ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನು–ಭುವಿಯೆಲ್ಲ ದೇಶಭಕ್ತಿ

Last Updated 18 ಸೆಪ್ಟೆಂಬರ್ 2017, 10:15 IST
ಅಕ್ಷರ ಗಾತ್ರ

ಮೈಸೂರು: ಮಾನಸ ಗಂಗೋತ್ರಿಯ ಬಯಲು ರಂಗಮಂದಿರ ಭಾನುವಾರ ರಾತ್ರಿ ಯುವಕರಿಂದ ಕಿಕ್ಕಿರಿದು ತುಂಬಿತ್ತು. ದೇಶಭಕ್ತಿ ಅವರ ನರ ನಾಡಿಗಳಲ್ಲಿ ಹರಿದಾಡುತಿತ್ತು. ಕಿವಿಗಡಚಿಕ್ಕುವ ಸಂಗೀತದ ಅಬ್ಬರ ಅವರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.

ನಾಡಹಬ್ಬ ದಸರೆ ಅಂಗವಾಗಿ ಇಲ್ಲಿ ನಡೆಯುತ್ತಿರುವ ‘ಯುವ ಸಂಭ್ರಮ’ ಮುಗಿಯಲು ಇನ್ನೊಂದೇ ದಿನ ಬಾಕಿ ಇದೆ. ‘ಅಷ್ಟರಲ್ಲಿ ಎಲ್ಲ ಸಂತಸವನ್ನು ಹಂಚಿಕೊಂಡು ಬಿಡೋಣ’ ಎಂಬ ತವಕ ಯುವಕ–ಯುವತಿಯರಲ್ಲಿ ಎದ್ದು ಕಾಣುತ್ತಿತ್ತು. ಕಾಲೇಜು ವಿದ್ಯಾರ್ಥಿಗಳ ದಣಿವರಿಯದ ನರ್ತನ ‘ಸಂಭ್ರಮ’ಕ್ಕೆ ಅನ್ವರ್ಥನಾಮದಂತೆ ಇತ್ತು.

ಹುಣಸೂರಿನ ಡಿ.ದೇವರಾಜ ಅರಸು ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಮಹಿಳಾ ಸಬಲೀಕರಣ ನೃತ್ಯರೂಪಕವು ಆರಂಭದಲ್ಲೇ ಜಾಗೃತಿ ಕಹಳೆ ಮೊಳಗಿಸಿತು. ಮಹಿಳಾ ಸಮಸ್ಯೆಗಳನ್ನೇ ಮುಖ್ಯವಾಗಿಟ್ಟು ಪ್ರದರ್ಶಿಸಿದ ನೃತ್ಯವು ಮಹಿಳೆಯರ ಬಗ್ಗೆ ಗೌರವ ಮೂಡಿಸುವಂತಿತ್ತು.

ಎಚ್.ಡಿ.ಕೋಟೆ ತಾಲ್ಲೂಕಿನ ಆದಿಚುಂಚನಗಿರಿ ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಕಂಸಾಳೆ ನೃತ್ಯವು ಗಮನ ಸೆಳೆಯಿತು. ವೇದಿಕೆಯ ಮೇಲಿದ್ದ ವಿದ್ಯಾರ್ಥಿಗಳು ಮಹದೇಶ್ವರನ ಜನಪದ ಸಂಗೀತವನ್ನು ಕಂಸಾಳೆಯ ತಾಳದೊಂದಿಗೆ ಹಾಡುತ್ತಿದ್ದರೆ, ಜನಪದ ನೃತ್ಯ ಪ್ರದರ್ಶಿಸಿದ ಯುವಕರು ಪುಳಕಗೊಳ್ಳುವಂತೆ ಹೆಜ್ಜೆ ಹಾಕಿದರು.

ಹೊಳೆನರಸೀಪುರದ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಪ್ರದರ್ಶಿಸಿದ ‘ರೈತನೇ ರಾಷ್ಟ್ರದ ಬೆನ್ನೆಲುಬು’ ನೃತ್ಯವು ಮನಮುಟ್ಟುವಂತೆ ಇತ್ತು. ಹಂಸಲೇಖ ಸಂಗೀತದ, ಬಾಲಸುಬ್ರಹ್ಮಣ್ಯಯಂ ಗಾಯನದ ‘ನಮ್ಮಮ್ಮ ನಮ್ಮಮ್ಮ ಭೂಮಿ ತಾಯಮ್ಮ... ಈ ಸುಗ್ಗಿ ತಂದವಳಾರಮ್ಮ...’ ಗೀತೆ ಅಲೆ ಅಲೆಯಾಗಿ ಬಯಲುರಂಗಮಂದಿರದಲ್ಲಿ ತೇಲಿ ಹೋಯಿತು.

ಡಾ.ರಾಜ್ ಗಾಯನದ ‘ರೈತ ರೈತ ರೈತ ಅನ್ನ ಕೊಡುವ ದಾತ...’ ಕೃಷಿಕನ ಬಗ್ಗೆ ಅಭಿಮಾನ ಮೂಡಿಸಿತು. ರೈತನ ಬವಣೆ, ಆತ್ಮಹತ್ಯೆಯನ್ನು ವೇದಿಕೆ ಮೇಲೆ ಚಿತ್ರಿಸಿ, ರೈತ ಖುಷಿಯಾದರೆ, ನಾಡೇ ಸಂಪನ್ನ ಎಂದು ತೋರಿಸಿ ವೇದಿಕೆಯನ್ನು ಇತರರಿಗೆ ಬಿಟ್ಟುಕೊಟ್ಟರು.

ಹಾಸನದ ಎನ್‌ಡಿಆರ್‌ಕೆ ಪದವಿ ಕಾಲೇಜಿನ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಯೋಧರ ಸಮವಸ್ತ್ರ ಧರಿಸಿ ‘ಯುದ್ಧದ ಪರಿಣಾಮ’ ನೃತ್ಯ ಪ್ರದರ್ಶಿಸಿದರು. ‘ಯೇ ಮೇರೇ ವತನ್‌ ಕೇ ಲೋಗೊ, ಜರಾ ಆಖ್‌ ಮೇ ಭರಲೋ ಪಾನಿ...’, ‘ಮೇರಾ ಭಾರತ್‌ ಮಹಾನ್’ ಗೀತೆಗಳಿಗೆ ಅಚ್ಚುಕಟ್ಟಾಗಿ ಹೆಜ್ಜೆ ಹಾಕಿ ದೇಶಭಕ್ತಿಯನ್ನು ಬಡಿದೆಬ್ಬಿಸಿದರು. ಪ್ರೇಕ್ಷಕರು ಎದ್ದು ನಿಂತು ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT