ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಧನೆ ಕಡೆಗಣನೆ

Last Updated 18 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಪ್ರತಿವರ್ಷ ಸಾವಿರಾರು ಶಿಕ್ಷಕರು ನಿವೃತ್ತಿ ಹಾಗೂ ಬೇರೆ ಬೇರೆ ಕಾರಣಗಳಿಂದ ಶಾಲಾ ವ್ಯವಸ್ಥೆಯಿಂದ ಹೊರ ಹೋಗುತ್ತಾರೆ. ಆ ಸ್ಥಾನಗಳಿಗೆ ತಕ್ಷಣ ಹೊಸ ಶಿಕ್ಷಕರ ನೇಮಕವಾಗಬೇಕು. ಶಾಲೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸರ್ಕಾರ ಏನೇ ಸೌಕರ್ಯ ನೀಡಬಹುದು. ಆದರೆ ಶಿಕ್ಷಕರಿಲ್ಲದಿದ್ದಲ್ಲಿ ಆ ಸೌಲಭ್ಯಗಳಿಗೆ ಅರ್ಥವಿಲ್ಲ.

ಅನೇಕ ವರ್ಷಗಳಿಂದ ಶಿಕ್ಷಕರ ನೇಮಕಾತಿಯಾಗಿಲ್ಲ. ಇದರಿಂದಾಗಿ 1.88 ಲಕ್ಷದಷ್ಟು ಇದ್ದ ಶಿಕ್ಷಕರ ಸಂಖ್ಯೆ 1.50 ಲಕ್ಷಕ್ಕಿಂತ ಕಡಿಮೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕಾರಣ ಹೇಳಿಕೊಂಡು ಇರುವ ಶಿಕ್ಷಕರನ್ನೇ ಹೆಚ್ಚುವರಿ ಎಂದು ಪರಿಗಣಿಸುತ್ತಾ ಅವರನ್ನೇ ಇತರ ಶಾಲೆಗಳಿಗೆ ಸ್ಥಳಾಂತರಿಸುವ ಕಾರ್ಯ ಮಾಡುತ್ತಿದೆ ಸರ್ಕಾರ!

ಶಿಕ್ಷಕರನ್ನು ಬೋಧನೆ ಬಿಟ್ಟು ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳಬಾರದು ಎಂಬ ಕೂಗು ಅನೇಕ ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಚುನಾವಣೆ ಹಾಗೂ ಗಣತಿ ಬಿಟ್ಟು ಇತರೆ ಕಾರ್ಯಗಳಿಗೆ ಶಿಕ್ಷಕರನ್ನು ತೊಡಗಿಸಲೇಬಾರದು. ಪ್ರತಿ ದಿನ ಮಗು ಹೊಸತನ್ನು ಕಲಿಯಬೇಕು, ಕಲಿಕೆಯಲ್ಲಿ ಪ್ರಗತಿ ಕಾಣಬೇಕು ಎಂಬುದು ಪೋಷಕರ ಅಪೇಕ್ಷೆ. ಇದು ಸಾಧ್ಯವಾಗಬೇಕಾದರೆ ತರಗತಿ ಕೋಣೆಯಲ್ಲಿ ಶಿಕ್ಷಕರ ಲಭ್ಯತೆ ಸದಾ ಇರಬೇಕು.

ಆದರೆ ಶಿಕ್ಷಣ ಇಲಾಖೆ ತನಗೆ ತೋಚಿದಂತೆ ನಡೆದುಕೊಳ್ಳುವ ಪರಿಪಾಠ ಮುಂದುವರೆಸಿಕೊಂಡು ಬರುತ್ತಿದೆ. ಇದಕ್ಕೊಂದು ಪುಟ್ಟ ಉದಾಹರಣೆ ಇಲ್ಲಿದೆ. ಒಂದರಿಂದ ಐದನೇ ತರಗತಿಯವರೆಗೆ 120 ವಿದ್ಯಾರ್ಥಿಗಳು ಕಲಿಯುತ್ತಿರುವ ಒಂದು ಶಾಲೆಯಲ್ಲಿ ಇರುವವರು ನಾಲ್ಕೇ ಜನ ಶಿಕ್ಷಕರು.

ಅದರಲ್ಲಿ ಕಳೆದ ಹತ್ತು ದಿನಗಳಿಂದ ಮುಖ್ಯ ಶಿಕ್ಷಕರು ಗೈರುಹಾಜರಿ! ಈ ಬಗ್ಗೆ ಪ್ರಶ್ನಿಸಿದಾಗ ದೊರೆತ ಉತ್ತರವೆಂದರೆ ‘ಅವರು ಎಂ.ಆರ್.ಪಿ. ತರಬೇತಿಗೆ ಹೋಗಿದ್ದಾರೆ!’ ಇವರು ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ (ಎಂ.ಆರ್‌.ಪಿ.) ಹತ್ತು ದಿನಗಳ ತರಬೇತಿ ಪಡೆದು ನಂತರ ಇತರ ಶಾಲೆಗಳ ಶಿಕ್ಷಕರಿಗೆ ತರಬೇತಿ ನೀಡಲು ಹೋಗುತ್ತಾರಂತೆ!

ಈ ಅವಧಿಯಲ್ಲಿ ಶಾಲೆಯಲ್ಲಿ ಉಳಿಯುವ ಶಿಕ್ಷಕರು ಮೂವರು ಮಾತ್ರ. ಅದರಲ್ಲಿ ಕಾರಣಾಂತರದಿಂದ ಒಬ್ಬರು ರಜೆ ಹಾಕಿದರೆ ಉಳಿಯುವವರು ಇಬ್ಬರು ಮಾತ್ರ. ಅವರು ಶಾಲೆಯನ್ನು ನಿರ್ವಹಿಸಬಹುದೇ ಹೊರತು ಮಕ್ಕಳಿಗೆ ಪರಿಣಾಮಕಾರಿಯಾಗಿ ಕಲಿಸಲು ಸಾಧ್ಯವಾಗುವುದಿಲ್ಲ ಎಂಬುದು ಸಾಮಾನ್ಯವಾದ ತಿಳಿವಳಿಕೆ. ಇದರ ಪರಿಣಾಮವಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸಿದರೆ ಈ ಎಂ.ಆರ್.ಪಿ.ಗಳ ತರಬೇತಿಯ ಉಪಯೋಗವೇನು?

ಒಂದು ತಾಲ್ಲೂಕಿನಲ್ಲಿ ಒಬ್ಬ ಕ್ಷೇತ್ರ ಶಿಕ್ಷಣಾಧಿಕಾರಿ, ಇವರ ಜತೆಗೆ ಐದು ಜನ ಶಿಕ್ಷಣ ಸಂಯೋಜಕರು; ಒಬ್ಬ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ, ಇವರ ಜತೆಗೆ ಐದು ಜನ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಸುಮಾರು 15 ರಿಂದ 20 ಜನ ಕ್ಲಸ್ಟರ್‌ ಸಂಪನ್ಮೂಲ (ಸಿ.ಆರ್‌.ಪಿ.) ವ್ಯಕ್ತಿಗಳಿರುತ್ತಾರೆ.

ನೇರವಾಗಿ ಶಾಲೆಯ ಬೋಧನೆಯಲ್ಲಿ ತೊಡಗದೆ ಕೇವಲ ಆಡಳಿತ, ತರಬೇತಿ ಹಾಗೂ ಮೇಲ್ವಿಚಾರಣೆಗಾಗಿ ಒಂದು ತಾಲ್ಲೂಕಿನಲ್ಲಿ ಒಟ್ಟು ಸುಮಾರು 30 ಜನರಿರುತ್ತಾರೆ. ಇವರ ಜತೆಗೆ ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರ ಜತೆಗೆ ಇಬ್ಬರು ಶಿಕ್ಷಣಾಧಿಕಾರಿ

ಗಳು, ನಾಲ್ಕೈದು ಜನ ವಿಷಯ ಪರಿವೀಕ್ಷಕರಿರುತ್ತಾರೆ. ‘ಡಯಟ್’ನಲ್ಲಿ ಸುಮಾರು 20 ಮಂದಿ ಅಧಿಕಾರಿಗಳಿರುತ್ತಾರೆ. ಇವರ ನೆರವೂ ತಾಲ್ಲೂಕಿಗೆ ಸಿಗಲಿದೆ. ಇನ್ನು ರಾಜ್ಯ ಮಟ್ಟದಲ್ಲಿ ಡಿ.ಎಸ್.ಇ.ಆರ್.ಟಿ., ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ನಿರ್ದೇಶಕರ ಕಚೇರಿಯಲ್ಲೂ ಅಸಂಖ್ಯ ಅಧಿಕಾರಿಗಳಿರುತ್ತಾರೆ.

ಇಷ್ಟೆಲ್ಲ ಇದ್ದಾಗ್ಯೂ ಮತ್ತೆ ಶಾಲೆಯಲ್ಲಿ ಬೋಧನೆ ಮಾಡುವ ಶಿಕ್ಷಕರನ್ನೇ ಎಂ.ಆರ್.ಪಿ.ಗಳಾಗಿ ಮಾಡಿಕೊಂಡು ತರಬೇತಿ ನೀಡಿ ಮತ್ತೆ ಅವರು ಇತರೆ ಶಿಕ್ಷಕರಿಗೆ ತರಬೇತಿ ನೀಡುವಂತೆ ಶಾಲೆಯಿಂದ ಹೊರಗೆ ವರ್ಷದಲ್ಲಿ ಸುಮಾರು ಒಂದು ತಿಂಗಳ ಕಾಲ ಕಳಿಸಿದರೆ ವಿದ್ಯಾರ್ಥಿಗಳಿಗೆ ಪಾಠ ಮಾಡುವವರು ಯಾರು? ಇದೆಲ್ಲವನ್ನೂ ಯಾರು ನಿರ್ಧರಿಸುತ್ತಾರೆ? ಇದು ಮಾತ್ರವಲ್ಲ.

ಎಸ್.ಡಿ.ಎಂ.ಸಿ. ತರಬೇತಿಗೂ ಶಿಕ್ಷಕರನ್ನೇ ಎಂ.ಆರ್.ಪಿ. ಎಂದು ತೆಗೆದುಕೊಳ್ಳುತ್ತಾರೆ. ಇದೆಲ್ಲವನ್ನೂ ನೋಡಿದಾಗ ಸರ್ಕಾರವೇ ಸರ್ಕಾರಿ ಶಾಲೆಗಳ ಕತ್ತು ಹಿಸುಕುತ್ತಿದೆ ಎಂಬುದು ಗೋಚರವಾಗುತ್ತಿದೆ. ಈ ಕಡೆ ಇಲಾಖೆಯ ಅಧಿಕಾರಿಗಳು, ಶಿಕ್ಷಕರ ಸಂಘಟನೆಗಳು ಹಾಗು ಶಿಕ್ಷಣ ತಜ್ಞರು ಗಮನ ಹರಿಸಿ ಪರಿಸ್ಥಿತಿಯನ್ನು ಸರಿಪಡಿಸುವ ತುರ್ತು ಅಗತ್ಯವಿದೆ.
-ಈ. ಬಸವರಾಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT