ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಪ್ಪಿಗೆಯ ವಿಚ್ಛೇದನ: ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ

Last Updated 17 ಸೆಪ್ಟೆಂಬರ್ 2017, 20:17 IST
ಅಕ್ಷರ ಗಾತ್ರ

ಹಿಂದೂ ವಿವಾಹ ಕಾಯ್ದೆ ಅನ್ವಯ ಪರಸ್ಪರ ಒಪ್ಪಿಗೆಯ ಮೇಲೆ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸುವ ದಂಪತಿಯ ಮರು ಹೊಂದಾಣಿಕೆಗೆ ನೀಡಲಾಗುವ ಆರು ತಿಂಗಳ ಕಡ್ಡಾಯ ಕಾಲಾವಕಾಶವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿರುವುದು ಮಹತ್ವದ ನಡೆ.

ಪರಸ್ಪರ ಒಪ್ಪಿಗೆಯ ವಿಚ್ಛೇದನ ಬಯಸುವ ಹಿಂದೂ ದಂಪತಿಗೆ ಇದು ಅನುಕೂಲ ಮಾಡಿಕೊಡಲಿದೆ. ಅನಗತ್ಯ ಕಾಯುವಿಕೆಯನ್ನು ಇಲ್ಲವಾಗಿಸುವ ಈ ತೀರ್ಪು, ಬೇರ್ಪಡುವಿಕೆಯ ನೋವನ್ನು ಕಡಿಮೆ ಮಾಡುವ ದಿಸೆಯಲ್ಲಿ ಮಾನವೀಯವಾದ ಕ್ರಮವಾಗಿದೆ. ಇದು ಸರಿಯಾದ ದಿಕ್ಕಿನಲ್ಲಿ ಇರಿಸಿದ ಹೆಜ್ಜೆ. ಈಗಲೂ ಭಾರತದಲ್ಲಿ ವಿವಾಹ ವಿಚ್ಛೇದನ ಎಂಬುದು ಸಂಕೀರ್ಣ ಪ್ರಕ್ರಿಯೆ.

ದಂಪತಿ ಬೇರ್ಪಡಲು ಪರಸ್ಪರ ಬಯಸಿದರೂ ಇದನ್ನು ತಡೆಯಲು ಯತ್ನಿಸಬೇಕು ಎಂಬ ನಿಲುವಿನಿಂದಲೇ ಕುಟುಂಬ ನ್ಯಾಯಾಲಯಗಳು ಕೆಲಸ ಮಾಡುತ್ತಿರುತ್ತವೆ. ವಯಸ್ಕ ವ್ಯಕ್ತಿಗಳ ನಿರ್ಧಾರಗಳಿಗೆ ಮನ್ನಣೆ ನೀಡದ ಇಂತಹ ದೃಷ್ಟಿಕೋನದಿಂದ ಇತ್ಯರ್ಥವಾಗದ ಪ್ರಕರಣಗಳ ಭಾರದಿಂದಾಗಿ ನ್ಯಾಯಾಲಯಗಳೂ ನಲುಗುತ್ತವೆ. ಅರ್ಜಿದಾರರ ಭಾವನೆಗಳನ್ನು ಗೌರವಿಸುವುದು ಇಲ್ಲಿ ಮುಖ್ಯವಾಗುತ್ತದೆ.

‘1955ರ ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 13ಬಿ (2) ಅಡಿ ಪ್ರಸ್ತಾಪ ಮಾಡಲಾಗಿರುವ ಆರು ತಿಂಗಳ ಕಾಯುವಿಕೆಯ ಅವಧಿ ಕಡ್ಡಾಯವಲ್ಲ. ಪ್ರತಿ ಪ್ರಕರಣವೂ ವಿಭಿನ್ನ ಹಿನ್ನೆಲೆ ಹೊಂದಿದ್ದು ಅವುಗಳ ಪೂರ್ವಾಪರ ಕೂಲಂಕಷವಾಗಿ ಪರಿಶೀಲಿಸಿ ತೀರ್ಪು ನೀಡುವ ಅಧಿಕಾರ ನ್ಯಾಯಾಲಯಕ್ಕೆ ಇದೆ. ನ್ಯಾಯಾಲಯ ತನ್ನ ವಿವೇಚನೆ ಬಳಸಬೇಕು’ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಸರಿಯಾದುದು.

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೊದಲು ಗಂಡ– ಹೆಂಡಿರಿಬ್ಬರೂ 12 ತಿಂಗಳು ಪ್ರತ್ಯೇಕವಾಗಿ ವಾಸಿಸಿರಬೇಕು. ಮಕ್ಕಳ ಪೋಷಕತ್ವಕ್ಕೆ ಸಂಬಂಧಿಸಿದ ವಿಚಾರ ಇತ್ಯರ್ಥವಾಗಿರಬೇಕು ಎಂಬ ಷರತ್ತುಗಳಂತೂ ಇವೆ. ಹೀಗಾಗಿ ಇಬ್ಬರು ವ್ಯಕ್ತಿಗಳು ಒಟ್ಟಾಗಿ ಇರಲು ಬಯಸಿರದಿದ್ದಲ್ಲಿ ಒಟ್ಟಿಗೇ ಇರಬೇಕೆಂದು ಮತ್ತೆ ಒತ್ತಡ ಹೇರುವುದು ಅಮಾನವೀಯ.

ಇದು ಅವರ ನೋವನ್ನು ಇನ್ನಷ್ಟು ಹೆಚ್ಚಿಸುವುದಾಗಿರುತ್ತದೆ. ವಿವಾಹವನ್ನು ಉಳಿಸುವುದಕ್ಕಾಗಿ ಅಥವಾ ದಂಪತಿ ಬೇರ್ಪಡುವ ಮೊದಲು ಮರು ಚಿಂತನೆಗೆ ಮತ್ತಷ್ಟು ಅವಕಾಶ ನೀಡುವ ಘನ ಉದ್ದೇಶದಿಂದ ಈ ಆರು ತಿಂಗಳ ಕಾಯುವಿಕೆಯ ಅವಧಿ ನೀಡಲಾಗಿದೆ ಎಂಬುದೇನೋ ಸರಿ. ಆದರೆ ಈಗಾಗಲೇ ಅನೇಕ ತಿಂಗಳು ಅಥವಾ ವರ್ಷ ಪ್ರತ್ಯೇಕ

ವಾಗಿಯೇ ವಾಸಿಸಿದ ನಂತರವೂ ಮತ್ತೆ ಆರು ತಿಂಗಳ ಅವಧಿ ಹೆಚ್ಚಿನ ಹೊರೆ ಎಂಬುದು ಬೇರ್ಪಡಲಿಚ್ಛಿಸುವ ದಂಪತಿ ಅಭಿಪ್ರಾಯವಾಗಿರುತ್ತಿತ್ತು. ಅದರಲ್ಲೂ ಬದುಕಿನಲ್ಲಿ ಹೊಸತು ಅರಸಿ ಮುಂದೆ ಹೋಗಲು ಬಯಸುವವರಿಗೆ ಈ ಕಾಯುವಿಕೆಯ ಯಾಂತ್ರಿಕ ಪ್ರಕ್ರಿಯೆ ಮಾನಸಿಕವಾಗಿ ಇನ್ನಷ್ಟು ಗಾಸಿ ಉಂಟುಮಾಡುವಂತಹದ್ದು. ಹಾಗೆಯೇ ಪರಸ್ಪರ ಒಪ್ಪಿಗೆಯ ವಿಚ್ಛೇದನಕ್ಕೆ ಕಾರಣಗಳನ್ನು ನೀಡಬೇಕೆಂದು ದಂಪತಿಯನ್ನು ಒತ್ತಾಯಿಸುವುದೂ ಅಸೂಕ್ಷ್ಮವಾದದ್ದು.

ಈ ಬಗೆಯಲ್ಲಿ ವ್ಯಕ್ತಿಗಳ ಖಾಸಗಿ ಬದುಕಲ್ಲಿ ಕಾನೂನು ಅಥವಾ ಪ್ರಭುತ್ವದ ಮಧ್ಯಪ್ರವೇಶ ಅನಗತ್ಯ. ಹೀಗಾಗಿ ಪರಸ್ಪರ ಒಪ್ಪಿಗೆಯ ವಿಚ್ಛೇದನವನ್ನು ಸರಳಗೊಳಿಸುವ ಈ ಮಹತ್ವದ ಹೆಜ್ಜೆ ಬಹು ಪರಿಣಾಮಗಳನ್ನು ಬೀರುವಂತಹದ್ದು. ಆಧುನಿಕ ಸಮಾಜಗಳಲ್ಲಿ ವಿಚ್ಛೇದನ ಎಂಬುದು ಮಾಮೂಲಾಗುತ್ತಿದೆ.

ಭಾರತದಲ್ಲೂ ವಿಚ್ಛೇದನ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ಸಾಮಾಜಿಕ ಬದಲಾವಣೆಗಳಿಗೆ ನ್ಯಾಯಾಲಯಗಳೂ ಸ್ಪಂದಿಸುತ್ತಿರುವುದು ಸರಿಯಾದುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT