ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಲ್ಸ್‌ಗೆ ಚಿಪ್ಲಿ ಅರ್ಧಶತಕದ ಬಲ

ಕೆಪಿಎಲ್‌: ರಾಜನಗರದ ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಸೊಗಸು
Last Updated 18 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊನೆಯ ಐದು ಓವರ್‌ಗಳಲ್ಲಿ ಬೆಳಗಾವಿ ಪ್ಯಾಂಥರ್ಸ್‌ ತಂಡದ ಬೌಲರ್‌ಗಳ ಬೆವರಿಳಿಸಿದ ಬಿಜಾಪುರ ಬುಲ್ಸ್ ತಂಡ ಕೆಪಿಎಲ್‌ ಟೂರ್ನಿಯ ಮಹತ್ವದ ಲೀಗ್‌ ಪಂದ್ಯದಲ್ಲಿ ಉತ್ತಮ ಮೊತ್ತ ಕಲೆ ಹಾಕಿದೆ. ಇದಕ್ಕೆ ಕಾರಣವಾಗಿದ್ದು ಭರತ್‌ ಚಿಪ್ಲಿ ಗಳಿಸಿದ ಅರ್ಧಶತಕ.

ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್‌ ಜಯಿಸಿದ ಪ್ಯಾಂಥರ್ಸ್‌ ತಂಡ ಫೀಲ್ಡಿಂಗ್ ಆಯ್ಕೆಮಾಡಿಕೊಂಡಿತು. ಸೆಮಿಫೈನಲ್‌ ತಲುಪಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಿರುವ ಬುಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 154 ರನ್‌ ಕಲೆ ಹಾಕಿತು. ಪ್ಯಾಂಥರ್ಸ್‌ ತಂಡ ಈಗಾಗಲೇ ನಾಕೌಟ್‌ ತಲುಪಿದೆ.

ಸಂಜೆಯಿಂದ ನಗರದಲ್ಲಿ ಮಳೆ ಆಗಾಗ ಬಂದು ಹೋಗುತ್ತಿದ್ದ ಕಾರಣ ಕ್ರಿಕೆಟ್‌ ಪ್ರೇಮಿಗಳಲ್ಲಿ ಆತಂಕವಿತ್ತು. ಪಂದ್ಯ ಆರಂಭವಾದ ಬಳಿಕವೂ ಮಳೆ ಸುರಿಯಿತು. ಆದ್ದರಿಂದ 26 ನಿಮಿಷ ಆಟ ನಿಲ್ಲಿಸಲಾಗಿತ್ತು. ನಾಲ್ಕನೇ ಓವರ್‌ನಲ್ಲಿ ಮೊಹಮ್ಮದ್ ತಹಾ ಅವರನ್ನು ಕಳೆದುಕೊಂಡ ಬುಲ್ಸ್‌ ನಂತರ ವಿಕೆಟ್‌ ಬೀಳದಂತೆ ಎಚ್ಚರಿಕೆ ವಹಿಸಿ ಕೊನೆಯಲ್ಲಿ ರನ್‌ ಮಳೆ ಸುರಿಸಿತು.

ಎರಡನೇ ವಿಕೆಟ್‌ಗೆ ಜೊತೆಯಾದ ಭರತ್ ಚಿಪ್ಲಿ ಮತ್ತು ಎ.ಎಂ. ಕಿರಣ್‌ ವೇಗವಾಗಿ ರನ್‌ ಗಳಿಸಿದರು. 52 ಎಸೆತಗಳನ್ನು ಎದುರಿಸಿದ ಭರತ್‌ ಎಂಟು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಸಿಡಿಸಿದರು.

ಕಿರಣ್‌ ಮೂರು ಬೌಂಡರಿ ಸೇರಿದಂತೆ 33 ರನ್‌ ಕಲೆ ಹಾಕಿದರು. ಇವರು ಜೊತೆಯಾಟದಲ್ಲಿ 73 ರನ್ ತಂದುಕೊಟ್ಟರು. ಇದರಿಂದ ತಂಡಕ್ಕೆ ಕೊನೆಯಲ್ಲಿ ವೇಗವಾಗಿ ರನ್ ಗಳಿಸಲು ಸಾಧ್ಯವಾಯಿತು.

ಚಿಪ್ಲಿ 61 ರನ್‌ ಗಳಿಸಿದ್ದ ವೇಳೆ ಬೌಂಡರಿ ಗೆರೆ ಬಳಿ ರಕ್ಷಿತ್‌ ಕ್ಯಾಚ್‌ ಬಿಟ್ಟರು. ಈ ಬಾರಿಯ ಟೂರ್ನಿಯಲ್ಲಿ ಚಿಪ್ಲಿ ಬಾರಿಸಿದ ಎರಡನೇ ಅರ್ಧಶತಕವಿದು. ಮೈಸೂರು ವಾರಿಯರ್ಸ್‌ ವಿರುದ್ಧದ ಪಂದ್ಯದಲ್ಲಿ 63 ರನ್ ಗಳಿಸಿದ್ದರು.

ಬುಲ್ಸ್ ತಂಡ ಮೊದಲ ಹತ್ತು ಓವರ್‌ಗಳು ಪೂರ್ಣಗೊಂಡಾಗ ಒಂದು ವಿಕೆಟ್‌ ನಷ್ಟಕ್ಕೆ 56 ರನ್‌ ಗಳಿಸಿತ್ತು. ನಂತರದ ಐದು ಓವರ್‌ಗಳು ಮುಗಿದಾಗ ತಂಡದ ಖಾತೆಯಲ್ಲಿ 94 ರನ್‌ಗಳಿದ್ದವು. ಕೊನೆಯ ಐದು ಓವರ್‌ಗಳಲ್ಲಿ ಬುಲ್ಸ್‌ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದರು. ಅಂತಿಮ 30 ಎಸೆತಗಳಲ್ಲಿ 60 ರನ್‌ ಬಂದಿದ್ದು ಇದಕ್ಕೆ ಸಾಕ್ಷಿ.

ಬಾಲಂಗೋಚಿ ಎಚ್‌.ಎಸ್‌. ಶರತ್‌ ಎದುರಿಸಿದ ಎಂಟು ಎಸೆತಗಳಲ್ಲಿ 17 ರನ್ ಬಾರಿಸಿದರು. ಮಿಡ್‌ಆಫ್‌ನಲ್ಲಿ ಅವರು ಬಾರಿಸಿದ ಸಿಕ್ಸರ್‌ ಸೊಗಸಾಗಿತ್ತು. ಬುಲ್ಸ್ ತಂಡ ದವರು ಬೌಂಡರಿಗಳು (17) ಮತ್ತು ಸಿಕ್ಸರ್‌ಗಳು (4) ಮೂಲಕವೇ ನೂರು ರನ್‌ ಕಲೆ ಹಾಕಿದರು.

ಸಂಕ್ಷಿಪ್ತ ಸ್ಕೋರು: ಬಿಜಾಪುರ ಬುಲ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 154 (ಭರತ್‌ ಚಿಪ್ಲಿ 68, ಎ.ಎಂ. ಕಿರಣ್‌ 33, ದಿಕ್ಷಾಂಶು ನೇಗಿ 12, ಎಚ್‌.ಎಸ್‌. ಶರತ್‌ ಔಟಾಗದೆ 17; ಶುಭಾಂಗ ಹೆಗ್ಡೆ 26ಕ್ಕೆ1, ಎಸ್‌. ಅರವಿಂದ್‌ 27ಕ್ಕೆ1, ಡಿ. ಅವಿನಾಶ್‌ 32ಕ್ಕೆ2) ಸ್ಕೋರು ಅಪೂರ್ಣ.

ಇಂದು ಕೊನೆಯ ಲೀಗ್‌ ಪಂದ್ಯಗಳು
ಟೂರ್ನಿಯ ಕೊನೆಯ ಎರಡು ಲೀಗ್‌ ಪಂದ್ಯಗಳು ಮಂಗಳವಾರ ನಡೆಯಲಿದ್ದು ಗೆಲುವು ಪಡೆಯುವ ತಂಡಗಳು ಸೆಮಿಫೈನಲ್‌ ಪ್ರವೇಶಿಸುತ್ತವೆ.
ಮಧ್ಯಾಹ್ನ ಮೂರು ಗಂಟೆಗೆ ನಡೆಯುವ ಪಂದ್ಯದಲ್ಲಿ ನಮ್ಮ ಶಿವಮೊಗ್ಗ ಮತ್ತು ಮೈಸೂರು ವಾರಿಯರ್ಸ್‌ ಪೈಪೋಟಿ ನಡೆಸಲಿವೆ.

ಸಂಜೆ 7ಕ್ಕೆ ನಡೆಯುವ ಇನ್ನೊಂದು ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್‌ ಮತ್ತು ಹಾಲಿ ಚಾಂಪಿಯನ್‌ ಬಳ್ಳಾರಿ ಟಸ್ಕರ್ಸ್‌ ಮುಖಾಮುಖಿಯಾಗಲಿವೆ.

ಬಳ್ಳಾರಿ ತಂಡವನ್ನು ಹೊರತು ಪಡಿಸಿ ಉಳಿದ ಮೂರು ತಂಡಗಳು ತಲಾ ಆರು ಪಾಯಿಂಟ್ಸ್‌ ಹೊಂದಿವೆ. ಬಳ್ಳಾರಿ ತಂಡ ಐದು ಪಾಯಿಂಟ್ಸ್ ಕಲೆ ಹಾಕಿದೆ. ಆದ್ದರಿಂದ ನಾಲ್ಕೂ ತಂಡಗಳಿಗೆ ಈ ಪಂದ್ಯಗಳು ‘ಕ್ವಾರ್ಟರ್‌ ಫೈನಲ್‌’ ಎನಿಸಿವೆ.
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

*


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT