ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದಲ್ಲಿ ಸುಷ್ಮಾ

Last Updated 18 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ : ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಭಾಗವಹಿಸುವ ಸಂಬಂಧ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಸೋಮವಾರ ನ್ಯೂಯಾರ್ಕ್‌ಗೆ ಬಂದಿಳಿದರು. ಅಮೆರಿಕದ ಭಾರತದ ರಾಯಭಾರಿ ನವತೇಜ್‌ ಸರ್ನಾ ಹಾಗೂ ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ ಸೈಯದ್‌ ಅಕ್ಬರುದ್ದೀನ್‌ ಅವರು ಸುಷ್ಮಾ ಅವರನ್ನು ಬರಮಾಡಿಕೊಂಡರು.

ದೇಶದ ವಿದೇಶಾಂಗ ನೀತಿ ಸಂಬಂಧ  ಹಲವು ರಾಷ್ಟ್ರಗಳ ವಿದೇಶಾಂಗ ಸಚಿವರ ಜತೆಗೂ ಸುಷ್ಮಾ ಅವರು ಮಾತುಕತೆ ನಡೆಸಲಿದ್ದಾರೆ.

ಒಂದು ವಾರ ಕಾಲ ಅಮೆರಿಕದಲ್ಲಿ ತಂಗಲಿರುವ ಸುಷ್ಮಾ ಸ್ವರಾಜ್‌, ಭಾರತದ ಅತ್ಯುನ್ನತ ಮಟ್ಟದ ನಿಯೋಗವನ್ನು ಪ್ರತಿನಿಧಿಸಲಿದ್ದಾರೆ. ಈ ಪ್ರವಾಸದಲ್ಲಿ 20ಕ್ಕೂ ಅಧಿಕ ದ್ವಿಪಕ್ಷೀಯ ಹಾಗೂ ತ್ರಿಪಕ್ಷೀಯ ಸಭೆಗಳಲ್ಲಿ ಅವರು ಭಾಗವಹಿಸಲಿದ್ದಾರೆ.

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರೆಕ್ಸ್‌ ಟಿಲ್ಲರ್‌ಸನ್‌ ಹಾಗೂ ಜಪಾನ್‌ನ ವಿದೇಶಾಂಗ ಸಚಿವ ಟರೊ ಕೊನೊ ಅವರ ಚರ್ಚೆ ನಡೆಸುವ ಮೂಲಕ ತ್ರಿಪಕ್ಷೀಯ ಚರ್ಚೆಗೆ ಚಾಲನೆ ನೀಡಲಿದ್ದಾರೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಪ್ರಾಬಲ್ಯಕ್ಕೆ ಸೆಡ್ಡುಹೊಡೆಯಲು ಪರಸ್ಪರ ಸಹಕಾರ ಮನೋಭಾವದಲ್ಲಿ ಕೆಲಸ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗುವುದು.

ವಿಶ್ವಸಂಸ್ಥೆ ಸುಧಾರಣೆ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇತೃತ್ವದಲ್ಲಿ ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲೂ ಸುಷ್ಮಾ ಅವರು ಭಾಗವಹಿಸಲಿದ್ದಾರೆ. ಈ 23ರಂದು ಶನಿವಾರ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ಉದ್ದೇಶಿಸಿ ಸುಷ್ಮಾ ಮಾತನಾಡಲಿದ್ದಾರೆ.

ಟ್ರಂಪ್ ಭಾಷಣ ಇಂದು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವಸಂಸ್ಥೆಯಲ್ಲಿ ಮಂಗಳವಾರ ತಮ್ಮ ಚೊಚ್ಚಲ ಭಾಷಣ ಮಾಡಲಿದ್ದು, ವಿಶ್ವಸಂಸ್ಥೆ ಸುಧಾರಣೆಗೆ ಜಾಗತಿಕ ಬೆಂಬಲ ಕೋರಲಿದ್ದಾರೆ.

ಭಾರತವೂ ಸೇರಿದಂತೆ ವಿಶ್ವಸಂಸ್ಥೆ ಪ್ರಮುಖ ಸದಸ್ಯ ದೇಶಗಳು ಸಂಸ್ಥೆಯ ಸುಧಾರಣೆ ಹಾಗೂ ಭದ್ರತಾ ಮಂಡಳಿಯ ವಿಸ್ತರಣೆಗೆ ಆಸಕ್ತಿ ವಹಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT