ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಗಾರರಿಗೂ ಬೇಡವೇ ವಿಶ್ರಾಂತಿ?

Last Updated 17 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಒಟ್ಟು 45 ದಿನಗಳ ಪ್ರವಾಸ. ಈ ಅವಧಿಯಲ್ಲಿ ಮೂರು ಟೆಸ್ಟ್ ಪಂದ್ಯಗಳು, ಐದು ಏಕದಿನ ಪಂದ್ಯಗಳು ಮತ್ತು ಒಂದು ಟ್ವೆಂಟಿ–20 ಪಂದ್ಯ. ವಾಪಸ್ ಆಗಿ ಹತ್ತು ದಿನಗಳ ನಂತರ ಮತ್ತೆ ಏಕದಿನ ಸರಣಿ. ನಂತರ ಟೆಸ್ಟ್‌, ಟ್ವೆಂಟಿ–20 ಪಂದ್ಯಗಳ ಸಾಲು; ಮೂರು ತಿಂಗಳು ಬಿಡುವಿಲ್ಲದ ಚಟುವಟಿಕೆ. ಇದು ಶ್ರೀಲಂಕಾ ಪ್ರವಾಸ ಮುಗಿಸಿ ಬಂದಿರುವ ಭಾರತ ಕ್ರಿಕೆಟ್ ತಂಡದ ವಿಷಯ.

ಇನ್ನೊಂದು ಕಡೆ ಮೂರು ತಿಂಗಳು ನಡೆಯುವ ಪ್ರೊ ಕಬಡ್ಡಿ ಟೂರ್ನಿಯಲ್ಲಿ ನಿತ್ಯವೂ ಪಂದ್ಯಗಳು. ಅತ್ತ ಅಂತರರಾಷ್ಟ್ರೀಯ ಟೆನಿಸ್‌ನಲ್ಲಿ ಮೇಲಿಂದ ಮೇಲೆ ಟೂರ್ನಿಗಳು. ಬ್ಯಾಡ್ಮಿಂಟನ್ ಕಥೆಯೂ ಭಿನ್ನವಲ್ಲ. ಇದನ್ನೆಲ್ಲ ಗಮನಿಸುವವರಲ್ಲಿ ಸಹಜವಾಗಿ ಮೂಡುವ ಪ್ರಶ್ನೆಗಳಿವೆ. ಆಟಗಾರರಿಗೆ ದಣಿವಾಗುವುದಿಲ್ಲವೇ ಎಂದು ಕೆಲವರು ಕೇಳಿದರೆ, ಇನ್ನು ಕೆಲವರು ಇವರ‍್ಯಾರಿಗೂ ವಿಶ್ರಾಂತಿ ಬೇಡವೇ ಎಂದು ಕೇಳುತ್ತಾರೆ.

‘ಭಾರತ ಕ್ರಿಕೆಟ್ ತಂಡದವರಿಗೆ ವಿಶ್ರಾಂತಿ ಬೇಕಾಗಿದೆ, ಬಿಸಿಸಿಐ ಸ್ವಂತ ವಿಮಾನ ಖರೀದಿಸಿ ಅದರಲ್ಲೇ ಆಟಗಾರರನ್ನು ಪಂದ್ಯಗಳಿಗೆ ಕರೆದುಕೊಂಡು ಹೋದರೆ ಆಯಾಸ ಕಡಿಮೆ ಮಾಡಬಹುದು’ ಎಂದು ಹಿರಿಯ ಕ್ರಿಕೆಟಿಗ ಕಪಿಲ್‌ದೇವ್ ಹೇಳಿದ ನಂತರವಂತೂ ಈ ಪ್ರಶ್ನೆಗೆ ಸಂಬಂಧಿಸಿದ ವಿಷಯ ಹೆಚ್ಚು ಚರ್ಚೆಗೆ ಒಳಗಾಗಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ತಾಸುಗಟ್ಟಲೆ ಮೈದಾನದಲ್ಲಿ ಕಳೆಯುವ ಫೀಲ್ಡರ್‌ಗಳು, ಓಡಿ ಬಂದು 10–20 ಓವರ್ ಬೌಲಿಂಗ್‌ ಮಾಡುವ ವೇಗಿಗಳು, 200, 300, 400ರಷ್ಟು ಎಸೆತ ಎದುರಿಸಿ ಶತಕ, ದ್ವಿಶತಕ ಗಳಿಸುವ ಬ್ಯಾಟ್ಸ್‌ಮನ್‌ಗಳು, ವಿಕೆಟ್ ಹಿಂದೆ ಕುಳಿತುಕೊಂಡು ಚೆಂಡಿಗೆ ಹೊಂಚು ಹಾಕುವ, ಎಡ–ಬಲಕ್ಕೆ ಬಾಗುವ, ಡೈವ್ ಮಾಡುವ ಕೀಪರ್‌ಗಳು...ಹೀಗೆ ಕ್ರಿಕೆಟ್‌ನಲ್ಲಿ ದೇಹ ದಂಡಿಸುವ ಕಾರ್ಯ ಹೆಚ್ಚು. ಹಾಕಿ–ಫುಟ್‌ಬಾಲ್‌ನಲ್ಲಿ ಓಡಾಟ ಹೆಚ್ಚು. ಬ್ಯಾಡ್ಮಿಂಟನ್, ಟೆನಿಸ್‌ನಲ್ಲಿ ಉದ್ದುದ್ದ ರ‍್ಯಾಲಿಗಳು ಎಂಥವರನ್ನೂ ಏದುಸಿರು ಬಿಡುವಂತೆ ಮಾಡಬಲ್ಲವು. ಕಬಡ್ಡಿಯಲ್ಲಿ ನಿಮಿಷಕ್ಕೆ ಎರಡು ರೈಡ್‌ಗಳ ನಡುವೆ ಆಟಗಾರರು ಸುಧಾರಿಸಿಕೊಳ್ಳುವುದಕ್ಕೆ ಅವಕಾಶ ಸಿಗುವುದೇ ಕಡಿಮೆ.

ಈ ಎಲ್ಲ ಸಂದರ್ಭಗಳನ್ನು ಕ್ರೀಡಾಪಟುಗಳು ಹೇಗೆ ನಿಭಾಯಿಸುತ್ತಾರೆ ಎಂಬುದು ಅನೇಕರಿಗೆ ಉತ್ತರ ಸಿಗದ ಪ್ರಶ್ನೆಯಾಗಿಯೇ ಕಾಡುತ್ತಿದೆ.

ವಿಶ್ರಾಂತಿ ಬೇಕು ಎಂದು ಎಲ್ಲ ಆಟಗಾರರೂ ಬಯಸುತ್ತಾರೆ. ಕೆಲವರು ಇದನ್ನು ಪರೋಕ್ಷವಾಗಿ ಹೇಳಿದ್ದಾರೆ ಕೂಡ.

ಗಾಯಗಳಾಗುವ ಮತ್ತು ಸಾಮರ್ಥ್ಯ ಕುಂದುವ ಸಾಧ್ಯತೆ ಇರುವುದರಿಂದ ಆಟಗಾರರಿಗೆ ವಿಶ್ರಾಂತಿ ನೀಡುವ ಅಗತ್ಯವನ್ನು ಕೋಚ್‌ಗಳು, ಫಿಟ್‌ನೆಸ್ ಸಿಬ್ಬಂದಿ, ಟ್ರೇನರ್‌ಗಳು ಸದಾ ಪ್ರತಿಪಾದಿಸುತ್ತ ಬಂದಿದ್ದಾರೆ.

‘ಕ್ರೀಡಾಪಟುಗಳಿಗೆ ವಿಶ್ರಾಂತಿ ಅತ್ಯಗತ್ಯ. ದಿನಗಟ್ಟಲೆ, ತಾಸುಗಟ್ಟಲೆ ಅಂಗಳದಲ್ಲಿ ಕಳೆಯುವ ಕ್ರಿಕೆಟ್ ಆಟಗಾರರಿಗಂತೂ ಇದು ತೀರಾ ಅನಿವಾರ್ಯ ಎಂದು ಹೇಳುತ್ತಾರೆ, ಕ್ರೀಡಾಪಟುಗಳ ಫಿಟ್‌ನೆಸ್‌ ತರಬೇತುದಾರ ವಿಲಾಸ ನೀಲಗುಂದ.

‘ಎಷ್ಟೇ ಫಿಟ್ ಆಗಿದ್ದರೂ ನಿರಂತರ ಆಟದಲ್ಲಿ ತೊಡಗುವುದರಿಂದಾಗಿ ಕ್ರೀಡಾಪಟುಗಳ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ವಿಶ್ರಾಂತಿ ಇಲ್ಲದೆ ಕ್ರೀಡೆಯಲ್ಲಿ ತೊಡಗುವವರಿಗೆ ಗಾಯಗಳಾದರಂತೂ ಚೇತರಿಸಿಕೊಳ್ಳುವುದು ತುಂಬ ಕಷ್ಟ. ಇದರಿಂದ ವೃತ್ತಿ ಬದುಕು ಕೊನೆಗಾಣುವ ಸಾಧ್ಯತೆಗಳೂ ಇವೆ’ ಎಂದು ಅವರು ಹೇಳುತ್ತಾರೆ.

ವಿಶ್ರಾಂತಿ ಇಲ್ಲದೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಒತ್ತಡ, ಹಸಿವು ಇಲ್ಲದಾಗುವುದು, ಅತಿಯಾದ ದಣಿವು, ಅನಾರೋಗ್ಯದಿಂದ ಬೇಗ ಚೇತರಿಸಿಕೊಳ್ಳಲು ಸಾಧ್ಯವಾಗದೇ ಇರುವುದು, ವ್ಯಕ್ತಿತ್ವದಲ್ಲಿ ಬದಲಾವಣೆ, ಗಂಟುಗಳಲ್ಲಿ ನಿರಂತರ ನೋವು, ಮಹಿಳೆಯರ ಮುಟ್ಟಿನಲ್ಲಿ ಭಾರಿ ಏರಿಳಿತ ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳಬಹುದು ಎಂದು ವೈದ್ಯಕೀಯ ಕ್ಷೇತ್ರವೂ ಹೇಳುತ್ತದೆ.

ಫಿಟ್‌ನೆಸ್ ಮತ್ತು ವಿಶ್ರಾಂತಿಯ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಮತ್ತು ಶ್ರೀಲಂಕಾ ತಂಡಗಳ ಎದುರು ಸರಣಿಗಳನ್ನು ಆಡಲು ಭಾರತ ಕ್ರಿಕೆಟ್ ತಂಡ ಸಜ್ಜಾಗುತ್ತಿದೆ. ಶ್ರೀಲಂಕಾದಿಂದ ವಾಪಸಾಗಿರುವ ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡದೆ ಆಸ್ಟ್ರೇಲಿಯಾ ವಿರುದ್ಧ ಮೊದಲ ಮೂರು ಏಕದಿನ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ.

ಮುಂದಿನ ಪಂದ್ಯಗಳು ಮತ್ತು ಸರಣಿಯಲ್ಲಿ ಯಾರಿಗೆ ವಿಶ್ರಾಂತಿ, ಎಷ್ಟು ಮಂದಿಗೆ ವಿರಾಮ ನೀಡಲು ಆಯ್ಕೆ ಮಂಡಳಿ ಮುಂದಾಗುತ್ತದೆ ಎಂಬುದನ್ನು ಕಾದು ನೋಡಬೇಕು.

ವಿದೇಶ ಪ್ರವಾಸ ಹೆಚ್ಚು ಪ್ರಯಾಸಕರ

ದೇಶದಲ್ಲಿ ಓಡಾಡುವುದರಿಂದ ಆಗುವ ಆಯಾಸಕ್ಕೂ ವಿದೇಶ ಪ್ರವಾಸದಿಂದ ಆಗುವ ದಣಿವಿಗೂ ವ್ಯತ್ಯಾಸವಿದೆ. ವಿದೇಶಕ್ಕೆ ತೆರಳುವ ಕ್ರೀಡಾಪಟುಗಳು ದೈಹಿಕವಾಗಿ ಹೆಚ್ಚು ಬಳಲುತ್ತಾರೆ. ಇದು ಮಾನಸಿಕವಾಗಿಯೂ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರಿಂದ ಅವರ ಆಟದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.

ಇಂಥ ಸಂದರ್ಭದಲ್ಲಿ ಆಗುವ ನೋವು ಅಥವಾ ಗಾಯದಿಂದ ಸುಧಾರಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ. ಸಮಸ್ಯೆಯ ನಡುವೆಯೇ ಆಡಲು ಮುಂದಾದರೆ ಹೆಚ್ಚು ತೊಂದರೆ ಕಾಡುತ್ತದೆ. ಆದ್ದರಿಂದ ಆಟಗಾರರಿಗೆ ವಿಶ್ರಾಂತಿ ಮುಖ್ಯ.

ಡಾ.ಕಿರಣ ಕುಲಕರ್ಣಿ

ಕ್ರೀಡಾ ವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT