ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಲ್ಲೂ ದೂಳಿನ ಮಜ್ಜನ

Last Updated 18 ಸೆಪ್ಟೆಂಬರ್ 2017, 9:00 IST
ಅಕ್ಷರ ಗಾತ್ರ

ತುಮಕೂರು: ನಗರದ ಪರಿಸರ ಮಾಲಿನ್ಯ ಅಪಾಯದ ಮಟ್ಟ ಮೀರಿದೆ ಎಂದು ಗ್ರೀನ್ ಪೀಸ್‌ ಸಂಸ್ಥೆ ವರದಿಯಿಂದಲೂ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ ಎಂದು ಜನರು ಹೇಳುತ್ತಿದ್ದಾರೆ. ನಗರದ ಯಾವ ರಸ್ತೆಗೆ ಹೋದರೂ ದೂಳು ಕಣ್ಣಿಗೆ ರಾಚುತ್ತದೆ. ಪ್ರಮುಖ ರಸ್ತೆಗಳಾದ ಬಿ.ಎಚ್‌.ರಸ್ತೆ, ಗುಬ್ಬಿ, ಶಿರಾಗೇಟ್ ರಸ್ತೆ, ತುಮಕೂರು–ಕುಣಿಗಲ್ ರಸ್ತೆಗಳಿಗೆ ಕಾಲಿರಿಸದಷ್ಟು ಪರಿಸರ ಹದಗೆಟ್ಟಿದೆ.

ಮಳೆ ಬಂದು ಹೋದ ನಂತರ ರಸ್ತೆಯ ಇಕ್ಕೆಲಗಳಲ್ಲಿದ್ದ ಮಣ್ಣು ಬಂದು ಬಿದ್ದಿದೆ. ವಾಹನಗಳು ಓಡಾಡುವಾಗ ದೂಳು ಎದ್ದೇಳುತ್ತಿದೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ವಾಹನ ಓಡಿಸುವುದೇ ಕಷ್ಟವಾಗುತ್ತಿದೆ. ದೂಳಿನ ಕಾರಣದಿಂದಾಗಿ ಜನರು ಕೆಮ್ಮು, ಜ್ವರ, ಆಸ್ತಮಾ ಸಮಸ್ಯೆಯಿಂದ ನರಳುವಂತಾಗಿದೆ.

ಪರಿಸರ ಮಾಲಿನ್ಯ ಹದಗೆಡುವಲ್ಲಿ ರಸ್ತೆಯಲ್ಲಿ ಏಳುವ ದೂಳಿನ ಕಣಗಳು ಪ್ರಮುಖವಾಗಿವೆ. ರಸ್ತೆ ಬದಿಯಲ್ಲಿ ಮರ–ಗಿಡಗಳನ್ನು ಬೆಳೆಸದೇ ಇರುವುದು, ರಸ್ತೆಯ ಅಂಚಿನಲ್ಲಿ ಸಂಗ್ರಹವಾಗುವ ಮಣ್ಣನ್ನು ಗುಡಿಸದೇ ಇರುವುದು ದೂಳು  ಹೆಚ್ಚಾಗಲು ಕಾರಣ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ.

ರಸ್ತೆ  ಬದಿಗಳಲ್ಲಿ ಪಾದಚಾರಿ ಮಾರ್ಗಗಳನ್ನು ನಿರ್ಮಾಣ ಮಾಡದೇ ಇರುವುದು ಇಷ್ಟೊಂದು ಅಧ್ವಾನಕ್ಕೆ ಕಾರಣವಾಗಿದೆ. ಕಾಂಕ್ರೀಟ್ ಬಳಸಿ ಪಾದಚಾರಿ ಮಾರ್ಗ ಮಾಡುವುದರಿಂದ ಒಂದಿಷ್ಟು ದೂಳು ನಿಯಂತ್ರಿಸಬಹುದು ಎಂದು ಶ್ರೀದೇವಿ ವೈದ್ಯಕೀಯ ಕಾಲೇಜಿನ ಡಾ. ಪ್ರೀತಂ ತಿಳಿಸಿದರು.

ದೂಳಿನಲ್ಲಿ ಅತ್ಯಂತ ಸೂಕ್ಷ್ಮ ಕಲ್ಲಿನ ಕಣಗಳು ಇರುತ್ತವೆ.ಇವು ಕಣ್ಣಿಗೆ ಬಿದ್ದರೆ ಕಣ್ಣಿನ ದೃಷ್ಟಿ ಕಳೆದುಕೊಳ್ಳಬೇಕಾದ ಅಪಾಯವೂ ಇದೆ. ಹೆಚ್ಚಿದನಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರಿ ಮಕ್ಕಳು ಸಣ್ಣ ವಯಸ್ಸಿನಲ್ಲಿ ಆಸ್ತಮಾ ರೋಗಕ್ಕೆ ತುತ್ತಾಗಬಹುದು ಎಂದು ಎಚ್ಚರಿಸಿದರು.

ರಸ್ತೆ ಬದಿಯಲ್ಲಿ ಮರ ಗಿಡಗಳನ್ನು ಬೆಳೆಸುವುದು ಮಾತ್ರವಲ್ಲ ಅಕ್ಕಪಕ್ಕದ ಮಣ್ಣು ಇರುವ ಕಡೆಗಳಲ್ಲಿ ಹುಲ್ಲನ್ನು ಬೆಳೆಸಬೇಕು. ಹುಲ್ಲ ಬೆಳೆಸುವುದರಿಂದ ಮಣ್ಣು ಉತ್ಪತ್ತಿಯಾಗುವುದಿಲ್ಲ. ಹುಲ್ಲು ಬೆಳೆದರೆ ಮಳೆ ಬಂದರೂ ಮಣ್ಣು ರಸ್ತೆಗೆ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟರು.

‘ಮಹಾನಗರ ಪಾಲಿಕೆಗೆ ಸ್ವಚ್ಛ ನಗರ, ಹಸಿರು ನಗರ ಬೇಕಾಗಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯಡಿ ಹಸಿರು ನಗರ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಪಾಲಿಕೆಯ ಆವರಣದಲ್ಲಿರುವ 12 ಮರಗಳನ್ನು ಏಕಾಏಕಿ ಕಡಿಯಲು ತೀರ್ಮಾನ ಕೈಗೊಳ್ಳಲಾಗಿದೆ. ಇಂಥ ಪಾಲಿಕೆಯ ಆಡಳಿತದಿಂದ ರಸ್ತೆ ಪಕ್ಕ ಗಿಡ ಬೆಳೆಸಬೇಕೆಂದು ನಿರೀಕ್ಷಿಸುವುದು ತಪ್ಪಾಗುತ್ತದೆ’ ಎಂದು ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ರಾಘವೇಂದ್ರ ಹೇಳಿದರು.

‘ರಸ್ತೆಗಳಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಗುಂಡಿ ಮುಚ್ಚುವ ಕೆಲಸವನ್ನು ಮಾಡಿಲ್ಲ. ಸಾಕಷ್ಟು ರಸ್ತೆಗಳಿಗೆ ಡಾಂಬರೀಕರಣ ಮಾಡಿಲ್ಲ. ₹ 720 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ ಎಂದು ಶಾಸಕ ರಫೀಕ್‌ ಅಹಮದ್‌ ಹೇಳುತ್ತಾರೆ. ಶಾಸಕರು ಒಮ್ಮೆ ನಗರ ಸುತ್ತಾಟ ನಡೆಸಿದರೆ ಅವರಿಗೆ ಸಮಸ್ಯೆ ಕಾಣಬಹುದು’ ಎಂದು ತಿಳಿಸಿದರು.

‘ರಸ್ತೆಯ ದೂಳು ಗುಡಿಸುವ ಸಲುವಾಗಿ ಲಾರಿಯನ್ನು (ಡಸ್ಟ್ ಸಕ್ಕಿಂಗ್ ವೆಹಿಕಲ್‌) ಪಾಲಿಕೆ ₹ 80 ಲಕ್ಷಕ್ಕೆ ಖರೀದಿ ಮಾಡಿತ್ತು.  ನಾವು ಪ್ರಶ್ನೆ ಮಾಡಿದಾಗಲೆಲ್ಲ ರಾತ್ರಿ ವೇಳೆ ಕಸ ಗುಡಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ಕಸ ಗುಡಿಸಿದಂತೆ ಕಾಣುವುದಿಲ್ಲ’ ಎಂದು ಪಾಲಿಕೆ ಸದಸ್ಯ ಟಿ.ಆರ್‌.ನಾಗರಾಜ್‌ ಹೇಳಿದರು.

’ನಗರದ ಆರ್‌ಟಿಒ ಕಚೇರಿ ಮುಂಭಾಗ ಈ ಹಿಂದೆ ಕಸ ಗುಡಿಸುವ ಲಾರಿಗೆ ಹಿರೋ ಹೋಂಡಾ ಬೈಕ್‌ ಸವಾರ ಗುದ್ದಿದ್ದನು. ಆಗ ಸಮಸ್ಯೆಯಾಗಿತ್ತು. ಆಗಿನಿಂದ ಈ ವಾಹನವನ್ನು ಬಳಸುತ್ತಿಲ್ಲ. ಮೂಲೆಗೆ ನಿಲ್ಲಿಸಲಾಗಿದೆ. ಮುಖ್ಯಮಂತ್ರಿ ನಗರಕ್ಕೆ ಬಂದಾಗ ಮಾತ್ರ ಒಮ್ಮೆ ಬಿ.ಎಚ್‌.ರಸ್ತೆಯಲ್ಲಿ ಕಸ ಗುಡಿಸಲಾಗಿತ್ತು’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪಾಲಿಕೆ ಪರಿಸರ ಎಂಜಿನಿಯರ್‌ ಅವರಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT