ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟದಿಂದ ಮನೆಯಂಗಳಕೆ...

Last Updated 18 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

*ಸೋಮಶೇಖರ್‌ ಸಣಬಘಟ್ಟ

‘ಕೊತ್ತಂಬ್ರೀ, ಕೀರೇ, ಸಬ್ಸಿಗೆ, ಮೆಂತ್ಯ, ಚಕ್ಕೋತ, ಪಾಲಾಕ್ ಸೊಪ್ಪೂ...’ ಇದು ಯಾವುದೇ ಊರಿನಲ್ಲಿ ನಿತ್ಯ ಬೆಳಿಗ್ಗೆ ಮೊಳಗುವ ಪ್ರಾಸಬದ್ಧ ಕೂಗು. ಕುಣಿಗಲ್ ತಾಲ್ಲೂಕು ಹುಲಿಯೂರು ದುರ್ಗದಲ್ಲೂ ಪ್ರತಿ ಮುಂಜಾನೆ ಗೃಹಿಣಿಯರನ್ನು ಈ ಕರೆ ಕರೆಯುತ್ತದೆ. ಹಳೇಪೇಟೆಯ ಉದ್ದಕ್ಕೂ ಕೋಳಿಯ ಕೂಗು, ಮಂದಿರಗಳ ಪ್ರಾರ್ಥನೆ, ಮೊದಲೇ ಕೇಳಿಬರುವ ಈ ಧ್ವನಿ ರೈತ ಮಹಿಳೆಯರದೇ ಆಗಿರುತ್ತದೆ.

ತಾಜಾ ತರಕಾರಿ, ಸೊಪ್ಪು, ಹೂ ಹಣ್ಣು ಕೊಳ್ಳುವ ತವಕ ಇಲ್ಲಿನ ಗ್ರಾಹಕರದಾದರೆ ತಮ್ಮಲ್ಲಿನ ಸರಕನ್ನು ಅವರಿಗೊಪ್ಪಿಸಿ ಊರ ದಾರಿ ಹಿಡಿಯುವ ಗಡಿಬಿಡಿ ಮಾರಾಟಗಾರರದು.

ಪಕ್ಕದ ಹಳೇವೂರು, ಕೆಬ್ಬಳ್ಳಿ, ಬೀಚನಹಳ್ಳಿ, ಸೂಜಿಗುಡ್ಡೆ ಪಾಳ್ಯ, ಕಾಂತನಪಾಳ್ಯ, ಕೆಂಕೆರೆ, ಕಂಪಲಾಪುರದ ರೈತರಿಗೆ ಹುಲಿಯೂರು ದುರ್ಗವು ತೋಟಗಾರಿಕೆ ಬೆಳೆಗಳ ಸುಸ್ಥಿರ ಕಿರು ಮಾರುಕಟ್ಟೆಯಾಗಿ ಪರಿಣಮಿಸಿದೆ. ಹಿಂದಿನ ದಿನವೇ ಕೊಯ್ಲು ಮಾಡಿ ತಂದ ಸರಕನ್ನು ಸ್ವಚ್ಛಗೊಳಿಸಿ, ಕಂತೆಕಟ್ಟಿ ಮಾರಾಟಕ್ಕೆ ಅಣಿಗೊಳಿಸಿಕೊಂಡಿರುತ್ತಾರೆ.

ಸ್ವಚ್ಛ ನೀರು, ಸಾವಯವ ಕೃಷಿಯಲ್ಲಿ ಬೆಳೆದ ಸೊಪ್ಪು-ತರಕಾರಿ, ಹೂ-ಹಣ್ಣುಗಳೆಂದರೆ ಪಟ್ಟಣದ ಜನರಿಗೆ ಅಷ್ಟೇ ಅಚ್ಚುಮೆಚ್ಚು. ತುಸು ಕೊಸರು, ತುಸು ಚೌಕಾಸಿಯೊಂದಿಗೆ ವ್ಯಾಪಾರ ಪೂರ್ಣಗೊಳ್ಳುತ್ತದೆ. ತಾವು ತಂದ ತರಕಾರಿ ಕೆಲವೇ ಗಂಟೆಗಳಲ್ಲಿ ಬಿಕರಿಯಾದ ಸಂತಸದಲ್ಲಿ ರೈತ ಮಹಿಳೆಯರು ತಮ್ಮ ತಮ್ಮ ಊರುಗಳ ದಾರಿ ಹಿಡಿದರೆ ಅವರಿಂದ ಕೊಂಡ ವಸ್ತುಗಳು ಪಟ್ಟಣದ ಗೃಹಿಣಿಯರ ಮನೆ ಸೇರಿಕೊಳ್ಳುತ್ತವೆ. ತಮ್ಮ ಜಮೀನಿನ ಕೆಲವೇ ಗುಂಟೆಗಳಲ್ಲಿ ತರಕಾರಿ ಬೆಳೆಗಳನ್ನು ತೆಗೆಯುವ ಮೂಲಕ ಇಲ್ಲಿನ ರೈತ ಕುಟುಂಬಗಳು ನಿತ್ಯದ ಆರ್ಥಿಕ ವ್ಯವಹಾರಗಳನ್ನು ಅನುಕೂಲಿಸಿಕೊಂಡಿವೆ. ಉಳ್ಳವರ ಕೊಳವೆ ಬಾವಿ, ಕೆಂಕೆರೆ ಕೆರೆ, ಹಳೇವೂರು ಕೆರೆಗಳಿಗೆ ಅನಧಿಕೃವಾಗಿ ಅಳವಡಿಸಿಕೊಂಡಿರುವ ಪಂಪ್‍ಸೆಟ್, ಹೊತ್ತೊಯ್ಯುವ ನೀರು ಇವರ ಜಲಮೂಲಗಳು.

ಕೊತ್ತಂಬರಿ, ಸಬ್ಬಸಿಗೆ, ಮೆಂತ್ಯ, ದಂಟು, ಕೀರೆ, ಕಿತ್‍ಕೀರೆ, ಪಾಲಾಕು, ಚಕ್ಕೋತ ಸೊಪ್ಪುಗಳ ಜೊತೆ ಮೂಲಂಗಿ, ಗೆಡ್ಡೆಕೋಸು, ಬೆಂಡೆ, ಬದನೆ, ಟೊಮೆಟೊ ಇವು ಸಾಮಾನ್ಯವಾಗಿ ಮಾರಾಟಕ್ಕೆ ಕೊಂಡೊಯ್ಯುವ ತರಕಾರಿ ಬೆಳೆಗಳು.

ಹೂಗಳಲ್ಲಿ ಮಲ್ಲೆ, ಮಲ್ಲಿಗೆ, ಕಾಕಡ, ಕನಕಾಂಬರ, ಬಿಚ್ಚಾಲೆ, ಪಚ್ಚೆ, ಚೆಂಡು ಇವುಗಳ ಜೊತೆಗೆ ಸೇವಂತಿಗೆಯಲ್ಲಿ ಚಾಂದಿನಿ, ಕರ್ನಲ್, ಜೂಲಿ, ಮಾರಿಗೋಲ್ಡ್ ಹಾಗೂ ವಿವಿಧ ಬಗೆಯ ಬಟನ್ಸ್ ಹೂಗಳು ಇವರ ಮಾರಾಟದ ಸರಕುಗಳು. ಏನಿಲ್ಲವೆಂದರೂ 200ರಿಂದ 500 ರೂಪಾಯಿವರೆಗೆ ತಮ್ಮ ದಿನದ ಸಂಪಾದನೆ ಮಾಡಿಕೊಂಡು ತಮ್ಮ ಬಾಳೆಕಾಯಿ ಚೀಲದಲ್ಲಿ ಇಳಿಬಿಟ್ಟು ಮನೆಯ ದಾರಿ ಹಿಡಿಯುತ್ತಾರೆ.

ಕೆಬ್ಬಳ್ಳಿಯ ಸಾವಿತ್ರಮ್ಮ, ಕಮಲಮ್ಮ, ಗುಂಡಮ್ಮ, ಶಿವಮ್ಮ, ಗಂಗಮ್ಮ, ಪದ್ಮಮ್ಮ, ಸರೋಜಮ್ಮ, ಹಳೇವೂರಿನ ದೊಡ್ಡತಾಯಮ್ಮ, ಗಂಗಮ್ಮ, ರಂಗಮ್ಮ, ಜಯಲಕ್ಷ್ಮಿ, ನಾಗಮ್ಮ, ಹಾಗೂ ಬೀಚನಹಳ್ಳಿಯ ಹುಚ್ಚಮ್ಮ, ಸೌಭಾಗ್ಯ ಹೀಗೆ ಸೊಪ್ಪು, ತರಕಾರಿ ಫಸಲನ್ನು ನೇರವಾಗಿ ಗ್ರಾಹಕರ ಕೈಗೊಪ್ಪಿಸಿ ಯಶಸ್ಸು ಕಂಡವರ ಪಟ್ಟಿ ದೊಡ್ಡದೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT