ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್ ಓಪನ್‌ನತ್ತ ಸಿಂಧು ಗಮನ

ಇಂದಿನಿಂದ ಅರ್ಹತಾ ಸುತ್ತಿನ ಪಂದ್ಯಗಳು; ಕಣದಲ್ಲಿ ಭಾರತದ ಶ್ರೀಕಾಂತ್‌, ಸೈನಾ
Last Updated 18 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಟೋಕಿಯೊ: ಕೊರಿಯಾ ಓಪನ್‌ ಸೂಪರ್ ಸರಣಿ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಬಗಲಿಗೆ ಹಾಕಿ ಚಾರಿತ್ರಿಕ ಸಾಧನೆ ಮಾಡಿದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಇದೀಗ ಜಪಾನ್ ಓಪನ್‌ನತ್ತ ಕಣ್ಣು ನೆಟ್ಟಿದ್ದಾರೆ. ಜಪಾನ್ ಓಪನ್‌ನ ಅರ್ಹತಾ ಸುತ್ತಿನ ಪಂದ್ಯಗಳು ಮಂಗಳವಾರ (ಸೆ.19) ಆರಂಭವಾಗಲಿವೆ.

ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದು ಈ ವರ್ಷದ ಮೂರನೇ ಸೂಪರ್‌ ಸೀರಿಸ್ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಿಂಧು ಶ್ರಮಿಸಲಿದ್ದಾರೆ. ಕಿದಂಬಿ ಶ್ರೀಕಾಂತ್‌ ಮತ್ತು ಸೈನಾ ನೆಹ್ವಾಲ್ ಕೂಡ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸವಾಲು ಎತ್ತಿ ಹಿಡಿಯಲು ಸಜ್ಜಾಗಿದ್ದಾರೆ.

ಕೊರಿಯ ಓಪನ್‌ನಲ್ಲಿ ತಮಗೆ ಉತ್ತಮ ಸವಾಲೊಡ್ಡಿದ ಜಪಾನ್‌ನ ಇನಾತ್ಸು ಮಿತಾನಿ ಅವರನ್ನು ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು ಎದುರಿಸಲಿದ್ದಾರೆ.

ಈ ಪಂದ್ಯ ವಾರಾಂತ್ಯದಲ್ಲಿ ನಡೆಯಲಿದೆ. ಇದರಲ್ಲಿ ಜಯ ಗಳಿಸಿದರೆ ಸಿಂಧು ಮತ್ತು ಜಪಾನ್‌ನ ನೊಜೊಮಿ ಒಕುಹರ ನಡುವೆ ಹಣಾಹಣಿಗೆ ವೇದಿಕೆ ಸಜ್ಜಾಗುವ ನಿರೀಕ್ಷೆ ಇದೆ. ಕೊರಿಯಾ ಓಪನ್‌ನ ಫೈನಲ್‌ನಲ್ಲಿ ಒಕುಹರಾ ಅವರನ್ನು ಮಣಿಸಿ ಸಿಂಧು ಪ್ರಶಸ್ತಿ ಮುಕುಟಕ್ಕೇರಿಸಿಕೊಂಡಿದ್ದರು. ಒಕುಹರಾ ತಮ್ಮ ಮೊದಲ ಪಂದ್ಯದಲ್ಲಿ ಹಾಂಕಾಂಗ್‌ನ ಚೂಂಗ್ ನಾನ್‌ ಇ ಅವರನ್ನು ಎದುರಿಸುವರು.

ವಿಶ್ವದ ಎಂಟನೇ ಕ್ರಮಾಂಕದ ಆಟಗಾರ ಕಿದಂಬಿ ಶ್ರೀಕಾಂತ್ ಅವರು ಇಂಡೊನೇಷ್ಯಾ ಸೂಪರ್ ಸೀರಿಸ್‌ ಪ್ರೀಮಿಯರ್‌ ಮತ್ತು ಆಸ್ಟ್ರೇಲಿಯಾ ಸೂಪರ್ ಸೀರಿಸ್‌ನ ಪ್ರಶಸ್ತಿ ಗೆದ್ದು ಮತ್ತು ಸಿಂಗಪುರ ಓಪನ್‌ನಲ್ಲಿ ಫೈನಲ್ ತಲುಪಿ ಭರವಸೆಯಲ್ಲಿದ್ದಾರೆ. ಜಪಾನ್ ಓಪನ್‌ನಲ್ಲಿ ಅವರಿಗೆ ಮೊದಲ ಎದುರಾಳಿ ಚೀನಾದ ತಿಯಾನ್ ಹವಾಯಿ.

ಈ ವರೆಗೆ ಇವರಿಬ್ಬರು ಏಳು ಬಾರಿ ಮುಖಾಮುಖಿಯಾಗಿದ್ದು ಆರು ಬಾರಿಯೂ ಶ್ರೀಕಾಂತ್ ಸೋತಿದ್ದಾರೆ. ಆದ್ದರಿಂದ ಮೊದಲ ಪಂದ್ಯ ಅವರಿಗೆ ಭಾರಿ ಸವಾಲಿನದ್ದಾಗಲಿದೆ.

ಸೇಡು ತೀರಿಸಲು ಪೊಂಪಾವಿ ಸಜ್ಜುಗ್ಲಾಸ್ಗೊದಲ್ಲಿ ಇತ್ತೀಚೆಗೆ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದ ಸೈನಾ ನೆಹ್ವಾಲ್‌ಗೆ ಇಲ್ಲಿ ಶ್ರೇಯಾಂಕ ನೀಡಲಿಲ್ಲ. ಅವರಿಗೆ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್‌ನ ಪೊಂಪಾವಿ ಚೊಚುವಾಂಗ್‌ ಎದುರಾಳಿ. ಈ ವರ್ಷದ ಆರಂಭದಲ್ಲಿ ನಡೆದ ಮಲೇಷ್ಯಾ ಮಾಸ್ಟರ್ಸ್‌ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದಿದ್ದ ಸೈನಾ ಫೈನಲ್‌ನಲ್ಲಿ ಪೊಂಪಾವಿ ಅವರನ್ನು ಮಣಿಸಿದ್ದರು.

ಕಾಲಿನಲ್ಲಿ ನೋವು ಕಾಣಿಸಿಕೊಂಡಿರುವ ಸೈನಾ ಮೇಲೆ ಸೇಡು ತೀರಿಸಲು ಪೊಂಪಾವಿ ಇಲ್ಲಿ ಶ್ರಮಿಸಲಿದ್ದಾರೆ. ಸ್ಪೇನ್‌ನ ಕರೊಲಿನಾ ಮರಿನ್‌ ಮೊದಲ ಪಂದ್ಯದಲ್ಲಿ ಚೀನಾದ ಚೆನ್‌ ಕ್ಸಿಯಾಕ್ಸಿನ್ ಅವರನ್ನು ಮಣಿಸಿದರೆ ಎರಡನೇ ಸುತ್ತಿನಲ್ಲಿ ಸೈನಾ ಎದುರು ಸೆಣಸುವರು.

ಪರಿಪಳ್ಳಿ ಕಶ್ಯಪ್ ಕೂಡ ಇಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಾಂಪಿಯನ್ ಆಗಿದ್ದ ಅವರು ಅರ್ಹತಾ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್‌ನ ಎಮಿಲ್ ಹಾಸ್ಟ್‌ ಅವರನ್ನು ಎದುರಿಸುವರು. ಪುರುಷರ ಸಿಂಗಲ್ಸ್‌ ನಲ್ಲಿ ಎಚ್‌.ಎಸ್‌.ಪ್ರಣಯ್‌, ಬಿ.ಸಾಯ್‌ ಪ್ರಣೀತ್‌, ಸಮೀರ್ ವರ್ಮಾ ಮತ್ತು ಸೌರಭ್ ವರ್ಮಾ ಕಣಕ್ಕಿಳಿಯುವರು.

ಪ್ರಣಯ್‌ಗೆ ಡೆನ್ಮಾರ್ಕ್‌ನ ಆ್ಯಂಡೆರ್ಸ್‌ ಅಂಟೊನ್ಸೆನ್‌, ಸೌರವ್‌ಗೆ ಲಿನ್‌ ಡ್ಯಾನ್ ಎದುರಾಳಿ. ಮಿಶ್ರ ಡಬಲ್ಸ್‌ ಜೋಡಿ ಪ್ರಣವ್‌ ಚೋಪ್ರಾ ಮತ್ತು ಎನ್‌.ಸಿಕ್ಕಿ ರೆಡ್ಡಿ ಥಾಯ್ಲೆಂಡ್‌ನ ಡೆಚಾಪೊಲ್‌ ಪುವರನುಕ್ರೊ ಮತ್ತು ಸಪ್ಸಿರಿ ಟೆರಾಟಂಚೆಯ್‌ ಅವರನ್ನು ಎದುರಿಸಲಿದ್ದು ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಕೊರಿಯಾದ ಚಾಂಗ್‌ ಇ ನಾ–ಲೀ ಸಿ ಹೀ ಜೋಡಿಯನ್ನು ಎದುರಿಸುವರು.

ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಮತ್ತು ಸುಮಿತ್ ರೆಡ್ಡಿ ಮಲೇಷ್ಯಾದ ಜಿಯಾನ್ ಇ ಲೀ ಮತ್ತು ಜೆನ್‌ ಟಿಂಗ್‌ ಲಿಮ್‌ ಅವರನ್ನು, ಸಾತ್ವಿಕ್‌ ಸಾಯ್ ರಾಜ್‌ ರಂಕಿರೆಡ್ಡಿ–ಚಿರಾಗ್ ಶೆಟ್ಟಿ ಜೋಡಿ ಹಿರೊಕಾಟ್ಸು ಹಶಿಮೊಟೊ–ಹಿರೊಯುಕಿ ಸಾಕಿ ಅವರನ್ನು ಎದುರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT