ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಧರ್ಮ: ಒಂದು ಜಿಜ್ಞಾಸೆ

Last Updated 17 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

‘ಹಿಂದೂ ಧರ್ಮ ಎಲ್ಲಿದೆ?’ ಎನ್ನುವ ಮೂಲಕ ಸಚಿವ ಕಾಗೋಡು ತಿಮ್ಮಪ್ಪನವರು ಬಹುಮುಖ್ಯ ಪ್ರಶ್ನೆಯನ್ನು ಎತ್ತಿದ್ದಾರೆ (ಪ್ರ.ವಾ., ಸೆ. 16). ಮುಂದುವರೆದು ‘ಭಾರತದಲ್ಲಿರುವುದು ಜಾತಿಯಷ್ಟೆ’ ಎಂದೂ ಹೇಳಿದ್ದಾರೆ. ಪ್ರಶ್ನೆ ಮುಖ್ಯವೂ ಹೌದು, ಅತ್ಯಂತ ಪ್ರಸ್ತುತವೂ ಹೌದು. ಈ ಪ್ರಶ್ನೆಯನ್ನು ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕೇಳಿಕೊಳ್ಳಬೇಕಾದ ಜರೂರು ಇದೆ.

ನಮ್ಮ ಸುತ್ತಮುತ್ತ ಮುಸಲ್ಮಾನರು, ಕ್ರೈಸ್ತರು ಮತ್ತಿತರ ಅಲ್ಪಸಂಖ್ಯಾತರು ಕಾಣಿಸಿಕೊಂಡ ಕೂಡಲೇ ನಾವೆಲ್ಲ ಹಿಂದೂಗಳಾಗುತ್ತೇವೆ. ಪಕ್ಕದಲ್ಲಿ ಪಾಕಿಸ್ತಾನವಿರುವುದರಿಂದಲೇ ನಮಗೆ ದೇಶಪ್ರೇಮ ಸಾಧ್ಯವಾಗಿದೆ ಎಂಬ ಅನುಮಾನವೂ ನನ್ನದು. ನಮ್ಮ ಸುತ್ತಲೂ ಈ ಅಲ್ಪಸಂಖ್ಯಾತರು ಇಲ್ಲದಿರುವಾಗ ನಮ್ಮ ಸುತ್ತ ಜಾತಿಗಳು ಮಾತ್ರ; ಮತ್ತು ಪ್ರತಿ ಜಾತಿಯಲ್ಲಿಯೂ ನೂರು ಉಪಜಾತಿಗಳು ಇರುತ್ತವೆ.

ಒಂದು ಉದಾಹರಣೆ ನೋಡಬಹುದು: ಮನೆಯ ಮಗಳಿಗೆ ಹುಡುಗನನ್ನು ಹುಡುಕುತ್ತಿದ್ದೇವೆ ಅಂದುಕೊಳ್ಳೋಣ. ಹುಡುಗನ ಮನೆಗೆ ಹೋಗಿ ಅವನ ತಂದೆಯ ಬಳಿ ‘ನಾನು ಹಿಂದೂ, ನೀವೂ ಹಿಂದೂ, ನಾವೆಲ್ಲ ಒಂದು. ಹೀಗಾಗಿ ನಿಮ್ಮ ಹುಡುಗನಿಗೆ ನಮ್ಮ ಮಗಳನ್ನು ಕೊಟ್ಟು ವಿವಾಹ ಮಾಡೋಣ’ ಎಂದು ಹೇಳಿದಿರಿ ಅಂದುಕೊಳ್ಳಿ. ‘ಹೌದು ಸ್ವಾಮೀ, ನಾವೆಲ್ಲ ಹಿಂದೂ, ನಾವೆಲ್ಲ ಒಂದು, ಒಪ್ಪಿದೆ. ಆದರೆ ತಮ್ಮದು ಯಾರ ಕಡೆ ಆಯಿತು?’ ಎಂದು ಸೂಕ್ಷ್ಮವಾಗಿ ಕುಲಗೋತ್ರಗಳ ಸಂಶೋಧನೆ ಆರಂಭಿಸುವುದು ನಮ್ಮ ಎಲ್ಲರ ಅನುಭವಕ್ಕೆ ಬಂದಿರಲೇಬೇಕು.‌

ಹಾಗೆಯೇ ಮನೆಯನ್ನು ಬಾಡಿಗೆಗೆ ಕೇಳಲು ಹೊರಟರೂ ಅಷ್ಟೇ. ಮಿಕ್ಕೆಲ್ಲ ವಿವರಗಳಲ್ಲೂ ಅಷ್ಟೇ. ಹಾಗಾದರೆ ನಾವು ಹಿಂದೂಗಳು ಯಾವಾಗ? ನಮ್ಮ ಧಾರ್ಮಿಕತೆಯ ವಿವರಣೆಯೇನು? ನೂರಕ್ಕೆ ತೊಂಬತ್ತು ಭಾಗ ‘ನಮ್ಮ ಧರ್ಮ ಎಂದರೆ ನಮ್ಮ ಮಠಗಳು ಪ್ರತಿನಿಧಿಸುವ ಧರ್ಮ’. ಹೀಗಾಗಿ ನೂರಕ್ಕೆ ತೊಂಬತ್ತು ಭಾಗ ನಮ್ಮದು ಮಠ ಧರ್ಮ. ಮನೆಗಳಲ್ಲಿ ಜಾತಿ– ಮತದಲ್ಲಿ ಧರ್ಮಗುರುವಿನನ್ವಯದ ಧರ್ಮ.

ಈಗಲೂ ಈ ಹಿಂದೂ ಧರ್ಮದ ವಿವರಣೆಯ ಅಡಿಯಲ್ಲಿ ‘ನಾವೆಲ್ಲ ಒಂದು’ ಎಂಬ ಸೂತ್ರದ ಅಡಿಯಲ್ಲಿ ಸಂಭ್ರಮಿಸುವ ನಾವು ‘ಮೇಲು, ಕೀಳು’, ‘ಉತ್ತಮ, ಅಧಮ’, ‘ಮಡಿ, ಮೈಲಿಗೆ’ ಎಂಬ ವಿವರಗಳಲ್ಲಿ ಸಿಲುಕಿಕೊಂಡು ನೂರು ಚೂರಾಗಿ ವಿಭಜಿಸಿಕೊಂಡಿರುವುದು ಸಾಲದೆಂಬಂತೆ ದೇಹವನ್ನೇ ‘ಉತ್ತಮಾಂಗ– ಅಧಮಾಂಗ’ ಎಂಬ ವಿವರಗಳ ಅಡಿಯಲ್ಲಿ ‘ಎಡಗೈ– ಬಲಗೈ, ಎಡಗಾಲು– ಬಲಗಾಲು, ತಲೆ– ಕಾಲು’ ಎಂದು ಚೂರುಗಳಾಗಿ ಮಾಡಿಕೊಂಡಿಲ್ಲವೇ?

ಈ ದೇಹಕ್ಕೇ ಅವಿಭಾಜ್ಯತೆಯನ್ನು ನೀಡದ ನಾವು ಮನುಷ್ಯ ಸಮುದಾಯಕ್ಕೆ ನೀಡಲು ಸಾಧ್ಯವೇ? ‘ನಾವೆಷ್ಟು ಹಿಂದೂಗಳು’ ಎಂಬುದಕ್ಕೆ ಮತ್ತೊಂದು ಉದಾಹರಣೆ ನೀಡಲೇ ಬೇಕು. ಅನೇಕ ಮಡಿವಂತ, ಸಂಪ್ರದಾಯಸ್ಥ ಕುಟುಂಬಗಳಲ್ಲಿ ಮನೆ ಕೆಲಸದ ಹೆಣ್ಣಾಗಲೀ, ಗಂಡಾಗಲೀ ಆ ಕೆಲಸಗಾರರಿಗೆ ಅಡುಗೆಮನೆ, ದೇವರಮನೆ ಎಂಬ ನಮ್ಮ ಮಡಿಸ್ಥಳಗಳಿಗೆ ಪ್ರವೇಶ ನಿರಾಕರಿಸಿ ಒಂದು ಬಗೆಯ ‘ಒಳ ಅಸ್ಪೃಶ್ಯತೆ’ಯನ್ನೂ ಕಾಪಾಡಿಕೊಂಡು ಬರುತ್ತಿಲ್ಲವೇ? ಈ ಮನೆಕೆಲಸದವರೂ ಹಿಂದೂಗಳು ತಾನೆ?

ಇವಿಷ್ಟೇ ಸಾಲದೆಂಬಂತೆ ಈಗ ದೇಶವನ್ನು ‘ಹಿಂದೂರಾಷ್ಟ್ರ’ವನ್ನಾಗಿಸಬೇಕೆಂದು ಹಟ ಮಾಡುತ್ತಿದ್ದೇವೆ. ಹಿಂದುತ್ವ ಎಂಬುದೊಂದು ಅಮೂರ್ತ ಶಬ್ದ. ಗೋಜಲು ಗೋಜಲುಗಳಿಂದ ತುಂಬಿದ ಹಿಂದೂ ಧರ್ಮದ ಕುರಿತಾದ ‘ಸೈದ್ಧಾಂತಿಕ’ ಶಬ್ದ.

ನಮ್ಮ ದೇಶದಲ್ಲಿ ಮಹಾವೀರ, ಬುದ್ಧರಿಂದ ಆರಂಭಿಸಿ ಎಲ್ಲ ಪ್ರಧಾನ ಧಾರ್ಮಿಕ ಚಿಂತಕರೂ ಧರ್ಮದ ಕುರಿತಾದ ಮೂಲಭೂತ ಪ್ರಶ್ನೆಗಳನ್ನು ಎತ್ತಿರುವುದರಿಂದಲೇ ನಮ್ಮ ಧಾರ್ಮಿಕತೆಯ ಕಲ್ಪನೆಗೆ ಅರ್ಥ ಸಾರ್ಥಕ್ಯ ಒದಗಿರುವುದು. ಇಂಥ ಯಾವುದೇ ಮಹಾಪುರುಷರನ್ನೂ ಅವರ ಚಿಂತನೆಗಳಿಗೆ ಕಟ್ಟಿ ಹಾಕಿಬಿಡುವುದು ತಪ್ಪಾಗುತ್ತದೆ. ಅಂದರೆ ಮಹಾವೀರನನ್ನು ಜೈನ ಎಂದಾಗಲೀ, ಬುದ್ಧನನ್ನು ಬುದ್ಧಿಸ್ಟ್ ಎಂದಾಗಲೀ ಅಥವಾ ಬಸವಣ್ಣನವರನ್ನು ‘ಲಿಂಗಾಯತ’, ‘ವೀರಶೈವ’ ಪಂಥಗಳಿಗೆ ಸೀಮಿತಗೊಳಿಸಿ ಬಿಡುವುದಾಗಲೀ ಅವರಿಗೆ ಮಾಡುವ ಘೋರ ಅನ್ಯಾಯವೆನಿಸುತ್ತದೆ. ಮೂರ್ತ ಆಲಯದಲ್ಲಿದ್ದೂ ಅಮೂರ್ತ ಬಯಲಿನ ಕಲ್ಪನೆಯನ್ನೆಂದೂ ಮರೆಯದ ಮಹಾಪುರುಷರು ಇವರು.

ಹಿಂದೂ ಧರ್ಮವೆಂದರೆ ಕಬೀರ, ತುಕಾರಾಮ, ಮೀರಾಬಾಯಿ, ರಾಮಕೃಷ್ಣ, ಗಾಂಧೀಜಿ ಇಂಥವರ ಜೀವನಕ್ರಮದಲ್ಲಿ ಪ್ರತಿಬಿಂಬಿತವಾದದ್ದು. ಹಾಗೆ ಆದಾಗ ಅದು ನೈಜ ಧರ್ಮವೆನಿಸುತ್ತದೆ. ಅಂದರೆ ಧರ್ಮವೆಂಬುದು ಜೀವನಕ್ರಮ, ಒಂದು ನಿರಂತರ ಅನ್ವೇಷಣೆ. ಹತ್ತಿರವಾಗುತ್ತಿದೆ ಎನ್ನಿಸುತ್ತಿದ್ದಂತೇ ಮತ್ತೂ ದೂರ ದೂರ ಸರಿಯುವ ದಿಗಂತದಂತೆ. ಹಾಗಾಗಿ ಧರ್ಮವೆಂದರೆ ಅಂಧ ರೀತಿಯ ಬದ್ಧತೆಯಲ್ಲ. ಮನಸ್ಸು, ಪ್ರಜ್ಞೆಯನ್ನೆಲ್ಲ ಬಂಧಿಸಿಬಿಡುವ ದುರಭಿಮಾನದ ಮತಾಂಧತೆಯಲ್ಲ.

ಜಾತಿಗಳು ಕೂಡ, ಬಹುಶಃ ಅಮೂರ್ತ ಕಲ್ಪನೆಗಳ ಅರಸುವಿಕೆಯಲ್ಲಿ ಮೂರ್ತ ಆಲಯಗಳಂತೆ ಮನುಷ್ಯನಿಗೆ ಸಹಕಾರಿಯಾಗಲಿ ಎಂಬ ಆಶಯದಲ್ಲಿ ರೂಪುಗೊಂಡಿರಬಹುದಾದವು. ಆದರೆ ಧರ್ಮವು ಮಠಧರ್ಮಕ್ಕೆ ಸೀಮಿತವಾದ ಹಾಗೆ, ಜಾತಿಗಳು ಅಹಂಕಾರದ, ಪರಸ್ಪರ ದ್ವೇಷಾಸೂಯೆಗಳ ಆಗರಗಳಾಗಿ ಹೊಲಸು ಕೂಪಗಳಾಗಿ ಬಿಟ್ಟಿವೆ ಎಂಬುದು ಯಾರಿಗಾದರೂ ಸ್ಪಷ್ಟವಾಗಿರಲೇಬೇಕು.

ಅಂಬೇಡ್ಕರ್ ಅವರು ಹೇಳಿದ ಮಾತುಗಳನ್ನು ನೆನಪು ಮಾಡಿಕೊಳ್ಳಬೇಕು. ‘ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯುವುದಿಲ್ಲ’ ಎಂಬ ಮಾತು. ಈಗ ‘ಹಿಂದೂವಾಗಿ ಸಾಯುವುದಿಲ್ಲ’ ಎಂದು ಹೇಳಿದರೆ ಮಾತ್ರ ಸಾಲದೋ ಏನೋ! ನಮ್ಮ ಆಯ್ಕೆಗಳೇ ಅಲ್ಲದ ಜಾತಿ, ಧರ್ಮಗಳಲ್ಲಿ ಹುಟ್ಟಿದ್ದೇವೆ. ಆದರೆ ವಿವರಣೆಗಳನ್ನೆಲ್ಲ ದಾಟಿ ಹೋಗುವ, ಭಾವಕ್ಕೆ, ಅನುಭವಕ್ಕೆ, ಕಲ್ಪನೆಗೆ ಮಾತ್ರ ಆಗಾಗ್ಗೆ ಹೊಳೆಯುವ, ಆದರೆ ಸ್ಪಷ್ಟತೆಗೇ ಸಿಗದ ಆಕರ್ಷಣೆಯಾಗಿ, ಗೀಳಾಗಿ ಉಳಿಯುವ ಮನುಷ್ಯ ಧರ್ಮಕ್ಕೆ, ಪ್ರಕೃತಿ ಧರ್ಮಕ್ಕೆ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂಬ ಆಶಯ ನಮ್ಮದಾಗಬೇಕು. ಇದೇ ಒಂದು ಅರ್ಥದಲ್ಲಿ ‍ಪ್ರಜಾತಂತ್ರಧರ್ಮವೂ ಹೌದು ಎಂದು ನನ್ನ ನಂಬಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT