ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಮಾಡದಿದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ

Last Updated 18 ಸೆಪ್ಟೆಂಬರ್ 2017, 6:30 IST
ಅಕ್ಷರ ಗಾತ್ರ

ಮೂಡಲಗಿ: ಮೂಡಲಗಿ ಪಟ್ಟಣವನ್ನು ಹೊಸ ತಾಲ್ಲೂಕನ್ನಾಗಿ ಮಾಡಿಯೇ ತೀರುತ್ತೇನೆ. ಒಂದು ವೇಳೆ ಸರ್ಕಾರ ಮೂಡಲಗಿಯನ್ನು ತಾಲ್ಲೂಕು ಮಾಡ ದಿದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಕಟಿಸಿದರು.

ಮೂಡಲಗಿಯನ್ನು ತಾಲ್ಲೂಕು ಪಟ್ಟಿಯಿಂದ ಕೈ ಬಿಟ್ಟಿದ್ದನ್ನು ಖಂಡಿಸಿ ಭಾನುವಾರ ಬಂದ್ ಆಚರಣೆ ಅಂಗ ವಾಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಮೂಡಲಗಿ ಹೊಸ ತಾಲ್ಲೂಕು ಕೇಂದ್ರವಾಗುವುದು ಶತಃಸಿದ್ಧ. ಇದರಲ್ಲಿ ಎರಡು ಮಾತಿಲ್ಲ. ಗೋಕಾಕದ ಲಕ್ಷ್ಮೀದೇವರ ಮೇಲೆ ಪ್ರಮಾಣ ಮಾಡಿ ಹೇಳ್ತಿನಿ. ತಿಂಗಳೊಳಗೆ ಮೂಡಲಗಿ ತಾಲ್ಲೂಕು ಆದೇಶ ಪತ್ರವನ್ನು ತಂದು ಕೊಡ್ತೀನಿ. ಆವಾಗಲಾದರೂ ನನ್ನ ಮೇಲೆ ನಿಮಗೆ ವಿಶ್ವಾಸ ಬರುತ್ತದೆ’ ಎಂದರು.

ಈ ಕುರಿತಂತೆ ಶೀಘ್ರದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿ ಹೊಳಿ ನೇತೃತ್ವದಲ್ಲಿ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡುತ್ತೇನೆ. ಹೋರಾಟ ಸಮಿತಿ ಪ್ರಮುಖರನ್ನು ಕರೆದೊಯ್ದು ತಾಲ್ಲೂಕು ಘೋಷಣೆಗೆ ಎಲ್ಲ ರೀತಿಯ ಪ್ರಯತ್ನವನ್ನು ಮಾಡುತ್ತೇನೆ ಎಂದು ಅವರು ನೆರೆದಿದ್ದ ಅಪಾರ ಜನಸ್ತೋಮಕ್ಕೆ ಭರವಸೆ ನೀಡಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಈರಪ್ಪ ಕಡಾಡಿ ಅವರು ಮಾತನಾಡಿ, ಮೂಡಲಗಿ ತಾಲ್ಲೂಕು ರಚನೆಗೆ ಸಂಬಂಧಪಟ್ಟಂತೆ ಎಲ್ಲ ಆಯೋಗಗಳೂ ಶಿಫಾರಸು ಮಾಡಿದ್ದರೂ ಮೂಡಲಗಿ ಯನ್ನು ಕೈಬಿಟ್ಟಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಹೊಸ ತಾಲ್ಲೂಕಿನಲ್ಲಿ ಗೋಕಾಕ ತಾಲ್ಲೂಕಿನ ಗ್ರಾಮಗಳು ಸೇರ್ಪಡೆಯಾಗಿಲ್ಲವೆಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

30 ಕಿ.ಮೀ ಆಸುಪಾಸಿನ ಹಳ್ಳಿಗಳನ್ನು ಒಳಗೊಂಡು ಮೂಡಲಗಿ ತಾಲ್ಲೂಕನ್ನು ರಚಿಸುವಂತೆ ಕೋರಿದ ಅವರು, ಶಾಸಕ ಬಾಲಚಂದ್ರ ಅವರು ಮುತುವರ್ಜಿ ವಹಿಸಿ ಮೂಡಲಗಿ ನಾಗರಿಕರ ಬಹು ವರ್ಷಗಳ ಬೇಡಿಕೆ ಯನ್ನು ನನಸು ಮಾಡುವಂತೆ ಕೋರಿ ಕೊಂಡರು.

ಬಿಜೆಪಿ ಮುಖಂಡ ಅಶೋಕ ಪೂಜಾರಿ ಅವರು ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ. ತಾಲ್ಲೂಕು ರಚನೆ ಸಂಪುಟದಲ್ಲಿ ಅನುಮೋದನೆಗೆ ಮಾತ್ರ ಬಾಕಿಯಿದೆ. ಸಂಪುಟ ಸಭೆಯಲ್ಲಿ ಅನುಮೋದನೆ ಮಾಡಿಸುವ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ ತೋರುವಂತೆ ಕೋರಿದರು.

ಕಲ್ಲೋಳಿಯ ಹಿರಿಯ ಸಹಕಾರಿ ಧುರೀಣ ಈರಪ್ಪ ಬೆಳಕೂಡ  ಅವರು ಮಾತನಾಡಿ, ಹೊಸ ತಾಲ್ಲೂಕುಗಳ ರಚನೆಯಲ್ಲಿ ಮೂಡಲಗಿಗೆ ಅನ್ಯಾಯ ವಾಗಿದೆ. ಎಲ್ಲೂ ಅನ್ವಯವಾಗದ ಹೋಬಳಿ ಮಟ್ಟದ ಗ್ರಾಮಗಳು ಮೂಡಲಗಿಗೆ ಹೇಗೆ ಅನ್ವಯವಾಗುತ್ತದೆ ಎಂದು ಜಿಲ್ಲಾಡಳಿತವನ್ನು ಪ್ರಶ್ನಿಸಿದರು.

ಹೋರಾಟ ಸಮಿತಿಯ ಸಂಚಾಲಕ ಭೀಮಪ್ಪ ಗಡಾದ ಮಾತನಾಡಿ ತಾಲ್ಲೂಕು ರಚನೆಯ ಆದೇಶ  ಪತ್ರ ತರುವವರೆಗೆ ಹೋರಾಟ ಮುಂದು ವರಿಯುತ್ತದೆ ಎಂದು ಹೇಳಿದರು.
ನಂತರ ಶಾಸಕರ ನೇತೃತ್ವದಲ್ಲಿ ತಾಲ್ಲೂಕು ಹೋರಾಟ ಸಮಿತಿಯು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರಿಗೆ ಮನವಿ ಅರ್ಪಿಸಿತು.

ಟೈರ್‌ಗಳಿಗೆ ಬೆಂಕಿ: ಮೂಡಲಗಿ ತಾಲ್ಲೂಕು ರಚನೆಗೆ ಆಗ್ರಹಿಸಿ ಭಾನು ವಾರ ಜರುಗಿದ ಮೂಡಲಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಂಪೂರ್ಣ ಬಂದ್‌ ಕರೆಯ ಹಿನ್ನೆಲೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿತ್ತು.

ಬಂದ್‌ ಹಿನ್ನೆಲೆಯಲ್ಲಿ ತರಕಾರಿ ವರ್ತಕರು, ಅಂಗಡಿಕಾರರು, ಕೂಲಿ ಕಾರ್ಮಿಕರು, ಭುಸಾರಿ ವರ್ತಕರು, ವಿವಿಧ ಮಹಿಳಾ ಸಂಘಟನೆಗಳ ಸದಸ್ಯರು, ದರ್ಜಿಗಳ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ, ಸಹಕಾರ ಸಂಘಗಳ ಒಕ್ಕೂಟ, ಯುವಕ ಸಂಘಗಳು ಭಾಗವಹಿಸಿದ್ದವು.

ಕೂಲಿ ಕಾರ್ಮಿಕರು ಅರೆಬೆತ್ತಲೆ ಮೇರವಣಿಗೆ ನಡೆಸಿ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರೆ,  ಕುರುಬ ಹಾಲು ಮತ ಸಮಾಜ ಬಾಂಧವರು ಡೊಳ್ಳು ಮೇಳದೊಂದಿಗೆ ಹೋರಾಟಕ್ಕೆ ಬೆಂಬಲ ಸೂಚಿಸಿ ಮನವಿ ಸಲ್ಲಿಸಿದರು.

ವಿವಿಧ ಸಂಘಟನೆಗಳ ಯುವಕರು ಪಟ್ಟಣದ ಪ್ರತಿ ವೃತ್ತಗಳಲ್ಲೂ ಹಳೆಯ ಟೈರ್‌ಗಳಿಗೆ ಬೆಂಕಿ ಇಟ್ಟು ಮೂಡಲಗಿ ತಾಲೂಕ ಕೇಂದ್ರವನ್ನಾಗಿಸುವ ನಿರ್ಧಾರ ಕೈಬಿಟ್ಟಿದ್ದನ್ನು ಖಂಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಾವಿರಾರು ಮಹಿಳೆಯರು ಸ್ವಯಂ ಪ್ರೇರಿತವಾಗಿ ಬಿಸಿಲು, ಮಳೆ ಎನ್ನದೇ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಗುರ್ಲಾಪುರ ಬಂದ್‌ ಯಶಸ್ವಿ
ಗುರ್ಲಾಪುರ: ಮೂಡಲಗಿ ತಾಲ್ಲೂಕು ಹೋರಾಟ ಸಮಿತಿಯು ಕರೆದ ಮೂಡಲಗಿ–ಗುರ್ಲಾಪುರ ಬಂದ್‌ ಸಂಪೂರ್ಣ ಯಶಸ್ವಿಯಾಗಿತ್ತು.ಬೆಳಗಿನ ಜಾವ 6ರಿಂದ ಪ್ರಾರಂಭವಾದ ಪ್ರತಿಭಟನೆ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿತು. ಪ್ರತಿಭಟನೆ ಹಿನ್ನೆಲೆಯಲ್ಲಿ ದಿನವಿಡೀ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಸಾಕಷ್ಟು ಮುಂಚಿತವಾಗಿ ಬಂದ್‌ ಕರೆ ಕೊಟ್ಟಿದ್ದರಿಂದ ಸರ್ಕಾರಿ ಬಸ್ ಹಾಗೂ ಖಾಸಗಿ ವಾಹನಗಳು ಪಟ್ಟಣದತ್ತ ಸುಳಿಯಲೇ ಇಲ್ಲ. ದ್ವಿಚಕ್ರ ವಾಹನ ಸವಾರರು ಅಲ್ಲಲ್ಲಿ ಪರದಾಡುತ್ತಿರುವುದು ಕಂಡು ಬಂದಿತು.

ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಹಳೆಯ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಕೆ.ಎಸ್.ಆರ್.ಪಿ. ಬೆಳಗಾವಿಯ 2 ತುಕಡಿಗಳು, ಮೂಡಲಗಿ, ಕುಲಗೋಡ, ಘಟಪ್ರಭಾ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT