ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗಳು ಹೆದರಿಕೆ ಬೇಡ, ಇರಲಿ ಧೈರ್ಯ

Last Updated 17 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಇದೀಗ ಶಾಲೆಗಳಲ್ಲಿ ನವೆಂಬರ್ ತಿಂಗಳಿನಲ್ಲಿ ಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಭರದಿಂದ ಸಾಗುತ್ತಿದೆ. ಇದು ಅಗತ್ಯ ಕೂಡ. ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳುವಂತೆ ಮಾಡುವುದು ಸಹ ಶಾಲೆಗಳ ಕರ್ತವ್ಯ. ಶಿಕ್ಷಕರಿಗೆ ಇದೊಂದು ಹೆಚ್ಚುವರಿ ಕಾರ್ಯ. ಆದರೂ ಅದನ್ನು ಅನೇಕರು ಬಹಳ ಅಸ್ಥೆಯಿಂದ ಮಾಡುತ್ತಾರೆ. ಈ ಪರೀಕ್ಷೆಗಳನ್ನು ಮಕ್ಕಳು ಎದುರಿಸುವುದರಿಂದ ಅನೇಕ ಪ್ರಯೋಜನಗಳಿವೆ.

ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳಿಗೆ ಹೇಗೆ ಪ್ರವೇಶ ಸಿಗುತ್ತದೆ. ಅಲ್ಲಿನ ನಡಾವಳಿ ಏನು? ಪರೀಕ್ಷೆಗಳನ್ನು ಹೇಗೆ ನಡೆಸಲಾಗುವುದು? ಅದರ ಅರ್ಜಿಗಳನ್ನು ತುಂಬುವುದು ಹೇಗೆ? ಇತ್ಯಾದಿಗಳ ಕುರಿತು ಮೊದಲ ದರ್ಶನ ಪ್ರಾಯೋಗಿಕ ತರಬೇತಿಯ ಮೂಲಕವೇ ದೊರೆಯುತ್ತದೆ. ಅಲ್ಲದೆ, ಮಕ್ಕಳು ವೇಗವಾಗಿ ಯೋಚಿಸುವುದನ್ನು ಕಲಿಯುತ್ತಾರೆ.

ಇದು ಬಹಳ ಮುಖ್ಯವಾದ ವಿಷಯ. ಮುಂದೆ ಇದು ವಾರ್ಷಿಕ ಪರೀಕ್ಷೆಗಳಲ್ಲಿಯೂ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯಕವಾಗುತ್ತದೆ. ಈ ಪರೀಕ್ಷೆಯನ್ನು ಬರೆದ ಅನುಭವ ಮಕ್ಕಳಿಗೆ ಮುಂದೆ ದೊಡ್ಡ ಲಾಭಗಳನ್ನು ತಂದು ಕೊಡುತ್ತದೆ. ಸರ್ಕಾರ ಸಾಮಾನ್ಯರ ಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಅವುಗಳಲ್ಲಿ ಮುಖ್ಯವಾದದ್ದು ಈ ಪರೀಕ್ಷೆಗಳು ಒಂದು.

ಮೊದಲಿಗೆ ಎನ್‍ಎಂಎಂಎಸ್ಎಸ್ (ನ್ಯಾಷನಲ್‍ ಮೀನ್ಸ್ ಕಮ್ ಮೆರಿಟ್ ಸ್ಕಾಲರ್‍ಶಿಪ್ ಸ್ಕೀಮ್) ಪರೀಕ್ಷೆಯನ್ನು ನೋಡೋಣ. ಇದೊಂದು ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಮಾನವ ಸಂಪನ್ಮೂಲ ಸಚಿವಾಲಯ ನಡೆಸುವ ಪರೀಕ್ಷೆಯಾಗಿದ್ದು, ಇದನ್ನು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಂಟನೇ ತರಗತಿಯ ಮಕ್ಕಳಿಗೆ ನಡೆಸಲಾಗುವುದು. ಇದು ಪೋಷಕರ ವಾರ್ಷಿಕ ಆದಾಯ ಒಂದೂವರೆ ಲಕ್ಷಕ್ಕೂ ಕಡಿಮೆ ಇದ್ದವರ ಮಕ್ಕಳಿಗೆ ಮೀಸಲು. ಇದೊಂದು ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮವಾಗಿದ್ದು, ಈ ಪರೀಕ್ಷೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳಿಗೆ ಅವರು ದ್ವಿತೀಯ ಪಿಯುಸಿವರೆಗೂ ಪ್ರತಿ ತಿಂಗಳು ಐದು ನೂರು ರೂಪಾಯಿಗಳ ವಿದ್ಯಾರ್ಥಿವೇತನವನ್ನು ನೀಡಲಾಗುವುದು. ಮಕ್ಕಳ ವಿದ್ಯಾಭ್ಯಾಸ ಆರ್ಥಿಕ ಮುಗ್ಗಟ್ಟಿನ ಕಾರಣಗಳಿಂದಾಗಿ ನಿಲ್ಲಬಾರದು ಹಾಗೂ ಅವರು ಕಡ್ಡಾಯವಾಗಿ ಮುಂದಿನ ಹಂತದ ಶಿಕ್ಷಣಕ್ಕೆ ಹೋಗಬೇಕು ಎಂಬ ಸದುದ್ದೇಶದ ಯೋಜನೆಯಿದು. ಪ್ರತಿ ವರ್ಷ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಸದರಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

ಸದ್ಯ ಬಿಇಒ ಕಚೇರಿಗಳಲ್ಲಿ ಅರ್ಜಿಗಳು ದೊರೆಯುತ್ತಿದ್ದು ಸೆಪ್ಟೆಂಬರ್ 21 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ನವೆಂಬರ್ 5ರಂದು ಪರೀಕ್ಷೆ ನಡೆಯಲಿದೆ. ಅರ್ಜಿಗಳು ಉಚಿತವಾಗಿ ಲಭ್ಯವಿದ್ದು ಪರೀಕ್ಷಾ ಶುಲ್ಕ ಇಪ್ಪತ್ತು ರೂಪಾಯಿಗಳನ್ನು ವಿದ್ಯಾರ್ಥಿಗಳು ನೀಡಬೇಕಾಗುತ್ತದೆ. (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ರೂ ಹತ್ತು). ಹೆಚ್ಚಿನ ವಿವರಗಳು ಇಲಾಖೆಯ ಜಾಲತಾಣ http://dsert.kar.nic.in/easp/ntsenmms.asp ದಲ್ಲಿ ದೊರೆಯುತ್ತದೆ.

ಪರೀಕ್ಷೆಯ ಕ್ರಮ ಹೇಗೆ?

ಇದೊಂದು ಪೂರ್ಣ ಲಿಖಿತ ಪರೀಕ್ಷೆಯಾಗಿದ್ದು, ಎರಡು ಭಾಗಗಳಲ್ಲಿ ನಡೆಸಲಾಗುವುದು. ಒಂದು ಬೌದ್ಧಿಕ ಸಾಮರ್ಥ್ಯವನ್ನು ಅಳೆಯುವ ಪರೀಕ್ಷೆ (ಎಂಎಟಿ: ಮೆಂಟಲ್ ಎಬಿಲಿಟಿ ಟೆಸ್ಟ್‌) ಮತ್ತು ಶೈಕ್ಷಣಿಕ ಮಟ್ಟವನ್ನು ಅಳೆಯುವ ಪರೀಕ್ಷೆ (Scholastic aptitude test). ಇದು ತೊಂಬತ್ತು ಪ್ರಶ್ನೆಗಳಿದ್ದು ಕೊಟ್ಟ ಉತ್ತರಗಳಲ್ಲಿ ಸರಿಯುತ್ತರವನ್ನು ಆರಿಸುವ ಪರೀಕ್ಷೆಯಾಗಿರುತ್ತದೆ. ಮೊದಲನೆಯದರಲ್ಲಿ ವಿದ್ಯಾರ್ಥಿಯ ಕಾರಣ ಕೊಡುವ ಸಾಮರ್ಥ್ಯ, ಆಲೋಚನಾ ಸಾಮರ್ಥ್ಯ, ಸರಣಿ ಇತ್ಯಾದಿಗಳಿದ್ದರೆ ಎರಡನೆಯದರಲ್ಲಿ ಕಲಿಕಾ ವಿಷಯಗಳಿಗೆ ಸಂಬಂಧಿಸಿದಂತೆಯೂ ತೊಂಬತ್ತು ಪ್ರಶ‍್ನೆಗಳಿರುತ್ತವೆ. ಇದರ ಪಠ್ಯಕ್ರಮ ಎಂಟನೆಯ ತರಗತಿಯವರೆಗಿನ ವಿಜ್ಞಾನ, ಸಮಾಜ ಮತ್ತು ಗಣಿತದ ಪಠ್ಯ. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ/ಅಂಗವಿಕಲರಿಗೆ ಪರೀಕ್ಷೆಯನ್ನು ಬರೆಯಲು ನಿಯಮಾನುಸಾರ ಹೆಚ್ಚಿನ ಸಮಯವನ್ನು ಕೊಡಲಾಗುತ್ತದೆ. ಹಿಂದಿನ ಪ್ರಶ‍್ನಪತ್ರಿಕೆ ಹಾಗೂ ಇತರ ಸಹಾಯಕ ಮಾಹಿತಿ ಮೇಲ್ಕಾಣಿಸಿದ ಜಾಲತಾಣದಲ್ಲಿ ಲಭ್ಯ.

ಎನ್‍ಟಿಎಸ್‍ಇ ಪರೀಕ್ಷೆ

ನ್ಯಾಷನಲ್ ಟ್ಯಾಲೆಂಟ್‍ ಸರ್ಚ್ ಎಕ್ಸಾಮ್‍. ಇದು ಎನ್‍ಸಿಇಆರ್‍ಟಿ ನಡೆಸುವ ಪರೀಕ್ಷೆಯಾಗಿದ್ದು ಇದನ್ನು 1963ರಿಂದ ನಡೆಸಿಕೊಂಡು ಬರಲಾಗುತ್ತಿದೆ. ಎರಡು ಹಂತಗಳಲ್ಲಿ ಈ ಪರೀಕ್ಷೆ ನಡೆಲಿದ್ದು ಇದು ಹತ್ತನೇ ತರಗತಿಯ ಮಕ್ಕಳಿಗೆ ಮಾತ್ರ.

ಈ ಪರೀಕ್ಷೆಯಲ್ಲಿ ಯಶಸ್ವಿಯಾದವರಿಗೆ ಎಂಜಿನಿಯರಿಂಗ್, ವೈದ್ಯಕೀಯವೂ ಸೇರಿದಂತೆ ಪಿಎಚ್‍.ಡಿ. ಅಧ್ಯಯನದವರೆಗೂ ಮಾಸಿಕ ವಿದ್ಯಾರ್ಥಿ ವೇತನ ದೊರೆಯಲಿದೆ. ಪರೀಕ್ಷೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಡೆಯುತ್ತದೆ. ಹೀಗಾಗಿ, ತೀವ್ರ ಸ್ಪರ್ಧೆಯಿರುತ್ತದೆ. ಇದರ ಪಠ್ಯಕ್ರಮ ಹತ್ತನೆಯ ತರಗತಿಯವರೆಗಿನದ್ದಾಗಿದ್ದು ಇಂಗ್ಲಿಷ್‍ ಭಾಷಾ ವಿಷಯವೂ ಸೇರಿರುತ್ತದೆ. ರಾಜ್ಯಮಟ್ಟದ ಪರೀಕ್ಷೆ 180 ಅಂಕಗಳಿಗೆ ನಡೆದರೆ, ರಾಷ್ಟ್ರಮಟ್ಟದ ಪರೀಕ್ಷೆ 200 ಅಂಕಗಳಿಗೆ ನಡೆಯುತ್ತದೆ. ಇದು ಸಹ ಬಹು ಉತ್ತರಗಳಲ್ಲಿ ಸರಿ ಉತ್ತರವನ್ನು ಆರಿಸುವ ಪ್ರಶ್ನೆಗಳನ್ನು ಹೊಂದಿರುತ್ತದೆ. ಪಾಸಾಗಲು ಶೇ.40 ಅಂಕಗಳನ್ನು ಗಳಿಸಬೇಕು (ಮೀಸಲಾತಿ ವರ್ಗಕ್ಕೆ ಶೇ. 32). ಕಾಲ ಮಿತಿ ಎಲ್ಲರಿಗೂ ತೊಂಬತ್ತು ನಿಮಿಷಗಳು ಮಾತ್ರ.

ತಯಾರಿ ಹೇಗೆ?

ಎನ್‍ಸಿಇಆರ್‍ಟಿ ಜಾಲತಾಣದಲ್ಲಿ ಪೂರಕ ಮಾಹಿತಿ, ಹಳೆಯ ಪ್ರಶ್ನಪತ್ರಿಕೆ (ಉತ್ತರಗಳೊಂದಿಗೆ) ಲಭ್ಯವಿದ್ದು ಅವನ್ನು ಇಳಿಸಿಕೊಂಡು ಅಭ್ಯಾಸ ಮಾಡಬಹುದು. ಇದರ ಜೊತೆಗೆ ಮಾರುಕಟ್ಟೆಯಲ್ಲಿ ಅನೇಕ ಪುಸ್ತಕಗಳು ದೊರೆಯುತ್ತವೆ. ಕನ್ನಡದ ಕೆಲವು ಪುಸ್ತಕಗಳು ಸಹ ಮಾರುಕಟ್ಟೆಯಲ್ಲಿವೆ. ಕೆಲವೆಡೆ ತರಬೇತಿಯನ್ನು ಸಹ ನೀಡಲಾಗುತ್ತದೆ. ಇವುಗಳ ಯುಕ್ತ ಪ್ರಯೋಜನ ಪಡೆದುಕೊಂಡು ಪರೀಕ್ಷೆಯಲ್ಲಿ ಯಶಸ್ಸು ಕಾಣಬಹುದು.

ವಿದ್ಯಾರ್ಥಿಗಳ ವಿಷಯಜ್ಞಾನ ಮತ್ತು ಆಲೋಚನಾ ಕ್ರಮ ಎರಡೂ ಪರೀಕ್ಷೆಗಳಲ್ಲಿ ಬಹಳ, ಬಹಳ ಮುಖ್ಯ. ಇದನ್ನು ಅಭ್ಯಾಸ ಮಾಡಿ ಗಳಿಸಿಬೇಕು. ಬಾಯಿಪಾಠ ಮಾಡುವುದರಿಂದ ಈ ಪರೀಕ್ಷೆಗಳಲ್ಲಿ ಯಶಸ್ಸು ಸಿಗದು! ವಿಷಯವನ್ನು ಸರಿಯಾಗಿ ಮತ್ತು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು. ನೂರಾರು, ಸಾವಿರಾರು ಸಮಸ್ಯೆಗಳನ್ನು ವಿದ್ಯಾರ್ಥಿ ತಾನೇ ಬಿಡಿಸಬೇಕು. ಈ ಸಾಮರ್ಥ್ಯ ಗಳಿಸಿದ ನಂತರ ನಿರ್ದಿಷ್ಟ ಸಮಯಲ್ಲಿ ಇಂತಿಷ್ಟು ಸಮಸ್ಯೆಗಳನ್ನು ಬಿಡಿಸುವುದು ಎಂಬ ಗುರಿಯಿಟ್ಟುಕೊಂಡು ಅಭ್ಯಾಸ ಮಾಡಬೇಕು. ಆಗ ಸಮಸ್ಯೆಗಳನ್ನು ಬಿಡಿಸುವ ಸಾಮರ್ಥ್ಯ ಹಾಗೂ ವೇಗ ತಂತಾನೆ ಬರುತ್ತದೆ. ಚಿತ್ರಗಳುಳ್ಳ ಪ್ರಶ್ನೆಗಳಿರುತ್ತವೆ. ಅವನ್ನು ಬಿಡಿಸಲು ಸಮಾಧಾನವಾಗಿ ಎಲ್ಲ ಚಿತ್ರಗಳನ್ನು ಪರಿಶೀಲಿಸಿ ಬಿಟ್ಟ ಸ್ಥಳದಲ್ಲಿ ಯಾವ ಚಿತ್ರ ಬರುತ್ತದೆ ಎಂಬುದನ್ನು ತೀರ್ಮಾನಿಸಿ ಅದನ್ನು ಹಾಕಬೇಕು. ಇದು ಏನೇನೂ ಕಷ್ಟವಲ್ಲ! ನಿಧಾನವಾಗಿ ಚಿತ್ರಗಳನ್ನು ಒಂದುಕಡೆಯಿಂದ ಪರಿಶೀಲಿಸುತ್ತಾ ಸಾಗಬೇಕು. ಚಿತ್ರದ ಮೇಲೆ ಬೆರಳಿಟ್ಟುಕೊಂಡು ತುಸು ತುಸುವೇ ಮುಂದುವರೆಯುತ್ತ ಅದರ ವಿನ್ಯಾಸ ಹೇಗಿದೆ ಎಂದು ಅರಿಯಬೇಕು. ಆಗ ಬಿಟ್ಟ ಸ್ಥಳ ತುಂಬಲು ಸುಲಭವಾಗುತ್ತದೆ. ಎಷ್ಟು ಹೆಚ್ಚು ಸಮಸ್ಯೆಗಳನ್ನು ಬಿಡಿಸುತ್ತೀರೋ ಅಷ್ಟು ಅನುಭವಿಯಾಗುತ್ತಾರೆ. ಇದನ್ನು ಮಕ್ಕಳಿಗೆ ಹೇಳಿ ಮಾಡಿಸಬೇಕು.

ಅಣಕುಪರೀಕ್ಷೆ

ಶಾಲೆಗಳಲ್ಲಿ ಅಣಕುಪರೀಕ್ಷೆಗಳನ್ನು ನಡೆಸಬೇಕು. ಇವು ಸಾಧ್ಯವಾದಷ್ಟೂ ನೈಜಪರೀಕ್ಷೆಗಳನ್ನು ಹೋಲುವಂತಿರಬೇಕು. ಇದು ಮಕ್ಕಳಿಗೆ ಕೊಡುವ ಧೈರ್ಯ ಅಷ್ಟಿಷ್ಟಲ್ಲ. ಹಾಗೆಯೇ, ಮನೆಯಲ್ಲಿ ಪೋಷಕರು ಬೆಂಬಲವಾಗಿ ನಿಲ್ಲಬೇಕು. ಒಂದು ವೇಳೆ ನಪಾಸಾದರೆ, ‘ನಿನ್ನ ಕೈಲಿ ಇದೇ ಆಗಲಿಲ್ಲ…’ ಎಂಬಂಥ ಮಾತುಗಳನ್ನು ಮಾತ್ರ ಯಾವ ಕಾರಣಕ್ಕೂ ಹೇಳಬಾರದು. ಇಲ್ಲಿ ನಪಾಸಾಗಿದ್ದು ಒಳ್ಳೆಯದಾಯಿತು. ಮುಂದೆ ದೊಡ್ಡ ಪರೀಕ್ಷೆಗಳಲ್ಲಿ ಪಾಸಾಗುವಿಯಂತೆ ಎಂದು ಹೇಳಿ ಹುರುದುಂಬಿಸಬೇಕು.

ಮೇಲೆ ಹೇಳಿದಂತೆ ಈ ಪರೀಕ್ಷೆಗಳಿಂದ ಮಕ್ಕಳಿಗೆ ಸಾಕಷ್ಟು ಅನುಕೂಲತೆಗಳಿದ್ದರೂ ಮುಖ್ಯ ಉದ್ದೇಶ ಅವಶ್ಯವಿರುವ ವಿದ್ಯಾರ್ಥಿಗೆ ಆರ್ಥಿಕ ಸಹಾಯ ಒದಗಿಸಲು ಒಂದು ಮಾನದಂಡ, ಅಷ್ಟೆ! ಹೆಚ್ಚಿನ ಪ್ರಯೋಜನವೆಂದರೆ ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳಿಗೆ ಪ್ರವೇಶ ಸಿಗುತ್ತದೆ. ಇದಕ್ಕಿಂತಲೂ ಹೆಚ್ಚಿಗೆ ಎಳೆದು ಮಕ್ಕಳ ಮನಸ್ಸಿಗೆ ಘಾಸಿಯಾಗದಂತೆ ನೋಡಿಕೊಳ್ಳುವುದು ಪೋಷಕರ ಅತಿ ಮುಖ್ಯವಾದ ಕೆಲಸ. ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳೋಣ, ಪ್ರಯತ್ನವನ್ನು ಮಾಡೋಣ. ಯಶಸ್ಸು ನಮ್ಮದೇ ಎಂಬ ಭಾವದಲ್ಲಿ ಮುಂದುವರೆಯೋಣ. ಒಂದು ವೇಳೆ ಯಶಸ್ಸು ಸಿಗದಿದ್ದಲ್ಲಿ, ಇಡೀ ಜೀವನ ಮುಂದೆ ಇದ್ದೇ ಇದೆ. ತಪ್ಪನ್ನು ಸರಿಪಡಿಸಿಕೊಂಡು ಮುಂದುವರೆಯೋಣ. ಎಲ್ಲ ಸ್ಪರ್ಧಿಗಳಿಗೂ ಶುಭಾಶಯಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT