ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ–ದಕ್ಷಿಣ ಕೊರಿಯಾ ಜಂಟಿ ಸಮರಾಭ್ಯಾಸ

Last Updated 18 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಸೋಲ್: ಅಮೆರಿಕ ಸೇನೆಯ ಶಕ್ತಿಶಾಲಿ ನಾಲ್ಕು ಯುದ್ಧ ವಿಮಾನಗಳು ಹಾಗೂ ಎರಡು ಬಾಂಬರ್ ವಿಮಾನಗಳು ಸೋಮವಾರ ಕೊರಿಯಾ ಪರ್ಯಾಯ ದ್ವೀಪದ ಮೇಲೆ ಹಾರಾಟ ನಡೆಸಿದವು. ಈ ಜಂಟಿ ಸಮರಾಭ್ಯಾಸದಲ್ಲಿ ದಕ್ಷಿಣ ಕೊರಿಯಾ ಹಾಗೂ ಜಪಾನ್ ಭಾಗಿಯಾಗಿದ್ದವು.

ಅಮೆರಿಕದ ನಾಲ್ಕು ಎಫ್‌–35ಬಿ ಯುದ್ಧವಿಮಾನಗಳು, ಎರಡು ಬಿ–1ಬಿ ಬಾಂಬರ್ ವಿಮಾನ, ದಕ್ಷಿಣ ಕೊರಿಯಾದ ಎಫ್‌–15ಕೆ ಯುದ್ಧವಿಮಾನಗಳು ಜಪಾನ್ ಗಡಿಯಲ್ಲೂ ಸುತ್ತಿದವು. ಜಪಾನ್ ಮೇಲೆ ಉತ್ತರ ಕೊರಿಯಾ ಕ್ಷಿಪಣಿ ದಾಳಿ ನಡೆಸಿದ ಮೂರು ದಿನಗಳ ಬಳಿಕ ಈ ಕಸರತ್ತು ನಡೆದಿದೆ.

ದಕ್ಷಿಣ ಕೊರಿಯಾದಲ್ಲಿ ನಿಗದಿತ ಪ್ರದೇಶವೊಂದರ ಮೇಲೆ ನೈಜ ಬಾಂಬ್‌ಗಳನ್ನು ಹಾಕುವ ಕಸರತ್ತು ನಡೆಸಲಾಯಿತು ಅಮೆರಿಕದ ಫೆಸಿಫಿಕ್ ಕಮಾಂಡ್ ಪ್ರಕಟಣೆಯಲ್ಲಿ ಖಚಿತಪಡಿಸಿದೆ. ಅಮೆರಿಕ ವಿಮಾನಗಳು ಜಪಾನ್ ಯುದ್ಧವಿಮಾನಗಳ ಜತೆ ಕ್ಯುಷು ದ್ವೀಪದ ದಕ್ಷಿಣ ಭಾಗದಲ್ಲಿ ಸಮರಾಭ್ಯಾಸ ನಡೆಸಿದವು.

ಉತ್ತರ ಕೊರಿಯಾದ ಜತೆ ವೈರತ್ವ ಹೆಚ್ಚಾದಾಗಲೆಲ್ಲಾ ಅಮೆರಿಕವು ತನ್ನ ಸೇನಾ ಶಕ್ತಿ ಪ್ರದರ್ಶಿಸಲು ಯುದ್ಧವಿಮಾನಗಳ ಕಸರತ್ತು ನಡೆಸುತ್ತದೆ. ವಿಶ್ವಸಂಸ್ಥೆ ತನ್ನ ಮೇಲೆ ದಿಗ್ಬಂಧನ ವಿಧಿಸಿದ್ದನ್ನು ವಿರೋಧಿಸಿ ಉತ್ತರ ಕೊರಿಯಾವು ಮತ್ತಷ್ಟು ಪ್ರಬಲ ಕ್ಷಿಪಣಿಗಳನ್ನು ಪರೀಕ್ಷೆಗೊಳಪಡಿಸುತ್ತಿದೆ. ಸೆಪ್ಟೆಂಬರ್ 3ರಂದು ಆರನೇ ಹಾಗೂ ಪ್ರಬಲ ಕ್ಷಿಪಣಿ ಪರೀಕ್ಷೆ ನಡೆಸಿತ್ತು.

ಉತ್ತರ ಕೊರಿಯಾ ತನ್ನ ಶಸ್ತ್ರಾಸ್ತ್ರ ಕಸರತ್ತು ನಿಲ್ಲಿಸದಿದ್ದರೆ ಇಡೀ ದೇಶವನ್ನು ನಾಶ ಮಾಡುವುದಾಗಿ ಅಮೆರಿಕ ಎಚ್ಚರಿಕೆ ನೀಡಿದೆ. ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ನಿಕಿ ಹ್ಯಾಲೆ ಅವರು ಈ ಸಂಬಂಧ ಕಿಮ್ ಜಾಂಗ್ ಉನ್ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಉತ್ತರ ಕೊರಿಯಾ ಮೇಲೆ ಇನ್ನಷ್ಟು ಒತ್ತಡ ಹೇರುವ ನಿಟ್ಟಿನಲ್ಲಿ ಶನಿವಾರದಂದು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜತೆ ಟ್ರಂಪ್ ಅವರು ದೂರವಾಣಿ  ಮಾತುಕತೆ ನಡೆಸಿದರು. ಉತ್ತರ ಕೊರಿಯಾದಿಂದ ಮತ್ತೆ ಪ್ರಚೋದನೆ ಎದುರಾದರೆ, ಅದರ ಅವನತಿಯ ಹಾದಿ ಆರಂಭವಾಗಲಿದೆ ಎಂದು ಮೂನ್ ಅವರ ಕಚೇರಿ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT