ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವಕರ್ಮಕ್ಕೆ ಸ್ವತಂತ್ರ ಧರ್ಮದ ಅರ್ಹತೆ ಇದೆ’

Last Updated 18 ಸೆಪ್ಟೆಂಬರ್ 2017, 6:50 IST
ಅಕ್ಷರ ಗಾತ್ರ

ಜಮಖಂಡಿ: ವಿಶ್ವಕರ್ಮ ಅಂದರೆ ಒಂದು ಕುಲ ಅಲ್ಲ. ಆದರೆ, ಅದೊಂದು ಧರ್ಮ. ಕಮ್ಮಾರ, ಬಡಿಗ, ಅಕ್ಕಸಾಲಿಗ, ಕಂಚಗಾರ, ಶಿಲ್ಪಿ ಎಂಬ ಪಂಚಕರ್ಮಿಯರನ್ನು ಒಳಗೊಂಡಿರುವ ವಿಶ್ವಕರ್ಮ ಧರ್ಮಕ್ಕೆ ಸ್ವತಂತ್ರ ಧರ್ಮದ ಸಂವಿಧಾನಿಕ ಮಾನ್ಯತೆ ಪಡೆಯಬೇಕಾದ ಅಗತ್ಯವಿದೆ ಎಂದು ಬೀದರ ತಾಲ್ಲೂಕಿನ ಚಟ್ನಳ್ಳಿ ಗ್ರಾಮದ ಅಲ್ಲಮಪ್ರಭುದೇವರ ಮಠದ ಸಿದ್ಧೇಶ್ವರಾನಂದ ಶ್ರೀಗಳು ಹೇಳಿದರು.

ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ನಗರಸಭೆ ಹಾಗೂ ಶ್ರೀವಿಶ್ವಕರ್ಮ ಸಮಾಜದ ಜಮಖಂಡಿ ತಾಲ್ಲೂಕು ಘಟಕದ ಆಶ್ರಯದಲ್ಲಿ ಇಲ್ಲಿನ ಜಿ.ಜಿ. ಹೈಸ್ಕೂಲ್‌ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಅತಿಥಿ ಉಪನ್ಯಾಸ ನೀಡಿದರು.

ಸಿದ್ಧಾಂತ, ಸಾಧನೆ, ದರ್ಶನ, ಸಂಸ್ಕಾರ, ಅರ್ಥಶಾಸ್ತ್ರ, ನೀತಿಶಾಸ್ತ್ರ, ಸಮಾಜಶಾಸ್ತ್ರ, ಸಂಸ್ಕೃತಿ, ಪರಂಪರೆ, ಸಾಹಿತ್ಯ ಹಾಗೂ ಧರ್ಮಗುರು ಎಂಬ 11 ಲಕ್ಷಣಗಳು ಸ್ವತಂತ್ರ ಧರ್ಮಕ್ಕೆ ಇರುತ್ತವೆ. ಈ ಎಲ್ಲ ಲಕ್ಷಣಗಳು ವಿಶ್ವಕರ್ಮ ಧರ್ಮಕ್ಕೆ ಇವೆ. 16ನೇ ಶತಮಾನದಲ್ಲಿ ವಿಶ್ವಕರ್ಮ ಧರ್ಮಗುರು ಮೌನೇಶ್ವರರು ತಮ್ಮ 816 ವಚನಗಳ ಮೂಲಕ ಧರ್ಮಸಂಹಿತೆ ತಿಳಿಸಿದ್ದಾರೆ. ಅವರ ಸಂದೇಶಗಳು ಹಾಗೂ ಆದೇಶಗಳನ್ನು ಒಳಗೊಂಡ ವಿಶ್ವಕರ್ಮ ಧರ್ಮಗ್ರಂಥ ವನ್ನು ಹೊರತರಲಾಗುವುದು ಎಂದರು.

ಶಾಸಕ ಸಿದ್ದು ನ್ಯಾಮಗೌಡ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿಶ್ವಕರ್ಮ ಭವನ ನಿರ್ಮಾಣಕ್ಕೆ ನಗರಸಭೆ ಮೂಲಕ ನಿವೇಶನ ಮಂಜೂರು ಮಾಡಿಸುವ ಭರವಸೆ ನೀಡಿದರಲ್ಲದೆ ವಿಶ್ವಕರ್ಮ ಸಮಾಜದ ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕೆ ತಮ್ಮ ಶಾಸಕರ ನಿಧಿಯಿಂದ ₹ 5 ಲಕ್ಷ ಅನುದಾನ ನೀಡುವ ವಾಗ್ದಾನ ಮಾಡಿದರು.

ಮುರನಾಳ ಗ್ರಾಮದ ಮಳೇ ರಾಜೇಂದ್ರಸ್ವಾಮಿ ಮಠದ ಗುರುನಾಥ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಗದಗ ನ್ಯಾಯಾಧೀಶ ಎ.ಎಂ. ಬಡಿಗೇರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಟಿಪಿಇಒ ಎನ್‌.ವೈ. ಬಸರಿಗಿಡದ, ಭಾಸ್ಕರ ಬಡಿಗೇರ ಇದ್ದರು.

ಜವಳಿ ನಿಗಮದ ಉಪಾಧ್ಯಕ್ಷ ನಜೀರ್‌ ಕಂಗನೊಳ್ಳಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುನಂದಾ ಮುಗಳ ಖೋಡ, ನಗರಸಭೆ ಅಧ್ಯಕ್ಷ ರಾಜು ಪಿಸಾಳ, ಮಾತೃ ಬಳಗದ ಅಧ್ಯಕ್ಷೆ ರಾಧಾ ಬಾಯಿ ಪತ್ತಾರ, ಅರುಣ ಸೋನಾರ, ಅಶೋಕ ಬಡಿಗೇರ, ಮೋಹನ ಪತ್ತಾರ, ಅನೀಲ ಬಡಿಗೇರ, ಲಕ್ಕಪ್ಪ ಬಡಿಗೇರ, ರಘುನಾಥ ಬಡಿಗೇರ, ರಮೇಶ ಗಿರಿಸಾಗರ ಇದ್ದರು. ಬಿ.ಎಂ. ಹಿಡಕಲ್‌  ಪ್ರಾರ್ಥನೆ ಗೀತೆ ಹಾಡಿದರು. ತಹಶೀಲ್ದಾರ್‌ ಪ್ರಶಾಂತ ಚನಗೊಂಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿಕ್ಷಕ ಕೆ.ಸಿ. ಬಡಿಗೇರ, ನಿವೇದಿತಾ ಬಡಿಗೇರ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಿಶ್ವಕರ್ಮ ವಿಕಾಸ ವಾಣಿ  ಮಾಸಪತ್ರಿಕೆಯ ಸಪ್ಟೆಂಬರ್‌ ಸಂಚಿಕೆ ಬಿಡುಗಡೆ ಮಾಡಲಾಯಿತು.. ಇದಕ್ಕೂ ಮೊದಲು ತಹಶೀಲ್ದಾರ್‌ ಕಾರ್ಯಾಲಯದ ಆವರಣದಲ್ಲಿ ಶ್ರೀವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿಬಂದು ಕಾರ್ಯಕ್ರಮದ ಸ್ಥಳವಾದ ಬಸವ ಭವನ ತಲುಪಿತು.‘ಸೌಹಾರ್ದ, ಕುಶಲತೆಗೆ ಸಮಾಜ ಮಾದರಿ’

ಹುನಗುಂದ: ವಿಶ್ವಕರ್ಮ ಸಮಾಜ ತುಂಬ ಪುರಾತನವಾದುದು. ಅದರ ವಿಶೇಷ ಕೌಶಲ, ಸೌಹಾರ್ದ, ಸೌಖ್ಯ ಜೀವನ ಮತ್ತು ಶ್ರಮಿಕ ಬದುಕು. ಇಂಥ ಸಮಾಜ ಸಮಗ್ರ ಅಭ್ಯುದಯಕ್ಕೆ ರಾಜ್ಯ ಸರ್ಕಾರ ನಿಗಮವೊಂದನ್ನು ಸ್ಥಾಪಿಸಿ ₹ 5 ಕೋಟಿ ಅನುದಾನ ನೀಡಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ತಾಲ್ಲೂಕು ಆಡಳಿತ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಸಹಯೋಗದಲ್ಲಿ ಗುರುಭವನದಲ್ಲಿ ಭಾನುವಾರ ಏರ್ಪಡಿ ಸಿದ್ದ ವಿಶ್ವಕರ್ಮ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ವಿಶ್ವನಾಥ ಸ್ವಾಮೀಜಿ, ನೀಲಕಂಠ ಸ್ವಾಮೀಜಿ, ಗುರಪ್ಪಯ್ಯೇಂದ್ರ ಸ್ವಾಮೀಜಿ ಮತ್ತು ಗುರಪ್ಪಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಗಂಗಮ್ಮ ಎಮ್ಮಿ, ಸದಸ್ಯ ರಾಜಕುಮಾರ ಬಾದ ವಾಡಗಿ, ಸಂಗಪ್ಪ ಹೂಲಗೇರಿ, ಶೇಖ ರಪ್ಪ ಬಾದವಾಡಗಿ, ಸಮಾಜದ ಹಿರಿಯ ವಿ.ವಿ.ಪತ್ತಾರ, ನಾಗಪ್ಪ ಪತ್ತಾರ, ಆಯ್.ಎಚ್.ಪತ್ತಾರ, ಪುರಸಭೆ ನಾಮ ನಿರ್ದೇಶನ ಸದಸ್ಯ ಮೌನೇಶ ಬಡಿಗೇರ, ತಹಶೀಲ್ದಾರ್ ಸುಭಾಷ ಸಂಪಗಾಂವಿ ಇದ್ದರು.

ಸಮಾಜದ ಪ್ರತಿಭಾನ್ವಿತ ಮಕ್ಕಳ ಪ್ರತಿಭಾ ಪುರಸ್ಕಾರ ನಡೆಯಿತು. ದ್ಯಾಮ ವ್ವನ ಗುಡಿಯಿಂದ ವಿಶ್ವಕರ್ಮರ ಭಾವ ಚಿತ್ರದ ಮೆರವಣಿಗೆ ನಡೆಯಿತು. ಸುಮಂಗಲೆಯರು ಕುಂಭಹೊತ್ತು ಮೆರವಣಿಗೆಗೆ ಕಳೆ ತಂದರು. ಬಿ.ಸಿ.ಬಡಿಗೇರ ಸ್ವಾಗತಿಸಿದರು. ಅಶೋಕ ಮಾಯಾಚಾರಿ, ಎನ್.ವಿ. ಪತ್ತಾರ ಮತ್ತು ನಟರಾಜ ಬಡಿಗೇರ ನಿರೂಪಿಸಿದರು. ಕಾವ್ಯ ಬಡಿಗೇರ ಪ್ರಾರ್ಥಿಸಿದರು. ಮಹಾಬಳೇಶ ಬಡಿಗೇರ ಸ್ವಾಗತಗೀತೆ ಹಾಡಿದರು. ರಾಜು ಬಡಿಗೇರ ವಂದಿಸಿದರು.

‘ಯುವಕರಲ್ಲಿ ಶಿಕ್ಷಣ ಎಂಬ ಶಕ್ತಿ ತುಂಬಿ’
ಸಾವಳಗಿ: ವಿಶ್ವಕರ್ಮ ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಸಮಾಜದ ಯುವಕರಲ್ಲಿ ಶಿಕ್ಷಣ ಎಂಬ ಶಕ್ತಿ ತುಂಬಬೇಕು ಎಂದು ವಿಶ್ವಕರ್ಮ ಸಮಾಜದ ಮುಖಂಡ ಅನಿಲ ಬಡಿಗೇರ ಹೇಳಿದರು. ಗ್ರಾಮದ ಕಾಳಿಕಾ ದೇವಸ್ಥಾನದಲ್ಲಿ ವಿಶ್ವಕರ್ಮ ಜಯಂತಿ ನಿಮಿತ್ತ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಲಕರು ತಮ್ಮ ಮಕ್ಕಳಿಗೆ ನಶಿಸಿ ಹೋಗುವ ಆಸ್ತಿ ಮಾಡುವ ಬದಲು, ಶಾಶ್ವತವಾಗಿರುವ ಶಿಕ್ಷಣ ಎಂಬ ಆಸ್ತಿ ನೀಡಬೇಕು.

ಸಮಾಜ ಹೆಮ್ಮರವಾಗಿ ಬೆಳೆಯಬೇಕಾದರೆ ಯುವಕರು ಶಿಕ್ಷಣದಲ್ಲಿ ನಿರಂತರವಾಗಿ ತೊಡಗಬೇಕು. ಶಿಕ್ಷಣದೊಂದಿಗೆ ನೈತಿಕತೆಯನ್ನು ಮಗು ವಿಗೆ ತಿಳಿಸುವುದು ಪಾಲಕರ ಕರ್ತವ್ಯ. ಸಮಾಜದಲ್ಲಿ ಮಗುವೂ ಯಾವ ಮಾರ್ಗ ಹಿಡಿಯುತ್ತದೆ ಎನ್ನುವುದರಲ್ಲಿ ಪಾಲಕರ ಕರ್ತವ್ಯವೇ ಪ್ರಮುಖ. ನಮ್ಮ ಮಕ್ಕಳು ಕೇವಲ ಶಿಕ್ಷಣವಂತರಾದರೆ ಸಾಲದು ಸಮಾಜಕ್ಕಾಗಿ ಶ್ರಮಿಸಬೇಕು ಎಂದರು.

ಸುಶಿಲಕುಮಾರ ಬೆಳಗಲಿ, ಸುಜೀತ ಗೌಡ ಪಾಟೀಲ, ರಾಜುಗೌಡ ಪಾಟೀಲ, ಸುಭಾಷ್ ಪಾಟೋಳಿ, ರಾಮಣ್ಣ ಬಂಡಿವಡ್ಡರ, ವಿಠ್ಠಲ ಉಮರಾಣಿ, ಮೌನಪ್ಪ ಬಡಿಗೇರ, ಅಶೋಕ ಬಡಿಗೇರ ಇದ್ದರು.

‘ವಿಶ್ವಕರ್ಮ ನಿಗಮಕ್ಕೆ ₹ 5 ಕೋಟಿ ಸಾಲದು’
ಬಾದಾಮಿ: ಸರ್ಕಾರ ವಿಶ್ವಕರ್ಮ ನಿಗಮವನ್ನು ಸ್ಥಾಪಿಸಿದೆ. ನಿಗಮದ ಸದುಪಯೋಗವನ್ನು ಪಡೆಯಬೇಕು. ಸಮಾಜದ ಮುಖ್ಯ ವಾಹಿನಿಗೆ ಬರಲು ಶಿಕ್ಷಣ ಅವಶ್ಯವಾಗಿದೆ. ಮಕ್ಕಳಿಗೆ ಶಿಕ್ಷಣವನ್ನು ಕೊಡಿ ಎಂದು ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹೇಳಿದರು.

ತಾಲ್ಲೂಕು ಆಡಳಿತ ಆಶ್ರಯದಲ್ಲಿ ಇಲ್ಲಿನ ಪಿಕಾರ್ಡ್‌ ಬ್ಯಾಂಕ್‌ ಆವರಣದಲ್ಲಿ ಭಾನುವಾರ ಜರುಗಿದ ವಿಶ್ವಕರ್ಮ ಜಯಂತಿ ಉತ್ಸವ ಸಮಾರಂಭಕ್ಕೆ ಅವರು ಚಾಲನೆ ನೀಡಿದರು. ವಿಶ್ವಕರ್ಮರು ಶ್ರಮ ಜೀವಿಗಳು  ರೈತರಿಂದ ಎಲ್ಲ ಜಾತಿ ಜನಾಂಗದವರಿಗೆ ಬೇಕಾದವರು. ನಿಮ್ಮ ನಿಮ್ಮ ಕುಲಕಸುಬನ್ನು ಅಭಿವೃದ್ಧಿ ಮಾಡಿ ಕೊಳ್ಳಬೇಕು ಎಂದರು.

ಅತಿಥಿಗಳಾಗಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಿಜಯಕುಮಾರ ಬೇಟಗಾರ, ಪುರಸಭೆ ಅಧ್ಯಕ್ಷ  ಫಾರೂಕ್‌ ಅಹ್ಮದ್‌ ದೊಡಮನಿ  ಮಾತನಾಡಿದರು. ಶಾಸನಗಳಲ್ಲಿ ಕ್ರಿ.ಶ. 5ನೇ ಶತಮಾನದಿಂದ 13 ನೇ ಶತಮಾ ನದವರೆಗೆ ವಿಶ್ವಕರ್ಮಿಗಳು ನಾಡಿನ ವಿವಿಧೆಡೆ ಸ್ಮಾರಕಗಳಲ್ಲಿ ಮೂರ್ತಿ ಶಿಲ್ಪಗಳನ್ನು ರಚಿಸಿದ ಬಗ್ಗೆ ಗಣೇಶ ಹೊರಪೇಟೆ ಉಪನ್ಯಾಸ ನೀಡಿದರು.

ಎಪಿಎಂಸಿ ಅಧ್ಯಕ್ಷ ಕುಬೇರಗೌಡ ಪಾಟೀಲ, ಉಪಾಧ್ಯಕ್ಷೆ ರೇಣವ್ವ ಮದ ಕಟ್ಟಿ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಕೈಲಾಸ ಕುಂಬಾರ, ನಿಂಗಪ್ಪ ಹೊಸ ಮನಿ, ಪುರಸಭೆ ಸದಸ್ಯ ಆರ್‌.ಎಫ್‌. ಬಾಗವಾನ , ತಾಲ್ಲೂಕು ಪಂಚಾಯ್ತಿ ಇಓ ಜಗನ್ನಾಥ ಹೂಗಾರ, ಮನೋಹರ ಪತ್ತಾರ, ಶೇಕಪ್ಪ ಬಡಿಗೇರ, ಕಳಕಪ್ಪ ಬಡಿಗೇರ, ಕುಮಾರ ಬಡಿಗೇರ, ಕುಬೇರ ಬಡಿಗೇರ  ಇದ್ದರು.

ಅಕ್ಕಮಹಾದೇವಿ ಕಲ್ಯಾಣ ಮಂಟಪದಿಂದ ಪಿಕಾರ್ಡ್‌ ಬ್ಯಾಂಕ್‌ ಆವ ರಣದವರೆಗೆ ವಿಶ್ವಕರ್ಮ ಭಾವಚಿತ್ರದ ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು.
ವಿಶ್ವಕರ್ಮ ನಿಗಮಕ್ಕೆ ಸರ್ಕಾರ ₹ 5 ಕೋಟಿ ಮಂಜೂರು ಮಾಡಿದೆ. 5 ಕೋಟಿ ರೂಪಾಯಿ ಸಾಲದು. ಸರ್ಕಾರ ವಿಶ್ವಕರ್ಮ ನಿಗಮಕ್ಕೆ ಹೆಚ್ಚಿನ ಅನುದಾನವನ್ನು ಮಂಜೂರು ಮಾಡಬೇಕು ಎಂದು ಪ್ರಾಸ್ತಾವಿಕ ವಾಗಿ ಮಾತನಾಡಿದ ಪ್ರಹ್ಲಾದ್‌ ಅಕ್ಕಸಾಲಿಗ ಒತ್ತಾಯಿಸಿದರು. ತಹಶೀಲ್ದಾರ್‌ ಎಸ್‌. ರವಿಚಂದ್ರ ಸ್ವಾಗತಿಸಿದರು. ಎಂ.ಬಿ. ದೊಡ್ಡಪ್ಪನವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT