ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಮೆಚ್ಚುವ ಕಲೆ ನೀಡಿದ ವಿಶ್ವಕರ್ಮರು

Last Updated 18 ಸೆಪ್ಟೆಂಬರ್ 2017, 6:40 IST
ಅಕ್ಷರ ಗಾತ್ರ

ಹಾವೇರಿ: ‘ವಿಶ್ವವೇ ಬೆರಗಾಗಿ ನೋಡುವ ಕಲೆಯನ್ನು ನಮ್ಮ ನಾಡಿನಲ್ಲಿ ಅರಳಿಸಿದ ಕೀರ್ತಿ ‘ವಿಶ್ವಕರ್ಮ’ ಸಮಾಜದವರಿಗೆ ಸಲ್ಲುತ್ತದೆ’ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ನಗರದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ‘ವಿಶ್ವಕರ್ಮ ಜಯಂತಿ’ಯಲ್ಲಿ ಅವರು ಮಾತನಾಡಿದರು.

‘ಅಮರ ಶಿಲ್ಪಿ ಜಕಣಾಚಾರ್ಯರ ಶಿಲ್ಪಕಲೆಗೆ ಮನಸೋಲದ ವ್ಯಕ್ತಿಗಳೇ ಇಲ್ಲ. ದೇಶದ ಇತಿಹಾಸವನ್ನು ತಮ್ಮ ಕಲೆಯ ಮೂಲಕವೇ ಇಡಿ ವಿಶ್ವಕ್ಕೆ ಸಾರಿದ ಕೀರ್ತಿ ‘ವಿಶ್ವಕರ್ಮ’ರಿಗೆ ಸಲ್ಲುತ್ತದೆ. ತಮ್ಮ ಪಾರಂಪರಿಕ ಕಮ್ಮಾರ, ಬಡಗಿ, ಅಕ್ಕಸಾಲಿ ಹಾಗೂ ಶಿಲ್ಪಿ  ವೃತ್ತಿಯಲ್ಲಿ ಬದುಕನ್ನು ಕಂಡುಕೊಂಡಿದ್ದಾರೆ’ ಎಂದರು.

ಶಿರಸಂಗಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಪಿ.ಬಿ.ಬಡಿಗೇರ ಮಾತನಾಡಿ, ‘ವಿಶ್ವಕ್ಕೆ ಅನ್ನ ನೀಡುವ ರೈತ ಸಮುದಾಯದ ಬೆನ್ನೆಲುಬಾಗಿ ನಿಂತವರು ‘ವಿಶ್ವಕರ್ಮ’ರು. ರೈತರು ಬಳಸುವ ನೇಗಿಲಿನಿಂದ ಹಿಡಿದು ವ್ಯವಸಾಯಕ್ಕೆ ಬೇಕಾದ ಎಲ್ಲ ಸಾಮಗ್ರಿಗಳನ್ನು ತಯಾರಿಸುವ ತಂತ್ರಜ್ಞರೇ ವಿಶ್ವಕರ್ಮರು’ ಎಂದು ಬಣ್ಣಿಸಿದರು.

‘ವಂಶಪಾರಂಪರ್ಯ ಕಲೆಯಿಂದ ಇಡಿ ವಿಶ್ವವೇ ಮೆಚ್ಚುವಂತೆ ಬೇಲೂರು, ಹಳೆಬೀಡು ಹಾಗೂ ಪಟ್ಟದಕಲ್ಲಿನ ವೈಭವವನ್ನು ಅನಾವರಣಗೊಳಿಸಿದ್ದಾರೆ. ಆದರೆ, ಬುದ್ದಿವಂತರು ಎಂಬ ಹೆಮ್ಮೆಯೇ ಸಮಾಜವು ಆರ್ಥಿಕವಾಗಿ ಹಿಂದುಳಿಯಲು ಕಾರಣವಾಗಿದೆ ಎಂದು.

ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ ಮಾತನಾಡಿ, ‘ವಿಶ್ವಕರ್ಮರು ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿದ್ದಾರೆ. ಅದನ್ನು ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಕಾಯಕ ಕೌಶಲದಿಂದ ಬದುಕು ಕಟ್ಟಿಕೊಂಡಿದ್ದಾರೆ’ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ: ಸಮಾರಂಭದಲ್ಲಿ ಭರತನಾಟ್ಯ, ವೀರಗಾಸೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲಾಯಿತು. ಶಿರಸಂಗಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ‘ವಿಶ್ವಕರ್ಮ ವಿಕಾಸ ವಾಣಿ’ ಮಾಸ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಯಲ್ಲಪ್ಪ ಮಣ್ಣೂರ, ವಿಶ್ವಕರ್ಮ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶಪ್ಪ ಕಮ್ಮಾರ, ಗೌರವಾಧ್ಯಕ್ಷ ವಿಠಲಾಚಾರ್ಯ ಬಡಿಗೇರ, ನಗರಸಭೆ ಸದಸ್ಯೆ ಗೀತಾ ಜೂಜಗಾಂವ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಎ.ಟಿ.ಸುಲ್ತಾನಪೂರ್‌, ತಹಶೀಲ್ದಾರ್‌ ಜಗದೀಶ ಬಿ.ಮಜ್ಜಗಿ, ವಾರ್ತಾಧಿಕಾರಿ ರಂಗನಾಥ ಕುಳೇಗಟ್ಟೆ, ರುದ್ರಪ್ಪ ಬಡಿಗೇರ, ವಿಠಲಾಚಾರ್ಯ ಬಡಿಗೇರ, ರಾಜೇಂದ್ರ ರಿತ್ತಿ, ಸತೀಶ ಕಮ್ಮಾರ, ಹಾಗೂ ಮನೋಹರ ಇದ್ದರು.

‘ಮಹಾತ್ಮರ ವಿಚಾರಗಳು ಸಾರ್ವಕಾಲಿಕ’
ಶಿಗ್ಗಾವಿ: ನಾಡಿನ ಅಭ್ಯುದಯಕ್ಕಾಗಿ ಅನೇಕ ಮಹಾತ್ಮರು, ಶರಣರು ಹಾಗೂ ಧಾರ್ಶನಿಕರು ಸಾಕಷ್ಟು ಶ್ರಮಿಸಿದ್ದಾರೆ. ಅವರ ವಿಚಾರಧಾರೆಗಳು ಸಾರ್ವಕಾಲಿಕವಾಗಿವೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ನಡೆದ ತಾಲ್ಲೂಕು ಮಟ್ಟದ ವಿರಾಟ್‌ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾಜಿ ಶಾಸಕ ಸೈಯದ್‌ ಅಜ್ಜಂಪೀರ್‌ ಖಾದ್ರಿ ಮಾತನಾಡಿದರು.

ಹುಲಗೂರಿನ ಜೀವನ ಮುಕ್ತಾಲಯ ಕ್ಷೇತ್ರದ ಮೌನೇಶ್ವರ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು. ತಾಲ್ಲೂಕು ವಿಶ್ವಕರ್ಮ ಸಮಾಜದ ಸಮಿತಿ ಅಧ್ಯಕ್ಷ ಕಾಳಪ್ಪ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯೆಯರಾದ ದೀಪಾ ಅತ್ತಿಗೇರಿ, ಶೋಭಾ ಗಂಜೀಗಟ್ಟಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪಾರವ್ವ ಆರೇರ್‌ ಹಾಗೂ ಪುರಸಭೆ ಅಧ್ಯಕ್ಷ ಶಿವಪ್ರಸಾದ  ಇದ್ದರು.

* * 

ಒಗ್ಗಟ್ಟು ಪ್ರದರ್ಶನ ಮಾಡದ ಕಾರಣ ವಿಶ್ವಕರ್ಮ ಸಮಾಜದವರಿಗೆ ನ್ಯಾಯ ಸಮ್ಮತವಾಗಿ ಸಿಗಬೇಕಾದ ರಾಜಕೀಯ ಮತ್ತು ಶೈಕ್ಷಣಿಕ ಸ್ಥಾನಮಾನಗಳು ಲಭಿಸಿಲ್ಲ
ಪಿ.ಬಿ.ಬಡಿಗೇರ
ಅಧ್ಯಕ್ಷ, ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT