ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವು ಯಾರಿಗೆ ಹೇಳೋಣ

Last Updated 17 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನಿರೂಪಣೆ: ಕಾವ್ಯ ಸಮತಳ

‘ನನ್ನ ಹೆಸರು ರಾಮಮೂರ್ತಿ. ಹತ್ತನೇ ಕ್ಲಾಸು ಓದಿದಿನಿ, 45 ವರ್ಷ ವಯಸ್ಸು. ನನ್ನೂರು ತಮಿಳುನಾಡಿನ ತಿರುವಣ್ಣಾಮಲೈ. ನಂಗೆ ಕನ್ನಡ ಮಾತಾಡೋಕೆ ಚೆನ್ನಾಗೆ ಬರುತ್ತೆ.

ನಮ್ಮಕ್ಕ ನನ್ನ ಬೆಂಗಳೂರಿಗೆ ಕರ್ಕೊಂಡು ಬಂದಿದ್ದು 1981ರಲ್ಲಿ. ಆಗ ಸೋಗೆ ಗರಿ ಹೆಣೆದು ಚಪ್ಪರ ಮಾಡೊಕೆ ಶುರು ಮಾಡ್ದೋನು ಈಗ್ಲೂ ಅದೇ ಕೆಲಸ ಮಾಡ್ತಾ ಇದಿನಿ. ಮೊದ್ಲು ಟಿ.ಆರ್‌.ಮಿಲ್‌ನಲ್ಲಿ ಇದೇ ಕೆಲಸ ಕೂಲಿಗೆ ಮಾಡ್ತಿದ್ದೆ. ಒಂದು ಚಪ್ಪರ ಹೆಣದ್ರೆ 10 ರೂಪಾಯಿ ಸಿಗ್ತಿತ್ತು. ಕಳೆದ 10 ವರ್ಷದಿಂದ ನಾನೇ ಸ್ವಂತವಾಗಿ ರಸ್ತೆ ಬದೀಲಿ ಚಪ್ಪರಕ್ಕೆ ಗರಿ ಹೆಣೆಯೋಕೆ ಸುರುಮಾಡ್ದೆ.

ವಿನಾಯಕ ಟಾಕೀಸ್ ಹತ್ರ ಬಾಡಿಗೆ ಮನೆ ಮಾಡ್ಕಂಡಿದ್ದೀನಿ. ಹೆಂಡತಿ 2 ಗಂಡು ಮಕ್ಕಳು ಇದೀವಿ. ಅಲ್ಲೇ ಮೈಸೂರು ಸರ್ಕಲ್‌ ಹತ್ರ ಇರೋ ಚರ್ಚ್ ಇಸ್ಕೂಲ್‌ನಾಗೆ ಫೀಸು ಕೊಟ್ಟು ಮಕ್ಕಳ್ನಾ ಓದೋಕೆ ಸೇರ್ಸಿದೀನಿ. ಒಬ್ಬ 6ನೇ ಕ್ಲಾಸು ಇನ್ನೊಬ್ಬ 5ನೇ ಕ್ಲಾಸು. ಇಂಗ್ಲೀಷ್‌ನಾಗೆ ಮಾತಾಡ್ತಾರೆ.

ನನ್ನೆಂಡ್ರು ಮನೇಲೇ ಕೆಲಸ ಮಾಡ್ಕಂಡು ಇರ್ತಾಳೆ. ಅಪ್ಪ ಅಮ್ಮ, ತಮ್ಮ ಎಲ್ರೂ ಊರಲ್ಲಿ ವ್ಯವಸಾಯ ಮಾಡ್ಕಂಡಿದಾರೆ. ಹಬ್ಬಕ್ಕೆ, ರಜಕ್ಕೆ ಊರಿಗೆ ಹೋಗ್ತೀವಷ್ಟೆ. ಮಳೆ ಇಲ್ಲ ಬೆಳೆ ಎಲ್ಲಿಂದ ಬರತ್ತೆ ಅದ್ಕೆ ನಂಗೆ ಊರಿಗೆ ವಾಪಸ್ ಹೋಗ್‌ಬೇಕು ಅನ್ಸಿಲ್ಲ.

ಬೆಳಗ್ಗೆ 5 ಗಂಟೆಗೆ ಎದ್ದು ಇಲ್ಲಿಗೆ ಬರ್ತೀನಿ. ತಮಿಳುನಾಡಿಂದ ತೆಂಗಿನ ಗರಿಗಳು ತರ್ತಾರೆ. ಅದ್ನ ಇಳುಸ್ಕೊಂಡು ಆಮೇಲೆ ಹೆಣೆಯೋಕೆ ಕುತ್ಕೋತಿನಿ. 20 ನಿಮಿಷಕ್ಕೆ ಒಂದು ಚಪ್ಪರ ರೆಡಿ ಮಾಡ್ತೀನಿ. 6 ಗಂಟೆ ಮೇಲೆ ಮನೆಗೆ ಹೋಗಿ ಸ್ವಲ್ಪ ಹೊತ್ತು ಮಕ್ಕಳ ಜೊತೆ ಮಾತಾಡ್ಕಂಡು ಇರ್ತೀನಿ. ರಾತ್ರಿ 8 ಗಂಟೆಯಿಂದ ಬೆಳಗಿನ ಜಾವ 2 ಗಂಟೆವರೆಗೆ ಲೋಡಿಂಗ್- ಅನ್‌ಲೋಡಿಂಗ್ ಕೆಲಸಕ್ಕೆ ಹೋಯ್ತಿನಿ. ಆಮ್ಯಾಕೆ ಮನೆಗೋಗಿ ಸ್ಪಲ್ಪ ಹೊತ್ತು ಮಲಗ್ತೀನಿ. ಮತ್ತೆ ಮರುದಿನ ಅದೇ ಕೆಲಸ.

ಒಂದು ಗರಿಗೆ 50 ರೂಪಾಯಿ ಲೆಕ್ಕದಲ್ಲಿ ದಿನಕ್ಕೆ 50 ಗರಿಗಳನ್ನ ಇಳಿಸ್ಕೊಳ್ತೀನಿ. ಹೆಣೆದು ಚಪ್ಪರ ಮಾಡಿದರೆ ಒಂದಿಷ್ಟು ದುಡ್ಡು ಉಳಿಯುತ್ತೆ. ಕಷ್ಟವೋ- ಸುಖವೋ ಹೇಗೋ ಜೀವನ ನಡೆಯುತ್ತೆ.

ಮಳೆಗಾಲದಾಗೆ ಚಪ್ಪರ ನೆಂದು ಹಾಳಾಯ್ತವೆ. ಆಷಾಢದಾಗೆ ಯಾವುದು ಕಾರ್ಯಕ್ರಮ ಇರಲ್ಲ. ಆಗ 2 ತಿಂಗಳು ಪೂರ್ತಿ ಮನೆಲೇ ಇರ್ತೀನಿ. ಕೆಲಸ ಇರಲ್ಲ. ಒಂದು ಚಪ್ಪರ ಹೆಣೆದು ಮೂರು ದಿನ ಇಡಬಹುದು. ಅಷ್ಟರಲ್ಲಿ ವ್ಯಾಪಾರ ಆದ್ರೆ ಸರಿ. ಇಲ್ಲದಿದ್ರೆ ಒಣಗಿ ಹೋಗ್ತವೆ. ಒಣಗಿದ್ರೆ ಬಂಡವಾಳ ಹಾಕಿದ 50 ರೂಪಾಯಿ ವೇಸ್ಟ್ ಆಯ್ತು ಅಂತ್ಲೆ ಅರ್ಥ.

ಇದು ಕಷ್ಟದ ಕೆಲಸ. ಜೀವನ ನಡೆಸೋಕೆ ಏನಾದ್ರು ಮಾಡ್ಲೇ ಬೇಕಲ್ವಾ ಮಾಡ್ತೀನಿ. ಸೊಂಟ, ಬೆನ್ನು, ಮೈಕೈನೋವು ಯಾರಿಗೆ ಹೇಳೋಣ? ಜೀವನ ನಡೆಸ್ಲೇಬೇಕಲ್ವಾ. ನನ್ನ ಮಕ್ಕಳು ಹಿಂಗೆ ಬಾಳಬಾರ್ದು. ಅವರಾದ್ರು ಚೆನ್ನಾಗಿ ಓದಿ ಬುದ್ದಿವಂತರಾಗಲಿ ಅನ್ನೋದಷ್ಟೆ ನನ್ನಾಸೆ.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT