ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿಯ ಸುವರ್ಣ ಕಾಲ

Last Updated 17 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನಾಲ್ಕು ವರ್ಷಗಳ ಹಿಂದೆ ಆರಂಭವಾದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಹಲವು ಪ್ರಥಮಗಳನ್ನು ಸಾಧಿಸಿ ಚರಿತ್ರೆಯ ಪುಟಗಳಲ್ಲಿ ತನ್ನ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಅಚ್ಚೊತ್ತಿದೆ.

ದೇಶಿ ಟೂರ್ನಿಗಳಲ್ಲಿ ಗೋವಾದ ಡೆಂಪೊ, ಸ್ಪೋರ್ಟಿಂಗ್‌ ಕ್ಲಬ್‌ ಡಿ ಗೋವಾ, ಕೋಲ್ಕತ್ತದ ಮೋಹನ್‌ ಬಾಗನ್‌, ಚರ್ಚಿಲ್‌ ಬ್ರದರ್ಸ್‌, ಈಸ್ಟ್‌ ಬೆಂಗಾಲ್‌, ಮೊಹಮ್ಮಡನ್ ತಂಡಗಳ ಪ್ರಾಬಲ್ಯಕ್ಕೆ ಕಡಿವಾಣ ಹಾಕಿದ ಹೆಗ್ಗಳಿಕೆ ಬಿಎಫ್‌ಸಿಗೆ ಸಲ್ಲುತ್ತದೆ.

2013ರಲ್ಲಿ ಐ ಲೀಗ್‌ ಟೂರ್ನಿಗೆ ಅಡಿ ಇಟ್ಟಿದ್ದ ಬೆಂಗಳೂರಿನ ತಂಡ ಚೊಚ್ಚಲ ಪ್ರಯತ್ನದಲ್ಲೇ ಕಿರೀಟ ಮುಡಿಗೇರಿಸಿಕೊಂಡು ಹೊಸ ಭಾಷ್ಯ ಬರೆದಿತ್ತು. ಪದಾರ್ಪಣೆ ಮಾಡಿದ ವರ್ಷವೇ ತಂಡವೊಂದು ಟ್ರೋಫಿ ಎತ್ತಿಹಿಡಿದಿದ್ದು ಐ ಲೀಗ್‌ ಇತಿಹಾಸದಲ್ಲೇ ಮೊದಲು.

2014–15ರ ಋತು ಬಿಎಫ್‌ಸಿ ಪಾಲಿಗೆ ಅವಿಸ್ಮರಣೀಯ. ಐ ಲೀಗ್‌ನಲ್ಲಿ ರನ್ನರ್ಸ್‌ ಅಪ್‌ ಆಗಿದ್ದ ತಂಡ ಫೆಡರೇಷನ್‌ ಕಪ್‌ನಲ್ಲಿ  ಚಾಂಪಿಯನ್‌ ಪಟ್ಟ ಅಲಂಕರಿಸಿ ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆ ಮಾಡಿಕೊಂಡಿತ್ತು. ಜೊತೆಗೆ ಡುರಾಂಡ್‌ ಕಪ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಸಾಧನೆಗೂ ಭಾಜನವಾಗಿತ್ತು.

2016ರಲ್ಲೂ ‘ದಿ ಬ್ಲೂಸ್‌’ ಯಶಸ್ಸಿನ ಪಯಣ ಮುಂದುವರಿದಿತ್ತು. ಐ ಲೀಗ್‌ನಲ್ಲಿ ಎರಡನೇ ಬಾರಿ ಟ್ರೋಫಿ ಎತ್ತಿಹಿಡಿದು ನವ ಮನ್ವಂತರಕ್ಕೆ ನಾಂದಿ ಹಾಡಿದ್ದ ತಂಡ ಎಎಫ್‌ಸಿ ಕಪ್‌ನಲ್ಲಿ ಫೈನಲ್‌ ಪ್ರವೇಶಿಸಿ ಚಾರಿತ್ರಿಕ ಸಾಧನೆ ಮಾಡಿತ್ತು. ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಸಾಧನೆ ಮಾಡಿದ ಭಾರತದ ಮೊದಲ ತಂಡ ಎಂಬ ಶ್ರೇಯಕ್ಕೂ ಪಾತ್ರವಾಗಿತ್ತು. ಈ ಮೂಲಕ ಪಶ್ಚಿಮ ಏಷ್ಯಾದ ಕ್ಲಬ್‌ಗಳ ಆಧಿಪತ್ಯಕ್ಕೆ ಅಂತ್ಯ ಹಾಡಿದ್ದು ಇತಿಹಾಸ.

ಟೂರ್ನಿಯ ಸೆಮಿಫೈನಲ್‌ನಲ್ಲಿ ಮಲೇಷ್ಯಾದ ಜೋಹರ್‌ ದಾರುಲ್‌ ತಜಿಮ್‌ ತಂಡವನ್ನು ಮಣಿಸಿದ್ದ ಬಿಎಫ್‌ಸಿ ಭಾರತದ ಫುಟ್‌ಬಾಲ್‌ ರಂಗದಲ್ಲಿ ನವೋಲ್ಲಾಸ ಮೂಡುವಂತೆ ಮಾಡಿತ್ತು. ಈ ಸಾಧನೆ ಕೇವಲ ಮೂರು ವರ್ಷಗಳ ಅವಧಿಯಲ್ಲಿ ಮೂಡಿಬಂದಿದ್ದು ವಿಶೇಷ.‌

ಬಿಎಫ್‌ಸಿಯ ಯಶಸ್ಸಿನ ನಾಗಾಲೋಟ ಇಷ್ಚಕ್ಕೆ ನಿಂತಿಲ್ಲ. ಈ ವರ್ಷವೂ ತಂಡ ಅಪೂರ್ವ ಸಾಮರ್ಥ್ಯ ತೋರುತ್ತಿದೆ. ಎಎಫ್‌ಸಿ ಕಪ್‌ನಲ್ಲಿ ಮತ್ತೊಮ್ಮೆ ಫೈನಲ್‌ ಪ್ರವೇಶಿಸಿದ್ದು, ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕುವತ್ತ ದಾಪುಗಾಲಿಟ್ಟಿದೆ.

ಕೋಚ್‌ಗಳ ಪರಿಶ್ರಮ

ಬೆಂಗಳೂರಿನ ತಂಡದ ಈ ಸಾಧನೆಯ ಹಿಂದೆ ಕೋಚ್‌ಗಳಾದ ಆ್ಯಷ್ಲೆ ವೆಸ್ಟ್‌ವುಡ್‌ ಮತ್ತು ಅಲ್ಬರ್ಟ್‌ ರೋಕಾ ಅವರ ‍ಪರಿಶ್ರಮವೂ ಅಡಗಿದೆ.

ಆರಂಭದಲ್ಲಿ ತಂಡದ ಆಟಗಾರರ ಪ್ರತಿಭೆಗೆ ಸಾಣೆ ಹಿಡಿದಿದ್ದು ಇಂಗ್ಲೆಡ್‌ನ ವೆಸ್ಟ್‌ವುಡ್‌. 2013ರಲ್ಲಿ ತರಬೇತುದಾರರಾಗಿ ನೇಮಕವಾಗಿದ್ದ ಅವರು ಕಠಿಣ ತರಬೇತಿಯ ಮೂಲಕ ಆಟಗಾರರನ್ನು ಹೊಸ ಸವಾಲುಗಳಿಗೆ ಸಜ್ಜು ಗೊಳಿಸುತ್ತಿದ್ದರು. ಅವರ ಗರಡಿಯಲ್ಲಿ ಪಳಗಿದ್ದ ತಂಡ ಎರಡು ಬಾರಿ ಐ ಲೀಗ್‌ ಮತ್ತು ಒಮ್ಮೆ ಫೆಡರೇಷನ್‌ ಕಪ್‌ನಲ್ಲಿ ಪ್ರಶಸ್ತಿ ಗೆದ್ದಿತ್ತು. 2016ರ ಮೇ ತಿಂಗಳಿನಲ್ಲಿ ಅವರು ಕ್ಲಬ್‌ ತೊರೆದ ನಂತರ ಕೋಚ್‌ ಹುದ್ದೆ ಅಲಂಕರಿಸಿದ್ದ ರೋಕಾ ಕೂಡ ವಿಶಿಷ್ಠ ಬಗೆಯ ತರಬೇತಿಯ ಮೂಲಕ ಆಟಗಾರರಲ್ಲಿ ಹೊಸ ಹುರುಪು ಮೂಡುವಂತೆ ಮಾಡುತ್ತಿದ್ದಾರೆ. ಹೀಗಾಗಿಯೇ ತಂಡ ಯಶಸ್ಸಿನ ಶಿಖರದತ್ತ ಮುಂದಡಿ ಇಡುತ್ತಿದೆ.

ಐಎಸ್‌ಎಲ್‌ನಲ್ಲೂ ನಡೆಯುವುದೇ ಮೋಡಿ

ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ಈ ಬಾರಿ ಇಂಡಿಯನ್‌ ಸೂಪರ್‌ ಲೀಗ್‌ಗೆ (ಐಎಸ್‌ಎಲ್‌) ಪದಾರ್ಪಣೆ ಮಾಡಲಿದ್ದು, ಇದರಲ್ಲೂ ಪ್ರಶಸ್ತಿ ಜಯಿಸುವ ಭರವಸೆ ಮೂಡಿಸಿದೆ.

ಹೊಸ ಮೆರುಗು

ಕರ್ನಾಟಕದಲ್ಲಿ ಫುಟ್‌ಬಾಲ್‌ ಕ್ರೀಡೆಗೆ ವಿಶಿಷ್ಠ ಪರಂಪರೆ ಇದೆ. ಒಲಿಂಪಿಕ್ಸ್‌ ಸೇರಿದಂತೆ ಹಲವು ಪ್ರತಿಷ್ಠಿತ ಕೂಟಗಳಲ್ಲಿ ರಾಜ್ಯದ ಹಲವು ಆಟಗಾರರು ಅಚ್ಚಳಿಯದ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ಶುರುವಾದ ನಂತರ ರಾಜ್ಯದಲ್ಲಿ ಈ ಕ್ರೀಡೆಗೆ ಹೊಸ ಮೆರುಗು ಲಭಿಸಿದೆ. ಕ್ರಿಕೆಟ್‌ನಂತೆಯೇ ಫುಟ್‌ಬಾಲ್‌ ಪಂದ್ಯಗಳು ನಡೆದಾಗಲೂ ಇಲ್ಲಿಯ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಕಿಕ್ಕಿರಿದು ಸೇರುತ್ತಾರೆ. ಬೆಂಗಳೂರಿಗರ ಫುಟ್‌ಬಾಲ್ ಪ್ರೀತಿಯನ್ನು ಇಮ್ಮಡಿಗೊಳಿಸುವಲ್ಲಿ  ಬಿಎಫ್‌ಸಿ ಸಫಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT