ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ. 30ರೊಳಗೆ ಶೇ 80ರಷ್ಟು ದೋಷ ಪರಿಹಾರ

ಜಿಎಸ್‌ಟಿಎನ್‌ನಲ್ಲಿ ತಾಂತ್ರಿಕ ಸಮಸ್ಯೆ: ಐವರು ಸಚಿವರ ತಂಡದಿಂದ ಪರಿಶೀಲನೆ
Last Updated 16 ಸೆಪ್ಟೆಂಬರ್ 2017, 19:10 IST
ಅಕ್ಷರ ಗಾತ್ರ

ಬೆಂಗಳೂರು: ‘ರಿಟರ್ನ್ ಸಲ್ಲಿಕೆ ಮತ್ತು ಇನ್‌ವೈಸ್ ಅಪ್‌ಲೋಡ್‌ ಸಂದರ್ಭದಲ್ಲಿ ಸರಕು ಮತ್ತು ಸೇವಾ ತೆರಿಗೆ ಜಾಲತಾಣದಲ್ಲಿ (ಜಿಎಸ್‌ಟಿಎನ್‌) ಕಂಡುಬರುವ ತಾಂತ್ರಿಕ ದೋಷವನ್ನು ಅ. 30ರ ಒಳಗೆ ಶೇ 80ರಷ್ಟು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಎಸ್‌ಟಿಎನ್‌ ತಾಂತ್ರಿಕ ಸಮಸ್ಯೆ ನಿವಾರಣೆಗೆ ರಚಿಸಿರುವ ಸಚಿವರ ತಂಡದ ಅಧ್ಯಕ್ಷ, ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ತಿಳಿಸಿದರು.

ಜಿಎಸ್‌ಟಿಎನ್‌ ಸಮಸ್ಯೆಗಳ ಪರಿಶೀಲನೆ ಮತ್ತು ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಜಿಎಸ್‌ಟಿ ಮಂಡಳಿ ರಚಿಸಿದ ಸಚಿವರ ತಂಡದ ಸಭೆಯ ಬಳಿಕ ಅವರು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು.

‘ಜಿಎಸ್‌ಟಿಎನ್‌ ಜಗತ್ತಿನಲ್ಲೇ ಅತ್ಯಂತ ದೊಡ್ಡ ಜಾಲ ಆಗಿದ್ದು, ಎರಡೂವರೆ ತಿಂಗಳ ಅವಧಿಯಲ್ಲಿ 22 ಕೋಟಿಗೂ ಹೆಚ್ಚು ಇನ್‌ವೈಸ್ ಅಪ್‌ಲೋಡ್‌ ಮಾಡಲಾಗಿದೆ. ಹಳೇ ಮತ್ತು ಹೊಸ ಡೀಲರುಗಳು ಸೇರಿದಂತೆ 85 ಲಕ್ಷಕ್ಕೂ ಹೆಚ್ಚು ಡೀಲರ್‍ಗಳು ಜಿಎಸ್‌ಟಿಎನ್‌ ಅಡಿ ನೋಂದಾಯಿಸಿಕೊಂಡಿದ್ದಾರೆ’ ಎಂದರು.

‘ತೆರಿಗೆದಾರರು ತೆರಿಗೆ ಪಾವತಿಯ ಎಲ್ಲ ಮಾಹಿತಿಗಳನ್ನು ಆನ್‍ಲೈನ್‍ನಲ್ಲೇ ದಾಖಲಿಸಲಾಗಿದೆ. ಹೀಗೆ ದಾಖಲಿಸುವ ಸಂದರ್ಭದಲ್ಲಿ ಕಂಡುಬಂದಿರುವ ತಾಂತ್ರಿಕ ದೋಷಗಳ ಕುರಿತು ತೆರಿಗೆ ಸಲಹೆಗಾರರು, ತಜ್ಞರು, ಬ್ಯಾಂಕರುಗಳು, ತೆರಿಗೆದಾರರು ಹೀಗೆ ಎಲ್ಲಾ ಭಾಗೀದಾರರ ಜೊತೆ ಸಮಾಲೋಚನೆ ನಡೆಸಿ ಸಮಸ್ಯೆಗಳನ್ನು ಗುರುತಿಸಲಾಗಿದೆ. ಜಿಎಸ್‌ಟಿಎನ್‌ ತಂತ್ರಾಂಶ ಅಭಿವೃದ್ಧಿಪಡಿಸಿರುವ ಇನ್ಫೊಸಿಸ್ ಸಂಸ್ಥೆಯ ಜೊತೆ ಈ ಕುರಿತು ವಿವರವಾಗಿ ಚರ್ಚಿಸಲಾಗಿದೆ. ಎಲ್ಲ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಗಡುವು ನಿಗದಿಪಡಿಸಲಾಗಿದೆ’ ಎಂದು ಅವರು ವಿವರಿಸಿದರು.

‘ಪ್ರತಿ 15 ದಿನಗಳಿಗೊಮ್ಮೆ ಸಭೆ ಸೇರಿ ತಾಂತ್ರಿಕ ದೋಷಗಳ ಪರಿಹಾರಗಳ ಅನುಷ್ಠಾನವನ್ನು ಪರಿಶೀಲಿಸಲಾಗುವುದು. ಜಿಎಸ್‌ಟಿ ಹೊಸ ವ್ಯವಸ್ಥೆ ಆಗಿರುವುದರಿಂದ, ಆರಂಭದಲ್ಲಿ ಈ ರೀತಿ ಸಮಸ್ಯೆಗಳು ಸಹಜ’ ಎಂದು ಸಮಜಾಯಿಷಿ ನೀಡಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೆವಿನ್ಯೂ ಕಾರ್ಯದರ್ಶಿ ಹಸ್ಮುಖ್‌ ಆಧಿಯಾ, ‘ಯಾವುದೇ ಕಾರಣಕ್ಕೂ ಜಿಎಸ್‌ಟಿ 3 ಬಿ ರಿಟರ್ನ್ ಸಲ್ಲಿಕೆ ಅವಧಿಯನ್ನು ವಿಸ್ತರಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ತಂಡದ ಸದಸ್ಯರಾದ ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡ, ತೆಲಂಗಾಣದ ಹಣಕಾಸು ಸಚಿವ ಇ. ರಾಜೇಂದ್ರ, ಜಿಎಸ್‌ಟಿಎನ್ ಅಧ್ಯಕ್ಷ ಅಜಯ್ ಭೂಷಣ್ ಪಾಂಡೆ ಮತ್ತು ಸಿಇಒ ಪ್ರಕಾಶ್ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT