ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊಳ’ದಲ್ಲಿ ಕಂಡ ಬಿಂಬಗಳು

Last Updated 17 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಒಂದು ನಾಟಕ ನಮ್ಮೊಳಗೆ ಹೇಗೆ ನಾಟಿಕೊಳ್ಳುತ್ತದೆ ಎನ್ನುವುದನ್ನು ವಿವರಿಸುವುದು, ಯಾವುದು ಒಳ್ಳೆಯ ನಾಟಕ ಎಂಬ ಪ್ರಶ್ನೆಗೆ ಎರಡು ಸಾಲಿನ ಉತ್ತರ ಹುಡುಕುವಷ್ಟೇ ಕ್ಲಿಷ್ಟ. ಹೀಗೆ ನಾವು ಮರೆತ ಅಥವಾ ಜಾಣತನದಿಂದ ಮುಚ್ಚಿಟ್ಟುಕೊಂಡ ನಮ್ಮದೇ ಬಿಂಬಗಳನ್ನು ತೋರಿಸಿ ಬೆಚ್ಚಿಬೀಳಿಸುವ ನಾಟಕ 'ಕೊಳ'. ರಂಗಕರ್ಮಿ ಅಚ್ಯುತ್‌ ಕುಮಾರ್‌ ಅವರು ಈ ನಾಟಕವನ್ನು ‘ಥಿಯೇಟರ್ ತತ್ಕಾಲ್‌’ ರಂಗತಂಡಕ್ಕಾಗಿ ನಿರ್ದೇಶಿಸಿದ್ದಾರೆ.

ಈ ಕೊಳದ ಜಲಗನ್ನಡಿಯಲ್ಲಿ ಕಾಣುವ ಬಿಂಬಗಳು - ಅಹಂಕಾರ, ಆತ್ಮವಂಚನೆ, ಲಾಲಸೆ, ಸಮಯಸಾಧಕ ಗುಣಗಳ ಕಲ್ಮಶಗಳಿಂದ ಬದಲಾಗಿ ಹೋಗಿರುವ - ದಿನವೂ ಕನ್ನಡಿಯೆದುರು ನಿಂತು ನೋಡಿಕೊಳ್ಳುವ ನಮ್ಮ ಮುಖವಾಡಗಳಲ್ಲ. ಅವುಗಳ ಹಿಂದೆ ಉಸಿರುಗಟ್ಟಿಕೊಂಡು ನಲುಗುತ್ತ ದಿನದಿನವೂ ಛಿದ್ರಗೊಳ್ಳುತ್ತಿರುವ ಬಿಂಬಗಳು.

ಮಹೇಶ್ ಎಲೆಕುಂಚವಾರ ಅವರು ಮರಾಠಿಯಲ್ಲಿ ಬರೆದಿರುವ ತ್ರಿವಳಿ ನಾಟಕಗಳ ಎರಡನೇ ಭಾಗ ‘ಕೊಳ’. ನಂದಿನಿ ಕೆ.ಆರ್. ಮತ್ತು ಪ್ರಶಾಂತ್ ಹಿರೇಮಠ ಇದನ್ನು ಸಶಕ್ತವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಪಠ್ಯ ಮತ್ತು ಪ್ರದರ್ಶನ ಎರಡೂ ದೃಷ್ಟಿಯಿಂದಲೂ ಉತ್ತಮ ನಾಟಕ ಇದು.

ಉತ್ತರ ಕರ್ನಾಟಕದ ದೇಶಪಾಂಡೆ ಮನೆತನದ ಮನೆಯೊಳಗೇ ನಡೆಯುವ ಈ ಕಥನ ಆ ಚೌಕಟ್ಟಿನಲ್ಲಿಯೇ ಹಲವು ಲೋಕಗಳನ್ನು ತೋರಿಸುತ್ತಾ ಹೋಗುತ್ತದೆ. ಇಂದು ನಮ್ಮ ಬದುಕಿನ ಇಡಿತನವನ್ನು ಹಂತಹಂತವಾಗಿ ಒಡೆಯುತ್ತಿರುವ ಹೊರಜಗತ್ತಿನ ಛಿದ್ರಶಕ್ತಿಗಳ ಜತೆಜತೆಗೆ ಮನುಷ್ಯನ ಮನಸ್ಸಿನ ಒಳಗೆ ಗೊತ್ತಿಲ್ಲದೆ ಬೆಳೆದುಕೊಂಡಿರುವ ಹಲವು ಲೋಕಗಳನ್ನೂ ಕಾಣಿಸುತ್ತದೆ.

ಸಾಮಾನ್ಯವಾಗಿ ನಮ್ಮಲ್ಲಿ ಮನುಷ್ಯನ ವರ್ತನೆಯನ್ನು ಹಳ್ಳಿ- ನಗರ, ದೇಶ- ವಿದೇಶ, ಕಪ್ಪು- ಬಿಳುಪು, ನೈತಿಕ - ಅನೈತಿಕ ಇಂಥ ಹಲವು ಎರಡು ತಟ್ಟೆಯ ತಕ್ಕಡಿಯಲ್ಲಿಟ್ಟು ತೂಗುವ ಜನಪ್ರಿಯ ಮಾದರಿಯೊಂದಿದೆ. ಹಳ್ಳಿ ಸಮೃದ್ಧವಾಗಿದೆ; ನಗರ ವಿಚ್ಛಿದ್ರವಾಗಿದೆ. ಹಳ್ಳಿಗರು ಮುಗ್ಧರು; ಸಿಟಿಯವರು ಕೃತಕರು ಎಂಬುದೆಲ್ಲ ಇಂಥ ಜನಪ್ರಿಯ ಹೇಳಿಕೆಗಳೇ. ಆದರೆ ಮೂಲತಃ ಮನುಷ್ಯ ಅವನ ಸ್ವಭಾವ ಇವ್ಯಾವ ಹೇಳಿಕೆ- ಸೂತ್ರಗಳಿಗೂ ನಿಲುಕದಂತೆ ಆಚೀಚೆಗಳಲ್ಲಿ ಹರಡಿಕೊಂಡಿರುತ್ತದೆ‌. ‘ಕೊಳ’ ನಾಟಕದಲ್ಲಿ ಹಲವು ಪಾತ್ರಗಳ ನಡುವೆ ನಡೆಯುವ ಸಂಘರ್ಷಗಳು ನಮಗೆ ಈ ಸತ್ಯವನ್ನು ಮತ್ತೆ ಮತ್ತೆ ಹೊಳೆಯಿಸುತ್ತವೆ.

ಎಲ್ಲ ಪಾತ್ರಗಳೂ ತಮ್ಮ ಸುತ್ತ ಭದ್ರ ಗೋಡೆ ಕಟ್ಟಿಕೊಂಡ ವಿಚಿತ್ರ ಮಾನಸಿಕ ಸ್ತಬ್ಧತೆಯಿಂದಲೇ ನಾಟಕ ಶುರುವಾಗುತ್ತದೆ. ಆದರೆ ತಮ್ಮ ಸುತ್ತ ತಾವೇ ಕಟ್ಟಿಕೊಂಡಿರುವ ಮುಳ್ಳುಬೇಲಿಯ ಆಚೆಗೂ ಅವರಿಗೊಂದು ಮಾನವೀಯ ಮುಖವಿದೆ. ಅವರೆಲ್ಲರ ಒಳಮನಸ್ಸು ಎಲ್ಲ ಬೇಲಿಗಳಾಚೆಗಿನ ಬೆಳದಿಂಗಳು ಮಗುಚಿಬಿದ್ದ ಕೊಳದ ದಂಡೆಯಲ್ಲಿ ಪರಸ್ಪರ ಆತು ಕೂತು ಹಗುರಗೊಳ್ಳಲು ತವಕಿಸುತ್ತಿದೆ.

ಹೀಗೆ ಎಲ್ಲರ ಒಳಗಿನ ತಿಳಿನೀರ ಝರಿ ಸರಾಗ ಹರಿಯಲು ಇರುವ ಅಡ್ಡಿ ಯಾವುದು? ಅದು ಹೊರಗಿನದಾ ಅಥವಾ ನಮ್ಮೊಳಗಿನದಾ? ಈ ಎಲ್ಲವನ್ನು ನಿಯಂತ್ರಿಸುವ ಶಕ್ತಿ ಯಾವುದು? ಕೊಳಕ್ಕೆ ಕೊಚ್ಚೆ ಸೇರುತ್ತಿರುವುದು ಕಂಡೂ ತಡೆಯಲಾಗದ ಅಸಹಾಯಕತೆಯ ಮೂಲಬೇರುಗಳು ಎಲ್ಲಿವೆ? ಎಂಬೆಲ್ಲ ಪ್ರಶ್ನೆಗಳನ್ನು ಎಲ್ಲಿಯೂ ವಾಚ್ಯಗೊಳಿಸದೇ ನಮ್ಮೊಳಗೆ ಎಬ್ಬಿಸುತ್ತಲೇ ನಾಟಕ ಬೆಳೆಯುತ್ತ ಹೋಗುತ್ತದೆ.

ಮಗ ಮನೆ ಮಠ ಬಿಟ್ಟು ಯಾವುದೋ ಕೊಳದ ಸೆಳೆತಕ್ಕೆ ಒಳಗಾಗಿ ಆತ್ಮಶೋಧನೆಗೆ ಹೊರಟು ನಿಂತಿರುವಾಗ; ಕರುಳಬಳ್ಳಿಗಾಗಿ ಬಾಗಿಲಲ್ಲಿ ಕೂತು ಕಾಯುತ್ತಲೇ ತಾಯಿ ಅದರ ಆಳದ ಅರಿವನ್ನು ಸಿದ್ಧಿಸಿಕೊಂಡಿದ್ದಾಳೆ. ಮೇಲು ನೋಟಕ್ಕೆ ನಿರ್ಗತಿಕತೆಯ ಅನಿವಾರ್ಯಕ್ಕೆ ಒಳಗಾಗಿ ಎಲ್ಲವನ್ನೂ ಸಹಿಸಿಕೊಂಡಿರುವಂತೆ ಕಾಣುವ ನಂದಿನಿ ತನ್ನ ಕ್ರೂರಿ ಗಂಡನನ್ನು ಮೌನವಾಗಿಯೇ ಸೋಲಿಸುವಷ್ಟು ಕೆಚ್ಚು ಉಳಿಸಿಕೊಂಡಿದ್ದಾಳೆ.

ಪರಮದುಷ್ಟನಾಗಿ ಕಾಣುವ ಪರಾಗನೊಳಗೊಬ್ಬ ಮೃದು ಅನುರಾಗಿಯಿದ್ದಾನೆ. ಹೀಗೆ ಪಾತ್ರಗಳ ವ್ಯಕ್ತಿತ್ವವನ್ನು ಹಲವು ಆಯಾಮಗಳಲ್ಲಿ ಕಟ್ಟಿಕೊಡುತ್ತಲೇ ಅವುಗಳಲ್ಲಿ ನಮ್ಮ ವ್ಯಕ್ತಿತ್ವದ ಬಿಂಬಗಳನ್ನೂ ಕಾಣಿತ್ತಾರೆ ಮಹೇಶ್.

ಪಕ್ಕಾ ಉತ್ತರಕರ್ನಾಟಕದ ಭಾಷೆಯಲ್ಲಿನ ಈ ಪಠ್ಯವನ್ನು ನಟರು ತಮ್ಮದಾಗಿಸಿಕೊಂಡಿರುವ ರೀತಿ ಅನನ್ಯವಾದದ್ದು. ಉತ್ತಮ ಅಭಿನಯದ ಹಲವು ಮಾದರಿಗಳನ್ನು ಈ ನಾಟಕದಲ್ಲಿ ನೋಡಬಹುದು. ಅದರಲ್ಲಿಯೂ ಕಾಳಿಪ್ರಸಾದ್ ಕೆ. ಮತ್ತು ಶೃಂಗ ಬಿ.ವಿ. ಅವರ ನಟನೆಯಂತೂ ಬಹುಕಾಲ ನೆನಪಿನಲ್ಲುಳಿಯುವಂಥದ್ದು.

ಹಾಗೆಯೇ ಭಾಷೆಯಲ್ಲಿಯೇ ಇರುವ ಲಾಸ್ಯದ ನಡುವಿನ ಮೌನವನ್ನು ಗಾಢವಾಗಿ ವಿಸ್ತರಿಸುವ ಸಂಗೀತ, ಅಚ್ಚುಕಟ್ಟಾದ ಬೆಳಕಿನ ವಿನ್ಯಾಸ ಎಲ್ಲವೂ ಈ ನಾಟಕ ಕೃತಿಯ ಘನತೆಯನ್ನು ಹೆಚ್ಚಿಸಿವೆ. ನಮ್ಮೊಳಗೊಂದು ಗಟ್ಟಿಯಾದ ಅನುಭವಶಿಲ್ಪವನ್ನು ಕೆತ್ತಿನಿಲ್ಲಿಸುವ ತಾಕತ್ತು ಈ ನಾಟಕಕ್ಕಿದೆ. ಕಿರಣ್ ನಾಯ್ಕ್, ಅಪೇಕ್ಷಾ ಘಳಗಿ, ಶಾರದಾ ಜಿ. ಎಸ್‌., ಶೈಲಶ್ರೀ, ತೇಜು ಬೆಳವಾಡಿ ಅವರ ಅಭಿನಯವೂ ಗಮನ ಸೆಳೆಯುವಂತಿತ್ತು

ರಂಗತಂಡದ ಸಂಪರ್ಕಕ್ಕೆ: 9901234161

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT