ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತೆಯಲ್ಲಿ ಕನಿಷ್ಠ ಮೊತ್ತ: ಪರಾಮರ್ಶೆಗೆ ಎಸ್‌ಬಿಐ ನಿರ್ಧಾರ

Last Updated 17 ಸೆಪ್ಟೆಂಬರ್ 2017, 20:10 IST
ಅಕ್ಷರ ಗಾತ್ರ

ಮುಂಬೈ: ಉಳಿತಾಯ ಖಾತೆಯಲ್ಲಿ ಕನಿಷ್ಠ ಸರಾಸರಿ ಮೊತ್ತ ಕಾಯ್ದುಕೊಳ್ಳಲು (ಎಂಎಬಿ)  ವಿಫಲರಾಗುವ ಗ್ರಾಹಕರಿಂದ ವಸೂಲಿ ಮಾಡುತ್ತಿರುವ ದಂಡ ರೂಪದ ಸೇವಾ ಶುಲ್ಕದ ಬಗ್ಗೆ ಪರಾಮರ್ಶೆ ನಡೆಸುತ್ತಿರುವುದಾಗಿ ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ತಿಳಿಸಿದೆ.

ಉಳಿತಾಯ ಖಾತೆಗಳಲ್ಲಿ ತಿಂಗಳ ಕನಿಷ್ಠ ಮೊತ್ತ ಇರಿಸಲು ವಿಫಲರಾಗುವ ಗ್ರಾಹಕರಿಂದ ಶುಲ್ಕ ವಸೂಲಿ ಮಾಡುವುದಕ್ಕೆ ಏಪ್ರಿಲ್‌ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು. ಐದು ವರ್ಷಗಳ ನಂತರ ಈ ಶುಲ್ಕ ವಿಧಿಸುವುದು ಜಾರಿಗೆ ಬಂದಿತ್ತು.

‘ಈ ಬಗ್ಗೆ ಗ್ರಾಹಕರಿಂದ ಆಕ್ಷೇಪ, ದೂರುಗಳು ಬಂದಿರುವುದರಿಂದ ಶುಲ್ಕ ವಸೂಲಿ ಮಾಡುವುದನ್ನು ಮರು ಪರಿಶೀಲಿಸಲಾಗುತ್ತಿದೆ. ಹಿರಿಯ ನಾಗರಿಕರು, ವಿದ್ಯಾರ್ಥಿಗಳಿಗೆ ಈ ಶುಲ್ಕದಿಂದ ವಿನಾಯ್ತಿ ನೀಡುವ ಬಗ್ಗೆ  ಚಿಂತನೆ ನಡೆಸಲಾಗುತ್ತಿದೆ’ ಎಂದು ಎಸ್‌ಬಿಐನ ನಿರ್ದೇಶಕ (ರಾಷ್ಟ್ರೀಯ ಬ್ಯಾಂಕಿಂಗ್‌ ಗ್ರೂಪ್‌) ರಜನೀಶ್‌ ಕುಮಾರ್‌ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಗ್ರಾಹಕರಿಗೆ ಹೇರಲಾಗುತ್ತಿರುವ ದುಬಾರಿ ಶುಲ್ಕ ರದ್ದುಪಡಿಸಬೇಕು ಎಂದು ಬ್ಯಾಂಕ್‌ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯು ಕೂಡ (ಯುಎಫ್‌ಬಿಯು) ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರನ್ನು ಒತ್ತಾಯಿಸಿದೆ.

ಎಸ್‌ಬಿಐ ಪರಿಷ್ಕರಿಸಿರುವ ಸೇವಾ ಶುಲ್ಕಗಳ ಪ್ರಕಾರ, ಉಳಿತಾಯ ಖಾತೆಯಲ್ಲಿ ಕನಿಷ್ಠ ಸರಾಸರಿ ಮೊತ್ತ ಕಾಯ್ದುಕೊಳ್ಳದ ಗ್ರಾಹಕರಿಂದ ₹ 100 ಮತ್ತು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಒಳಗೊಂಡಿರುವ ಮೊತ್ತವನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗುತ್ತಿದೆ.

ಖಾತೆಗಳಲ್ಲಿ ಕಾಯ್ದುಕೊಳ್ಳಬೇಕಾದ ತಿಂಗಳ ಸರಾಸರಿ ಮೊತ್ತವನ್ನು (ಎಂಎಬಿ) ಮಹಾನಗರಗಳಲ್ಲಿ ₹ 5,000ಕ್ಕೆ ನಿಗದಿಪಡಿಸಲಾಗಿದೆ. ಖಾತೆಯಲ್ಲಿನ ಮೊತ್ತವು ‘ಎಂಎಬಿ’ಗಿಂತ ಶೇ 75ರಷ್ಟು ಕಡಿಮೆಯಾದರೆ ₹ 100 ಮತ್ತು ಜಿಎಸ್‌ಟಿ, ಶೇ 50ರಷ್ಟು ಕಡಿಮೆಯಾದರೆ ₹ 50 ಮತ್ತು ಜಿಎಸ್‌ಟಿ ವಸೂಲಿ ಮಾಡಲಾಗುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ ‘ಎಂಎಬಿ’ ಮಿತಿಯನ್ನು ₹ 1,000ಕ್ಕೆ ನಿಗದಿಪಡಿಸಲಾಗಿದೆ. ಇದಕ್ಕಿಂತ ಕಡಿಮೆ ಮೊತ್ತ ಉಳಿಸಿಕೊಂಡರೆ ₹ 20 ರಿಂದ ₹ 50 ಮತ್ತು ಜಿಎಸ್‌ಟಿ ಸೇರಿಸಿ ದಂಡ ಪಾವತಿಸಬೇಕಾಗುತ್ತದೆ.

ಮೂಲ ಉಳಿತಾಯ ಬ್ಯಾಂಕ್‌ ಠೇವಣಿ (ಬಿಎಸ್‌ಬಿಡಿ) ಮತ್ತು  ಜನ– ಧನ ಖಾತೆಗಳನ್ನು (ಪಿಎಂಜೆಡಿವೈ) ಕನಿಷ್ಠ ಮೊತ್ತ ಹೊಂದಿರಬೇಕಾದ ನಿಬಂಧನೆಯಿಂದ ವಿನಾಯ್ತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT