ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ನಿಲಯದ ಆವರಣದಲ್ಲಿ ಬಯಲು ಶೌಚ

Last Updated 18 ಸೆಪ್ಟೆಂಬರ್ 2017, 7:14 IST
ಅಕ್ಷರ ಗಾತ್ರ

ಬೀದರ್‌: ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯ ಆರಂಭವಾಗಿ ಮೂರು ವರ್ಷಗಳಷ್ಟೇ ಆಗಿವೆ. ಆಗಲೇ ಅಲ್ಲಿ ಬೆಟ್ಟದಷ್ಟು ಸಮಸ್ಯೆಗಳು ತುಂಬಿಕೊಂಡಿದ್ದು, ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿವೆ.

ವಸತಿ ನಿಲಯದಲ್ಲಿ ಕೊಠಡಿಗಳನ್ನು ಬಿಟ್ಟರೆ ಬೇರೇನೂ ಸೌಲಭ್ಯಗಳಿಲ್ಲ. ಮೂರು ವರ್ಷಗಳ ಹಿಂದೆ ತರಲಾದ ಜನರೇಟರ್‌ ಇಂದಿಗೂ ಕಾರ್ಯಾರಂಭ ಮಾಡಿಲ್ಲ. ಸೋಲಾರ್‌ ಟ್ಯಾಂಕ್‌ ಅಳವಡಿಸಲಾಗಿದೆ. ಆದರೆ, ಒಮ್ಮೆಯೂ ಬಿಸಿ ನೀರು ಹರಿದಿಲ್ಲ. ವಸತಿ ನಿಲಯದಲ್ಲಿ ಕಂಪ್ಯೂಟರ್‌ ಕೊಠಡಿ ಇದೆ. ಅದರ ಬಾಗಿಲು ತೆರೆದಿಲ್ಲ. ಹೊರಗಿನಿಂದಲೂ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತೋರಿಸಿಲ್ಲ.

ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೇ ದೊಡ್ಡದಾದ ಗ್ರಂಥಾಲಯ ಇದೆ. ಕೊಠಡಿಯಲ್ಲಿ ಏಳು ಕಪಾಟುಗಳೂ ಇವೆ. ಆದರೆ ಗ್ರಂಥಾಲಯದಲ್ಲಿ ಒಂದು ಪುಸ್ತಕವೂ ಇಲ್ಲ. ಕೊಠಡಿಗೆ ಬೀಗ ಹಾಕಿದ್ದು, ವಸತಿ ನಿಲಯದ ಸಿಬ್ಬಂದಿ ಗ್ರಂಥಾಲಯ ಕೊಠಡಿಗೆ ಹಾಕಿದ ಬೀಗದ ಕೈ ಎಲ್ಲಿ ಇಡಲಾಗಿದೆ ಎನ್ನುವುದನ್ನೂ ಮರೆತಿದ್ದಾರೆ. ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳನ್ನು ಕೊಡುತ್ತಿಲ್ಲ. ರಾಜ್ಯ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ವಿದ್ಯಾರ್ಥಿಗಳಿಗೆ ಅದರ ಎಳ್ಳಷ್ಟೂ ಲಾಭ ಆಗಿಲ್ಲ.

ವಸತಿ ನಿಲಯದ ಆವರಣದಲ್ಲಿ ಬಯಲು ಶೌಚಮೈದಾನದಲ್ಲಿ ಗಿಡಗಂಟಿಗಳು ಬೆಳೆದಿವೆ. ನೌಬಾದ್‌ನ ಕೊಳೆಗೇರಿ ನಿವಾಸಿಗಳು ವಸತಿ ನಿಲಯದ ಮುಂದಿನ ಮೈದಾನದಲ್ಲಿ ಶೌಚಕ್ಕೆ ಕುಳಿತುಕೊಳ್ಳುತ್ತಿದ್ದಾರೆ.

ಮೈದಾನದ ಸುತ್ತ ನಿರ್ಮಿಸಿರುವ ಆವರಣ ಗೋಡೆಯನ್ನು ಒಡೆದಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ವಾಹನಗಳನ್ನು ನಿಲ್ಲಿಸುವ ಶೆಡ್‌ನಲ್ಲಿ ಕುಡುಕರು ಗುಂಪಾಗಿ ಕುಳಿತು ರಾಜಾರೋಷವಾಗಿ ಮದ್ಯ ಸೇವಿಸುತ್ತಿದ್ದಾರೆ. ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳ ಗೋಳನ್ನು ಕೇಳುವವರೇ ಇಲ್ಲವಾಗಿದ್ದಾರೆ’ ಎಂದು ವಿದ್ಯಾರ್ಥಿಗಳು ದೂರುತ್ತಾರೆ.

‘ಸೆ.12ರಂದು ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿ ವಸತಿ ನಿಲಯಕ್ಕೆ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದ್ದೇವೆ. ಈ ಮೊದಲು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೂ ಮನವಿ ಮಾಡಿದ್ದೇವೆ. ಆದರೆ ಯಾರೂ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ’ ಎಂದು ವಸತಿ ನಿಲಯದ ವಿದ್ಯಾರ್ಥಿ ದಿಲೀಪ ದೂರುತ್ತಾರೆ.

‘ಒಂದೇ ವಾರ್ಡನ್‌ ಎರಡು ವಸತಿನಿಲಯಗಳನ್ನು ನೋಡಿಕೊಳ್ಳುತ್ತಿದ್ದಾರೆ. ವಾರ್ಡನ್‌ ಗ್ರಾಮೀಣ ಪ್ರದೇಶದಲ್ಲಿರುವ ವಸತಿನಿಲಯಗಳಿಗೆ ಹೋಗಿ ಬರುವುದರಲ್ಲಿಯೇ ಸಮಯ ವ್ಯರ್ಥ ಆಗುತ್ತಿದೆ. ಸರ್ಕಾರ, ಪ್ರತ್ಯೇಕ ವಾರ್ಡನ್‌ಗಳನ್ನು ನೇಮಕ ಮಾಡಬೇಕು’ ಎಂದು ಆಗ್ರಹಿಸುತ್ತಾರೆ.

ಕಳಚಿ ಬೀಳುತ್ತಿರುವ ಸಿಮೆಂಟ್: ಪಕ್ಕದಲ್ಲಿಯೇ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ನಿಲಯ ನಿರ್ವಹಣೆಯ ಕೊರತೆಯಿಂದ ಹಾಳಾಗಿದೆ. ಗೋಡೆಗಳ ಸಿಮೆಂಟ್‌ ಕಳಚಿ ಬೀಳಲಾರಂಭಿಸಿದೆ. 1983ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ನಿಲಯವನ್ನು ಅಂದಿನ ಸಮಾಜ ಕಲ್ಯಾಣ ಸಚಿವ ಸಿದ್ರಾಮಯ್ಯ ಸ್ವಾಮಿ ಉದ್ಘಾಟಿಸಿದ್ದರು. ಬಹುತೇಕ ಕಡೆ ಛಾವಣಿಯಿಂದ ನೀರು ಜಿನುಗುತ್ತಿದೆ. ಸ್ನಾನಗೃಹಗಳು ಹಾಗೂ ಶೌಚಾಲಯ ಇರುವ ಕಟ್ಟಡದ ಸಾಮರ್ಥ್ಯ ಕಡಿಮೆಯಾಗಿದ್ದು, ಅದರ ಮೇಲೆ ಗಿಡಗಳು ಬೆಳೆದಿವೆ.

ಆಗಾಗ ಸಿಮೆಂಟ್‌ ಕಳಚಿ ಬೀಳುತ್ತಿದೆ. ಕಟ್ಟಡ ಅಪಾಯದ ಮುನ್ಸೂಚನೆ ನೀಡುತ್ತಿರುವ ಕಾರಣ ವಸತಿ ನಿಲಯದ ವಾರ್ಡನ್‌ ಮೂರು ಬಾರಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಕಟ್ಟಡ ವಿದ್ಯಾರ್ಥಿಗಳ ವಾಸಕ್ಕೆ ಯೋಗ್ಯವಾಗಿದೆಯೋ, ಇಲ್ಲವೋ ಎನ್ನುವುದನ್ನು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌
ಗಳಿಂದ ಪರಿಶೀಲಿಸಿ ವರದಿ ಪಡೆಯುವಂತೆಯೂ ಮನವಿ ಮಾಡಿದ್ದಾರೆ. ಅವೆಲ್ಲ ಫೈಲ್‌ಗಳಲ್ಲಿಯೇ ಇವೆ. ಕಟ್ಟಡ ಹಲವು ವರ್ಷಗಳಿಂದ ಸುಣ್ಣ ಬಣ್ಣ ಕಂಡಿಲ್ಲ. ಒಂದೊಂದು ಕೊಠಡಿಯಲ್ಲಿ ನಾಲ್ಕೈದು ವಿದ್ಯಾರ್ಥಿಗಳಿದ್ದಾರೆ


ಅಧಿಕಾರಿಗಳು ಭೇಟಿ ನೀಡಲಿ: ‘ಅಧಿಕಾರಿಗಳು ಕಚೇರಿ ಬಿಟ್ಟು ಹೊರಗೆ ಬರುತ್ತಿಲ್ಲ. ಹವಾನಿಯಂತ್ರಿತ ರೂಮ್‌ನಲ್ಲಿ ಕುಳಿತರೆ ವಿದ್ಯಾರ್ಥಿಗಳ ಹಾಗೂ ಜನರ ಸಮಸ್ಯೆಗಳನ್ನು ಅರಿತುಕೊಳ್ಳಲಾಗದು. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಸ್ಥಳಕ್ಕೆ ಭೇಟಿ ನೀಡಬೇಕು. ಸಾಧ್ಯವಿದ್ದರೆ ಒಂದು ದಿನ ವಸತಿ ನಿಲಯದಲ್ಲಿ ವಾಸ ಮಾಡಲಿ. ಆಗ ವಿದ್ಯಾರ್ಥಿಗಳು ಎಷ್ಟು ನರಕಯಾತನೆ ಅನುಭವಿಸುತ್ತಿದ್ದಾರೆ ಎನ್ನುವುದು ಮನವರಿಕೆಯಾಗಲಿದೆ’ ಎಂದು ಜೆಡಿಎಸ್‌ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನಬಿ ಖುರೇಶಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT