ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ನಿರ್ಮಿಸಿ ಛಲ ಸಾಧಿಸಿದ ನೀರೆ

Last Updated 18 ಸೆಪ್ಟೆಂಬರ್ 2017, 7:37 IST
ಅಕ್ಷರ ಗಾತ್ರ

ಕುಷ್ಟಗಿ: ಸ್ವಚ್ಛ ಭಾರತ ಅಭಿಯಾನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಮಾತಿಗೆ ಓಗೊಟ್ಟಿರುವ ತಾಲ್ಲೂಕಿನ ಗುಮಗೇರಿ ಗ್ರಾಮದ ಮಹಿಳೆ ರತ್ನಮ್ಮ ಚಂದ್ರಗಿರಿ ಸ್ವತಃ ಶೌಚಾಲಯ ನಿರ್ಮಿಸಿಕೊಂಡು ಛಲ ಸಾಧಿಸಿದ್ದಾರೆ.

ಸುಮಾರು ಹತ್ತು ಅಡಿ ಗುಂಡಿ ತೋಡುವುದು, ಶೌಚಾಲಯ ಕಟ್ಟಡ ನಿರ್ಮಾಣ, ಪ್ಲಾಸ್ಟರಿಂಗ್ ಕೆಲಸ, ಗುಂಡಿಗೆ ಸಿಮೆಂಟ್ ರಿಂಗ್‍ಗಳನ್ನು ಇಳಿಸುವುದು ಹೀಗೆ ಪುರುಷರನ್ನೂ ಮೀರಿಸುವಂತೆ ಎಲ್ಲ ಹಂತದ ಕೆಲಸಗಳನ್ನು ತಾವೇ ನಿರ್ವಹಿಸಿದ್ದಾರೆ. ಆರಂಭದಲ್ಲಿ ಕೆಲ ಪುರುಷ ಕೂಲಿಗಳು ನೆಲ ಗಟ್ಟಿಯಾಗಿದೆ, ತೋಡುವುದು ತಮ್ಮಿಂದ ಸಾಧ್ಯವಿಲ್ಲ ಎಂದೆ ಕೈಬಿಟ್ಟು ಹೋಗಿದ್ದರು.

ಆದರೆ, ಸುಮ್ಮನೆ ಕೂರದ ರತ್ನಮ್ಮ ಹೇಗಾದರೂ ಸರಿ ಶೌಚಾಲಯ ನಿರ್ಮಿಸಿಕೊಳ್ಳಲೇಬೇಕೆಂದು ಪಿಕಾಸು ಸಲಿಕೆ ಹಿಡಿದು ಹಗಲು ರಾತ್ರಿ ಒಬ್ಬರೇ ಗುಂಡಿ ತೋಡಿ ಅದೇ ರೀತಿ ಶೌಚಾಲಯ ಕೊಠಡಿಯನ್ನೂ ತಾವೇ ನಿರ್ಮಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ.

ಸಾಮಾನ್ಯ ವರ್ಗದಲ್ಲಿ ಬರುವುದರಿಂದ ಸರ್ಕಾರದ ₹ 12 ಸಾವಿರ ಸಹಾಯಧನ ದೊರೆಯಲಿದೆ. ಬಯಲಿನಲ್ಲಿ ಶೌಚಕ್ಕೆ ಹೋಗುವುದು ಮರ್ಯಾದೆಗೇಡು. ಅಷ್ಟೆ ಅಲ್ಲ ಅದರಿಂದ ವಾತಾವರಣವೂ ಗಲೀಜಾಗುತ್ತದೆ. ರೋಗರುಜಿನಗಳು ಹರಡುತ್ತವೆ ಎಂಬ ಪರಿಕಲ್ಪನೆಯನ್ನೂ ಹೊಂದಿದ್ದಾರೆ ರತ್ನಮ್ಮ.

ಶ್ರಮಜೀವಿ: ಇಷ್ಟೇ ಅಲ್ಲ ಸಿಮೆಂಟ್ ಶೀಟ್‍ಹೊಂದಿರುವ ಸಣ್ಣಗಾತ್ರದ ಮನೆಯಲ್ಲಿಯೇ ಅಡುಗೆ ಕೊಠಡಿ, ಬಚ್ಚಲು ಮನೆ, ಮಲಗುವ ಕೊಠಡಿಗಳನ್ನು ತಾಂತ್ರಿಕ ಶಿಲ್ಪಿಯಂತೆ ಅಚ್ಚುಕಟ್ಟಾದ ಮನೆಯನ್ನೂ ಸ್ವತಃ ನಿರ್ಮಿಸಿಕೊಂಡಿದ್ದಾರೆ. ಯಾರ ನೆರವಿಲ್ಲದೆ ರತ್ನಮ್ಮ ಅವರ ಸ್ವಾಭಿಮಾನದ ಬದುಕು ಬೇರೆಯವರಿಗೆ ಮಾದರಿ ಎಂದೇ ಗ್ರಾಮದ ಹಿರಿಯರಾದ ಹನುಮಪ್ಪ ಕಂಬಳಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾನವೀಯ ಮುಖ: ರತ್ನಮ್ಮ ಅವರ ತವರು ಅದೇ ಗ್ರಾಮ ಏಳು ಜನ ಸಹೋದರರು ಊರಲ್ಲಿದ್ದರೂ ಹಣ್ಣುಹಣ್ಣಾಗಿರುವ ತಾಯಿಯನ್ನು ಜೋಪಾನ ಮಾಡುವ ಜವಾಬ್ದಾರಿ ಇವರದೆ. ‘ನಮ್ಮನ್ನು ಸಾಕಿ ಸಲುಹಿದ ಹಡೆದವ್ವನಿಗೆ ಎರಡು ಹೊತ್ತು ಊಟ ಹಾಕಿದರೆ ಯಾವ ನಷ್ಟ?’ ಎನ್ನುವ ರತ್ನಮ್ಮ ಅವರದು ಇನ್ನೊಂದು ಮಾನವೀಯ ಮುಖ.

ಕೆಲ ವರ್ಷಗಳಿಂದ ಪತಿ ದೂರವಾಗಿದ್ದಾರೆ. ಹಾಗಾಗಿ ಸಂಸಾರ ಬಂಡಿಯ ನೊಗ ಹೊತ್ತಿರುವ ರತ್ನಮ್ಮ ಅವರಿಗೆ ಕೂಲಿಮಾಡಿಯೇ ತಾಯಿ ಮತ್ತು ಮೂವರು ಚಿಕ್ಕ ಮಕ್ಕಳ ಹೊಟ್ಟೆ ತುಂಬಿಸುವ ಅನಿವಾರ್ಯತೆ ಇದೆ.

ಸೂರು ಕಲ್ಪಿಸದ ಪಂಚಾಯಿತಿ: ಅನೇಕ ವರ್ಷಗಳಿಂದ ರತ್ನಮ್ಮ ಚಂದ್ರಗಿರಿ ತಾತ್ಕಾಲಿಕ ಮನೆಯಲ್ಲಿಯೇ ವಾಸವಾಗಿದ್ದಾರೆ. ಜೋರಾದ ಗಾಳಿ ಬೀಸಿದರೆ ಸಿಮೆಂಟ್ ಶೀಟ್‍ಗಳು ಹಾರಿಹೋಗುವಂತಿವೆ. ವಸತಿ ಯೋಜನೆಯಲ್ಲಿ ಮನೆ ಮಂಜೂರು ಮಾಡಿ ಎಂದು ಮನವಿ ಮಾಡುತ್ತಾ ಬಂದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಪ್ರತಿನಿಧಿಗಳಿಗೆ ರತ್ನಮ್ಮ ಅವರ ಕಷ್ಟದ ಬದುಕು ಅರ್ಥವಾಗಿಲ್ಲ ಎಂಬ ಆರೋಪಗಳು ಗ್ರಾಮಸ್ಥರಿಂದ ಕೇಳಿಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT