ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರು ಕಾಂಪೋಸ್ಟ್‌ ಚಾಂಪಿಯನ್

Last Updated 17 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

–ಕಲಾವತಿ ಬೈಚಬಾಳ

ಬೆಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ‘ಮನೆಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯವನ್ನು ವಿಂಗಡಿಸಿದರೆ ಮಾತ್ರ ವೈಜ್ಞಾನಿಕ ವಿಲೇವಾರಿ ಸಾಧ್ಯ’ ಎನ್ನುವುದು ಹಳೆಯ ಮಾತು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ನಗರದ ಯಲಹಂಕ ನಿವಾಸಿ ಪದ್ಮಾ ಪಾಟೀಲ ಪ್ರಯತ್ನಿಸುತ್ತಿದ್ದಾರೆ.

* ತ್ಯಾಜ್ಯ ವಿಗಂಡನೆ ಮತ್ತು ಸಾವಯವ ಗೊಬ್ಬರ ತಯಾರಿಕೆ ಪರಿಕಲ್ಪನೆ ಬಂದಿದ್ದು ಹೇಗೆ?
2011ರಲ್ಲಿ ನಾನು ಯಲಹಂಕದಲ್ಲಿ ಅಪಾರ್ಟ್‌ಮೆಂಟ್ ಖರೀದಿಸಿದೆ. ಎಂಬಿಎ ಪದವೀಧರೆಯಾದ ನಾನು ಬಿಬಿಎಂಪಿಯಲ್ಲಿ ಮೂರೂವರೆ ವರ್ಷ ಕಾರ್ಪೊರೇಟರ್ ಆಗಿ ಕೆಲಸ ಮಾಡಿದ್ದೇನೆ. ನಗರದಲ್ಲಿ ಪ್ರತಿದಿನ ಸುಮಾರು 5 ಸಾವಿರ ಟನ್ ತಾಜ್ಯ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಶೇ 60ರಷ್ಟು ಸಾವಯವ ತ್ಯಾಜ್ಯ. ಇದನ್ನು ಸುಲಭವಾಗಿ ಗೊಬ್ಬರವಾಗಿ ಪರಿವರ್ತಿಸಿ, ಮಣ್ಣಿಗೆ ಸೇರಿಸಬಹುದು ಎನ್ನುವ ಯೋಚನೆಯಿಂದ 2012ರಿಂದ ಈ ಕೆಲಸಕ್ಕೆ ಮುಂದಾದೆ.

* ಯೋಜನೆಯ ಆರಂಭದ ಅನುಭವ ಹೇಗಿತ್ತು?
ಆರಂಭದಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಸಾವಯವ ಗೊಬ್ಬರ ತಯಾರು ಮಾಡ್ತಿದ್ದೆ. ನಂತರ ಸುತ್ತಮುತ್ತಲಿನ ಜನರಿಗೂ ತಿಳಿವಳಿಕೆ ನೀಡಲು ಶುರು ಮಾಡಿದೆ. ಬಹುಪಾಲು ಜನರು ನನ್ನನ್ನು ಬೈತಾ ಇದ್ರು. 'ಇದನ್ನೆಲ್ಲಾ ಮಾಡೋಕೆ ಸರ್ಕಾರ ಇದೆ. ನಿಮಗೆ ಯಾಕೆ ಇದೆಲ್ಲಾ?' ಅಂತಿದ್ರು. ಆದ್ರೂ ಛಲ ಬಿಡದೆ ತ್ಯಾಜ್ಯ ವಿಂಗಡಣೆ ಮತ್ತು ಆರೋಗ್ಯದ ಬಗ್ಗೆ ತಿಳಿವಳಿಕೆ ನೀಡುತ್ತಾ ಬಂದೆ. ಜನರಿಗೆ ಸಾಮಾಜಿಕ ಪ್ರಜ್ಞೆ ಬಂತು. ವಾತಾವರಣ ಕಲುಷಿತ ಆಗ್ತಿದೆ ಅನ್ನೋ ಅರಿವಾಯ್ತು. ಇದೀಗ ಜನರು ನನ್ನೊಂದಿಗೆ ಕೈಜೋಡಿಸಿದ್ದಾರೆ.

38 ಜನರ ಒಂದು ಗುಂಪು ಕಟ್ಟಿಕೊಂಡು ಪ್ರತಿನಿತ್ಯ ತ್ಯಾಜ್ಯ ವಿಂಗಡಣೆಯ ಕುರಿತು ಚರ್ಚೆ ಮಾಡ್ತೀವಿ. ಸುತ್ತಮುತ್ತಲಿನ ವಾರ್ಡ್‌ಗಳಲ್ಲಿನ ತ್ಯಾಜ್ಯ ವಿಂಗಡಣೆ ಮತ್ತು ವಿಲೇವಾರಿ ಸಮಸ್ಯೆಗಳಿಗೆ ಪರಿಹಾರ ಮತ್ತು ಸಾವಯವ ಗೊಬ್ಬರ ತಯಾರಿಕೆಯ ಮಾಹಿತಿಯನ್ನು ನಮ್ಮ ಗುಂಪು ನೀಡ್ತಿದೆ. ಪ್ರತಿ ಮನೆಯಲ್ಲೂ ಪ್ಲಾಸ್ಟಿಕ್ ಮತ್ತು ಪೇಪರ್ ಕಪ್‌ಗಳ ಬಳಕೆಯನ್ನು ನಿಲ್ಲಿಸಲಾಗಿದೆ. ಸ್ಟೀಲ್ ಮತ್ತು ಗಾಜಿನ ಲೋಟಗಳ ಬಳಕೆ ಹೆಚ್ಚಾಗಿದೆ.

* ಸಾವಯವ ಗೊಬ್ಬರ ತಯಾರಿಕೆಗೆ ಏನೇನು ಕ್ರಮ ಕೈಗೊಂಡಿರಿ?
ನಮ್ಮ ‘ಗ್ರೀನ್ ಇನಿಷಿಯೇಟಿವ್ ಗ್ರೂಪ್’ ಮೂಲಕ ಸಾವಯವ ಗೊಬ್ಬರ ತಯಾರಿಕೆಗಾಗಿ ಸುಮಾರು 150 ಜನರು ಕೆಲಸ ಮಾಡ್ತಿದ್ದಾರೆ. ಒಟ್ಟು 1332 ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು 8000 ಜನ ವಾಸವಿದ್ದಾರೆ. ಸುತ್ತಮುತ್ತಲಿನ ವಾರ್ಡ್‌ಗಳಲ್ಲಿನ ಪ್ರತಿ ಮನೆಗೂ ಹೋಗಿ ವಿಂಗಡಣೆ ಮಾಡಿದ ತ್ಯಾಜ್ಯ ಸಂಗ್ರಹಿಸಲಾಗುತ್ತದೆ. ಪ್ಲಾಸ್ಟಿಕ್‌ಗಳಲ್ಲಿ ತ್ಯಾಜ್ಯ ಸಂಗ್ರಹಿಸಿದ್ದರೆ ಅದನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಕಾಗದದಲ್ಲಿ ಸಂಗ್ರಹಿಸಿದ ಹಸಿತ್ಯಾಜ್ಯ ಪಡೆದು, ಅದರಿಂದ ಸಾವಯುವ ಗೊಬ್ಬರ ತಯಾರಿಗೆ ಮುಂದಾಗುತ್ತೇವೆ.

* ಸಾವಯವ ಗೊಬ್ಬರ ತಯಾರಿಕೆಯ ಪ್ರಕ್ರಿಯೆಗಳೇನು? ತಯಾರಾಗಲು ಎಷ್ಟು ದಿನ ಬೇಕು?
ನಾವು ‘ಏರೋಬಿಕ್’ ಗೊಬ್ಬರ ತಯಾರಿಕಾ ವಿಧಾನವನ್ನು ಅನುಸರಿಸುತ್ತಿದ್ದೇವೆ. ಈ ವಿಧಾನದಲ್ಲಿ ಹಸಿ ಮತ್ತು ಒಣ ತ್ಯಾಜ್ಯ ಬೇರ್ಪಡಿಸಲಾಗುತ್ತದೆ. ನೆರಳಿರುವ ಪ್ರದೇಶದಲ್ಲಿ ಹಸಿತ್ಯಾಜ್ಯವನ್ನು ಒಂದೆಡೆ ವ್ಯವಸ್ಥಿತವಾದ ರೀತಿಯಲ್ಲಿ (ಡಬ್ಬ, ಟ್ರೇ ಅಥವಾ ಹೊಂಡ) ಸಂಗ್ರಹಿಸಬೇಕು. ಅದಕ್ಕೆ ಕಾರ್ಬನ್‌ ಅಂಶವಿರುವ ಗಿಡದ ಎಲೆ, ಕಟ್ಟಿಗೆ ಹೊಟ್ಟು ಮತ್ತು ಮೈಕ್ರೋ ಆರ್ಗ್ಯಾನಿಕ್ ಪುಡಿಯನ್ನು ಮಿಶ್ರಣ ಮಾಡಬೇಕು. ಆಗಾಗ ಅದನ್ನು ತಿರುವುತ್ತಿರಬೇಕು. 25 ದಿನಗಳ ನಂತರ ಸಾವಯುವ ಗೊಬ್ಬರ ಸಿದ್ಧವಾಗುತ್ತೆ. ಒಂದು ಕೆ.ಜಿ ಸಾವಯವ ಗೊಬ್ಬರ ತಯಾರಾಗಲು ₹100 ವೆಚ್ಚ ತಗಲುತ್ತೆ. ಈಗಾಗಲೇ ನಮ್ಮ ಗುಂಪಿನಿಂದ 130 ಟನ್ ಸಾವಯವ ಗೊಬ್ಬರ ಉತ್ಪಾದನೆ ಆಗಿದೆ. ಒಂದು ಕೆ.ಜಿ ಸಾವಯವ ಗೊಬ್ಬರಕ್ಕೆ ₹ 1.30 ದರ ನಿಗದಿ ಮಾಡಲಾಗಿದೆ.

* ಆದಾಯ ಎಷ್ಟು ಬರುತ್ತೆ?
ಹಸಿ ತ್ಯಾಜ್ಯದ ಸಾವಯವ ಗೊಬ್ಬರ ಮಾರಾಟದಿಂದ ತಿಂಗಳಿಗೆ ₹10,000 ಮತ್ತು ಒಣ ತ್ಯಾಜ್ಯದ ವಿಲೇವಾರಿಯಿಂದ ₹22,000 ಆದಾಯ ಬರುತ್ತೆ. ಮನೆಯಲ್ಲೆ ಕುಳಿತೇ ಸಂಪಾದನೆ ಮಾಡಬಹುದು.

* ‘ಕಾಂಪೋಸ್ಟಿಂಗ್ ಚಾಂಪಿಯನ್’ ನೀವು. ಹೇಗನ್ನಿಸುತ್ತೆ?
ತುಂಬಾ ದೂರ ದೂರದಿಂದ ತಂಡೋಪತಂಡೋಪವಾಗಿ ಜನರು ನಮ್ಮ ಸಂಸ್ಥೆಯನ್ನು ನೋಡಲು ಬರುತ್ತಾರೆ. ಮಾಹಿತಿ ಪಡೆದು, ತ್ಯಾಜ್ಯ ವಿಂಗಡಣೆ ಮೂಲಕ ಸಾವಯವ ಗೊಬ್ಬರ ತಯಾರಿಕೆಗೆ ಮುಂದಾಗಿದ್ದಾರೆ. ಹಲವೆಡೆ ಈ ಕುರಿತು ಮಾಹಿತಿ ನೀಡಲು ಸಂಘ ಸಂಸ್ಥೆಗಳಿಗೆ ಆಗಾಗ ಭೇಟಿ ನೀಡುತ್ತೇನೆ. ಜನರು ನನ್ನನ್ನು ‘ಕಾಂಪೋಸ್ಟಿಂಗ್ ಚಾಂಪಿಯನ್’ ಎಂದು ಗುರುತಿಸುತ್ತಿದ್ದಾರೆ. ನನ್ನ ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ.

ಪದ್ಮಾ ಅವರ ಮೊಬೈಲ್ ಸಂಖ್ಯೆ- 9739764333, ಇಮೇಲ್- padmadpatil@yahoo.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT