ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್‌ನ ‘ತೇಜ್‌’ ಆ್ಯಪ್‌

Last Updated 18 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ತಂತ್ರಜ್ಞಾನ ದೈತ್ಯ ಸಂಸ್ಥೆ ಗೂಗಲ್‌ ಅಭಿವೃದ್ಧಿಪಡಿಸಿರುವ ಡಿಜಿಟಲ್‌ ಪಾವತಿಯ ಮೊಬೈಲ್‌ ಕಿರುತಂತ್ರಾಂಶ (ಆ್ಯಪ್‌) ‘ತೇಜ್‌’ಗೆ ಸೋಮವಾರ ಇಲ್ಲಿ ಚಾಲನೆ ನೀಡಲಾಯಿತು.

ಈ ಆ್ಯಪ್‌ ನೆರವಿನಿಂದ ನಗದು ರಹಿತ ವಹಿವಾಟನ್ನು ಸರಳ ಮತ್ತು ಸುರಕ್ಷಿತವಾಗಿ ನಡೆಸಬಹುದಾಗಿದೆ. ಕನ್ನಡವೂ ಸೇರಿದಂತೆ ಏಳು ಪ್ರಾದೇಶಿಕ ಭಾಷೆಗಳಲ್ಲಿಯೂ ವಹಿವಾಟು ನಡೆಸಬಹುದು. ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌ (ಯುಪಿಐ) ನೆರವಿನಿಂದ ಈ ಆ್ಯಪ್‌ ಕಾರ್ಯನಿರ್ವಹಿಸಲಿದೆ.

ಬಳಕೆದಾರರು ತಮ್ಮ ಬ್ಯಾಂಕ್‌ ಖಾತೆಯಿಂದ ನೇರವಾಗಿ ಹಣ ಪಾವತಿಸಬಹುದಾಗಿದೆ. ಇನ್ನೊಬ್ಬರಿಗೆ ಹಣ ಪಾವತಿಸಲು ಇಲ್ಲಿ ಇತರ ಮೊಬೈಲ್‌ ವಾಲೆಟ್‌ಗಳ ಅಗತ್ಯ ಇರಲಾರದು.

ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಆ್ಯಪ್‌ಗೆ ಚಾಲನೆ ನೀಡಿದರು. ‘ಅತ್ಯಾಧುನಿಕ ತಂತ್ರಜ್ಞಾನ ಬಳಕೆಗೆ ಬರುತ್ತಿದ್ದಂತೆ, ನಗದು
ರಹಿತ ವಹಿವಾಟು ಹೆಚ್ಚೆಚ್ಚು ಜನಪ್ರಿಯಗೊಳ್ಳುತ್ತಿದೆ’ ಎಂದು ಜೇಟ್ಲಿ ಹೇಳಿದರು.

‘ಭಾರತಕ್ಕಾಗಿಯೇ ಈ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಹಣ ‍ಪಾವತಿ ಮತ್ತು ವಾಣಿಜ್ಯ ವಹಿವಾಟಿನ ಕ್ಷೇತ್ರದಲ್ಲಿ ಭಾರತ ಪಾಶ್ಚಿಮಾತ್ಯ ದೇಶಗಳನ್ನು ಹಿಂದಿಕ್ಕಿ ಮುನ್ನಡೆಯುತ್ತಿದೆ. ಈ ಆ್ಯಪ್‌ ಮೂಲಕ ಹಣ ಗಳಿಸುವ ಉದ್ದೇಶ ಗೂಗಲ್‌ಗೆ ಇಲ್ಲ’ ಎಂದು ಗೂಗಲ್ ಉಪಾಧ್ಯಕ್ಷ ಸೀಸರ್‌ ಸೇನ್‌ಗುಪ್ತ ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ಮೊಬೈಲ್‌ ವಾಲೆಟ್‌ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನೂ ‘ತೇಜ್‌’ ಆ್ಯಪ್‌ನಲ್ಲಿ ಸೇರ್ಪಡೆ ಮಾಡಲಾಗುವುದು. ₹ 50ಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟು ನಡೆಸುವ ಗ್ರಾಹಕರಿಗೆ ₹ 1,000 ಬೆಲೆಯ ಸ್ಕ್ರ್ಯಾಚ್‌ ಕಾರ್ಡ್‌ ನೀಡಲಾಗುವುದು. ಪಿವಿಆರ್‌ ಮತ್ತು ರೆಡ್‌ಬಸ್‌ನಲ್ಲಿ ಟಿಕೆಟ್ ಖರೀದಿಗೆ ಈ ಆ್ಯಪ್‌ ಬಳಸಲು ಅವಕಾಶ ಮಾಡಿಕೊಡುವ ಬಗ್ಗೆ  ಮಾತುಕತೆ ನಡೆಸಲಾಗುತ್ತಿದೆ.

ಬ್ಯಾಂಕ್‌ಗಳ ‘ಯುಪಿಐ’ ಸೌಲಭ್ಯ ಬಳಸುತ್ತಿರುವ 50ಕ್ಕೂ ಹೆಚ್ಚು ಬ್ಯಾಂಕ್‌ಗಳ ಗ್ರಾಹಕರೂ ಈ ಆ್ಯಪ್‌ನ ಸೇವೆ ಪಡೆಯಬಹುದು.

‘ಬಳಕೆದಾರರು ಬ್ಯಾಂಕ್‌ ವಿವರ ಮತ್ತು ಮೊಬೈಲ್‌ ಸಂಖ್ಯೆ ಹಂಚಿಕೊಳ್ಳದೆಯೂ ಧ್ವನಿ ಕ್ಯುಆರ್‌ ಕೋಡ್‌ ತಂತ್ರಜ್ಞಾನದ ನೆರವಿನಿಂದ ಹಣ ಪಾವತಿಸುವ ಸೌಲಭ್ಯವೂ ಇದರಲ್ಲಿ ಇದೆ. ವಂಚನೆ ತಡೆಯುವ ತಂತ್ರಜ್ಞಾನ ಮತ್ತು ಹಲವು ಹಂತಗಳ ಸುರಕ್ಷತಾ ಕ್ರಮಗಳಿಂದಾಗಿ ಎಲ್ಲ ವಹಿವಾಟುಗಳು ಸುರಕ್ಷಿತವಾಗಿರುತ್ತವೆ’ ಎಂದೂ ಸೇನ್‌ಗು‍ಪ್ತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT