ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಶ್ಯಕಾವ್ಯಗಳ ನಡುವೆ ನಿಂತು...

Last Updated 18 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಈಗಿನ ಡಿಜಿಟಲ್‌ ಯುಗದಲ್ಲಿ ಫೋಟೊ ತೆಗೆಯುವುದು ತೀರಾ ಸುಲಭ ಎಂಬ ಮಾತು ಈಗೀಗ ಹೆಚ್ಚಾಗಿ ಕೇಳಿ ಬರುತ್ತದೆ. ಏಕೆಂದರೆ, ಕ್ಲಿಕ್‌ಗಳ ಸಂಖ್ಯೆ ಹೆಚ್ಚಾದರೆ ಮುಂಚಿನಂತೆ ರೀಲ್‌ಗಳು ಹಾಳಾಗುತ್ತವೆ ಎನ್ನುವ ಭಯವಿಲ್ಲ. ಆದರೆ, ನಾವು ಎಷ್ಟೇ ಕ್ಲಿಕ್‌ಗಳನ್ನು ಮಾಡಬಹುದಾದರೂ ಸೂಕ್ತ ಸಮಯ, ಬೆಳಕು, ಗುರಿ ಸಾಧಿಸದಿದ್ದರೆ ಪ್ರಾಸವಿಲ್ಲದ ಕವನದಂತೆ, ಚಿತ್ರ ತನ್ನ ಲಯವನ್ನೇ ಕಳೆದುಕೊಳ್ಳುತ್ತದೆ. ಅದೇ, ಕ್ಯಾಮೆರಾ ಕ್ಲಿಕ್ಕಿಸುವಾಗ ಸಮಯ, ಬೆಳಕು, ಗುರಿ ಎಲ್ಲವೂ ಮೇಳೈಸಿಬಿಟ್ಟರೆ ಸೆರೆಸಿಕ್ಕ ಚಿತ್ರ ಒಂದು ದೃಶ್ಯಕಾವ್ಯ ಆಗುತ್ತದೆ. ಅಂತಹ ದೃಶ್ಯಕಾವ್ಯಗಳಿಗೆ ಇಲ್ಲಿವೆ ಕೆಲವು ಉದಾಹರಣೆಗಳು. ಅಂದಹಾಗೆ, ವಿಶ್ವ ಛಾಯಾಚಿತ್ರ ದಿನದ ಅಂಗವಾಗಿ ‘ಪ್ರಜಾವಾಣಿ’ ಏರ್ಪಡಿಸಿದ್ದ ಛಾಯಾ ಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಫೋಟೊಗಳು ಇವು.

ಹೊಸನಗರದ ಯೋಗೇಶ್‌ ತೆಗೆದ ಸೂರ್ಯಾಸ್ತದ ಚಿತ್ರವನ್ನೇ ನೋಡಿ. ನೀರಿನಿಂದೆದ್ದ ಮರವೊಂದು ಅಂಗೈನಂತೆ ಮೈಚಾಚಿ ಸೂರ್ಯನನ್ನೇ ಹಿಡಿದುಬಿಟ್ಟಿದೆಯಲ್ಲ? ಹಾವೇರಿಯ ಶಶಿಧರಸ್ವಾಮಿ ಹಿರೇಮಠ ಅವರ ಚಿತ್ರದಲ್ಲಿ ಇನ್ನೇನು ಲ್ಯಾಂಡ್‌ ಆಗಲಿರುವ ಬಾನಾಡಿ ತನ್ನ ಮರಿ ಬಾಯ್ದೆರೆದು ಊಟಕ್ಕೆ ಕಾದಿದ್ದನ್ನು ಕಂಡು ಅವಾಕ್ಕಾದಂತಿದೆ. ಅದರ ಕಣ್ಣಿನತ್ತ ಒಮ್ಮೆ ದಿಟ್ಟಿಸಿದರೆ ಆ ಭಾವ ಸ್ಪಷ್ಟವಾಗಿ ಗೋಚರಿಸುತ್ತದೆ.

ಚಿಕ್ಕಬಾಣಾವರದ ಚಂದನ್‌ ಅವರ ಚಿತ್ರದ ಸೊಬಗು ಇನ್ನೊಂದು ಬಗೆಯದು. ನಿಸರ್ಗ, ಆಕಾಶವನ್ನೇ ಕ್ಯಾನ್ವಾಸ್‌ ಮಾಡಿಕೊಂಡು ಎಂತಹ ಬಣ್ಣದೋಕುಳಿ ಆಡಿದೆ ನೋಡಿ. ಮುದ್ರಣ ಜಗತ್ತಿನ ‘ಸಿ.ಎಂ.ವೈ.ಕೆ’ ನಿಯಮ ಇಲ್ಲಿ ಅನ್ವಯವಾಗುವುದೇ ನೀವೇ ಹೇಳಿ. ಮೈಸೂರಿನ ಸ್ವರೂಪ್‌ ಅವರ ಚಿತ್ರದ ಮೇಲೆ ಕಣ್ಣಾಡಿಸಿದ ಯಾವ ಜೋಡಿಗಾದರೂ ಇಂತಹ ಏಕಾಂತದ ದಾಹ ಕಾಡುತ್ತದೆ. ಸಾಗರದ ಜಿ.ಆರ್‌. ಪಂಡಿತ್‌ ಅವರ ಚಿತ್ರದ ವಿಶೇಷತೆ ಇರುವುದು ಪಾತರಗಿತ್ತಿ ಮಕರಂದ ಹೀರುವುದರಲ್ಲಿ.

ಸ್ಪರ್ಧೆಗೆ ಆಹ್ವಾನವಿತ್ತಾಗ ರಾಜ್ಯದ ಮೂಲೆ–ಮೂಲೆಗಳಿಂದ ಸಾವಿರಾರು ಚಿತ್ರಗಳು ಬಂದಿದ್ದವು. ಯಾವುದನ್ನು ಆಯ್ಕೆ ಮಾಡುವುದು, ಯಾವುದನ್ನು ಬಿಡುವುದು ಎಂಬ ಗೊಂದಲ ಮೂಡಿಸುವಷ್ಟು ವೈವಿಧ್ಯ ಆ ಚಿತ್ರಗಳಲ್ಲಿ ತುಂಬಿತ್ತು. ಅಂತಿಮವಾಗಿ ಇಲ್ಲಿನ ಐದು ಚಿತ್ರಗಳು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವು. ವಿಜೇತ ಪ್ರತಿಯೊಬ್ಬ ಛಾಯಾಗ್ರಾಹಕರಿಗೂ ತಲಾ ₹ 2000 ಮೊತ್ತದ ಗಿಫ್ಟ್‌ ಕೂಪನ್‌ ಉಡುಗೊರೆ ಸಿಕ್ಕಿದೆ. ಅವರಿಗೆಲ್ಲ ಅಭಿನಂದನೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT