ರೆಸ್‌ನವರೇ ಅರ್ಧ ಕಿಚ್ಚು ಎಬ್ಬಿಸ್ತಿದ್ದೀರ. ಸುಮ್ಮನಿದ್ದೋರನ್ನೆಲ್ಲಾ ಉರಿದೆಬ್ಬಿಸುತ್ತಿದ್ದೀರಾ..!

* ಜಂಗಮೇತರರನ್ನೂ ಮಠಾಧೀಶರನ್ನಾಗಿ ಮಾಡಲು ಪಂಚಪೀಠಗಳವರಿಗೆ ಕೇಳುತ್ತೀರಾ?

ಈಗ ಮುರಗಿ ಸ್ವಾಮಿ ಎಲ್ಲರಿಗೂ ಮಠ ಕಟ್ಟಿಲ್ಲವೇ? ಅವರಲ್ಲಿ ಕುಂಬಾರ ಇದ್ದಾರೆ. ಹಜಾಮ್ರು ಇದ್ದಾರೆ. ಕಸ ಹೊಡೆಯೋರು ಇದ್ದಾರೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT