ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣಿನ ಗುಣಮಟ್ಟ ಸುಧಾರಿಸುವ ಸಾವಯವ ಕೃಷಿ

Last Updated 17 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಭೂಮಿ ಎಂದ ಕೂಡಲೇ, ನಮಗೆ ತಕ್ಷಣ ಮನಸ್ಸಿಗೆ ಬರುವುದು ಗಿಡಮರಗಳು, ಪ್ರಾಣಿಪಕ್ಷಿಗಳು, ಸಾಗರ ಸಮುದ್ರಗಳು, ಹವಳದ ಬಂಡೆಗಳು ಇತ್ಯಾದಿ. ಮನಸ್ಸಿಗೆ ಬರುವ ಈ ಪಟ್ಟಿಗೆ, ನೆಲದಡಿಯಲ್ಲಿ ಇರುವ ಮಣ್ಣು ಮನಸ್ಸಿಗೆ ಬರುವುದು ತೀರಾ ಅಪರೂಪ. ಮಣ್ಣಿನಲ್ಲಿ ಪೌಷ್ಟಿಕಾಂಶಗಳಿಲ್ಲದೆಯೇ ಗಿಡಮರಗಳು ಬೆಳೆಯುತ್ತವೆಯೇ. ಮಣ್ಣಿನ ಪೌಷ್ಟಿಕಾಂಶಗಳು ಕ್ಷೀಣಿಸುತ್ತಾ ಹೋದರೆ, ಗಿಡಮರಗಳು ಉಳಿಯುತ್ತವೆಯೇ. ಮಣ್ಣು ಎಂದರೆ, ಅದೆಷ್ಟೋ ಖನಿಜ ಲವಣಗಳು, ಸಾವಯವ ಅವಶೇಷಗಳು,  ದ್ರವ್ಯಗಳು, ಅನಿಲಗಳು, ಸಹಸ್ರಾರು ಕೋಟಿ ಕ್ರಿಮಿಕೀಟಗಳು, ಹುಳಗಳು ಹೀಗೆ ನೆಲದಡಿಯ ಮಣ್ಣು ತನ್ನದೇ ಆದ ಸೂಕ್ಷ್ಮ ಪ್ರಪಂಚವನ್ನು ತೆರೆದಿಡುತ್ತದೆ. ಈ ಮೇಲ್ಮಣ್ಣಿನ ಭಾಗವು ಮರಗಿಡಗಳನ್ನು ಪೋಷಿಸುತ್ತದೆ. ಈ ಮೇಲ್ಮಣ್ಣು ಕೃಷಿಗೆ ಅತ್ಯವಶ್ಯಕ. ಹಾಗೆಯೇ, ಮೇಲ್ಕಂಡ ಎಲ್ಲ ಅಂಶಗಳು ತಕ್ಕ ಪ್ರಮಾಣಗಳಲ್ಲಿದ್ದರೆ, ಮೇಲ್ಮಣ್ಣು ಆರೋಗ್ಯಕರವಾಗಿರುತ್ತದೆ.

ದಿನೇ ದಿನೇ, ಬೇಡಿಕೆಗಳು ಹೆಚ್ಚಾಗುತ್ತಾ, ಉತ್ತಮ ಇಳುವರಿಗಾಗಿ ಕೃತಕ ಗೊಬ್ಬರಗಳ ಅಬ್ಬರವೂ ಹೆಚ್ಚಾಗುತ್ತಿದೆ. ಉತ್ತಮ ಗುಣಮಟ್ಟದ ಮಣ್ಣು ಉತ್ತಮ ಇಳುವರಿ ನೀಡಬಲ್ಲದು. ಈ ಕಾರಣಕ್ಕೆ, ಕೃತಕ ಗೊಬ್ಬರಗಳನ್ನು ಬಳಸಲಾಗುತ್ತದೆ. ಸಂಶ್ಲೇಷಿತ ಗೊಬ್ಬರಗಳಾದ ನೈಟ್ರೋಜನ್-ಫಾಸ್ಪರಸ್-ಪೊಟಾಸಿಯಂ (ಎನ್.ಪಿ.ಕೆ) ಮಣ್ಣಿಗೆ ಹೆಚ್ಚುವರಿ ಸಾರಜನಕ, ರಂಜಕ ಹಾಗೂ ಮೆದುಬೆಳ್ಳಿಕವನ್ನು ನೀಡಬಲ್ಲದು. ತಕ್ಷಣದ ಪರಿಸ್ಥಿತಿ ಹಾಗೂ ಬೇಡಿಕೆಗಳ ಸವಾಲುಗಳನ್ನು ಇವು ಉತ್ತರಿಸಬಲ್ಲವು. ಆದರೆ, ದೀರ್ಘಕಾಲ ಹಾಗೂ ಮಿತಿಮೀರಿದ ಬಳಕೆಯಿಂದಾಗಿ ಮಣ್ಣಿನ ನೈಸರ್ಗಿಕ ಕ್ಷಮತೆ ಕ್ಷೀಣಿಸುತ್ತಾ ಹೋಗುತ್ತದೆ.

‘ಇಳುವರಿಯನ್ನು ಅಲ್ಪಕಾಲಿಕವಾಗಿ ಹೆಚ್ಚಿಸುವ ಸಲುವಾಗಿ ಮತ್ತು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ  ಈ ರೀತಿಯ ಸಂಶ್ಲೇಷಿತ ಗೊಬ್ಬರಗಳನ್ನು ಪ್ರೋತ್ಸಾಹಿಸಲಾಯಿತು. ಆದರೆ, ಸಾಂಪ್ರದಾಯಿಕ ಅಧಿಕ್ಯವಾಚಕ ಕೃಷಿ ವ್ಯವಸ್ಥೆಗಳಲ್ಲಿ, ಇದರ ಅವಿರತ ಮತ್ತು ಅಮಿತ ಬಳಕೆಯಿಂದಾಗಿ, ಈ ತರಹದ ಗೊಬ್ಬರಗಳಿಗೆ ಮಣ್ಣಿನ ಪ್ರತಿಕ್ರಿಯೆ ಕಡಿಮೆಯಾಗುತ್ತಾ ಬರುತ್ತಿದೆ. ಇದರಿಂದಾಗಿ, ಇಳುವರಿಯಲ್ಲಿ ಭಾರಿ ಕುಸಿತ ಉಂಟಾಗಿದೆ’ ಎಂದು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಸಂಶೋಧಕರಾದ ಡಾ. ದೇಬ್ಜಾನಿ ಸಿಹಿ ಹೇಳುತ್ತಾರೆ.

ಈ ಸಮಯದಲ್ಲಿ, ನಾವು ನಂಬಿಕೆ ಇಡಬಹುದಾದ ವ್ಯವಸ್ಥೆಯೆಂದರೆ ಸಾವಯವ ಕೃಷಿ. ಈ ವ್ಯವಸ್ಥೆಯಲ್ಲಿ, ಕೃತಕವಾಗಿ ಸಂಶ್ಲೇಶಿಸಿದಂತಹ ಗೊಬ್ಬರ, ತಳೀಯವಾಗಿ ಬದಲಾಯಿಸಿದಂತಹ ಬೀಜ ಅಥವಾ ಕೃತಕ ಕೀಟನಾಶಕ ಬಳಸುವುದಿಲ್ಲ. ಪರಿಸರಕ್ಕೆ ಸ್ವಾಸ್ಥ್ಯ ಅಭ್ಯಾಸಗಳನ್ನು ಅಳವಡಿಸುವುದರಿಂದ, ಮಣ್ಣಿನ ನೈಸರ್ಗಿಕ ಕ್ಷಮತೆಯನ್ನು ದೀರ್ಘಕಾಲಕ್ಕೆ ಕಾಪಾಡಿಕೊಳ್ಳಬಹುದು. ಈ ದೀರ್ಘಕಾಲಿಕ ಸಮರ್ಥನೆ ಸಾವಯವ ಕೃಷಿಯ ಮುಖ್ಯ ಧ್ಯೇಯ. ಹೀಗಾಗಿ, ಒಳ್ಳೆಯ ಇಳುವರಿ ಪ್ರಾಪ್ತವಾಗುವುದಲ್ಲದೆ, ಮಣ್ಣಿನ ನೈಸರ್ಗಿಕ ಕ್ಷಮತೆ ಹಾನಿಯಾಗದಂತೆ ಉಳಿಯುತ್ತದೆ’ ಎಂದು ಹೇಳುತ್ತಾರೆ ಅವರು.

‘ಈ ಮೌಲ್ಯಮಾಪನವನ್ನು ಹರಿಯಾಣದ ಕೈತಾಲ್ ಜಿಲ್ಲೆಯಲ್ಲಿ ಮಳೆಗಾಲದಲ್ಲಿ 14 ಬಾಸುಮತಿ ಭತ್ತದ ಗದ್ದೆಗಳಲ್ಲಿ ನಡೆಸಲಾಯಿತು. ಇದರಲ್ಲಿ, 7 ಭತ್ತದ ಗದ್ದೆಗಳು ಪ್ರಮಾಣೀಕರಿಸಿದ ಸಾವಯವ ಕೃಷಿ ಭೂಮಿಗಳು ಮತ್ತು ಇನ್ನುಳಿದ 7 ಭೂಮಿಗಳು ಸಾಂಪ್ರದಾಯಿಕ ಕೃಷಿ ಅಭ್ಯಾಸಗಳನ್ನು ಅಳವಡಿಸಿರುವ ಕೃಷಿ ಭೂಮಿಗಳು. ‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಇದರ ಸುವಾಸನೆ ಮತ್ತು ಧಾನ್ಯದ ಗುಣಮಟ್ಟದಿಂದಾಗಿ ಇದಕ್ಕೆ ಇರುವ ಪ್ರಾಮುಖ್ಯದ ಕಾರಣಕ್ಕೆ ನಾವು ಬಾಸುಮತಿ ಅಕ್ಕಿಯನ್ನು ಮೌಲ್ಯಮಾಪನ ಮಾಡಲು ನಿರ್ಧರಿಸಿದೆವು. ಭಾರತವು ಬಾಸುಮತಿ ಅಕ್ಕಿಯ ಅತಿ ದೊಡ್ಡ ಉತ್ಪಾದಕ. ಈ ಉತ್ಪಾದನೆಯಲ್ಲಿ   ಶೇಕಡಾ 60ರಷ್ಟು ಹೊರದೇಶಗಳಿಗೆ ರಫ್ತ್ತು ಮಾಡಲಾಗುತ್ತದೆ’ ಎಂದು ಡಾ. ಸಿಹಿ ಹೇಳುತ್ತಾರೆ.

ಸಸ್ಯ ಪೋಷಣೆ ಮತ್ತು ಮಣ್ಣಿನ ವಿಜ್ಞಾನದ ಪತ್ರಿಕೆಯಲ್ಲಿ ಪ್ರಕಟವಾದ ಈ ಮೌಲ್ಯಮಾಪನದ ಫಲಿತಾಂಶಗಳು ಸಾವಯವ ಕೃಷಿ ವ್ಯವಸ್ಥೆಯನ್ನು ಅಭ್ಯಾಸಕ್ಕೆ ತರುವುದರಿಂದ, ತಕ್ಷಣಕ್ಕೆ ಅಲ್ಲದಿದ್ದರೂ, ದೀರ್ಘಕಾಲದಲ್ಲಿ, ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಸೂಚಕಗಳು ಉತ್ತಮಗೊಳ್ಳುತ್ತವೆ.

ಪ್ರಮಾಣಿತ ಸಾವಯವ ಕೃಷಿ ಭೂಮಿಗಳಲ್ಲಿ ರೈತರು ಕೃಷಿ ಅಂಗಳ ಗೊಬ್ಬರವನ್ನು ಹಾಗೂ ಬೇವಿನ ಬಿಲ್ಲೆಗಳನ್ನು ಬಳಸುತ್ತಾರೆ. ಅದೇ, ಸಾಂಪ್ರದಾಯಿಕ ಕೃಷಿ ಭೂಮಿಗಳಲ್ಲಿ, ಸಂಶ್ಲೇಷಿತ ಗೊಬ್ಬರಗಳಾದ ಯೂರಿಯ, ಪೊಟಾಷ್‌ನ ಮುರಿಯೇಟ್‌ಗಳು ಹಾಗೂ ಡೈಮ್ಮೋನಿಯಂ ಫಾಸ್ಫೇಟ್‌ಗಳನ್ನೂ ಬಳಸಲಾಗುತ್ತಿತ್ತು.

ಈ ಎರಡೂ ಕೃಷಿ ಭೂಮಿಗಳ ಮಣ್ಣುಗಳ ಮೇಲೆ ಅಲ್ಪಕಾಲಿಕ ಮತ್ತು ದೀರ್ಘಕಾಲಿಕ ಪ್ರಭಾವಗಳನ್ನು ವಿಶ್ಲೇಷಿಸಲಾಯಿತು. ಈ ಮೌಲ್ಯಮಾಪನದ ಫಲಿತಾಂಶಗಳು, ಭೌತಿಕ ಅಂಶಗಳಾದ ಒಣ ಮಣ್ಣು ಮತ್ತು ಮಣ್ಣಿನ ನೀರು ಹಿಡುವಳಿಯ ಸಾಮರ್ಥ್ಯವು ದೀರ್ಘಕಾಲದಲ್ಲಿ ಸುಧಾರಣೆಗೊಂಡಿರುವುದನ್ನು ಸೂಚಿಸುತ್ತದೆ. ಇದಲ್ಲದೆ, ಮಣ್ಣಿನ ಪಿಎಚ್ ತಟಸ್ಥವಾಗಿದೆಯೆಂದು ಮತ್ತು ಈ ಸ್ಥಿತಿ ಪ್ರಮುಖ ಮತ್ತು ಸೂಕ್ಷ್ಮ ಖನಿಜ ಲವಣಗಳ ಲಭ್ಯತೆಯನ್ನು ಹೆಚ್ಚಿಸಿತು. ಹಾಗೆಯೇ, ಮಣ್ಣಿನ ವಿದ್ಯುತ್ ವಾಹಕತೆ ಸಾವಯವ ಗೊಬ್ಬರ ಬಳಸಿದ ಮಣ್ಣಲ್ಲಿ ಶೇಕಡಾ 26 ಕಡಿಮೆ ಇರುವುದಾಗಿ ಮತ್ತು ಕಿಣ್ವಗಳ ಚಟುವಟಿಕೆಗಳು ಶೇ 28–42 ಹೆಚ್ಚಾಗಿ ಇರುವುದು ಕಂಡುಬಂದಿತು.  ಇದಲ್ಲದೇ, ಕೃತಕ ಗೊಬ್ಬರದ ಬದಲು ಸಾವಯವ ಗೊಬ್ಬರವನ್ನು ಅಲ್ಪಕಾಲಿಕವಾಗಿ ಬಳಸಿದಾಗ, ಮಣ್ಣಿನ ಕಿಣ್ವದ ಚಟುವಟಿಕೆಗಳಲ್ಲಿ ಗಣನೀಯವಾದ ಸುಧಾರಣೆ ಕಂಡುಬಂದಿತು.

ಬೇರೆ ಅಧ್ಯಯನಗಳಿಗೆ ಹೋಲಿಸಿದರೆ, ಮಣ್ಣಿನ ಮೇಲೆ ಅಲ್ಪಕಾಲಿಕ ಮತ್ತು ದೀರ್ಘಕಾಲಿಕ ಪ್ರಭಾವಗಳನ್ನು ಬೀರುವ ವಿಧಾನಗಳ ಮೇಲೆ ಕುರಿತಾದ ಈ ಭಿನ್ನವಾದ ಸಮಗ್ರತೆಯ ಅಧ್ಯಯನದಲ್ಲಿ ನಾವು ಅಂತರರಾಷ್ಟ್ರೀಯ ಸಾವಯವ ಕೃಷಿ ಚಳುವಳಿಗಳ ಒಕ್ಕೂಟವನ್ನು ಅನುಸರಿಸುತ್ತಿರುವ ಸಾವಯವ ಕೃಷಿ ವಿಧಾನಗಳನ್ನು ಅಳವಡಿಸಿದೆವು.‌

  ‘ಈ ಅಧ್ಯಯನದ ಮುಖಾಂತರ, ಸಾವಯವ ಕೃಷಿ ವ್ಯವಸ್ಥೆಯಲ್ಲಿ, ವರ್ಧಿತ ಪೌಷ್ಟಿಕಾಂಶ ತಿರುಗಣೆಗಾಗಿ, ಮಣ್ಣಿನಲ್ಲಿ ಸಾವಯವ ಪದಾರ್ಥಗಳ ನಿರ್ಮಾಣ ಅವಶ್ಯಕ. ಹಾಗೆಯೇ, ಮಣ್ಣಿನ ಜೈವಿಕ ಹಾಗೂ ಭೌತ ರಾಸಾಯನ ಫಲವತ್ತತೆ ಒಂದರ ಮೇಲೊಂದು ಅವಲಂಬಿತ. ಆದರೆ, ಈ ಸೂಚಕಗಳ ಸೂಕ್ಷ್ಮತೆ ಕಾಲಮಿತಿಗೆ ಅನುಗುಣವಾಗುತ್ತವೆ’ ಎನ್ನುತ್ತಾರೆ ಡಾ.ಸಿಹಿ.

ಸಮರ್ಥನೀಯ ಹಾಗೂ ಸಾವಯವ ಕೃಷಿಯು ನೈಸರ್ಗಿಕ ಸಂಪನ್ಮೂಲಗಳ ಸವಕಳಿಯಾಗದಂತೆ ಆಹಾರ ಧಾನ್ಯಗಳನ್ನು ಬೆಳೆಯುವ ಸಿದ್ಧಾಂತವನ್ನು ನಂಬಿದೆ. ಈ ಕಾರಣಕ್ಕೆ, ಇದರ ಮೇಲಿನ ಮತ್ತಷ್ಟು ಅಧ್ಯಯನಗಳ ಅವಶ್ಯಕತೆ ಇದೆ.

‘ನಮ್ಮ ಅಧ್ಯಯನದ ಪ್ರಕಾರ, ಸಾವಯವ ಕೃಷಿ ವ್ಯವಸ್ಥೆಯಡಿಯಲ್ಲಿ, ಜೀವಿಕ ಮತ್ತು ಅಜೀವಿಕ ಅಂಶಗಳ ಪರಸ್ಪರ ಚಟುವಟಿಕೆಗಳ ಉಲ್ಲೇಖಗಳಿವೆ. ಇಂತಹ ಅಧ್ಯಯನಗಳು ಮುಂಬರುವ ಪೀಳಿಗೆಗಾಗಿ ಸುರಕ್ಷಿತವಾದ ಆಹಾರವನ್ನು ಒದಗಿಸಲು, ಮಣ್ಣು ಹಾಗೂ ಪರಿಸರ ಸಂಪನ್ಮೂಲಗಳನ್ನು ಸಮರ್ಥನೀಯವಾಗಿ ಬಳಸಬೇಕು.’ ಎಂದು ಡಾ. ಸಿಹಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.

–ಗುಬ್ಬಿ ಲ್ಯಾಬ್ಸ್‌ (ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿರುವ ಒಂದು ಸಾಮಾಜಿಕ ಉದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT